ವಂದೇ ಮಾತರಂ ಗೀತೆ ಅಪಮಾನಿಸಿದ್ರೆ ಕ್ರಿಮಿನಲ್ ಅಪರಾಧ ಎಂದು ಪರಿಗಣಿನೆ; ಜೈಲು ಶಿಕ್ಷೆ: ನಾಳೆ ಸಂಸತ್​​ನಲ್ಲಿ ಶಾ ಮಸೂದೆ ಮಂಡನೆ | Vande Mataram

ಕೇಂದ್ರ ಗೃಹ ಸಚಿವ ಅಮಿತ್ ಶಾ
ಕೇಂದ್ರ ಗೃಹ ಸಚಿವ ಅಮಿತ್ ಶಾ
Published on
ನವದೆಹಲಿ: ಸೋಮವಾರ(ಜು. 20) ಸಂಸತ್​ನ ಮಳೆಗಾಲದ ಅಧಿವೇಶನ ಆರಂಭವಾಗಲಿದ್ದು, ರಾಜ್ಯಸಭೆಯಲ್ಲಿ ನಾಳೆ ರಾಷ್ಟ್ರೀಯ ಗೀತೆ ವಂದೇ ಮಾತರಂ(Vande Mataram) ಹಾಡಿಗೆ ಗೌರವ ನೀಡದಿದ್ರೆ, ಅವಮಾನಿಸಿದ್ರೆ ಕ್ರಿಮಿನಲ್ ಅಪರಾಧ ಎಂದು ಪರಿಗಣಿಸಿ, ಅಂತಹ ಅಪರಾಧಿಗಳಿಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸುವಂತಹ ಮಸೂದೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಡಿಸಲಿದ್ದಾರೆ ಎಂದು ವರದಿಯಾಗಿದೆ.
ನಾಳೆ ರಾಜ್ಯಸಭೆ ಕಾರ್ಯಾಸೂಚಿಯಲ್ಲಿ ಮಸೂದೆಯನ್ನು ಪಟ್ಟಿ ಮಾಡಲಾಗಿದ್ದು, ಅಮಿತ್ ಶಾ ಅವರು ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆ (ತಿದ್ದುಪಡಿ) ಮಸೂದೆ-2026 ಅನ್ನು ಮಂಡಿಸಲಿದ್ದಾರೆ. ಇದು ರಾಷ್ಟ್ರಗೀತೆ ಜನ ಗಣ ಮನಕ್ಕೆ ಸಿಗುತ್ತಿರುವ ಕಾನೂನು ಮತ್ತು ನ್ಯಾಯಾಂಗ ರಕ್ಷಣೆಗಳನ್ನು ವಂದೇ ಮಾತರಂ ಗೀತೆಗೆ ನೀಡುವ ಪ್ರಸ್ತಾಪವನ್ನು ಹೊಂದಿದೆ. ಮತ್ತು ಗೀತೆಗೆ ಅಪಮಾನಿಸುವುದನ್ನು ಶಿಕ್ಷಾರ್ಹ ಅಪರಾಧ ಎಂದು ಪರಿಗಣಿಸುತ್ತದೆ.
ಈ ಮಸೂದೆಯೂ 1971ರ ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆ ಕಾಯ್ದೆಗೆ ತಿದ್ದುಪಡಿ ತರಲಿದ್ದು, ಈ ಕಾಯ್ದೆಯು ರಾಷ್ಟ್ರಧ್ವಜ, ಸಂವಿಧಾನ ಮತ್ತು ರಾಷ್ಟ್ರಗೀತೆ ಸೇರಿದಂತೆ ದೇಶದ ರಾಷ್ಟ್ರೀಯ ಚಿಹ್ನೆಗಳನ್ನು ಅಪವಿತ್ರಗೊಳಿಸುವುದು ಅಥವಾ ಅಗೌರವಿಸುವುದು ಕ್ರಿಮಿನಲ್ ಅಪರಾಧವಾಗಿದ್ದು, ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದಾಗಿದೆ.
ಮಸೂದೆಯ ನಿಬಂಧನೆಗಳ ಪ್ರಕಾರ, ರಾಷ್ಟ್ರಗೀತೆಯನ್ನು ಹಾಡಲು ಅಡ್ಡಿಪಡಿಸುವ ಅಥವಾ ಯಾವುದೇ ರೂಪದಲ್ಲಿ ಅವಮಾನಿಸುವ ಯಾವುದೇ ಕೃತ್ಯವು ಶಿಕ್ಷಾರ್ಹವಾಗುತ್ತದೆ. ವಂದೇ ಮಾತರಂ ಗೀತೆಯ 150ನೇ ವಾರ್ಷಿಕೋತ್ಸವದ ವರ್ಷವಿಡೀ ನಡೆಯುವ ಆಚರಣೆಯ ಮಧ್ಯೆ ಜನಗಣ ಮನ ರಾಷ್ಟ್ರೀಯ ಗೀತೆಯಂತೆಯೇ ವಂದೇ ಮಾತರಂಗೂ ಕೇಂದ್ರ ಸರ್ಕಾರ ಸಮಾನ ಗೌರವ ನೀಡಲು ಮುಂದಾಗಿದೆ.
ಈ ಹಿಂದೆ ಕೇಂದ್ರ ಗೃಹ ಸಚಿವಾಲಯವು, ಎಲ್ಲಾ ರಾಜ್ಯಗಳಿಗೆ ಪತ್ರ ಬರೆದಿದ್ದು, ಜನ ಗಣ ಮನ' ಹಾಡುವ ಎಲ್ಲಾ ಅಧಿಕೃತ ಕಾರ್ಯಕ್ರಮಗಳಲ್ಲಿ 'ವಂದೇ ಮಾತರಂ' ಗೀತೆಯನ್ನು ಕಡ್ಡಾಯವಾಗಿ ನುಡಿಸಬೇಕು ಎಂದು ಹೇಳಿತ್ತು (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net