ಮುಗಿಯದ ಮಧ್ಯಪ್ರಾಚ್ಯ ಮಹಾಯುದ್ಧ: 900 ವರ್ಷ ಹಳೆಯ ಬ್ಯೂಫೋರ್ಟ್ ಕೋಟೆ ಇಸ್ರೇಲ್​ ವಶ; ಅಡಕತ್ತರಿಯಲ್ಲಿ ಸಿಲುಕಿದ ಲೆಬನಾನ್​! Israel Captures Beaufort Castle

ಲೆಬನಾನ್​ನ 900 ವರ್ಷ ಹಳೆಯ ಬ್ಯೂಫೋರ್ಟ್ ಕೋಟೆ ವಶಕ್ಕೆ ಪಡೆದ ಇಸ್ರೇಲ್​
ಲೆಬನಾನ್​ನ 900 ವರ್ಷ ಹಳೆಯ ಬ್ಯೂಫೋರ್ಟ್ ಕೋಟೆ ವಶಕ್ಕೆ ಪಡೆದ ಇಸ್ರೇಲ್​
Published on

ಪ್ರಮುಖ ಮುಖ್ಯಾಂಶಗಳು

  • ಮಧ್ಯಪ್ರಾಚ್ಯದಲ್ಲಿ ಮುಂದುವರಿದ ಸಂಘರ್ಷ
  • ಲೆಬನಾನ್​ನ 900 ವರ್ಷ ಹಳೆಯ ಬ್ಯೂಫೋರ್ಟ್ ಕೋಟೆ ವಶಕ್ಕೆ ಪಡೆದ ಇಸ್ರೇಲ್​
  • ಶನಿವಾರ ಹಿಜ್ಬೊಲ್ಲಾ ದಾಳಿಗೆ ಪ್ರತೀಕಾರವಾಗಿ ಕೋಟೆ ವಶಕ್ಕೆ
  • ಇರಾನ್​ ಅಮೆರಿಕ ಯುದ್ದದಲ್ಲಿ ಸಿಲುಕಿಕೊಂಡ ಲೆಬನಾನ್​
ಲೆಬನಾನ್​: ಮಧ್ಯಪ್ರಾಚ್ಯದಲ್ಲಿ ಸಂಘರ್ಷ ಪ್ರಾರಂಭವಾಗಿ ಸುಮಾರು ಎರಡು ತಿಂಗಳು ಕಳೆದರೂ ಶಾಂತಿ ಎಂಬ ಶಬ್ದ ಬಲು ದೂರವೇ ಉಳಿದಿದೆ ಎಂದರೆ ಸುಳ್ಳಲ್ಲ. ಒಂದು ಕಡೆ ಅಮೆರಿಕ ಮತ್ತು ಇರಾನ್​ ನಡುವೆ ಯುದ್ಧ ನಡೆಯುತ್ತಿದ್ದರೆ, ಇನ್ನೊಂದು ಬದಿಯಲ್ಲಿ ಇಸ್ರೇಲ್​ ಮತ್ತು ಲೆಬನಾನ್​ ಬಡಿದಾಡುತ್ತಿವೆ.

900 ವರ್ಷ ಹಳೆಯ ಕೋಟೆ ಗೆದ್ದ ಇಸ್ರೇಲ್​!

ಲೆಬನಾನ್​ ಮೇಲೆ ಇಸ್ರೇಲ್​ ದಿನನಿತ್ಯ ವಾಯುದಾಳಿ ನಡೆಸುತ್ತಿದ್ದು, ಇಂದು (ಭಾನುವಾರ, ಮೇ.31) ದಕ್ಷಿಣ ಲೆಬನಾನ್​ ಮೇಲೆ ದಾಳಿ ನಡೆಸಿ ಸುಮಾರು 900 ವರ್ಷ ಹಳೆಯದಾದ ಬ್ಯೂಫೋರ್ಟ್ ಕೋಟೆ (Israel Captures Beaufort Castle) ಯನ್ನು ತನ್ನ ವಶಕ್ಕೆ ತೆಗೆದುಕೊಂಡಿದೆ.
ಶನಿವಾರ (ಮೇ.30) ಇಸ್ರೇಲ್​ ಮೇಲೆ ಲೆಬನಾನ್​ನ ಮಿಲಿಟರಿ ಸಂಘಟನೆ ಹಿಜ್ಬೊಲ್ಲಾ ದಾಳಿ ನಡೆಸಿದ ಪ್ರತೀಕಾರವಾಗಿ ಈ ಕೋಟೆಯನ್ನು ಇಸ್ರೇಲ್​ ವಶಪಡಿಸಿಕೊಂಡಿದೆ ಎಂದು ವರದಿಯಾಗಿದೆ.
ನಮಗೆ ಈ ಬ್ಯೂಫೋರ್ಟ್ ಕೋಟೆ ಹಾಗೂ ವಾಡಿ ಅಲ್-ಸಲುಕಿ ಪ್ರದೇಶದ ಮೇಲೆ ಹಿಡಿತ ಸಾಧಿಸಿದರೆ ಮಾತ್ರ ಹಿಜ್ಬೊಲ್ಲಾದ ಚಲನ, ವಲನದ ಮೇಲೆ ಕಣ್ಣಿಡಲು ಸಾಧ್ಯವಾಗುತ್ತಿತ್ತು. ಆದ್ದರಿಂದ ನಾವು ಈ ಪ್ರದೇಶದಲ್ಲಿ ಮಿಲಿಟರಿ ಕಾರ್ಯಾಚರಣೆ ನಡೆಸಿದ್ದೆವೆಂದು ಇಸ್ರೇಲ್​ ಆರ್ಮಿ ಹೇಳಿದೆ.

ಇಬ್ಬರ ಯುದ್ಧದಲ್ಲಿ ಸಿಲುಕಿಕೊಂಡ ಲೆಬನಾನ್​!

ಇರಾನ್​ ಮೇಲೆ ಅಮೆರಿಕ ಮತ್ತು ಇಸ್ರೇಲ್​ ದಾಳಿ ನಡೆಸಿದಾಗ ಇರಾನ್​ನ ಸಹಾಯಕ್ಕೆ ಲೆಬನಾನ್​ ನಿಂತಿತು. ಇಸ್ರೇಲ್​ ಮೇಲೆ ದಾಳಿ ಮಾಡಲು ಪ್ರಾರಂಭಿಸಿದ ಲೆಬನಾನ್​ಗೆ ಕೆಲವೇ ದಿನಗಳಲ್ಲಿ ಇಸ್ರೇಲ್​ ತಕ್ಕ ಪಾಠ ಕಲಿಸಿತು.
ಇನ್ನೊಂದು ಕಡೆ ಅಮೆರಿಕ ಮತ್ತು ಇರಾನ್​ ಶಾಂತಿ ಮಾತುಕತೆ ನಡೆಸುತ್ತಿದ್ದರೂ, ಇತ್ತ ಇಸ್ರೇಲ್​, ಲೆಬನಾನ್​ ಮೇಲೆ ದಾಳಿ ಮಾಡುವುದನ್ನು ನಿಲ್ಲಿಸದ ಪರಿಣಾಮ ಈ ಸಂಘರ್ಷದಲ್ಲಿ ಇರಾನ್​ ಪರ ನಿಂತ ಪರಿಣಾಮ ಲೆಬನಾನ್​ ಸಾಕಷ್ಟು ನಷ್ಟ ಅನುಭವಿಸುವಂತಾಯಿತು ಎನ್ನುವುದು ಜಾಗತಿಕ ರಾಜಕೀಯ ವಿಶ್ಲೇಷಕರ ಅಭಿಪ್ರಾಯವಾಗಿದೆ.

ಏನಿದು ಬ್ಯೂಫೋರ್ಟ್ ಕೋಟೆ?

ಬ್ಯೂಫೋರ್ಟ್ ಕೋಟೆ (Beaufort Castle) ಲೆಬನಾನ್ ದೇಶದ ದಕ್ಷಿಣ ಭಾಗದಲ್ಲಿರುವ ಒಂದು ಅತ್ಯಂತ ಐತಿಹಾಸಿಕ ಮತ್ತು ಪ್ರಸಿದ್ಧವಾದ ಪರ್ವತ ಕೋಟೆಯಾಗಿದೆ. ಇದನ್ನು ಸ್ಥಳೀಯವಾಗಿ ಕಲಾತ್ ಆಶ್-ಶಕೀಫ್ ಎಂದು ಕರೆಯಲಾಗುತ್ತದೆ, ಇದರರ್ಥ ಉನ್ನತ ಬಂಡೆಯ ಕೋಟೆ ಎಂದಾಗಿದೆ.
ಲಿಟಾನಿ ನದಿಯ ಪಕ್ಕದಲ್ಲಿರುವ ಅತ್ಯಂತ ಕಡಿದಾದ ಬೆಟ್ಟದ ತುದಿಯಲ್ಲಿ ನಿರ್ಮಾಣಗೊಂಡಿರುವ ಈ ಕೋಟೆಯು ಸಮುದ್ರ ಮಟ್ಟದಿಂದ ಸುಮಾರು 700 ಮೀಟರ್ ಎತ್ತರದಲ್ಲಿದೆ, ಇದು ಇಡೀ ಪ್ರದೇಶದ ಮೇಲೆ ನಿಗಾ ಇಡಲು ಸೂಕ್ತವಾದ ಆಯಕಟ್ಟಿನ ಮಿಲಿಟರಿ ನೆಲೆಯಾಗಿತ್ತು. ಈ ಕೋಟೆಯನ್ನು 12ನೇ ಶತಮಾನದಲ್ಲಿ ಕ್ರಿಶ್ಚಿಯನ್ ಯೋಧರು ನಿರ್ಮಿಸಿದರು ಮತ್ತು ನಂತರದ ದಿನಗಳಲ್ಲಿ ಸುಲ್ತಾನ್ ಸಲಾವುದ್ದೀನ್ ಸೇರಿದಂತೆ ವಿವಿಧ ಇಸ್ಲಾಮಿಕ್ ದೊರೆಗಳು ಇದನ್ನು ವಶಪಡಿಸಿಕೊಂಡು ಮತ್ತಷ್ಟು ಬಲಪಡಿಸಿದರು.
ತನ್ನ ಭೌಗೋಳಿಕ ಪ್ರಾಮುಖ್ಯತೆಯಿಂದಾಗಿ ಇತ್ತೀಚಿನ ಆಧುನಿಕ ಇತಿಹಾಸದಲ್ಲೂ ಈ ಕೋಟೆಯು ಸಾಕಷ್ಟು ರಕ್ತಪಾತಕ್ಕೆ ಸಾಕ್ಷಿಯಾಗಿದೆ. ವಿಶೇಷವಾಗಿ 20ನೇ ಶತಮಾನದ ಕೊನೆಯಲ್ಲಿ ನಡೆದ ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವಿನ ಭೀಕರ ಸಂಘರ್ಷದ ಸಮಯದಲ್ಲಿ ಇದು ಪ್ರಮುಖ ಯುದ್ಧಭೂಮಿಯಾಗಿ ಮಾರ್ಪಟ್ಟಿತ್ತು. ಶತಮಾನಗಳ ಕಾಲ ನಡೆದ ಯುದ್ಧಗಳಿಂದಾಗಿ ಈ ಕೋಟೆಯು ಸಾಕಷ್ಟು ಹಾನಿಗೊಳಗಾಗಿದ್ದರೂ, ಇದರ ಬೃಹತ್ ಕಲ್ಲಿನ ಗೋಡೆಗಳು, ರಕ್ಷಣಾ ಗೋಪುರಗಳು ಮತ್ತು ಕಡಿದಾದ ಬಂಡೆಗಳ ರಚನೆಯು ಇಂದಿಗೂ ಪ್ರವಾಸಿಗರನ್ನು ಆಕರ್ಷಿಸುತ್ತದೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net