ರಾಷ್ಟ್ರಪತಿ ಆಳ್ವಿಕೆ ತಡೆಯಲು ಮಿತ್ರ ಪಕ್ಷಗಳಿಂದ ಬೆಂಬಲ; ನಮ್ಮ ದಯೆಯಿಂದ ಟಿವಿಕೆ ಅಧಿಕಾರಕ್ಕೆ ಬಂದಿದೆ; ಎಂ.ಕೆ.ಸ್ಟಾಲಿನ್ | M K Stalin

ಎಂ.ಕೆ.ಸ್ಟಾಲಿನ್
ಎಂ.ಕೆ.ಸ್ಟಾಲಿನ್
Published on
ಚೆನ್ನೈ: ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುವುದನ್ನು ತಡೆಯಲು ನಮ್ಮ ಮಿತ್ರ ಪಕ್ಷಗಳಿಂದ ಬೆಂಬಲ, ನಮ್ಮ ದಯೆಯಿಂದ ಟಿವಿಕೆ ಸರ್ಕಾರ ರಚನೆಯಾಗಿದೆ, ಮುಂದಿನ ಚುನಾವಣೆಯಲ್ಲಿ ಅದನ್ನು ಕಿತ್ತೊಗೆಯಲು ಎಲ್ಲರೂ ಪ್ರತಿಜ್ಞೆ ಮಾಡುವಂತೆ ಡಿಎಂಕೆ ಮುಖ್ಯಸ್ಥ ಎಂ.ಕೆ.ಸ್ಟಾಲಿನ್(M K Stalin) ತಮ್ಮ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
ಚೆನ್ನೈನ ಡಿಎಂಕೆ ಕಚೇರಿ ಅಣ್ಣಾ ಅರಿವಾಲಯಂನಲ್ಲಿ ಇಂದು(ಜೂ. 06) ಮಾಜಿ ಎಐಎಡಿಎಂಕೆ ಶಾಸಕರು ಸೇರಿದಂತೆ ಸಾವಿರಾರು ಎಐಎಡಿಎಂಕೆ ಕಾರ್ಯಕರ್ತರು ಡಿಎಂಕೆ ಸೇರ್ಪಡೆಯಾದರು. ಈ ವೇಳೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಧಾನಸಭಾ ಚುನಾವಣೆಯ ಬಳಿಕ ಟಿವಿಕೆಗೆ ಬೆಂಬಲ ನೀಡುವ ಮಿತ್ರಪಕ್ಷಗಳ ನಿರ್ಧಾರವನ್ನು ನಾನು ವಿರೋಧಿಸಿಲ್ಲ ಎಂದು ಹೇಳಿದ್ದಾರೆ.
ಮಿತ್ರ ಪಕ್ಷಗಳ ನಾಯಕರು ತಮ್ಮ ಅಭಿಪ್ರಾಯವನ್ನು ತಿಳಿಸಿದಾದ ನಾನು ಅವರಿಗೆ ಹೇಳಿದೆ. ನೀವು ಹೋಗಬಹುದು. ಅದು ನಿಮ್ಮ ಆಯ್ಕೆ, ಮತ್ತು ನಿಮ್ಮ ಪ್ರಜಾಸತ್ತಾತ್ಮಕ ಹಕ್ಕು. ನಾನು ನಿಮ್ಮನ್ನು ತಡೆಯುವುದಿಲ್ಲ ಎಂದು ಹೇಳಿದೆ. ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವುದನ್ನು ತಡೆಯುವ ಏಕೈಕ ಉದ್ದೇಶದಿಂದ ನಾನು ಅವರನ್ನು ಹೋಗಲು ಬಿಟ್ಟೆ, ಒಂದು ವೇಳೆ ಬೇಡವೆಂದಿದ್ದರೆ, ತಮಿಳುನಾಡಿನಲ್ಲಿ ಬಿಜೆಪಿ ಆಡಳಿತಕ್ಕೆ ದಾರಿ ಮಾಡಿಕೊಡಬೇಕಾಗಿತ್ತು ಎಂದಿದ್ದಾರೆ.
1949ರಲ್ಲಿ ಡಿಎಂಕೆ ಸ್ಥಾಪನೆ ಮತ್ತು ರಾಜಕೀಯ ಪಯಣದ ಬಗ್ಗೆ ಮಾತನಾಡಿದ ಅವರು, 1975ರಲ್ಲಿ ಡಿಎಂಕೆ ಎಮರ್ಜೆನ್ಸಿಯನ್ನು ವಿರೋಧಿಸಿತ್ತು. ಅದು ತನ್ನ ಸರ್ಕಾರವನ್ನು ವಜಾಗೊಳಿಸಲು ಕಾರಣವಾಗಬಹುದು ಎಂದು ತಿಳಿದಿದ್ದರೂ ಸಹ ಅದನ್ನು ವಿರೋಧಿಸಿತ್ತು. ಮುಂದೆ 1976 ರಲ್ಲಿ ಡಿಎಂಕೆ ಸರ್ಕಾರವನ್ನು ವಜಾಗೊಳಿಸಲಾಯಿತು ಆದರೂ ನಾವು ಎದೆಗುಂದಲಿಲ್ಲ ಎಂದು ತಿಳಿಸಿದ್ದಾರೆ.
2021ರಲ್ಲಿ ಪಕ್ಷವು ಮತ್ತೆ ಅಧಿಕಾರಕ್ಕೆ ಬರುವ ಮೊದಲು ಚುನಾವಣಾ ಹಿನ್ನಡೆ ಮತ್ತು ಯಶಸ್ಸನ್ನು ಎರಡನ್ನೂ ನೋಡಿದೆ. ಗೆಲುವು ಮತ್ತು ಸೋಲು ರಾಜಕೀಯದ ಪುನರಾವರ್ತಿತ ಲಕ್ಷಣಗಳಾಗಿವೆ. ಅದಕ್ಕಾಗಿಯೇ ನಾವು ಇಂದು ಡಿಎಂಕೆ ಸದಸ್ಯರು ಗೆಲುವಿನ ಬೆನ್ನಟ್ಟದೆ, ಸೋಲು ಎದುರಾದಾಗ ಎದೆಗುಂದದೆ, ಬಿಟ್ಟುಕೊಡದೆ ಶಾಶ್ವತವಾಗಿ ಕೆಲಸ ಮಾಡುತ್ತಲೇ ಇರಬೇಕು ಎಂದು ಪ್ರತಿಪಾದಿಸಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net