ದಿನಕ್ಕೆ 8,300 ಕೋಟಿ ಉಡೀಸ್: ಇರಾನ್ ಮೇಲೆ ಯುದ್ಧ ಸಾರಿ ತನ್ನ ಬತ್ತಳಿಕೆಯನ್ನೇ ಖಾಲಿ ಮಾಡಿಕೊಂಡಿತೇ ಅಮೆರಿಕ? America

ಅಮೆರಿಕ ಇರಾನ್​ ನಡುವೆ ನಡೆಯುತ್ತಿರುವ ಯುದ್ಧ
ಅಮೆರಿಕ ಇರಾನ್​ ನಡುವೆ ನಡೆಯುತ್ತಿರುವ ಯುದ್ಧ
Published on

ಪ್ರಮುಖ ಮುಖ್ಯಾಂಶಗಳು

  • ಅಮೆರಿಕ ಇರಾನ್​ ನಡುವೆ ನಡೆಯುತ್ತಿರುವ ಯುದ್ಧ
  • ಒಂದು ದಿನಕ್ಕೆ 8,300 ಕೋಟಿ ವ್ಯಯಿಸುತ್ತಿರುವ ಅಮೆರಿಕ
  • ಹೀಗೆ ಯುದ್ಧ ಮುಂದುವರಿದರೆ, ಶಸ್ತ್ರಾಗಾರ ಖಾಲಿಯಾಗುವ ಭೀತಿಯಲ್ಲಿ ಅಮೆರಿಕ
ವಾಷಿಂಗ್ಟನ್: ಯುದ್ಧ ಅಂದಮೇಲೆ ಅಲ್ಲಿ ಕೇವಲ ಬಾಂಬ್, ಕ್ಷಿಪಣಿಗಳ ಅಬ್ಬರ ಮಾತ್ರ ಇರುವುದಿಲ್ಲ, ಅದರ ಹಿಂದೆ ಅರಗಿಸಿಕೊಳ್ಳಲಾಗದ ಆರ್ಥಿಕ ಹೊರೆಯೂ ಇರುತ್ತದೆ. ಇರಾನ್ ವಿರುದ್ಧ ಅಮೆರಿಕ ನಡೆಸಿದ ಆಪರೇಷನ್ ಎಪಿಕ್ ಫ್ಯೂರಿ ಕಾರ್ಯಾಚರಣೆ ಈಗ ಕದನ ವಿರಾಮಕ್ಕೆ ಬಂದಿರಬಹುದು. ಆದರೆ, ಕಳೆದ 38 ದಿನಗಳಲ್ಲಿ ಅಮೆರಿಕ ಸುಟ್ಟು ಹಾಕಿದ ಹಣದ ಲೆಕ್ಕಾಚಾರ ಕೇಳಿದರೆ ಪೆಂಟಗನ್‌ನ ರಕ್ಷಣಾ ಯೋಜಕರಿಗೇ ನಡುಕ ಶುರುವಾಗಿದೆ ಎನ್ನಲಾಗುತ್ತಿದೆ.

ಲೆಕ್ಕಾಚಾರ ಶುರು: ಬರಿದಾಯಿತೇ ಅಮೆರಿಕದ ಬತ್ತಳಿಕೆ?

ಆಂತರಿಕ ವರದಿಗಳ ಪ್ರಕಾರ, ಈ ಕಿರು ಸಂಘರ್ಷದಲ್ಲಿ ಅಮೆರಿಕ ಬರೋಬ್ಬರಿ 1,100 JASSM-ER ಕ್ಷಿಪಣಿಗಳನ್ನು ಉಡಾಯಿಸಿದೆ. ಇದರ ಒಂದೊಂದರ ಬೆಲೆ ಬರೋಬ್ಬರಿ 1.1 ಮಿಲಿಯನ್ ಡಾಲರ್ (ಸುಮಾರು 9 ಕೋಟಿ ರೂಪಾಯಿ). ಹೈಟೆಕ್ ಶತ್ರುಗಳ ವಾಯು ರಕ್ಷಣೆಯನ್ನು ಭೇದಿಸಲು ತಯಾರಿಸಿದ್ದ ಈ ಕ್ಷಿಪಣಿಗಳ ದಾಸ್ತಾನು ಈಗ ಕೇವಲ 1,500 ಮಾತ್ರ ಉಳಿದಿದೆ.
ಇಷ್ಟೇ ಅಲ್ಲ, ಅಮೆರಿಕದ ಹೆಮ್ಮೆಯ ಟೊಮಾಹಾಕ್ (Tomahawk) ಕ್ರೂಸ್ ಕ್ಷಿಪಣಿಗಳ ಕಥೆಯೂ ಅಷ್ಟೇ. ವರ್ಷವಿಡೀ ಅಮೆರಿಕ ಎಷ್ಟು ಕ್ಷಿಪಣಿಗಳನ್ನು ಖರೀದಿಸುತ್ತದೆಯೋ, ಅದರ 10 ಪಟ್ಟು ಹೆಚ್ಚು ಅಂದರೆ 1,000ಕ್ಕೂ ಅಧಿಕ ಟೊಮಾಹಾಕ್‌ಗಳನ್ನು ಈ 38 ದಿನಗಳಲ್ಲಿ ಇರಾನ್ ಮೇಲೆ ಸುರಿಯಲಾಗಿದೆ. ಒಂದೊಂದು ಟೊಮಾಹಾಕ್‌ ಬೆಲೆ 3.6 ಮಿಲಿಯನ್ ಡಾಲರ್ ಈಗ ಅಮೆರಿಕದ ಬಳಿ ಇರುವ ದಾಸ್ತಾನು ಚೀನಾದಂತಹ ದೇಶಗಳ ಜೊತೆ ಯುದ್ಧ ಮಾಡಲು ಸಾಲುವುದಿಲ್ಲ ಎಂದು ತಜ್ಞರು ಎಚ್ಚರಿಸುತ್ತಿದ್ದಾರೆ.

ದಿನಕ್ಕೆ 8,000 ಕೋಟಿ ರೂಪಾಯಿ ಉಡೀಸ್!

ಯುದ್ಧ ಎಷ್ಟು ದುಬಾರಿ ಎಂದರೆ, ಮೊದಲ 48 ಗಂಟೆಗಳಲ್ಲೇ ಅಮೆರಿಕ ಸುಮಾರು 5.6 ಬಿಲಿಯನ್ ಡಾಲರ್​ ಮೌಲ್ಯದ ಯುದ್ಧಸಾಮಗ್ರಿಗಳನ್ನು ಖಾಲಿ ಮಾಡಿತ್ತು. ಒಟ್ಟಾರೆಯಾಗಿ ದಿನಕ್ಕೆ ಸರಾಸರಿ 1 ಬಿಲಿಯನ್ ಡಾಲರ್ (ಸುಮಾರು 8,300 ಕೋಟಿ ರೂಪಾಯಿ!) ಖರ್ಚಾಗಿದೆ ಎಂದು ಹೇಳಲಾಗುತ್ತಿದೆ.
ಈ ಹಣ ಎಲ್ಲಿಂದ ಬಂತು? ಇರಾನ್ ವಿರುದ್ಧದ ಕಿಚ್ಚಿನಿಂದಾಗಿ ಅಮೆರಿಕ ತನ್ನ ಯುರೋಪ್ ಮತ್ತು ಏಷ್ಯಾ ಕಮಾಂಡ್‌ಗಳಲ್ಲಿದ್ದ ಶಸ್ತ್ರಾಸ್ತ್ರಗಳನ್ನು ಇಲ್ಲಿಗೆ ತರಿಸಿಕೊಂಡಿದೆ. ಅಷ್ಟೇ ಅಲ್ಲ, ಉತ್ತರ ಕೊರಿಯಾವನ್ನು ಹೆದರಿಸಲು ದಕ್ಷಿಣ ಕೊರಿಯಾದಲ್ಲಿ ಇಟ್ಟಿದ್ದ THAAD ಕ್ಷಿಪಣಿ ನಿರೋಧಕ ವ್ಯವಸ್ಥೆಯನ್ನೂ ಈಗ ಮಧ್ಯಪ್ರಾಚ್ಯಕ್ಕೆ ಶಿಫ್ಟ್ ಮಾಡಲಾಗಿದೆ. ಇದರರ್ಥ, ಅಮೆರಿಕ ಒಂದು ಕಡೆ ಗೆಲ್ಲಲು ಹೋಗಿ ಮತ್ತೊಂದೆಡೆ ತನ್ನ ಭದ್ರತೆಯನ್ನು ತಾನೇ ದುರ್ಬಲ ಮಾಡಿಕೊಳ್ಳುತ್ತಿದೆ ಎಂದು ತಜ್ಞರು ಹೇಳುತ್ತಿದ್ದಾರೆ.

ಅಮೆರಿಕನ್ನನ ಜೇಬಿಗೆ ಕತ್ತರಿ

ಯುದ್ಧ ಕೇವಲ ಗಡಿಯಲ್ಲಿ ನಡೆಯುತ್ತಿಲ್ಲ, ಅದು ಅಮೆರಿಕದ ಪೆಟ್ರೋಲ್ ಬಂಕ್‌ಗಳಿಗೂ ತಲುಪಿದೆ. ಇರಾನ್ ಸಂಘರ್ಷದಿಂದಾಗಿ ಹೊರ್ಮುಜ್ ಜಲಸಂಧಿಯಲ್ಲಿ ತೈಲ ಪೂರೈಕೆಗೆ ವ್ಯತ್ಯಯವಾಗುವ ಭೀತಿ ಎದುರಾಗಿದ್ದು, ಒಂದೇ ವಾರದಲ್ಲಿ ಪೆಟ್ರೋಲ್ ಬೆಲೆ ಭಾರೀ ಏರಿಕೆ ಕಂಡಿದೆ.
ಇದನ್ನು ಅಮೆರಿಕದ ಬಡವರ ಹಸಿವಿಗೆ ಹೋಲಿಸಿದರೆ ಅಸಲಿ ಶಾಕ್ ಕಾದಿದೆ. ಅಮೆರಿಕದ SNAP ಎಂಬ ಯೋಜನೆಯಡಿ 4.2 ಕೋಟಿ ಬಡ ಜನರಿಗೆ ಆಹಾರ ನೀಡಲು ದಿನಕ್ಕೆ 300 ಮಿಲಿಯನ್ ಡಾಲರ್ ಖರ್ಚಾಗುತ್ತದೆ. ಅಂದರೆ, ಇರಾನ್ ಮೇಲೆ ಅಮೆರಿಕ ಮಾಡುವ ಒಂದು ದಿನದ ಯುದ್ಧದ ಖರ್ಚಿನಲ್ಲಿ ಅಮೆರಿಕದ 4 ಕೋಟಿ ಬಡ ಜನರಿಗೆ 3 ದಿನಗಳ ಕಾಲ ಹೊಟ್ಟೆತುಂಬಾ ಊಟ ಹಾಕಬಹುದಾಗಿತ್ತು.

ಟ್ರಂಪ್ ಸರ್ಕಾರ ಏನನ್ನುತ್ತಿದೆ?

ಒಂದೆಡೆ ಶಸ್ತ್ರಾಸ್ತ್ರಗಳು ಖಾಲಿಯಾಗುತ್ತಿವೆ ಎಂದು ಅಧಿಕಾರಿಗಳು ತಲೆ ಚಚ್ಚಿಕೊಳ್ಳುತ್ತಿದ್ದರೆ, ಮತ್ತೊಂದೆಡೆ ಟ್ರಂಪ್ ಅವರ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ ಅವರು ಇದನ್ನೆಲ್ಲಾ ಫೇಕ್ ನ್ಯೂಸ್ ಎಂದು ಕರೆದಿದ್ದಾರೆ. ಅಮೆರಿಕದ ಬಳಿ ಬೇಕಾದಷ್ಟು ಶಸ್ತ್ರಾಸ್ತ್ರಗಳಿವೆ ಎಂದು ಶ್ವೇತಭವನ ಹೇಳುತ್ತಿದೆ. ಆದರೆ, ಉತ್ಪಾದನಾ ಘಟಕಗಳಲ್ಲಿ ವೇಗ ಹೆಚ್ಚಿಸಲು ಹಣವಿಲ್ಲದೆ ಕೆಲಸ ಸ್ಥಗಿತಗೊಂಡಿರುವುದು ಮಾತ್ರ ಕಹಿ ಸತ್ಯವಾಗಿ ಉಳಿದುಕೊಂಡಿದೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net