ಇರಾನ್ ಹೇಳಿಕೆಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ, ಮಾತುಕತೆ ವಿಫಲವಾದರೆ ಬೇರೆ ದಾರಿ ಇವೆ: ಅಮೆರಿಕ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಖಡಕ್ ಎಚ್ಚರಿಕೆ! JD Vance

ಇರಾನ್ ಹೇಳಿಕೆಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ, ಮಾತುಕತೆ ವಿಫಲವಾದರೆ ಬೇರೆ ದಾರಿ ಇವೆ: ಅಮೆರಿಕ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಖಡಕ್ ಎಚ್ಚರಿಕೆ!
ಇರಾನ್ ಹೇಳಿಕೆಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ, ಮಾತುಕತೆ ವಿಫಲವಾದರೆ ಬೇರೆ ದಾರಿ ಇವೆ: ಅಮೆರಿಕ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಖಡಕ್ ಎಚ್ಚರಿಕೆ!
Published on
ವಾಷಿಂಗ್ಟನ್: ಅಮೆರಿಕದೊಂದಿಗೆ ಯಾವುದೇ ರೀತಿಯ ಶಾಂತಿ ಮಾತುಕತೆ ನಡೆಯುತ್ತಿಲ್ಲ ಎಂದು ಸಾರ್ವಜನಿಕವಾಗಿ ವಾದಿಸುತ್ತಿರುವ ಇರಾನ್ ನಿಲುವನ್ನು ಯುಎಸ್ ಉಪಾಧ್ಯಕ್ಷ ಜೆಡಿ ವ್ಯಾನ್ಸ್ (JD Vance) ತಳ್ಳಿಹಾಕಿದ್ದಾರೆ. ಇದು ಇರಾನ್‌ನ ಹಳೆಯ ಪರ್ಷಿಯನ್ ಸಂಧಾನ ತಂತ್ರ ಅಷ್ಟೇ ಎಂದು ಲೇವಡಿ ಮಾಡಿರುವ ವ್ಯಾನ್ಸ್​, ರಾಜತಾಂತ್ರಿಕ ಮಾತುಕತೆಗಳು ಒಂದು ವೇಳೆ ವಿಫಲವಾದರೆ, ಇರಾನ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಅಮೆರಿಕದ ಮುಂದೆ ಬೇರೆ ಹಲವು ಆಯ್ಕೆಗಳು ಮುಕ್ತವಾಗಿವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಪ್ರಸಿದ್ಧ 'ದಿ ಮೈಕೆಲ್ ನೋಲ್ಸ್ ಶೋನಲ್ಲಿ ಮಾತನಾಡಿದ ಉಪಾಧ್ಯಕ್ಷ ವ್ಯಾನ್ಸ್, ವಾಷಿಂಗ್ಟನ್ ಮತ್ತು ಟೆಹ್ರಾನ್ ನಡುವೆ ತಾಂತ್ರಿಕ ಮಟ್ಟದ ಮಾತುಕತೆಗಳು ನಿರಂತರವಾಗಿ ಸಾಗುತ್ತಿವೆ ಎಂದು ಖಚಿತಪಡಿಸಿದ್ದಾರೆ.
ಇರಾನ್ ದ್ವಂದ್ವ ನೀತಿಗೆ ವ್ಯಾನ್ಸ್ ಆಕ್ರೋಶ
ಅಮೆರಿಕದೊಂದಿಗೆ ಈಗಾಗಲೇ ನಡೆದಿರುವ ಮಾತುಕತೆಗಳ ಮುಂದುವರಿದ ಭಾಗವಾಗಿ ತಾಂತ್ರಿಕ ಮಟ್ಟದ ಸಭೆಗಳನ್ನು ನಿಗದಿಪಡಿಸಲಾಗಿದೆ. ಇರಾನ್ ಅಧಿಕಾರಿಗಳು ಹೊರಗಡೆ ಮಾತ್ರ ನಮ್ಮ ನಡುವೆ ಯಾವುದೇ ಶಾಂತಿ ಮಾತುಕತೆ ನಡೆಯುತ್ತಿಲ್ಲ ಎಂದು ಸುಳ್ಳು ಹೇಳುತ್ತಿದ್ದಾರೆ. ಆದರೆ ಅದೇ ಬಾಯಲ್ಲಿ ಶಾಂತಿ ಒಪ್ಪಂದದ ತಾಂತ್ರಿಕ ವಿಷಯಗಳ ಬಗ್ಗೆ ಅಮೆರಿಕದೊಂದಿಗೆ ಚರ್ಚಿಸುತ್ತಿದ್ದೇವೆ ಎಂದು ಒಪ್ಪಿಕೊಳ್ಳುತ್ತಿದ್ದಾರೆ. ಇರಾನ್‌ನ ಈ ಗೊಂದಲದ ಮಾತು ಹಾಗೂ ದ್ವಂದ್ವ ನೀತಿ ನನಗಂತೂ ಅರ್ಥವಾಗುತ್ತಿಲ್ಲ ಎಂದು ವ್ಯಾನ್ಸ್ ಬೇಸರ ವ್ಯಕ್ತಪಡಿಸಿದ್ದಾರೆ.
ಮತ್ತೊಂದು ಮಾಧ್ಯಮವಾದ ಫಾಕ್ಸ್ ನ್ಯೂಸ್​ಗೆ ನೀಡಿದ ಸಂದರ್ಶನದಲ್ಲಿ ವ್ಯಾನ್ಸ್, ಅಮೆರಿಕವು ಇರಾನ್‌ನ ಸಾರ್ವಜನಿಕ ಹೇಳಿಕೆಗಳಿಗಿಂತ ಅವರ ನಡವಳಿಕೆ ಮತ್ತು ಕೃತ್ಯಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ. ಇರಾನಿಯನ್ನರು ಮಾಧ್ಯಮಗಳ ಮುಂದೆ ಏನು ಹೇಳುತ್ತಾರೆ ಎಂಬುದು ನಮಗೆ ಮುಖ್ಯವಲ್ಲ. ಅವರು ನೆಲದ ಮೇಲೆ ಏನು ಮಾಡುತ್ತಾರೆ ಎಂಬುದು ನಮಗೆ ಮುಖ್ಯ. ಯಾವುದೇ ಅಧಿಕೃತ ಒಪ್ಪಂದಕ್ಕೆ ಬರಬೇಕಾದರೆ ಇರಾನ್ ನಾಯಕರು ಕೆಲವು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದಿದ್ದಾರೆ.

ಟ್ರಂಪ್ ಸೂಚನೆ ಏನು? ದೊಹಾದಲ್ಲಿ ನಡೆಯುತ್ತಿರುವುದೇನು?

ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕಠಿಣ ನಿಲುವನ್ನು ನೆನಪಿಸಿದ ಜೆ.ಡಿ. ವ್ಯಾನ್ಸ್, ಮಾತುಕತೆಯನ್ನು ಮುಂದುವರಿಸಿ, ಅದು ಎಲ್ಲಿಗೆ ತಲುಪುತ್ತದೆ ಎಂಬುದನ್ನು ಗಮನಿಸುವಂತೆ ಅಧ್ಯಕ್ಷ ಟ್ರಂಪ್ ನಮಗೆ ಸೂಚಿಸಿದ್ದಾರೆ. ಒಂದು ವೇಳೆ ರಾಜತಾಂತ್ರಿಕತೆಯ ಮೂಲಕ ಈ ಸಮಸ್ಯೆಗೆ ಯಶಸ್ವಿ ಪರಿಹಾರ ಸಿಗದಿದ್ದರೆ, ನಮ್ಮ ಬಳಿ ಇರಾನ್ ಅನ್ನು ಹದ್ದುಬಸ್ತಿನಲ್ಲಿಡಲು ಸಾಕಷ್ಟು ಬೇರೆ ದಾರಿಗಳಿವೆ ಎಂದು ಹೇಳುವ ಮೂಲಕ ಮಿಲಿಟರಿ ಅಥವಾ ಕಠಿಣ ಆರ್ಥಿಕ ನಿರ್ಬಂಧಗಳ ಮುನ್ಸೂಚನೆ ನೀಡಿದ್ದಾರೆ.

ದೊಹಾದಲ್ಲಿ ರಹಸ್ಯ ಸಂಧಾನ?

ಇತ್ತೀಚೆಗಷ್ಟೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ಕಡೆಯಿಂದಲೇ ಮಾತುಕತೆಗೆ ವಿನಂತಿ ಬಂದಿದೆ ಎಂದು ಪ್ರಕಟಿಸಿದ ಬೆನ್ನಲ್ಲೇ, ವೈಟ್ ಹೌಸ್ ಪ್ರತಿನಿಧಿಗಳಾದ ಸ್ಟೀವ್ ವಿಟ್ಕಾಫ್ ಮತ್ತು ಜ್ಯಾರೆಡ್ ಕುಶ್ನರ್ ಕತಾರ್ ರಾಜಧಾನಿ ದೊಹಾಕ್ಕೆ ಭೇಟಿ ನೀಡಿದ್ದರು. ಆದರೆ ಇರಾನ್ ಇದನ್ನು ನೇರ ಮಾತುಕತೆ ಅಲ್ಲ, ಕತಾರ್ ಮಧ್ಯಸ್ಥಿಕೆಯ ತಿಳಿವಳಿಕೆ ಪತ್ರದ ಅನುಷ್ಠಾನದ ಚರ್ಚೆಯಷ್ಟೇ ಎಂದು ಬಿಂಬಿಸಲು ಯತ್ನಿಸುತ್ತಿದೆ.
ಏನೇ ಆದರೂ, ಪ್ರಸ್ತುತ ಜಾಗತಿಕ ರಾಜಕೀಯದಲ್ಲಿ ಅಮೆರಿಕವೇ ಮೇಲುಗೈ ಹೊಂದಿದ್ದು, ಇರಾನ್ ಅನ್ನು ತನಗೆ ಬೇಕಾದ ರೀತಿಯಲ್ಲಿ ಮಾತುಕತೆಯ ಮೇಜಿಗೆ ತರಲು ತಕ್ಕಷ್ಟು ರಾಜತಾಂತ್ರಿಕ ಒತ್ತಡವನ್ನು ವಾಷಿಂಗ್ಟನ್ ಕಾಯ್ದುಕೊಂಡಿದೆ ಎಂದು ಜೆ.ಡಿ. ವ್ಯಾನ್ಸ್ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net