ಚಿನ್ನ ಗೆದ್ದ ಚಿರಾಗ್ ತ್ಯಾಗಿ ಕೊಲೆ: ಏಷ್ಯನ್​ ಗೇಮ್ಸ್​ಗೆ ಆಯ್ಕೆಯಾಗಿದ್ದ ರನ್ನರ್​​;ಗೆಳೆಯನನ್ನೇ ಶೂಟ್ ಮಾಡಿ ಕೊಂದ ಸಹ ಆಟಗಾರ! Chirag Tyagi Murder

ಚಿನ್ನದ ಪದಕ ವಿಜೇತ ಓಟಗಾರ ಚಿರಾಗ್ ತ್ಯಾಗಿ ಕೊಲೆ
ಚಿನ್ನದ ಪದಕ ವಿಜೇತ ಓಟಗಾರ ಚಿರಾಗ್ ತ್ಯಾಗಿ ಕೊಲೆ
Published on

ಪ್ರಮುಖ ಮುಖ್ಯಾಂಶಗಳು

  • ಚಿನ್ನದ ಪದಕ ವಿಜೇತ ಓಟಗಾರ ಚಿರಾಗ್ ತ್ಯಾಗಿ ಕೊಲೆ
  • ಏಷ್ಯನ್ ಪ್ಯಾರಾ ಗೇಮ್ಸ್‌ಗೆ ಆಯ್ಕೆಯಾಗಿದ್ದ ಚಿರಾಗ್ ತ್ಯಾಗಿ
  • ಸಹ ಆಟಗಾರನ ಗುಂಡೇಟಿಗೆ ತ್ಯಾಗಿ ಬಲಿ
ಗಾಜಿಯಾಬಾದ್: ಬೆಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಸ್ಪರ್ಧೆಯ 400 ಮೀಟರ್ ಓಟದಲ್ಲಿ ಚಿನ್ನದ ಪದಕ ಗೆದ್ದು ದೇಶದ ಗಮನ ಸೆಳೆದಿದ್ದ ಅಂಧರ ವಿಭಾಗದ ಅಥ್ಲೀಟ್ ಚಿರಾಗ್ ತ್ಯಾಗಿ (23) (Chirag Tyagi Murder), ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಗುಂಡೇಟಿನಿಂದ ಸಾವನ್ನಪ್ಪಿದ್ದಾರೆ. ಈ ಭೀಕರ ಕೊಲೆಗೆ ಸಂಬಂಧಿಸಿದಂತೆ ಪೊಲೀಸರು ಅದೇ ವಿಭಾಗದ ಮತ್ತೊಬ್ಬ ಸಹ ಕ್ರೀಡಾಪಟುವನ್ನು ಬಂಧಿಸಿದ್ದು, ಕ್ರೀಡಾಲೋಕವೇ ಬೆಚ್ಚಿಬೀಳುವಂತಾಗಿದೆ.

ರಕ್ತದ ಮಡುವಿನಲ್ಲಿ ಪತ್ತೆಯಾದ ಶವ!

ಮೂಲತಃ ಮುರಾದ್‌ನಗರದ ಬಸಂತ್‌ಪುರ ಸೆಂಥಾಲಿ ಗ್ರಾಮದವರಾದ ಚಿರಾಗ್ ತ್ಯಾಗಿ, ನವದೆಹಲಿಯಲ್ಲಿ ತರಬೇತಿ ಪಡೆಯುತ್ತಿದ್ದರು. ಗಾಜಿಯಾಬಾದ್‌ನ ಕೊತ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯ ಸಾಯಿ ಉಪ್ವಾನ್ ಎಂಬಲ್ಲಿ ಚಿರಾಗ್ ಅವರ ಮೃತದೇಹ ರಕ್ತದ ಮಡುವಿನಲ್ಲಿ ಪತ್ತೆಯಾಗಿದೆ.
ಆರಂಭದಲ್ಲಿ ಚಿರಾಗ್ ದೇಹದ ಮೇಲಿದ್ದ ಗಾಯಗಳನ್ನು ನೋಡಿ ಹರಿತವಾದ ಆಯುಧದಿಂದ ಹಲ್ಲೆ ಮಾಡಲಾಗಿದೆ ಎಂದು ಶಂಕಿಸಲಾಗಿತ್ತು. ಆದರೆ, ಮರಣೋತ್ತರ ಪರೀಕ್ಷೆ ಬಳಿಕ ಅವರನ್ನು ಗುಂಡಿಟ್ಟು ಕೊಲ್ಲಲಾಗಿರುವುದು ತಿಳಿದುಬಂದಿದೆ.

ಕೊಲೆಗೆ ಕಾರಣವಾಯ್ತು ಆ ಒಂದು ದೂರು!

ನಗರದ ಡೆಪ್ಯುಟಿ ಕಮಿಷನರ್ ಆಫ್ ಪೊಲೀಸ್ (DCP) ಧವಲ್ ಜೈಸ್ವಾಲ್ ನೀಡಿರುವ ಮಾಹಿತಿ ಪ್ರಕಾರ, ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 17 ವರ್ಷದ ಯಶ್ ಖಾಟಿಕ್ ಎಂಬ ಅಪ್ರಾಪ್ತ ಕ್ರೀಡಾಪಟುವನ್ನು ಪೊಲೀಸರು ಬಂಧಿಸಿದ್ದಾರೆ. ಇವರಿಬ್ಬರ ನಡುವೆ ಇದ್ದ ತೀವ್ರ ವೃತ್ತಿಪರ ದ್ವೇಷವೇ ಈ ಕೊಲೆಗೆ ಮುಖ್ಯ ಕಾರಣ ಎನ್ನಲಾಗಿದೆ.
ಕೊಲೆಯಾದ ಚಿರಾಗ್ ಮತ್ತು ಆರೋಪಿ ಯಶ್ ಇಬ್ಬರೂ ಅಂಧರ ವಿಭಾಗದಲ್ಲೇ ಅಥ್ಲೆಟಿಕ್ಸ್ ತರಬೇತಿ ಪಡೆಯುತ್ತಿದ್ದರು. ಈ ಹಿಂದೆ ಇಬ್ಬರೂ ಒಟ್ಟಿಗೆ ಪ್ರಾಕ್ಟೀಸ್ ಕೂಡ ಮಾಡಿದ್ದರು. ಆದರೆ, ಯಶ್ ಖಾಟಿಕ್ ಸಲ್ಲಿಸಿದ್ದ ಕೆಲವು ಕ್ರೀಡಾ ದಾಖಲೆಗಳು ನಕಲಿ ಎಂದು ಶಂಕಿಸಿದ್ದ ಚಿರಾಗ್ ತ್ಯಾಗಿ, ಅವರ ವಿರುದ್ಧ ದೂರು ದಾಖಲಿಸಿದ್ದರು.
ಈ ದೂರಿನ ಹಿನ್ನೆಲೆಯಲ್ಲಿ ತನಿಖೆ ನಡೆದು, ಯಶ್ ಖಾಟಿಕ್‌ನ ಅರ್ಹತೆಯನ್ನು ಕ್ರೀಡಾ ಮಂಡಳಿ ರದ್ದುಗೊಳಿಸಿತ್ತು. ತನ್ನ ಕ್ರೀಡಾ ಬದುಕು ಹಾಳಾಗಲು ಚಿರಾಗ್ ಕಾರಣ ಎಂದು ತೀವ್ರವಾಗಿ ಆಕ್ರೋಶಗೊಂಡಿದ್ದ ಯಶ್, ಸೇಡು ತೀರಿಸಿಕೊಳ್ಳಲು ಈ ದಾಳಿಯನ್ನು ಪ್ಲಾನ್ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಸಿಸಿಟಿವಿ ಕ್ಯಾಮೆರಾದಲ್ಲಿ ಸಿಕ್ಕಿಬಿದ್ದ ಆರೋಪಿ

ಘಟನೆ ನಡೆದ ತಕ್ಷಣ ಗಾಜಿಯಾಬಾದ್ ಪೊಲೀಸರು ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ವಿಶೇಷ ತಂಡಗಳನ್ನು ರಚಿಸಿದ್ದರು. ಸಾಯಿ ಉಪ್ವಾನ್ ಸುತ್ತಮುತ್ತಲಿನ ಸಿಸಿಟಿವಿ (CCTV) ದೃಶ್ಯಾವಳಿಗಳನ್ನು ಜಾಲಾಡಿದಾಗ ಮತ್ತು ಸ್ಥಳೀಯರನ್ನು ವಿಚಾರಣೆಗೆ ಒಳಪಡಿಸಿದಾಗ ಆರೋಪಿ ಯಶ್ ಖಾಟಿಕ್ ಸಿಕ್ಕಿಬಿದ್ದಿದ್ದಾನೆ.
ಪೊಲೀಸರ ಪ್ರಕಾರ, ಆರೋಪಿ ಯಶ್ ತಾನೇ ಖುದ್ದಾಗಿ ಪಿಸ್ತೂಲ್ ಬಳಸಿ ಚಿರಾಗ್ ಮೇಲೆ ಗುಂಡು ಹಾರಿಸಿದ್ದಾನೆ. ಸದ್ಯ ಕೊಲೆಗೆ ಬಳಸಲಾದ ಮಾರಕಾಸ್ತ್ರವನ್ನು ವಶಪಡಿಸಿಕೊಳ್ಳಲು ಪೊಲೀಸರು ಸರ್ಚ್ ಆಪರೇಷನ್ ಮುಂದುವರಿಸಿದ್ದಾರೆ.
ನಮ್ಮ ಮಗನಿಗೆ ಯಾರೊಂದಿಗೂ ವೈಯಕ್ತಿಕ ದ್ವೇಷ ಇರಲಿಲ್ಲ. ಆತ ದೇಶಕ್ಕಾಗಿ ಪದಕ ಗೆಲ್ಲುವ ಕನಸು ಕಾಣುತ್ತಿದ್ದ. ನನ್ನ ಮಗನನ್ನು ಕೊಂದವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಚಿರಾಗ್ ಪೋಷಕರು ಕಣ್ಣೀರು ಹಾಕುತ್ತಾ ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.
ಹೆತ್ತವರ ಏಕೈಕ ಆಸರೆಯಾಗಿದ್ದ ಚಿರಾಗ್ ಸಾವಿನಿಂದ ಇಡೀ ಕುಟುಂಬ ಬೀದಿಗೆ ಬಿದ್ದಿದೆ. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿ, ಕುಟುಂಬಕ್ಕೆ ಹಸ್ತಾಂತರಿಸಲಾಗಿದ್ದು, ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ತೀವ್ರಗೊಳಿಸಿದ್ದಾರೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net