ಮಮತಾ ಬ್ಯಾನರ್ಜಿ ಪರವಾಗಿ ಯೂಸುಫ್​ಗೆ ರಾಜೀನಾಮೆ ನೀಡುವಂತೆ ನಾನು ಕೇಳಿಲ್ಲ; ಅದು ಸುಳ್ಳು ಸುದ್ದಿ: ಸೌರವ್ ಗಂಗೂಲಿ ಸ್ಪಷ್ಟನೆ | Sourav Ganguly

ಸೌರವ್ ಗಂಗೂಲಿ ಮತ್ತು ಮಮತಾ ಬ್ಯಾನರ್ಜಿ
ಸೌರವ್ ಗಂಗೂಲಿ ಮತ್ತು ಮಮತಾ ಬ್ಯಾನರ್ಜಿ
Published on
ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಅವರ ಪರವಾಗಿ ಟಿಎಂಸಿ ಸಂಸದ ಯೂಸುಫ್​ ಪಠಾಣ್​ ಸಂಪರ್ಕಿಸಿ ರಾಜೀನಾಮೆ ನೀಡುವಂತೆ ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ(Sourav Ganguly) ಕೇಳಿಕೊಂಡಿದ್ದಾರೆ ಎಂಬ ವರದಿಯನ್ನು, ಸ್ವತಃ ಭಾರತದ ಕ್ರಿಕೆಟ್ ತಂಡದ ಮಾಜಿ ಕ್ಯಾಪ್ಟನ್ ಅದೊಂದು ಸುಳ್ಳು ಸುದ್ದಿ ಎಂದು ಅಲ್ಲಗೆಳೆದಿದ್ದಾರೆ.
ಬಂಗಾಳಿ ದಿನಪತ್ರಿಕೆ ಆನಂದ ಬಜಾರ್ ಪತ್ರಿಕಾದಲ್ಲಿ ಪ್ರಕಟವಾದ ಸುದ್ದಿ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಸೌರವ್ ಗಂಗೂಲಿ, ಸತ್ಯಗಳನ್ನು ಪರಿಶೀಲಿಸದೆ ವದಂತಿಗಳು ಮತ್ತು ಊಹಾಪೋಹಗಳನ್ನು ನಂಬಬೇಡಿ ಎಂದು ಹೇಳಿದ್ದಾರೆ.
ಮಮತಾ ಬ್ಯಾನರ್ಜಿ ಅವರು ಯೂಸುಫ್ ಪಠಾಣ್ ಅವರಿಗೆ ಅಂತಹ ಯಾವುದೇ ಸಂದೇಶವನ್ನು ತಿಳಿಸುವಂತೆ ನನಗೆ ಕೇಳಿಲ್ಲ. ಸಂಸದೀಯ ಸ್ಥಾನಕ್ಕೆ ರಾಜೀನಾಮೆ ನೀಡುವ ಬಗ್ಗೆ ಅಥವಾ ಅದಕ್ಕೆ ಸಂಬಂಧಿಸಿದ ಯಾವುದೇ ವಿಷಯದ ಬಗ್ಗೆ ನಾನು ಅವರನ್ನು ಸಂಪರ್ಕಿಸಿಯೂ ಇಲ್ಲ. ವರದಿಯಲ್ಲಿ ಹೇಳಲಾದ ಎಲ್ಲಾ ವಿಷಯ ಸುಳ್ಳು ಎಂದಿದ್ದಾರೆ.
ನಿಜವನ್ನೂ ಪರಿಶೀಲಿಸದೆ ವದಂತಿಗಳು ಮತ್ತು ಊಹಾಪೋಹಗಳಿಗೆ ಬಲಿಯಾಗಬೇಡಿ ಎಂದು ನಾನು ಮಾಧ್ಯಮಗಳನ್ನು ವಿನಂತಿಸುತ್ತೇನೆ. ಸರಿಯಾದ ಪರಿಶೀಲನೆಯಿಲ್ಲದೆ ವರದಿಗಳನ್ನು ಪ್ರಕಟಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮತ್ತು ಈ ರೀತಿಯ ಪ್ರಕಟಿಸುವಾಗ ಮಾಧ್ಯಮಗಳು ಎಚ್ಚರಿಕೆಯಿಂದಿರಬೇಕು. ಮಾಹಿತಿಯನ್ನು ಪರಿಶೀಲಿಸಬೇಕು ಎಂದು ತಿಳಿಸಿದ್ದಾರೆ.
ಬಂಗಾಳಿ ದಿನಪತ್ರಿಕೆ ಆನಂದ ಬಜಾರ್, ಗಂಗೂಲಿ ಮಮತಾ ಬ್ಯಾನರ್ಜಿ ಪರವಾಗಿ ಯೂಸುಫ್ ಪಠಾಣ್ ಅವರನ್ನು ಸಂಪರ್ಕಿಸಿದ್ದು, ಬಹರಂಪುರ ಲೋಕಸಭಾ ಕ್ಷೇತ್ರಕ್ಕೆ ರಾಜೀನಾಮೆ ನೀಡಿ ಮಮತಾ ಬ್ಯಾನರ್ಜಿಯವರಿಗೆ ಉಪಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡುವಂತೆ ಕೇಳಿಕೊಂಡಿದ್ದಾರೆ ಎಂದು ವರದಿ ಮಾಡಿತ್ತು (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net