ಸೈಬರ್ ಕಳ್ಳರಿಗೆ ಸೆಡ್ಡು ಹೊಡೆಯಲು ನಿಮ್ಮ ವಾಟ್ಸ್​ಆ್ಯಪ್‌ನಲ್ಲೇ ಇವೆ ಭದ್ರತಾ ಫೀಚರ್ಸ್! ಇಂದೇ ಆನ್ ಮಾಡಿಕೊಳ್ಳಿ...WhatsApp Scam Alert

ಸೈಬರ್ ಕಳ್ಳರಿಗೆ ಸೆಡ್ಡು ಹೊಡೆಯಲು ನಿಮ್ಮ ವಾಟ್ಸ್​ಆ್ಯಪ್‌ನಲ್ಲೇ ಇವೆ ಭದ್ರತಾ ಫೀಚರ್ಸ್! ಇಂದೇ ಆನ್ ಮಾಡಿಕೊಳ್ಳಿ...WhatsApp Scam Alert
ಸೈಬರ್ ಕಳ್ಳರಿಗೆ ಸೆಡ್ಡು ಹೊಡೆಯಲು ನಿಮ್ಮ ವಾಟ್ಸ್​ಆ್ಯಪ್‌ನಲ್ಲೇ ಇವೆ ಭದ್ರತಾ ಫೀಚರ್ಸ್! ಇಂದೇ ಆನ್ ಮಾಡಿಕೊಳ್ಳಿ...WhatsApp Scam Alert
Published on

ಪ್ರಮುಖ ಮುಖ್ಯಾಂಶಗಳು

  • ವಾಟ್ಸ್​​ಆ್ಯಪ್​ನಲ್ಲಿ ಅಪರಿಚಿತ ಲಿಂಕ್, ನಕಲಿ ಉದ್ಯೋಗದ ಆಮಿಷ; ವಂಚಕರಿಂದ ಪಾರಾಗಲು ಹೀಗೆ ಮಾಡಿ
  • ನಿಮ್ಮ ವಾಟ್ಸಾಪ್‌ಗೆ ಬಂದಿದೆಯೇ 'ತುರ್ತು ಹಣದ' ಮೆಸೇಜ್? ಕಾಸು ಕಳುಹಿಸುವ ಮುನ್ನ ಈ ವರದಿ ಓದಿ
  • ಅಪರಿಚಿತ ಕರೆಗಳಿಂದ ಕಿರಿಕಿರಿಯೇ? 'ಸೈಲೆನ್ಸ್ ಕಾಲರ್ಸ್' ಫೀಚರ್ ಬಳಸಲು ಮರೆಯದಿರಿ
  • ಬಂಧು-ಮಿತ್ರರ ಹೆಸರಲ್ಲೇ ಬರುತ್ತೆ ನಕಲಿ ವಾಟ್ಸ್​ಆ್ಯಪ್​ ಸಂದೇಶ ಮತ್ತು ಹ್ಯಾಕರ್‌ಗಳ ಹೊಸ ಜಾಲದ ಬಗ್ಗೆ ಪೊಲೀಸರ ಎಚ್ಚರಿಕೆ
WhatsApp Scam Alert : ಇತ್ತೀಚಿನ ದಿನಗಳಲ್ಲಿ ವಾಟ್ಸ್​ಆ್ಯಪ್​ ಬಳಕೆ ಹೆಚ್ಚಾಗುತ್ತಿರುವಂತೆಯೇ, ಸೈಬರ್ ಅಪರಾಧಿಗಳು ಅದರ ಮೂಲಕ ನಡೆಸುವ ವಂಚನೆಗಳನ್ನೂ ಹೆಚ್ಚಿಸುತ್ತಿದ್ದಾರೆ. ಉದ್ಯೋಗದ ಆಮಿಷ, ಲಕ್ಕಿ ಡ್ರಾ ಅಥವಾ ಬಹುಮಾನ ಗೆದ್ದಿರುವ ಆಸೆ, ಬ್ಯಾಂಕ್ ಅಪ್‌ಡೇಟ್‌ಗಳು ಹಾಗೂ ಹೂಡಿಕೆಯ ಹೆಸರಿನಲ್ಲಿ ನಕಲಿ ಸಂದೇಶಗಳನ್ನು ಕಳುಹಿಸಿ ಅಮಾಯಕ ಜನರನ್ನು ವಂಚಿಸಲಾಗುತ್ತಿದೆ. ಆದರೆ, ಸಾರ್ವಜನಿಕರು ಕೆಲವು ಸರಳ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸುವ ಮೂಲಕ ಇಂತಹ ಆನ್‌ಲೈನ್ ವಂಚನೆಗಳಿಂದ ಮತ್ತು ಆರ್ಥಿಕ ನಷ್ಟದಿಂದ ಸುಲಭವಾಗಿ ತಮ್ಮನ್ನು ತಾವು ರಕ್ಷಿಸಿಕೊಳ್ಳಬಹುದು.
ನಿಮಗೆ ಹಠಾತ್ತನೆ ಅಪರಿಚಿತ ಸಂಖ್ಯೆಗಳಿಂದ ಉದ್ಯೋಗ, ಲಕ್ಕಿ ಡ್ರಾ, ಬಂಪರ್ ಬಹುಮಾನ ಅಥವಾ ವಿಶೇಷ ಕೊಡುಗೆಗಳ ಕುರಿತು ಸಂದೇಶಗಳು ಬಂದರೆ ತಕ್ಷಣ ಜಾಗೃತರಾಗಿರಿ. ಸೈಬರ್ ಅಪರಾಧಿಗಳು ಮೊದಲು ನಿಮ್ಮೊಂದಿಗೆ ಅತ್ಯಂತ ಸಾಮಾನ್ಯ ರೀತಿಯಲ್ಲಿ ಮಾತನಾಡಿ ನಂಬಿಕೆ ಗಳಿಸಿಕೊಳ್ಳುತ್ತಾರೆ, ಆ ಬಳಿಕ ಹಣ ಅಥವಾ ವೈಯಕ್ತಿಕ ಮಾಹಿತಿಯನ್ನು ಕೇಳಲು ಆರಂಭಿಸುತ್ತಾರೆ. ಆದ್ದರಿಂದ, ಇಂತಹ ಸಂದೇಶಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದೆ ತಕ್ಷಣವೇ ಆ ನಂಬರ್‌ಗಳನ್ನು ಬ್ಲಾಕ್ ಮತ್ತು ರಿಪೋರ್ಟ್ ಮಾಡುವುದು ಅತ್ಯಂತ ಸೂಕ್ತ.
ವಾಟ್ಸ್​ಆ್ಯಪ್‌ನಲ್ಲಿ ಬರುವ ಕೆಲವು ಲಿಂಕ್‌ಗಳು ಅಸಲಿ ಬ್ಯಾಂಕ್ ಅಥವಾ ಸರ್ಕಾರಿ ವೆಬ್‌ಸೈಟ್‌ಗಳಂತೆಯೇ ಕಾಣಿಸಬಹುದು, ಆದರೆ ಅವು ನಕಲಿಯಾಗಿರುವ ಸಾಧ್ಯತೆ ಹೆಚ್ಚಿರುತ್ತದೆ. "ಕೆವೈಸಿ (KYC) ಅಪ್‌ಡೇಟ್ ಮಾಡಿ", "ನಿಮ್ಮ ಬ್ಯಾಂಕ್ ಖಾತೆ ಸ್ಥಗಿತಗೊಳ್ಳಲಿದೆ", "ತಕ್ಷಣ ಲಾಗ್ ಇನ್ ಆಗಿ" ಎಂಬಂತಹ ಸಂದೇಶಗಳು ಬಂದಾಗ ಗಾಬರಿಯಾಗಿ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ. ಮೊದಲು ಆ ಲಿಂಕ್ ಅಧಿಕೃತವೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಬ್ಯಾಂಕ್‌ಗಳು ಅಥವಾ ಸರ್ಕಾರಿ ಸಂಸ್ಥೆಗಳು ಎಂದಿಗೂ ವಾಟ್ಸ್​ಆ್ಯಪ್ ಮೂಲಕ ಒಟಿಪಿ ಕೇಳುವುದಿಲ್ಲವಾದ್ದರಿಂದ, ಯಾರೊಂದಿಗೂ ಒಟಿಪಿ ಹಂಚಿಕೊಳ್ಳಬೇಡಿ ಹಾಗೂ ಅಪರಿಚಿತರೊಂದಿಗೆ ನಿಮ್ಮ ಮೊಬೈಲ್ ಸ್ಕ್ರೀನ್ ಶೇರ್ ಮಾಡಬೇಡಿ, ಇದರಿಂದ ನಿಮ್ಮ ಬ್ಯಾಂಕಿಂಗ್ ವಿವರಗಳು ದುಷ್ಟರ ಪಾಲಾಗುವ ಅಪಾಯವಿರುತ್ತದೆ.
ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧಿಗಳು ಕುಟುಂಬದ ಸದಸ್ಯರ ಹೆಸರನ್ನು ಬಳಸಿ, ಹೊಸ ನಂಬರ್‌ಗಳ ಮೂಲಕ ವಂಚನೆ ಎಸಗುತ್ತಿದ್ದಾರೆ. ನನ್ನ ಫೋನ್ ಕಳೆದುಹೋಗಿದೆ, ಇದು ನನ್ನ ಹೊಸ ನಂಬರ್, ತುರ್ತಾಗಿ ಹಣ ಕಳುಹಿಸಿ ಎಂಬಂತಹ ಸಂದೇಶಗಳನ್ನು ಕಳುಹಿಸಿ ಗಾಬರಿ ಹುಟ್ಟಿಸುತ್ತಾರೆ. ಇಂತಹ ಸಂದೇಶ ಬಂದ ತಕ್ಷಣ ಆತುರಪಟ್ಟು ಹಣ ಕಳುಹಿಸುವ ಬದಲು, ತಕ್ಷಣವೇ ಆ ಸಂಬಂಧಿಕರ ಹಳೆಯ ನಂಬರ್‌ಗೆ ಕರೆ ಮಾಡಿ ಸತ್ಯಾಸತ್ಯತೆಯನ್ನು ತಿಳಿದುಕೊಳ್ಳುವುದು ಅತ್ಯಗತ್ಯ.
ನಿಮ್ಮ ಸುರಕ್ಷತೆಗಾಗಿ ವಾಟ್ಸ್​ಆ್ಯಪ್‌ನಲ್ಲಿ ಹಲವು ಅತ್ಯುತ್ತಮ ಫೀಚರ್‌ಗಳು ಲಭ್ಯವಿವೆ. ಪ್ರೈವೆಸಿ ಸೆಟ್ಟಿಂಗ್ಸ್‌ನಲ್ಲಿ ನಿಮ್ಮ ಪ್ರೊಫೈಲ್ ಫೋಟೋ, ಸ್ಟೇಟಸ್ ಮತ್ತು ಲಾಸ್ಟ್ ಸೀನ್ ವಿವರಗಳನ್ನು ಕೇವಲ ನಿಮ್ಮ ಪರಿಚಯಸ್ಥರಿಗೆ ಮಾತ್ರ ಕಾಣಿಸುವಂತೆ ಸೆಟ್ ಮಾಡಿಕೊಳ್ಳಿ. ಹಾಗೆಯೇ, 'ಸೈಲೆನ್ಸ್ ಅನ್‌ನೋನ್ ಕಾಲರ್ಸ್' (Silence Unknown Callers) ಫೀಚರ್ ಆನ್ ಮಾಡುವುದರಿಂದ ಅಪರಿಚಿತ ಕರೆಗಳು ತಾವಾಗಿಯೇ ಮ್ಯೂಟ್ ಆಗುತ್ತವೆ. ಇದರೊಂದಿಗೆ 'ಟೂ-ಸ್ಟೆಪ್ ವೆರಿಫಿಕೇಶನ್' ಸಕ್ರಿಯಗೊಳಿಸುವುದರಿಂದ ನಿಮ್ಮ ಖಾತೆಗೆ ಹೆಚ್ಚುವರಿ ಭದ್ರತೆ ಸಿಗುತ್ತದೆ.
ನಿಮಗೆ ಯಾವುದೇ ನಕಲಿ ಅಥವಾ ಶಂಕಾಸ್ಪದ ಸಂದೇಶ ಬಂದಲ್ಲಿ ಅದನ್ನು ನಿರ್ಲಕ್ಷಿಸದೆ ತಕ್ಷಣವೇ ವರದಿ ಮಾಡಿ. ಇದಕ್ಕಾಗಿ ಚಾಟ್ ಓಪನ್ ಮಾಡಿ, ಪ್ರೊಫೈಲ್ ಹೆಸರಿನ ಮೇಲೆ ಕ್ಲಿಕ್ ಮಾಡಿ ಕೆಳಗೆ ಸ್ಕ್ರಾಲ್ ಮಾಡಿದರೆ 'ವರದಿ ಮತ್ತು ಬ್ಲಾಕ್' (Report and Block) ಮಾಡುವ ಆಯ್ಕೆಗಳು ಸಿಗುತ್ತವೆ. ಇವುಗಳನ್ನು ಬಳಸುವುದರಿಂದ ವಾಟ್ಸ್​ಆ್ಯಪ್ ಸಂಸ್ಥೆಯು ಆ ನಕಲಿ ಖಾತೆಯ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ ಮತ್ತು ಇತರರು ಇಂತಹ ವಂಚನೆಗೆ ಬಲಿಯಾಗುವುದನ್ನು ತಪ್ಪಿಸಬಹುದು.
ಸೈಬರ್ ಅಪರಾಧಿಗಳು ಯಾವಾಗಲೂ ನಮ್ಮ ಆತುರ ಮತ್ತು ಬೇಜವಾಬ್ದಾರಿಯನ್ನೇ ಬಂಡವಾಳವಾಗಿಸಿಕೊಳ್ಳುತ್ತಾರೆ. ಆದ್ದರಿಂದ ವಾಟ್ಸ್​ಆ್ಯಪ್‌ನಲ್ಲಿ ಬರುವ ಪ್ರತಿಯೊಂದು ಸಂದೇಶ, ಲಿಂಕ್ ಅಥವಾ ಕೊಡುಗೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ, ಅವು ಅಸಲಿ ಎಂಬುದನ್ನು ಖಚಿತಪಡಿಸಿಕೊಂಡ ನಂತರವೇ ಪ್ರತಿಕ್ರಿಯಿಸುವುದು ಸೂಕ್ತ. ನಾವು ವಹಿಸುವ ಒಂದು ಸಣ್ಣ ಮುನ್ನೆಚ್ಚರಿಕೆ ದೊಡ್ಡ ಮಟ್ಟದ ಆರ್ಥಿಕ ನಷ್ಟದಿಂದ ನಮ್ಮನ್ನು ರಕ್ಷಿಸುತ್ತದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net