ಪಾಕಿಸ್ತಾನದಲ್ಲೂ ಶುರುವಾಯ್ತು ಕಾಕ್ರೋಚ್ ಹಾವಳಿ; ಭಾರತದ ಟ್ರೆಂಡ್ ಕಾಪಿ ಮಾಡಿದ ಪಾಕ್​ ನೆಟ್ಟಿಗರು! | Cockroach Awami Party

Cockroach Awami Party
Cockroach Awami Party
Published on
Cockroach Awami Party: ಕೇವಲ ಹಾಸ್ಯ ಮತ್ತು ಸಾಮಾಜಿಕ ವಿಡಂಬನೆಗಾಗಿ ಭಾರತದಲ್ಲಿ ಆರಂಭವಾದ ಕಾಕ್ರೋಚ್ ಜನತಾ ಪಾರ್ಟಿ (CJP) ಅಭಿಯಾನ, ಈಗ ನೆರೆದೇಶ ಪಾಕಿಸ್ತಾನದ ಇಂಟರ್ನೆಟ್ ವಲಯಕ್ಕೂ ಲಗ್ಗೆ ಇಟ್ಟಿದ್ದು, ಈ ಡಿಜಿಟಲ್ ಚಳವಳಿಯಿಂದ ಪ್ರೇರಿತರಾಗಿ, ಪಾಕಿಸ್ತಾನಿ ನೆಟ್ಟಿಗರು ಕೂಡ ಸಾಲು ಸಾಲು ಹೊಸ ಖಾತೆಗಳನ್ನು ತೆರೆಯುತ್ತಿದ್ದಾರೆ. ಎಂತಹ ಕಠಿಣ ಪರಿಸ್ಥಿತಿಯಲ್ಲೂ ನಾಶವಾಗದ ಮತ್ತು ಸದಾ ಹೋರಾಡುವ ಜಿರಳೆಗಳ ವಿಶಿಷ್ಟ ಗುಣವನ್ನು ರಾಜಕೀಯ ಹತಾಶೆಗೆ ಹೋಲಿಸಿ ಸೃಷ್ಟಿಸಲಾದ ಈ ಅಭಿಯಾನವು, ಲಕ್ಷಾಂತರ ಯುವಕರನ್ನು ತನ್ನತ್ತ ಸೆಳೆಯುತ್ತಿದೆ.
ಪಾಕಿಸ್ತಾನದ ಡಿಜಿಟಲ್ ಜಗತ್ತಿನಲ್ಲಿ ಈಗ ಕಾಕ್ರೋಚ್ ಅವಾಮಿ ಪಾರ್ಟಿ, ಕಾಕ್ರೋಚ್ ಅವಾಮಿ ಲೀಗ್ ಹಾಗೂ ಮುತ್ತಹಿದಾ ಕಾಕ್ರೋಚ್ ಮೂವ್‌ಮೆಂಟ್ ನಂತಹ ವಿಭಿನ್ನ ಹೆಸರುಗಳ ಪೇಜ್‌ಗಳು ಸದ್ದು ಮಾಡುತ್ತಿವೆ. ಅಲ್ಲಿನ ಒಂದು ಪ್ರಮುಖ ಖಾತೆಯ ಬಯೋದಲ್ಲಿ ಇದು ಪಾಕಿಸ್ತಾನದ ಯುವಜನರಿಗಾಗಿ, ಯುವಕರಿಂದಲೇ ಸೃಷ್ಟಿಯಾಗಿರುವ ರಾಜಕೀಯ ವೇದಿಕೆ ಎಂದು ಬರೆಯಲಾಗಿದೆ. ಮತ್ತೊಂದು ಖಾತೆಯು ಇಲ್ಲಿನ ಆಡಳಿತ ವ್ಯವಸ್ಥೆಯು ಯಾರನ್ನು ಕೇವಲ ಜಿರಳೆಗಳೆಂದು ನಿರ್ಲಕ್ಷಿಸಿದೆಯೋ, ನಾವು ಆ ಸಾಮಾನ್ಯ ಜನರ ಧ್ವನಿಯಾಗಿದ್ದೇವೆ ಎಂಬ ಉರ್ದು ವಾಕ್ಯದೊಂದಿಗೆ ಗಮನ ಸೆಳೆಯುತ್ತಿದೆ.
ಈ ಖಾತೆಗಳ ಲೋಗೋಗಳು ಭಾರತದ ಮೂಲ ವಿನ್ಯಾಸವನ್ನೇ ಹೋಲುತ್ತಿದ್ದರೂ, ಪಾಕಿಸ್ತಾನದ ರಾಷ್ಟ್ರೀಯತೆಗೆ ಹೊಂದುವಂತೆ ಹಸಿರು ಮತ್ತು ಬಿಳಿ ಬಣ್ಣವನ್ನು ಬಳಸಲಾಗಿದೆ. ಇಮ್ರಾನ್ ಖಾನ್​ರ ಪಿಟಿಐ, ನವಾಜ್ ಶರೀಫ್​ರ ಪಿಎಂಎಲ್-ಎನ್ ಮತ್ತು ಪಿಪಿಪಿಯಂತಹ ಸಾಂಪ್ರದಾಯಿಕ ರಾಜಕೀಯ ಪಕ್ಷಗಳಿಗೆ ಪರ್ಯಾಯವಾಗಿ ಯುವಜನರು ಇದನ್ನು ಬಳಸಿಕೊಳ್ಳುತ್ತಿದ್ದಾರೆ.
ಭಾರತದಲ್ಲಿ ಈ ವೈರಲ್ ಚಳವಳಿಗೆ ಅಮೆರಿಕದ ಬೋಸ್ಟನ್ ವಿಶ್ವವಿದ್ಯಾಲಯದಲ್ಲಿ ಓದುತ್ತಿರುವ 30 ವರ್ಷದ ಭಾರತೀಯ ವಿದ್ಯಾರ್ಥಿ ಅಭಿಜೀತ್ ದೀಪ್ಕೆ ನೇತೃತ್ವ ನೀಡಿದ್ದಾರೆ. ಇವರು ಈ ಹಿಂದೆ ಆಮ್ ಆದ್ಮಿ ಪಕ್ಷದ ಡಿಜಿಟಲ್ ತಂತ್ರಜ್ಞರಾಗಿ ಕೆಲಸ ಮಾಡಿದ್ದರು. ಭಾರತದ ಈ ಕಾಕ್ರೋಚ್ ಜನತಾ ಪಾರ್ಟಿಗೆ ತನ್ನದೇ ಆದ ಪ್ರಣಾಳಿಕೆ ಮತ್ತು ವೆಬ್‌ಸೈಟ್ ಇದ್ದರೆ, ಪಾಕಿಸ್ತಾನದಲ್ಲಿ ಕಾಣಿಸಿಕೊಂಡಿರುವ ಖಾತೆಗಳು ಬೇರೆ ಬೇರೆ ಸ್ವತಂತ್ರ ಕಂಟೆಂಟ್ ಕ್ರಿಯೇಟರ್‌ಗಳಿಂದ ನಡೆಸಲ್ಪಡುತ್ತಿವೆ.
ಭಾರತದ ಸುಪ್ರೀಂ ಕೋರ್ಟ್ ವಿಚಾರಣೆಯೊಂದರ ಸಂದರ್ಭದಲ್ಲಿ ನಿರುದ್ಯೋಗಿ ಯುವಕರನ್ನು ಜಿರಳೆಗಳಿಗೆ ಹೋಲಿಸಿದ ನ್ಯಾಯಾಧೀಶರ ಹೇಳಿಕೆಯ ವಿರುದ್ಧ ಪ್ರತಿಭಟನೆಯಾಗಿ ಈ ವಿಶಿಷ್ಟ ಚಳವಳಿ ಹುಟ್ಟಿಕೊಂಡಿತು. ಯಾವುದೇ ಅಧಿಕೃತ ರಾಜಕೀಯ ಅಸ್ತಿತ್ವ ಇಲ್ಲದಿದ್ದರೂ, ಕೇವಲ ಒಂದೇ ವಾರದಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ 2 ಕೋಟಿಗೂ ಹೆಚ್ಚು ಅನುಯಾಯಿಗಳನ್ನು ಸಂಪಾದಿಸುವ ಮೂಲಕ ಈ ಅಭಿಯಾನವು ದಕ್ಷಿಣ ಏಷ್ಯಾದ ಯುವಕರಲ್ಲಿನ ಉದ್ಯೋಗ ಮತ್ತು ಆಡಳಿತ ವ್ಯವಸ್ಥೆಯ ಮೇಲಿನ ಹತಾಶೆಯನ್ನು ಜಾಗತಿಕ ಮಟ್ಟದಲ್ಲಿ ಎತ್ತಿ ತೋರಿಸಿದೆ(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net