ಮೂಕ ಪ್ರಾಣಿಗಳ ಕೊಲ್ಲಬೇಡಿ, ಮಾನವೀಯತೆ ತೋರಿಸಿ: ಸಿಎಂ ಭಗವಂತ್ ಮಾನ್‌ಗೆ ನಟಿ ರವೀನಾ ತಂಡನ್ ಭಾವುಕ ಪತ್ರ! Raveena Tandon on Bhagwant Mann

ಮೂಕ ಪ್ರಾಣಿಗಳ ಮೇಲೆ ದಯೆಯಿರಲಿ ಎಂದ ನಟಿ ರವೀನಾ ತಂಡನ್​
ಮೂಕ ಪ್ರಾಣಿಗಳ ಮೇಲೆ ದಯೆಯಿರಲಿ ಎಂದ ನಟಿ ರವೀನಾ ತಂಡನ್​
Published on

ಪ್ರಮುಖ ಮುಖ್ಯಾಂಶಗಳು

  • ಬೀದಿ ನಾಯಿಗಳಿಗೆ ದಯಾಮರಣ ನೀಡಲು ಮುಂದಾದ ಪಂಜಾಬ್​ ಸರ್ಕಾರ
  • ಮೂಕ ಪ್ರಾಣಿಗಳ ಮೇಲೆ ದಯೆಯಿರಲಿ ಎಂದ ನಟಿ ರವೀನಾ ತಂಡನ್​
  • ಪಂಜಾಬ್​ ಸಿಎಂ ಭಗವಂತ್​ ಮಾನ್​ಗೆ ಸೋಷಿಯಲ್​ ಮೀಡಿಯಾದಲ್ಲಿ ಪತ್ರ ಬರೆದ ನಟಿ
ಮುಂಬೈ: ಬೀದಿ ನಾಯಿಗಳ ಹಾವಳಿ ಮತ್ತು ಅವುಗಳ ರಕ್ಷಣೆ ಕುರಿತಾದ ಚರ್ಚೆ ಈಗ ದೇಶಾದ್ಯಂತ ಕಾವೇರಿದೆ. ಪಂಜಾಬ್ ಸರ್ಕಾರ ಇತ್ತೀಚೆಗೆ ಬೀದಿ ನಾಯಿಗಳ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರವೊಂದನ್ನು ಪ್ರಕಟಿಸಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುವ ಜನರಿಗೆ ತೊಂದರೆ ಕೊಡುವ, ಕಚ್ಚಲು ಬರುವ ಹಾಗೂ ಅತ್ಯಂತ ಅಪಾಯಕಾರಿ ಎಂದು ಗುರುತಿಸಲ್ಪಟ್ಟ ಬೀದಿ ನಾಯಿಗಳನ್ನು ದಯಾಮರಣ (Euthanasia) ಗೊಳಿಸಲು ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ಈ ಇತ್ತೀಚಿನ ನಡೆಯೀಗ ಪ್ರಾಣಿ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿದೆ.

ರವೀನಾ ತಂಡನ್ ಪೋಸ್ಟ್‌ನಲ್ಲಿ ಏನಿದೆ?

ಮೇ 23 ರಂದು ತಮ್ಮ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಸುದೀರ್ಘ ಪತ್ರವೊಂದನ್ನು ಹಂಚಿಕೊಂಡಿರುವ ರವೀನಾ ತಂಡನ್ (Raveena Tandon on Bhagwant Mann), ಮುಖ್ಯಮಂತ್ರಿಗಳನ್ನು ಉದ್ದೇಶಿಸಿ, ಗೌರವಾನ್ವಿತ ಮುಖ್ಯಮಂತ್ರಿ ಭಗವಂತ್ ಮಾನ್ ಜಿ, ಬೀದಿ ನಾಯಿಗಳ ನಿರ್ವಹಣೆಯ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ದೇಶಾದ್ಯಂತ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದೆ. ಸಾರ್ವಜನಿಕರ ಸುರಕ್ಷತೆ ನಮಗೆಲ್ಲರಿಗೂ ಮುಖ್ಯ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ, ಈ ತೀರ್ಪನ್ನು ಜಾರಿಗೆ ತರುವಾಗ ನಮ್ಮಲ್ಲಿ ಮಾನವೀಯತೆ ಇರಬೇಕು ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ.
ಮುಂದುವರಿದು ಮಾತನಾಡಿದ ಅವರು, ನಾಯಿಗಳನ್ನು ಕೊಲ್ಲುವ ಬದಲು ನಾಯಿಗಳಿಗೆ ಗರ್ಭನಾಶ (Sterilization) ಮಾಡಿಸುವುದು, ಸಕಾಲಕ್ಕೆ ವ್ಯಾಕ್ಸಿನೇಷನ್ ನೀಡುವುದು, ಅವುಗಳಿಗಾಗಿಯೇ ಪ್ರತ್ಯೇಕ ಆಶ್ರಯ ತಾಣಗಳನ್ನು ನಿರ್ಮಿಸುವುದು ಮತ್ತು ಸರಿಯಾದ ಪುನರ್ವಸತಿ ಕಲ್ಪಿಸುವುದರಿಂದ ಸಾರ್ವಜನಿಕರನ್ನು ಹಾಗೂ ಪ್ರಾಣಿಗಳನ್ನು ಇಬ್ಬರನ್ನೂ ರಕ್ಷಿಸಬಹುದು. ಮೂಕ ಪ್ರಾಣಿಗಳನ್ನು ನಾವು ಹೇಗೆ ನಡೆಸಿಕೊಳ್ಳುತ್ತೇವೆ ಎಂಬುದು ನಮ್ಮ ಸಮಾಜದ ಸಂಸ್ಕಾರವನ್ನು ಪ್ರತಿಬಿಂಬಿಸುತ್ತದೆ ಎಂದು ರವೀನಾ ಮಾರ್ಮಿಕವಾಗಿ ನುಡಿದಿದ್ದಾರೆ.

ಪಂಜಾಬ್ ಸರ್ಕಾರದ ಬಿಗಿ ನಿಲುವು ಏನು?

ಬೀದಿ ನಾಯಿಗಳ ಕಡಿತದಿಂದಾಗಿ ಸಾರ್ವಜನಿಕರು, ವಿಶೇಷವಾಗಿ ಮಕ್ಕಳು ಮತ್ತು ವೃದ್ಧರು ರಸ್ತೆಯಲ್ಲಿ ಓಡಾಡಲು ಹೆದರುವಂತಾಗಿದೆ. ಈ ಹಿನ್ನೆಲೆಯಲ್ಲಿ ಸಿಎಂ ಭಗವಂತ್ ಮಾನ್ ಅವರು ಜನನಿಬಿಡ ಪ್ರದೇಶಗಳಲ್ಲಿ ಬೀದಿ ನಾಯಿಗಳ ಹಾವಳಿಯನ್ನು ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದಾರೆ.
ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನಗಳನ್ನು ಆಧರಿಸಿಯೇ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ತೀರಾ ಆಕ್ರಮಣಕಾರಿಯಾಗಿ ವರ್ತಿಸುವ ಮತ್ತು ಮನುಷ್ಯರ ಜೀವಕ್ಕೆ ಕುತ್ತು ತರುವ ನಾಯಿಗಳನ್ನು ಮಾತ್ರವೇ ದಯಾಮರಣಕ್ಕೆ ಒಳಪಡಿಸಲಾಗುತ್ತದೆ ಎಂದು ಸರ್ಕಾರ ಹೇಳಿದೆ. ಇದರ ಜೊತೆಗೆ, ಬೀದಿಗಳಿಂದ ತರಲಾಗುವ ನಾಯಿಗಳನ್ನು ಸುರಕ್ಷಿತವಾಗಿ ಇಡಲು ದೊಡ್ಡ ಆಶ್ರಯ ತಾಣಗಳನ್ನು ನಿರ್ಮಿಸುವುದಾಗಿ ಪಂಜಾಬ್ ಸರ್ಕಾರ ಭರವಸೆ ನೀಡಿದೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net