FCRA ಮಸೂದೆ ನಮ್ಮ ಆಂತರಿಕ ವಿಷಯ; ಅಮೆರಿಕ ಕೂಡ ವಿದೇಶಿ ನಿಧಿಯನ್ನು ನಿಯಂತ್ರಿಸುತ್ತೆ: ಕೇಂದ್ರ ಸರ್ಕಾರ ತಿರುಗೇಟು | FCRA Bill

ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್
ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್
Published on
ನವದೆಹಲಿ: ಭಾರತದಲ್ಲಿ ವಿದೇಶಿ ದೇಣಿಗೆಗೆ ಕಡಿವಾಣ ಹಾಕಲು ಇಚ್ಚಿಸುವ ಎಫ್​ಸಿಆರ್​ಎ ಮಸೂದೆ(FCRA Bill) ಬಗ್ಗೆ ಅಮೆರಿಕದ ಕಾಂಗ್ರೆಸ್ ಸದಸ್ಯ ರೈಲಿ ಮೂರ್ ಟೀಕೆಗೆ ಪ್ರತಿಕ್ರಿಯಿಸಿರುವ ಕೇಂದ್ರ ಸರ್ಕಾರ, ಶಾಸಕಾಂಗ ವಿಷಯಗಳು ನಮ್ಮ ಆಂತರಿಕ ವ್ಯವಹಾರಗಳಾಗಿವೆ. ಅಮೆರಿಕ ಸೇರಿದಂತೆ ಹಲವಾರು ದೇಶಗಳು ವಿದೇಶಿ ನಿಧಿಯನ್ನು ನಿಯಂತ್ರಿಸುವ ಕಾನೂನುಗಳನ್ನು ಹೊಂದಿವೆ ಎಂದು ತಿರುಗೇಟು ನೀಡಿದೆ.
ಇತ್ತೀಚೆಗೆ ಎರಡು ದಿನಗಳ ಹಿಂದೆ ಪಶ್ಚಿಮ ವರ್ಜೀನಿಯಾದ ರಿಪಬ್ಲಿಕನ್ ಪ್ರತಿನಿಧಿಯಾಗಿರುವ ಮೂರ್, ಭಾರತದಲ್ಲಿ ತರಲು ಇಚ್ಚಿಸಿರುವ ಪ್ರಸ್ತಾವಿತ ಎಫ್​ಸಿಆರ್​ಎ ತಿದ್ದುಪಡಿ ಮಸೂದೆ ಸ್ಪಷ್ಟವಾಗಿ ಕ್ರೈಸ್ತರ ಮೇಲಿನ ದಾಳಿಯಾಗಿದೆ ಎಂದು ಆರೋಪಿಸಿದ್ದರು. ಇದು ಭಾರತ-ಯುಎಸ್ ದ್ವಿಪಕ್ಷೀಯ ಸಂಬಂಧಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು ಎಂದು ಎಚ್ಚರಿಕೆ ನೀಡಿದ್ದರು.
ಈ ಕುರಿತು ಇಂದು ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಕೇಂದ್ರ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ಕಾನೂನುಗಳನ್ನು ರೂಪಿಸಲು ಭಾರತವು ಸುಸ್ಥಾಪಿತ ಪ್ರಜಾಪ್ರಭುತ್ವ ಪ್ರಕ್ರಿಯೆಯನ್ನು ಹೊಂದಿದೆ. ಮತ್ತು ದೇಶೀಯ ಕಾನೂನುಗಳನ್ನು ಅವುಗಳ ಸೂಕ್ತ ಸಂದರ್ಭದಲ್ಲಿಯೇ ನೋಡಬೇಕು ಎಂದು ಹೇಳಿದ್ದಾರೆ.
ಅಮೆರಿಕ ಸೇರಿದಂತೆ ಪ್ರಪಂಚದಾದ್ಯಂತದ ದೇಶಗಳು ತಮ್ಮದೇ ಆದ ಕಾನೂನು ಚೌಕಟ್ಟಿನ ಮೂಲಕ ಸಂಸ್ಥೆಗಳಿಗೆ ವಿದೇಶಿ ಕೊಡುಗೆಗಳನ್ನು ನಿಯಂತ್ರಿಸುತ್ತವೆ ಎಂದು ತಿಳಿಸಿದ್ದಾರೆ.

ರೈಲಿ ಮೂರ್ ಹೇಳಿದ್ದೇನು?

ಎಫ್​ಸಿಆರ್​ಎ ಮಸೂದೆ ಕುರಿತು ತಮ್ಮ ಎಕ್ಸ್​ ಖಾತೆಯಲ್ಲಿ ಪ್ರತಿಕ್ರಿಯಿಸಿದ್ದ ಅಮೆರಿಕದ ಪಶ್ಚಿಮ ವರ್ಜೀನಿಯಾದ ರಿಪಬ್ಲಿಕನ್ ಕಾಂಗ್ರೆಸ್ಸಿಗ ರೈಲಿ ಮೂರ್ , ನಮ್ಮ ಪ್ರಭು ಯೇಸುಕ್ರಿಸ್ತನ ಪುನರುತ್ಥಾನದ ಕೆಲವೇ ದಶಕಗಳ ನಂತರ ಅಪೊಸ್ತಲ ಸಂತ ಥಾಮಸ್ ಮಲಬಾರ್ ಕರಾವಳಿಗೆ ಪ್ರಯಾಣ ಬೆಳೆಸಿದಾಗಿನಿಂದಲೂ ಭಾರತದಲ್ಲಿ ಕ್ರೈಸ್ತರಿದ್ದಾರೆ.

ಇಷ್ಟು ದೀರ್ಘ ಕ್ರಿಶ್ಚಿಯನ್ ಇತಿಹಾಸದ ಹೊರತಾಗಿಯೂ, ಚರ್ಚ್‌ಗಳು ಮತ್ತು ಧಾರ್ಮಿಕ ದತ್ತಿಗಳನ್ನು ಸರ್ಕಾರ ಸ್ವಾಧೀನಪಡಿಸಿಕೊಳ್ಳಲು ಅನುಮತಿ ನೀಡಲು ಭಾರತದ ಸಂಸತ್ತು ವಿದೇಶಿ ಕೊಡುಗೆ ನಿಯಂತ್ರಣ ತಿದ್ದುಪಡಿ (ಎಫ್‌ಸಿಆರ್‌ಎ) ನಿಯಮಗಳನ್ನು ತಿದ್ದುಪಡಿ ತರಲು ಮುಂದಾಗಿದೆ.

ಇದು ಕ್ರೈಸ್ತರ ಮೇಲಿನ ಸ್ಪಷ್ಟವಾದ ದಾಳಿಯಾಗಿದೆ. ಈ ಮಸೂದೆಯು ಇದೇ ರೀತಿಯಲ್ಲಿ ಮುಂದುವರಿದರೆ, ಅದು ಭಾರತದೊಂದಿಗಿನ ನಮ್ಮ ದ್ವಿಪಕ್ಷೀಯ ಸಂಬಂಧಗಳ ಮೇಲೆ ಪರಿಣಾಮ ಬೀರಬಹುದು ಎಂದು ಬೆದರಿಕೆ ಹಾಕಿದ್ದರು.

FCRA ತಿದ್ದುಪಡಿ ಪ್ರಸ್ತಾವನೆ ಏನು?

ಈ ಅಧಿವೇಶನದಲ್ಲಿ ಕೇಂದ್ರ ಸರ್ಕಾರ, ವಿದೇಶಿ ಕೊಡುಗೆ (ನಿಯಂತ್ರಣ) ತಿದ್ದುಪಡಿ ಮಸೂದೆ-2026 ಅನ್ನು ಮಂಡಿಸಲು ಮುಂದಾಗಿದೆ. ಯಾವುದೇ ಸಂಸ್ಥೆಯು FCRA ನೋಂದಣಿ ರದ್ದಾದರೆ, ಸ್ವಯಂ ರದ್ದುಗೊಳಿಸಿದರೆ ಅಥವಾ ಅವಧಿ ಮುಗಿದರೆ, ವಿದೇಶಿ ಅನುದಾನದಿಂದ ಖರೀದಿಸಿದ ಆಸ್ತಿಗಳನ್ನು ತಾತ್ಕಾಲಿಕವಾಗಿ ವಶಕ್ಕೆ ಪಡೆಯಲು ವಿಶೇಷ ಅಧಿಕಾರಿಯನ್ನು ನೇಮಿಸುವ ಅವಕಾಶವನ್ನು ಈ ಮಸೂದೆ ಪ್ರಸ್ತಾಪಿಸುತ್ತದೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net