ಸ್ವಾತಂತ್ರ್ಯದ ಬಳಿಕ ಇಂತಹ ರಾಜಕೀಯ ಬದಲಾವಣೆ ಯಾವ ರಾಜ್ಯದಲ್ಲೂ ಆಗಿಲ್ಲ; ಪಶ್ಚಿಮ ಬಂಗಾಳ ಗೆಲುವಿನ ಬಗ್ಗೆ ಅಮಿತ್ ಶಾ | Amit Shah

 ಕೇಂದ್ರ ಗೃಹ ಸಚಿವ ಅಮಿತ್ ಶಾ
ಕೇಂದ್ರ ಗೃಹ ಸಚಿವ ಅಮಿತ್ ಶಾ
Published on
ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್​ನ 15 ವರ್ಷಗಳ ಆಡಳಿತವನ್ನು ಕೊನೆಗೊಳಿಸಿ ಬಿಜೆಪಿ ಅಧಿಕಾರಕ್ಕೆ ಬಂದಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ(Amit Shah), ಸ್ವಾತಂತ್ರ್ಯದ ಬಳಿಕ ಇಂತಹ ರಾಜಕೀಯ ಬದಲಾವಣೆ ಯಾವ ರಾಜ್ಯದಲ್ಲೂ ಆಗಿಲ್ಲ, ಬಂಗಾಳದಲ್ಲಿ ನಡೆದಿದ್ದು ಭಿನ್ನವಾಗಿದೆ ಎಂದು ಹೇಳಿದ್ದಾರೆ.
ಕೋಲ್ಕತ್ತಾದಲ್ಲಿ ಅಮುಲ್ ಬಂಗಾಳ ಡೈರಿ ಯೋಜನೆಯಡಿಯಲ್ಲಿ ಮೊಸರು ಉತ್ಪಾದನಾ ಘಟಕಕ್ಕೆ ಶಂಕು ಸ್ಥಾಪನೆ ಮಾಡಿ ಮಾತನಾಡಿರುವ ಅವರು, ಪಶ್ಚಿಮ ಬಂಗಾಳವು ಒಂದು ಕಾಲದಲ್ಲಿ ಇಡೀ ದೇಶಕ್ಕೆ ಪ್ರತಿಯೊಂದು ಕ್ಷೇತ್ರದಲ್ಲೂ ದಾರಿದೀಪವಾಗಿತ್ತು. ಶಿಕ್ಷಣದಲ್ಲಿ ದೇಶದ ಉಳಿದ ಭಾಗಗಳಿಗಿಂತ ದಶಕಗಳಷ್ಟು ಮುಂದಿತ್ತು. ಸ್ವಾತಂತ್ರ್ಯ ಹೋರಾಟವಾಗಲಿ ಅಥವಾ ದೇಶದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಪುನರುಜ್ಜೀವನವಾಗಲಿ, ಬಂಗಾಳವು ಭಾರತಕ್ಕೆ ತನ್ನ ಕೆಲವು ಶ್ರೇಷ್ಠ ನಾಯಕರು ಮತ್ತು ಸ್ವಾತಂತ್ರ್ಯ ಹೋರಾಟಗಾರರನ್ನು ನೀಡಿತು ಎಂದಿದ್ದಾರೆ.
ಮುಂದುವರೆದು 30 ವರ್ಷಗಳಿಗೂ ಹೆಚ್ಚು ಕಾಲ ಆಳಿದ ಎಡಪಕ್ಷ ಮತ್ತು ಟಿಎಂಸಿ ವಿರುದ್ಧ ಕಿಡಿಕಾರಿದ ಅವರು, ಮೊದಲು ಬಂಗಾಳವನ್ನು ಎಡಪಂಥೀಯರ ವಿದೇಶಿ ಸಿದ್ಧಾಂತವು ಮೂರು ದಶಕಗಳ ಕಾಲ ಆಳಿತು, ನಂತರ ಭ್ರಷ್ಟ ಮತ್ತು ಸೈದ್ಧಾಂತಿಕವಾಗಿ ದಿವಾಳಿಯಾಗಿದ್ದ ಟಿಎಂಸಿ 15 ವರ್ಷಗಳ ಕಾಲ ಆಳಿತು ಎಂದು ವಾಗ್ದಾಳಿ ನಡೆಸಿದ್ದಾರೆ.
ಅಮುಲ್ ಬಂಗಾಳ ಡೈರಿ ಯೋಜನೆಯು ರಾಜ್ಯದ ಡೈರಿ ವಲಯಕ್ಕೆ ಒಂದು ಮೈಲಿಗಲ್ಲು ಆಗಲಿದೆ. ಮತ್ತು ಹಾಲು ಉತ್ಪಾದಕರ ಆದಾಯವನ್ನು ಹೆಚ್ಚಿಸುತ್ತದೆ. 700 ಕೋಟಿ ರೂಪಾಯಿ ವೆಚ್ಚದ ಈ ಯೋಜನೆಯು ಪ್ರತಿದಿನ 30 ಲಕ್ಷ ಲೀಟರ್ ಹಾಲನ್ನು ಸಂಸ್ಕರಿಸಿ 10 ಲಕ್ಷ ಕೆಜಿ ಮೊಸರು ಮತ್ತು ಇತರ ಕೃಷಿ ಉತ್ಪನ್ನಗಳನ್ನು ಉತ್ಪಾದಿಸುತ್ತದೆ ಎಂದು ತಿಳಿಸಿದ್ದಾರೆ.
ಪೂರ್ವ ಭಾರತದಲ್ಲಿ ಸಹಕಾರಿ ಡೈರಿ ಜಾಲವನ್ನು ಬಲಪಡಿಸುವುದರ ಜೊತೆಗೆ, 30,000 ಕ್ಕೂ ಹೆಚ್ಚು ಮಹಿಳೆಯರು ಸೇರಿದಂತೆ ಪಶ್ಚಿಮ ಬಂಗಾಳದ 1.25 ಲಕ್ಷಕ್ಕೂ ಹೆಚ್ಚು ಡೈರಿ ರೈತರಿಗೆ ಇದು ಪ್ರಯೋಜನವನ್ನು ನೀಡುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ.
ಇನ್ನೂ ಪಶ್ಚಿಮ ಬಂಗಾಳಕ್ಕೆ ಮೂರು ದಿನಗಳ ಭೇಟಿ ನೀಡಿದ್ದ ಅಮಿತ್ ಶಾ, ಒಳನುಸುಳುವಿಕೆಯನ್ನು ತಡೆಯುವುದು, ಕಾನೂನು ಸುವ್ಯವಸ್ಥೆಯನ್ನು ಬಲಪಡಿಸುವುದು ಮತ್ತು ಮಹಿಳೆಯರ ಸುರಕ್ಷತೆಯನ್ನು ಸುಧಾರಿಸುವುದು ಸೇರಿದಂತೆ ಆಡಳಿತ ವಿಷಯಗಳ ಕುರಿತು ಕೇಂದ್ರ ಮತ್ತು ರಾಜ್ಯ ಸರ್ಕಾರಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net