ಯುದ್ಧ ನಿಲ್ಲಿಸಲು ಮುಂದಾದ ಇರಾನ್: ಅಮೆರಿಕ-ಇಸ್ರೇಲ್ ಈ ಮೂರು ಷರತ್ತುಗಳನ್ನು ಒಪ್ಪಿಕೊಂಡರೆ ಕೊನೆಗೊಳ್ಳಲಿದೆ ಕದನ? Peace Talks
ಮಧ್ಯಪ್ರಾಚ್ಯದಲ್ಲಿ ಮುಂದುವರಿದ ಸಂಘರ್ಷ
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಮಧ್ಯಪ್ರಾಚ್ಯದಲ್ಲಿ ಮುಂದುವರಿದ ಸಂಘರ್ಷ
ಯುದ್ಧ ಕೊನೆಗೊಳಿಸಲು ಮುಂದಾದ ಇರಾನ್
ತನ್ನ ವಿರೋಧಿ ದೇಶಗಳಿಗೆ ಮೂರು ಷರತ್ತುಗಳ ಬೇಡಿಕೆ ಇಟ್ಟಿರುವ ಇರಾನ್
ಇರಾನ್: ಮಧ್ಯಪ್ರಾಚ್ಯದಲ್ಲಿ ಭುಗಿಲೆದ್ದಿರುವ ಯುದ್ಧದ ಜ್ವಾಲೆ ಇಡೀ ಜಗತ್ತನ್ನೇ ಸುಡುತ್ತಿದೆ. ದಿನೇದಿನೇ ಹೆಚ್ಚುತ್ತಿರುವ ಹಡಗುಗಳ ಮೇಲಿನ ದಾಳಿ, ಗಗನಕ್ಕೇರುತ್ತಿರುವ ತೈಲ ಬೆಲೆ ಮತ್ತು ಆರ್ಥಿಕ ಅನಿಶ್ಚಿತತೆಯ ನಡುವೆ ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯನ್ ಶಾಂತಿ (Peace Talks) ಗಾಗಿ ಒಂದು ಹೊಸ ಮಂತ್ರವನ್ನು ಜಪಿಸಿದ್ದಾರೆ.
ನಾವು ಯುದ್ಧವನ್ನು ಕೊನೆಗೊಳಿಸಲು ಸಿದ್ಧರಿದ್ದೇವೆ, ಆದರೆ ಅದಕ್ಕೆ ನಮ್ಮ ಮೂರು ಪ್ರಮುಖ ಬೇಡಿಕೆಗಳು ಈಡೇರಬೇಕು, ಎಂದು ಅವರು ಖಡಕ್ಕಾಗಿ ಹೇಳಿದ್ದಾರೆ.
ಶಾಂತಿಗಾಗಿ ಇರಾನ್ ಹಾಕಿದ ಮೂರು ಕಂಡಿಷನ್ಸ್
ಕೇವಲ ಮಾತುಕತೆ ನಡೆಸಿದರೆ ಸಾಲದು, ಅದಕ್ಕೆ ಭದ್ರವಾದ ಅಡಿಪಾಯ ಬೇಕು ಎಂದು ಇರಾನ್ ನಂಬಿದೆ. ಅಧ್ಯಕ್ಷ ಪೆಜೆಶ್ಕಿಯನ್ ಪ್ರಕಾರ, ಶಾಂತಿ ಮರಳಬೇಕಾದರೆ ಈ ಮೂರು ಅಂಶಗಳ ಕಡ್ಡಾಯವಾಗಿ ಜಾರಿಯಾಗಬೇಕು ಎಂದಿದ್ದಾರೆ.
* ಇರಾನ್‌ನ ಕಾನೂನುಬದ್ಧ ಹಕ್ಕುಗಳ ಮಾನ್ಯತೆ ದೊರೆಯಬೇಕು. ಇರಾನ್ ತನ್ನ ಸಾರ್ವಭೌಮತ್ವ ಮತ್ತು ಹಕ್ಕುಗಳನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಬೇಕು.
* ಯುದ್ಧದ ಕಾರಣದಿಂದಾಗಿ ಇರಾನ್ ಅನುಭವಿಸಿರುವ ಆರ್ಥಿಕ ಮತ್ತು ಮೂಲಸೌಕರ್ಯ ಹಾನಿಗೆ ಸಂಬಂಧಪಟ್ಟ ದೇಶಗಳು ಯುದ್ಧದ ನಷ್ಟ ಪರಿಹಾರ ನೀಡಬೇಕು.
* ಇನ್ನು ಮುಂದೆ ಇರಾನ್ ಮೇಲೆ ಯಾವುದೇ ರೀತಿಯ ಆಕ್ರಮಣ ನಡೆಯುವುದಿಲ್ಲ ಎಂದು ಅಂತರರಾಷ್ಟ್ರೀಯ ಮಟ್ಟದ ದೃಢವಾದ ಭರವಸೆ ನೀಡಬೇಕು.
ಈ ಷರತ್ತುಗಳನ್ನು ಕಡೆಗಣಿಸಿ ಮಾಡುವ ಯಾವುದೇ ಶಾಂತಿ ಒಪ್ಪಂದ ನಮಗೆ ಸ್ವೀಕಾರಾರ್ಹವಲ್ಲ, ಎಂದು ಪೆಜೆಶ್ಕಿಯನ್ ಸ್ಪಷ್ಟಪಡಿಸಿದ್ದಾರೆ.
ಜಗತ್ತಿಗೆ ಏಕೆ ಈ ಯುದ್ಧದ ಚಿಂತೆ?
ಹಾರ್ಮುಜ್ ಜಲಸಂಧಿಯ ಸುತ್ತ ನಡೆಯುತ್ತಿರುವ ಈ ಸಂಘರ್ಷ ಕೇವಲ ಇರಾನ್ ಅಥವಾ ಇಸ್ರೇಲ್-ಅಮೆರಿಕದ ವಿಷಯವಲ್ಲ. ಇದು ವಿಶ್ವದ ಇಂಧನ ಮಾರುಕಟ್ಟೆಯ ರಕ್ತನಾಳವಾಗಿದೆ. ಪ್ರತಿದಿನ ಜಗತ್ತಿಗೆ ಬೇಕಾದ ಹೆಚ್ಚಿನ ತೈಲ ಸರಬರಾಜು ಹಾದುಹೋಗುವುದು ಇದೇ ಮಾರ್ಗದಲ್ಲಿ.
ಈಗ ಇಲ್ಲಿ ಉಂಟಾಗಿರುವ ಉದ್ವಿಗ್ನತೆಯಿಂದಾಗಿ ತೈಲ ಮಾರುಕಟ್ಟೆಯಲ್ಲಿ ಭಾರಿ ಏರಿಳಿತ ಕಂಡುಬರುತ್ತಿದೆ. ಸಂಘರ್ಷ ಹೀಗೆಯೇ ಮುಂದುವರಿದರೆ ಆಹಾರ ಪದಾರ್ಥಗಳ ಬೆಲೆಯೂ ಸಾಮಾನ್ಯ ಜನರ ಕೈಗೆಟುಕದಷ್ಟು ಏರಿಕೆ ಕಾಣಲಿದೆ ಎಂದು ವಿಶ್ವಸಂಸ್ಥೆ ಈಗಾಗಲೇ ಎಚ್ಚರಿಕೆ ನೀಡಿದೆ.
ಭಾರತದ ಮೌನ ಮತ್ತು ರಾಜತಾಂತ್ರಿಕ ಪ್ರಯತ್ನ
ಈ ಕಠಿಣ ಪರಿಸ್ಥಿತಿಯಲ್ಲಿ ಭಾರತ ತಟಸ್ಥವಾಗಿ ಕುಳಿತಿಲ್ಲ. ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಇರಾನ್ ವಿದೇಶಾಂಗ ಸಚಿವರೊಂದಿಗೆ ನಿರಂತರ ಸಂಭಾಷಣೆ ನಡೆಸುತ್ತಿದ್ದಾರೆ.
ಸಮುದ್ರ ಸುರಕ್ಷತೆ ಮತ್ತು ನಮ್ಮ ದೇಶದ ಇಂಧನ ಭದ್ರತೆ ಕಾಪಾಡಿಕೊಳ್ಳುವುದು ಭಾರತದ ಮೊದಲ ಆದ್ಯತೆಯಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಗಲ್ಫ್ ರಾಷ್ಟ್ರಗಳ ನಾಯಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಶಾಂತಿಯುತ ಮಾತುಕತೆಗೆ ಒತ್ತು ನೀಡುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಒಟ್ಟಾರೆಯಾಗಿ, ಇರಾನ್ ಈಗ ಮಾತುಕತೆಯ ಟೇಬಲ್‌ಗೆ ಬರಲು ಸಿದ್ಧವಾಗಿದ್ದರೂ, ಅವರು ಹಾಕಿರುವ ಷರತ್ತುಗಳು ಅಮೆರಿಕ ಮತ್ತು ಇಸ್ರೇಲ್ ಪಾಲಿಗೆ ನುಂಗಲಾರದ ತುತ್ತಾಗಿವೆ. ಸದ್ಯದ ಮಟ್ಟಿಗೆ ಯುದ್ಧ ನಿಲ್ಲುತ್ತಾ ಅಥವಾ ಮತ್ತಷ್ಟು ಉಲ್ಬಣಗೊಳ್ಳುತ್ತಾ? ಎನ್ನುವುದಕ್ಕೆ ಸಮಯವೇ ಉತ್ತರಿಸಲಿದೆ,(ಏಜನ್ಸೀಸ್).