ನಾನು ಎಲ್ಲವನ್ನೂ ನೋಡಿಕೊಳ್ಳುತ್ತೇನೆ, ಚಿಂತಿಸಬೇಡಿ; ಆತಂಕಗೊಂಡ ಶಾಸಕರಿಗೆ ಧೈರ್ಯ ತುಂಬಿದ ನಿತೀಶ್! | Nitish Kumar
Nitish Kumar | ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್
Published on:
Copied
Follow Us
ಪಟನಾ: ರಾಜ್ಯಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ (Nitish Kumar) ಶುಕ್ರವಾರ ಪಕ್ಷದ ಹಿರಿಯ ನಾಯಕರ ಸಭೆ ಕರೆದಿದ್ದು, ಈ ವೇಳೆ ಹಲವಾರು ಶಾಸಕರು ನಿತೀಶ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು ಎಂದು ಮೂಲಗಳು ತಿಳಿಸಿವೆ.
ಶುಕ್ರವಾರ ಪಾಟ್ನಾದಲ್ಲಿ ನಡೆದ ಜೆಡಿಯು ತುರ್ತು ಸಭೆಯಲ್ಲಿ ಭಾರಿ ಆಕ್ರೋಶ ಮತ್ತು ಅಸಮಾಧಾನ ವ್ಯಕ್ತವಾಗಿದ್ದು, ನಿತೀಶ್ ಕುಮಾರ್ ತಮ್ಮ ನಿರ್ಧಾರವನ್ನು ಮರುಪರಿಶೀಲಿಸಬೇಕು ಮತ್ತು ಅದರಿಂದ ಹಿಂದೆ ಸರಿಯುವಂತೆ ಪಟ್ಟು ಹಿಡಿದಿದ್ದರು ಎನ್ನಲಾಗಿದೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ನಿತೀಶ್, ನಾನು ರಾಜ್ಯಸಭೆಗೆ ಹೋಗುತ್ತಿರಬಹುದು, ಆದರೆ ಬಿಹಾರಕ್ಕೆ ಬರುತ್ತಲೇ ಇರುತ್ತೇನೆ, ನಿಮಗೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ನಾನು ಎಲ್ಲದರ ಮೇಲೆ ವೈಯಕ್ತಿಕವಾಗಿ ನಿಗಾ ಇಡುತ್ತೇನೆ ಎಂದು ಶಾಸಕರನ್ನು ಸಮಾಧಾನಪಡಿಸಲು ಯತ್ನಿಸಿದರು.
ನಿತೀಶ್ ಕುಮಾರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜ್ಯಸಭೆಗೆ ತೆರಳುತ್ತಿರುವುದು ಬಿಹಾರದ ರಾಜಕೀಯ ಸಮೀಕರಣಗಳಲ್ಲಿ ಭಾರಿ ಬದಲಾವಣೆಗೆ ಕಾರಣವಾಗಿದ್ದು, ಈ ಬೆಳವಣಿಗೆಯು ಬಿಹಾರದಲ್ಲಿ ಬಿಜೆಪಿ ತನ್ನ ಮುಖ್ಯಮಂತ್ರಿಯನ್ನು ಪ್ರತಿಷ್ಠಾಪಿಸಲು ದಾರಿ ಮಾಡಿಕೊಡುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಇದುವರೆಗೆ ಹಿಂದಿ ಭಾಷಿಕ ರಾಜ್ಯಗಳ ಪೈಕಿ ಬಿಹಾರವೊಂದರಲ್ಲೇ ಕೇಸರಿ ಪಕ್ಷಕ್ಕೆ ಮುಖ್ಯಮಂತ್ರಿ ಪಟ್ಟ ಏರಲು ಸಾಧ್ಯವಾಗಿರಲಿಲ್ಲ; ಆದರೆ ಈಗ ಆ ಕಾಲ ಕೂಡಿ ಬಂದಂತೆ ಕಾಣುತ್ತಿದೆ. ಇತ್ತೀಚಿನ ಚುನಾವಣೆಯಲ್ಲಿ ಬಿಜೆಪಿ 89 ಸ್ಥಾನಗಳನ್ನು ಗೆಲ್ಲುವ ಮೂಲಕ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು.
ಈ ರಾಜಕೀಯ ಚದುರಂಗದಾಟದ ನಡುವೆ ಎಲ್ಲರ ಗಮನ ಈಗ ನಿತೀಶ್ ಕುಮಾರ್ ಪುತ್ರ ನಿಶಾಂತ್ ಮೇಲೆ ನೆಟ್ಟಿದ್ದು, ಕುಟುಂಬ ರಾಜಕಾರಣವನ್ನು ಸದಾ ಟೀಕಿಸುತ್ತಿದ್ದ ಸುಶಾಸನ ಬಾಬು, ಈಗ ಅನಿವಾರ್ಯವಾಗಿ ತಮ್ಮ ಮಗನನ್ನೇ ರಾಜಕೀಯ ಅಖಾಡಕ್ಕೆ ಇಳಿಸುತ್ತಿದ್ದಾರೆ. ತಾವು ಸಕ್ರಿಯ ರಾಜ್ಯ ರಾಜಕೀಯದಿಂದ ದೂರ ಸರಿದ ಬಳಿಕ ಜೆಡಿಯು ಚದುರಿ ಹೋಗದಂತೆ ತಡೆಯಲು ನಿಶಾಂತ್ರನ್ನು ಮುಂದಿನ ಜೆಡಿಯು ಮುಖ್ಯಸ್ಥರನ್ನಾಗಿ ಮಾಡುವ ಸಾಧ್ಯತೆ ದಟ್ಟವಾಗಿದೆ(ಏಜೆನ್ಸೀಸ್).