ಸಾಕುನಾಯಿಯೊಂದು ಆಕಸ್ಮಿಕವಾಗಿ ಟೋಸ್ಟರ್ ಆನ್ ಮಾಡಿದ ಪರಿಣಾಮ ಇಡೀ ಮನೆ ಭಸ್ಮ
ಅಮೆರಿಕದ ಮೇರಿಲ್ಯಾಂಡ್‌ನಲ್ಲಿ ನಡೆದ ಘಟನೆ
ಮೂರು ಸಾಕುಪ್ರಾಣಿಗಳು ದಾರುಣವಾಗಿ ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ
Fire Accident in Maryland: ನಾವು ಮನೆಯಿಂದ ಹೊರಗೆ ಹೋಗುವಾಗ ಗೃಹೋಪಯೋಗಿ ವಸ್ತುಗಳನ್ನು ಆಫ್ ಮಾಡಿದ್ದೀವಾ ಇಲ್ಲವಾ ಎಂದು ಹತ್ತಿ ಸಲ ಚೆಕ್ ಮಾಡುತ್ತೇವೆ. ಆದರೆ, ಅಡುಗೆ ಮನೆಯ ಕೌಂಟರ್ ಮೇಲಿರುವ ಒಂದು ಪುಟ್ಟ ಟೋಸ್ಟರ್ (Toaster) ಇಡೀ ಮನೆಯನ್ನೇ ಸ್ಮಶಾನವನ್ನಾಗಿ ಪರಿವರ್ತಿಸಬಹುದು ಎಂದು ಯಾರೂ ಊಹಿಸಿರಲು ಸಾಧ್ಯವಿಲ್ಲ.
ಅಮೆರಿಕದ ಮೇರಿಲ್ಯಾಂಡ್‌ನಲ್ಲಿ ಇಂತಹುದೇ ಒಂದು ಅತ್ಯಂತ ಹೃದಯವಿದ್ರಾವಕ ಘಟನೆ ನಡೆದಿದೆ. ಮಾಲೀಕರು ಮನೆಯಲ್ಲಿ ಇಲ್ಲದಿದ್ದಾಗ ಸಾಕುನಾಯಿಯೊಂದು ಆಕಸ್ಮಿಕವಾಗಿ ಟೋಸ್ಟರ್ ಆನ್ ಮಾಡಿದ ಪರಿಣಾಮ, ಇಡೀ ಮನೆಗೆ ಬೆಂಕಿ ಹೊತ್ತಿಕೊಂಡು ಮೂರು ಸಾಕುಪ್ರಾಣಿಗಳು ದಾರುಣವಾಗಿ ಸಾವನ್ನಪ್ಪಿದ ಘಟನೆ ವರದಿಯಾಗಿದೆ.
ಶುಕ್ರವಾರ (ಜು.10) ಬೆಲ್‌ಕ್ಯಾಂಪ್‌ನಲ್ಲಿರುವ ನಿವಾಸವೊಂದರಲ್ಲಿ ಈ ದುರಂತ ಸಂಭವಿಸಿದೆ. ಸದ್ಯ ಈ ಘಟನೆಯ ಸಂಪೂರ್ಣ ದೃಶ್ಯ ಮನೆಯಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದನ್ನು ನೋಡಿ ಅಗ್ನಿಶಾಮಕ ಸಿಬ್ಬಂದಿಯೇ ಶಾಕ್ ಆಗಿದ್ದಾರೆ.
ಬೆಂಕಿ ಹೇಗೆ ಹೊತ್ತಿಕೊಂಡಿತು ಎಂದು ತನಿಖೆ ನಡೆಸಿದ ಅಧಿಕಾರಿಗಳಿಗೆ ಮನೆಯಲ್ಲಿದ್ದ ಭದ್ರತಾ ಕ್ಯಾಮೆರಾ (CCTV) ಪುರಾವೆ ಒದಗಿಸಿದೆ. ಅಂದು ಮನೆಯ ಮಾಲೀಕರು ಹೊರಗೆ ಹೋಗಿದ್ದರು. ಈ ವೇಳೆ ಕುಟುಂಬದ ಮುದ್ದಿನ ನಾಯಿ 'ಬೊ' ಕಿಚನ್ ಕೌಂಟರ್ ಮೇಲಕ್ಕೆ ಜಂಪ್ ಮಾಡಿದೆ. ಈ ಗಡಿಬಿಡಿಯಲ್ಲಿ ಅದರ ಕಾಲು ತಗುಲಿ ಆಕಸ್ಮಿಕವಾಗಿ ಅಲ್ಲಿದ್ದ ಟೋಸ್ಟರ್ ಸ್ವಿಚ್ ಆನ್ ಆಗಿದೆ.
ಟೋಸ್ಟರ್ ಆನ್ ಆದ ಕೆಲವೇ ನಿಮಿಷಗಳಲ್ಲಿ ಅದರಿಂದ ಹೊರಬಂದ ವಿಪರೀತ ಶಾಖಕ್ಕೆ, ಅದರ ಪಕ್ಕದಲ್ಲೇ ಇದ್ದ ಸುಲಭವಾಗಿ ಬೆಂಕಿ ಹೊತ್ತಿಕೊಳ್ಳುವ ವಸ್ತುಗಳು ಹೊತ್ತಿ ಉರಿಯಲಾರಂಭಿಸಿವೆ. ನೋಡನೋಡುತ್ತಿದ್ದಂತೆ ಜ್ವಾಲೆಗಳು ಇಡೀ ಅಡುಗೆ ಕೋಣೆಯನ್ನು ಆವರಿಸಿ, ನಂತರ ಇಡೀ ಮನೆಗೆ ವ್ಯಾಪಿಸಿದೆ.
ಧಗಧಗನೆ ಹೊತ್ತಿ ಉರಿದ ಮನೆ, ಲಕ್ಷಾಂತರ ರೂಪಾಯಿ ನಷ್ಟ
ಮನೆಯಿಂದ ಹೊಗೆ ಬರುತ್ತಿರುವುದನ್ನು ಕಂಡ ತಕ್ಷಣ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಸುಮಾರು 30 ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಸುಮಾರು 20 ನಿಮಿಷಗಳ ಕಾಲ ಸತತ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಆದರೆ ಅಷ್ಟರಲ್ಲಾಗಲೇ ಬೆಂಕಿ ಇಡೀ ಮನೆಗೆ ಹಾನಿ ಮಾಡಿದೆ.
ಅಧಿಕಾರಿಗಳ ಅಂದಾಜಿನ ಪ್ರಕಾರ, ಈ ಬೆಂಕಿ ಅವಘಡದಿಂದ ಮನೆಗೆ ಸುಮಾರು 150,000 ಡಾಲರ್ (ಅಂದಾಜು 1.25 ಕೋಟಿ ರೂ.) ಮೌಲ್ಯದ ಸಾಮಾಗ್ರಿಗಳು ಹಾನಿಯಾಗಿದ್ದರೆ, ಮನೆಯೊಳಗಿದ್ದ ಸುಮಾರು 50,000 ಡಾಲರ್ (ಅಂದಾಜು 41 ಲಕ್ಷ ರೂ.) ಮೌಲ್ಯದ ವೈಯಕ್ತಿಕ ವಸ್ತುಗಳು ಸುಟ್ಟು ಬೂದಿಯಾಗಿವೆ.
ಇಬ್ಬರು ಬದುಕುಳಿದರು, ಮೂವರು ಇನ್ನಿಲ್ಲ!
ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ನೆರೆಹೊರೆಯವರು ಸಮಯಪ್ರಜ್ಞೆ ಮೆರೆದು ತಕ್ಷಣ ಮನೆಗೆ ನುಗ್ಗಿದ್ದಾರೆ. ಅದೃಷ್ಟವಶಾತ್ ಬೆಂಕಿ ಇಡೀ ಮನೆಗೆ ಹರಡುವ ಮುನ್ನವೇ, ಘಟನೆಗೆ ಕಾರಣವಾದ 'ಬೊ' ಮತ್ತು 'ಆಡೀ' ಎಂಬ ಇನ್ನೊಂದು ನಾಯಿಯನ್ನು ಪ್ರಾಣಾಪಾಯದಿಂದ ರಕ್ಷಿಸುವಲ್ಲಿ ಅವರು ಯಶಸ್ವಿಯಾಗಿದ್ದಾರೆ.
ಆದರೆ ಮನೆಯ ಇನ್ನೊಂದು ಮೂಲೆಯಲ್ಲಿದ್ದ ಕುಟುಂಬದ ಮೂರನೇ ನಾಯಿ 'ಡಕೋಟಾ' ಮತ್ತು ಅವರ ಪ್ರೀತಿಯ ಎರಡು ಬೆಕ್ಕುಗಳು ದಟ್ಟವಾದ ಹೊಗೆ ಮತ್ತು ಜ್ವಾಲೆಯಿಂದಾಗಿ ಹೊರಬರಲಾರದೆ ಅಲ್ಲಿಯೇ ಉಸಿರುಗಟ್ಟಿ ದಾರುಣವಾಗಿ ಕೊನೆಯುಸಿರೆಳೆದಿವೆ. ತಮ್ಮ ಕಣ್ಣೆದುರೇ ಮೂರು ಮೂಕಜೀವಿಗಳನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಅಧಿಕಾರಿಗಳು ಸಿಸಿಟಿವಿ ದೃಶ್ಯಗಳನ್ನು ಸಂಪೂರ್ಣವಾಗಿ ಪರಿಶೀಲಿಸಿದ ಬಳಿಕ ಇದೊಂದು ಆಕಸ್ಮಿಕ ಘಟನೆ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ, ದಿನನಿತ್ಯ ನಾವು ಬಳಸುವ ಸಣ್ಣಪುಟ್ಟ ಎಲೆಕ್ಟ್ರಾನಿಕ್ ಉಪಕರಣಗಳು ಅನಿರೀಕ್ಷಿತ ಸಂದರ್ಭಗಳಲ್ಲಿ ಎಷ್ಟು ದೊಡ್ಡ ಅಪಾಯವನ್ನು ತಂದೊಡ್ಡಬಹುದು ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಸಾಕುಪ್ರಾಣಿಗಳನ್ನು ಹೊಂದಿರುವವರು ಮತ್ತು ಮನೆಯಿಂದ ಹೊರಹೋಗುವವರು ಇನ್ಮುಂದೆ ಕಿಚನ್ ಉಪಕರಣಗಳ ಪ್ಲಗ್‌ಗಳನ್ನು ಕಡ್ಡಾಯವಾಗಿ ಹೊರತೆಗೆಯಬೇಕು ಎಂಬುದನ್ನು ಈ ದುರಂತ ನೆನಪಿಸಿಕೊಟ್ಟಿದೆ, (ಏಜನ್ಸೀಸ್).