ದಶಕಗಳ ಸಂಪ್ರದಾಯಕ್ಕೆ ಮರುಜೀವ; ಭಾರತದಿಂದ ವಿಶ್ವಸಂಸ್ಥೆಗೆ 5 ನವಿಲು ಗಿಫ್ಟ್​ | India gifts UNOG

ನೀಲಿ ಮತ್ತು ಬಿಳಿ ನವಿಲು
ನೀಲಿ ಮತ್ತು ಬಿಳಿ ನವಿಲು
Published on

ಪ್ರಮುಖ ಮುಖ್ಯಾಂಶಗಳು

  • ಜಿನೀವಾದ ವಿಶ್ವಸಂಸ್ಥೆಗೆ ಭಾರತದಿಂದ 5 ನವಿಲು ಗಿಫ್ಟ್
  • ನಾಲ್ಕು ನೀಲಿ ಹಾಗೂ ಒಂದು ಅಪರೂಪದ ಬಿಳಿ ನವಿಲು
  • 1981ರ ಬಳಿಕ ಭಾರತದಿಂದ 2ನೇ ಬಾರಿ ಉಡುಗೊರೆ
ನವದೆಹಲಿ: ಭಾರತದ ರಾಷ್ಟ್ರೀಯ ಪಕ್ಷಿ ನವಿಲು ಇದೀಗ ಸ್ವಿಟ್ಜರ್ಲೆಂಡ್‌ನ ಜಿನೀವಾದಲ್ಲಿರುವ ವಿಶ್ವಸಂಸ್ಥೆಯ ಹೊಸ ಸದಸ್ಯರಾಗಿದೆ. ಭಾರತ ಐದು ಮಯೂರಗಳನ್ನು ಯುಎನ್‌ಒಜಿ ಕಚೇರಿಗೆ ಉಡುಗೊರೆಯಾಗಿ ನೀಡಿದೆ. ಈ ಮೂಲಕ ಹಲವು ದಶಕಗಳ ಹಿಂದಿನ ಸಂಪ್ರದಾಯಕ್ಕೆ ಮತ್ತೆ ಜೀವ ಬಂದಂತಾಗಿದೆ.
ಇನ್ನು, ಜಿನೀವಾದಲ್ಲಿರುವ ವಿಶ್ವಸಂಸ್ಥೆಗೆ ಭಾರತದ ಖಾಯಂ ಪ್ರತಿನಿಧಿ ಅರಿಂದಮ್ ಬಾಗ್ಚಿ, ಐದು ನವಿಲುಗಳನ್ನು ಯುಎನ್‌ಒಜಿ ಮಹಾನಿರ್ದೇಶಕಿ ಟಟಿಯಾನಾ ವಲೋವಾಯಾಗೆ ಹಸ್ತಾಂತರಿಸಿದರು. ಭಾರತದ ನೈಸರ್ಗಿಕ ಸಂಪತ್ತು, ಜೀವವೈವಿಧ್ಯತೆ ಮತ್ತು ವಿಶ್ವಸಂಸ್ಥೆಯೊಂದಿಗಿನ ಸ್ನೇಹವನ್ನು ಈ ಉಡುಗೊರೆ ಪ್ರತಿನಿಧಿಸುತ್ತೆ.

ನಾಲ್ಕು ನೀಲಿ, ಒಂದು ಬಿಳಿ ನವಿಲು

ಭಾರತ ನೀಡಿರುವ ಐದು ನವಿಲುಗಳಲ್ಲಿ ನಾಲ್ಕು ಸಾಮಾನ್ಯ ನೀಲಿ ನವಿಲುಗಳು ಮತ್ತು ಅಪರೂಪದ ಬಿಳಿ ಗರಿ ಹೊಂದಿರುವ ಒಂದು ಗಂಡು ನವಿಲು ಇವೆ. ವಿಶ್ವಸಂಸ್ಥೆಯ ನೀಲಿ ಮತ್ತು ಬಿಳಿ ಬಣ್ಣದ ಲೋಗೊಗೆ ಈ ನವಿಲುಗಳು ಹೊಂದಿಕೆಯಾಗುತ್ತವೆ ಎಂಬುದು ವಿಶೇಷ.

ಇದು ಎರಡನೇ ಬಾರಿಗೆ ಭಾರತವು ವಿಶ್ವಸಂಸ್ಥೆಗೆ ನವಿಲುಗಳನ್ನು ನೀಡುತ್ತಿದೆ. 1981ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ದೆಹಲಿ ಮೃಗಾಲಯದಿಂದ ಒಂದು ಜೋಡಿ ನವಿಲುಗಳನ್ನು ಜಿನೀವಾಗೆ ಕಳುಹಿಸಿದ್ದರು. ಇದೀಗ ಹಲವು ವರ್ಷಗಳ ಬಳಿಕ ಭಾರತ ಮತ್ತೊಮ್ಮೆ ನವಿಲುಗಳನ್ನು ಉಡುಗೊರೆಯಾಗಿ ನೀಡಿದೆ.

100 ವರ್ಷಕ್ಕೂ ಹಳೆಯ ಸಂಪ್ರದಾಯ


ಅರಿಯಾನಾ ಪಾರ್ಕ್‌ನ ನವಿಲುಗಳ ಇತಿಹಾಸ ವಿಶ್ವಸಂಸ್ಥೆ ಹುಟ್ಟುವುದಕ್ಕಿಂತಲೂ ಹಿಂದಿನದು. ಸ್ವಿಸ್ ಪುರಾತತ್ವಶಾಸ್ತ್ರಜ್ಞ ಹಾಗೂ ಕಲಾ ಸಂಗ್ರಾಹಕ ಗುಸ್ಟಾವ್ ರೆವಿಲಿಯೊಡ್ ಅವರು 1890ರಲ್ಲಿ ಈ ಪ್ರದೇಶವನ್ನು ಜಿನೀವಾ ನಗರಕ್ಕೆ ನೀಡಿದ್ದರು. ಆ ಕಾಲದಿಂದಲೇ ಇಲ್ಲಿ ನವಿಲು ಉಡುಗೊರೆ ಸಂಪ್ರದಾಯ ಮುಂದುವರಿದಿದೆ.

ಭಾರತದ ಮತ್ತು ವಿಶ್ವಸಂಸ್ಥೆಯ ಸ್ನೇಹದ ಸಂಕೇತ

ಸಧ್ಯ ಅಲ್ಲಿರುವ ಹೆಚ್ಚಿನ ನವಿಲುಗಳನ್ನು 1997ರಲ್ಲಿ ಜಪಾನ್‌ನ ಒಂದು ಮೃಗಾಲಯ ವಿಶ್ವಸಂಸ್ಥೆಗೆ ಉಡುಗೊರೆಯಾಗಿ ನೀಡಿತ್ತು. ಇದೀಗ ಭಾರತದ ನವಿಲುಗಳ ಸೇರಿರುವುದರಿಂದ ವಿಶ್ವಸಂಸ್ಥೆ ಆವರಣದ ಜೀವವೈವಿಧ್ಯ ಮತ್ತಷ್ಟು ಹೆಚ್ಚಾಗಿದೆ. ಒಟ್ಟಿನಲ್ಲಿ, ಭಾರತದಿಂದ ಜಿನೀವಾಗೆ ಹಾರಿದ ಈ ಐದು ನವಿಲುಗಳು ಕೇವಲ ಗಿಫ್ಟ್​ ಅಲ್ಲ. ಭಾರತದ ಪ್ರಕೃತಿ ಪರಂಪರೆ ಮತ್ತು ವಿಶ್ವಸಂಸ್ಥೆಯೊಂದಿಗಿನ ಸ್ನೇಹದ ಸಂಕೇತವೂ ಹೌದು,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net