ನಾಳೆ ಜೆಡಿಯು ಸದಸ್ಯತ್ವ ಪಡೆದುಕೊಳ್ಳಲಿರುವ ನಿಶಾಂತ್​..ಡಿಸಿಎಂ ಆಗೋದು ಬಹುತೇಕ ಪಕ್ಕಾ! | Nitish Kumar

Nitish Kumar |  ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಜೊತೆ ಪುತ್ರ ನಿಶಾಂತ್ ಕುಮಾರ್
Nitish Kumar | ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಜೊತೆ ಪುತ್ರ ನಿಶಾಂತ್ ಕುಮಾರ್
Published on
ಪಟನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಪುತ್ರ ನಿಶಾಂತ್ ಕುಮಾರ್ (Nitish Kumar) ಭಾನುವಾರ ಅಧಿಕೃತವಾಗಿ ಜೆಡಿಯು ಪಕ್ಷಕ್ಕೆ ಸೇರ್ಪಡೆಗೊಳ್ಳಲಿದ್ದು, ಅವರೇ ರಾಜ್ಯದ ಉಪಮುಖ್ಯಮಂತ್ರಿಯಾಗುವ ಸಾಧ್ಯತೆ ಇದೆ ಎಂದು ಶುಕ್ರವಾರ ನಡೆದ ಪ್ರಮುಖ ಸಭೆಯಲ್ಲಿ ಪಕ್ಷದ ಕಾರ್ಯಾಧ್ಯಕ್ಷ ಸಂಜಯ್ ಕುಮಾರ್ ಝಾ ಮಾಹಿತಿ ನೀಡಿದ್ದಾರೆ.
ನಿಶಾಂತ್ ರಾಜಕೀಯಕ್ಕೆ ಪ್ರವೇಶ ಮಾಡಬೇಕೆಂಬುದು ಜೆಡಿಯು ನಾಯಕರು ಮತ್ತು ಕಾರ್ಯಕರ್ತರ ಬಹುದಿನಗಳ ಬಯಕೆಯಾಗಿದ್ದು, ಇತ್ತೀಚಿನ ಸಭೆಯಲ್ಲಿ ಈ ಬೇಡಿಕೆಗೆ ಮತ್ತಷ್ಟು ಬಲ ಬಂದಿದೆ. ನಿತೀಶ್​ ಸ್ಥಾನಕ್ಕೆ ಅವರ ಮಗನೇ ಉತ್ತಮ ಆಯ್ಕೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ ಎನ್ನಲಾಗಿದೆ.

ಡಿಸಿಎಂ ಆಗ್ತಾರಾ ನಿಶಾಂತ್..?

ನಿತೀಶ್ ಕುಮಾರ್​ ರಾಜ್ಯಸಭೆಗೆ ಆಯ್ಕೆಯಾಗುತ್ತಿದ್ದಂತೆ ಇತ್ತ ಬಿಜೆಪಿ ಬಿಹಾರದಲ್ಲಿ ಮೊದಲ ಬಾರಿಗೆ ತನ್ನ ಮುಖ್ಯಮಂತ್ರಿಯನ್ನು ಆ ಹುದ್ದೆಯಲ್ಲಿ ಕೂರಿಸಲಿದೆ. ಈ ವೇಳೆ ನಿಶಾಂತ್​​​ರನ್ನು ರಾಜ್ಯದ ಉಪಮುಖ್ಯಮಂತ್ರಿಯಾಗಿ ನೇಮಿಸಲಾಗುವುದು ಎಂದು ಜೆಡಿಯು ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.
ಜೆಡಿಯುನಲ್ಲಿ ಒಗ್ಗಟ್ಟಿರಬೇಕಾದರೆ ನಿತೀಶ್​ ಸುತ್ತಲೇ ಅಧಿಕಾರ ಇರಬೇಕಾಗುತ್ತದೆ, ಇದರಿಂದ ಪಕ್ಷ ವಿಭಜನೆಯಾಗುವುದನ್ನು ತಪ್ಪಿಸಬಹುದು ಎಂಬ ಕಾರಣಕ್ಕೆ ನಿಶಾಂತ್​ರಿಗೆ ನಾಯಕತ್ವ ವಹಿಸಲು ಅನೇಕ ನಾಯಕರು ಮುಂದಾಗಿದ್ದಾರೆ. ಅವರೊಂದಿಗೆ ಕೇಂದ್ರ ಸಚಿವ ಲಲ್ಲನ್ ಸಿಂಗ್, ಬಿಹಾರ ಸಚಿವರಾದ ಅಶೋಕ್ ಚೌಧರಿ ಮತ್ತು ವಿಜಯ್ ಚೌಧರಿ ಮತ್ತು ಸಂಜಯ್ ಕುಮಾರ್ ಝಾ ಹೆಸರುಗಳು ಕೂಡ ಚಾಲ್ತಿಯಲ್ಲಿವೆ.

ನಿತೀಶ್​ ರಾಜ್ಯಸಭೆಗೆ

ಮುಖ್ಯಮಂತ್ರಿ ನಿತೀಶ್ ಕುಮಾರ್ ಮುಂಬರುವ ರಾಜ್ಯಸಭಾ ಚುನಾವಣೆಗೆ ಸ್ಪರ್ಧಿಸುವುದಾಗಿ ಘೋಷಿಸುವ ಮೂಲಕ ಎಲ್ಲ ಊಹಾಪೋಹಗಳಿಗೆ ಅಂತ್ಯ ಹಾಡಿದ್ದಾರೆ. ತಮ್ಮ ಎಕ್ಸ್​ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಸಿಎಂ ನಿತೀಶ್, ಎರಡು ದಶಕಗಳಿಗೂ ಹೆಚ್ಚು ಕಾಲ ರಾಜ್ಯಕ್ಕೆ ಸೇವೆ ಸಲ್ಲಿಸಲು ಅನುವು ಮಾಡಿಕೊಟ್ಟಿದ್ದಕ್ಕಾಗಿ ರಾಜ್ಯದ ಜನರಿಗೆ ಧನ್ಯವಾದ ಅರ್ಪಿಸಿದರು.
ಎರಡು ದಶಕಗಳಿಗೂ ಹೆಚ್ಚು ಕಾಲ, ನೀವು ನಿರಂತರವಾಗಿ ನನ್ನ ಮೇಲೆ ನಿಮ್ಮ ನಂಬಿಕೆ ಮತ್ತು ಬೆಂಬಲವನ್ನು ಇರಿಸಿದ್ದೀರಿ. ಆ ನಂಬಿಕೆಯ ಬಲದ ಮೇಲೆ ನಾವು ಬಿಹಾರ ಮತ್ತು ನಿಮ್ಮೆಲ್ಲರಿಗೂ ಸಂಪೂರ್ಣ ಸಮರ್ಪಣಾಭಾವದಿಂದ ಸೇವೆ ಸಲ್ಲಿಸಿದ್ದೇನೆ ಎಂದು ನಿತೀಶ್​ ಕುಮಾರ್​ ಬರೆದುಕೊಂಡಿದ್ದಾರೆ. ನನ್ನ ಸಂಸದೀಯ ಪ್ರಯಾಣದ ಆರಂಭದಿಂದಲೂ, ಬಿಹಾರ ವಿಧಾನಸಭೆಯ ಎರಡೂ ಸದನಗಳ ಮತ್ತು ಸಂಸತ್ತಿನ ಎರಡೂ ಸದನಗಳ ಸದಸ್ಯನಾಗಬೇಕೆಂಬ ಬಯಕೆ ಮನಸ್ಸಲ್ಲಿ ಮನೆ ಮಾಡಿತ್ತು, ಅದಕ್ಕನುಗುಣವಾಗಿ ಈ ಬಾರಿಯ ರಾಜ್ಯಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದೇನೆ ಎಂದು ಹೇಳಿದರು(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net