ಸದ್ದಿಲ್ಲದೆ ಮದುವೆಯಾದ ಆರ್.ಸಿ.ಬಿ ವೇಗಿ: ವಿವಾಹದ ಬೆನ್ನಲ್ಲೇ ಲೈಗಿಂಕ ಆರೋಪಕ್ಕೆ ಸಿಲುಕಿರುವ ಯಶ್ ದಯಾಳ್! Yash Dayal

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಯಶ್​ ದಯಾಳ್​
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಯಶ್​ ದಯಾಳ್​
Published on
ಉತ್ತರ ಪ್ರದೇಶ: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್​.ಸಿ.ಬಿ) ತಂಡದ ಯಶ್ ದಯಾಳ್ (Yash Dayal) ಸದ್ಯ ಸುದ್ದಿಯ ಕೇಂದ್ರಬಿಂದುವಾಗಿದ್ದಾರೆ. ಕ್ರಿಕೆಟ್ ಅಂಗಳದಲ್ಲಿ ತಮ್ಮ ಬೌಲಿಂಗ್ ಮೂಲಕ ಗಮನ ಸೆಳೆದಿದ್ದ ಈ ಎಡಗೈ ವೇಗಿ, ಇದೀಗ ವೈಯಕ್ತಿಕ ಜೀವನದ ಮಹತ್ವದ ಘಟ್ಟ ಮತ್ತು ಗಂಭೀರ ಕಾನೂನು ಆರೋಪಗಳ ನಡುವೆ ಸಿಲುಕಿದ್ದಾರೆ.

ಸದ್ದಿಲ್ಲದೆ ಮದುವೆಯಾದ ದಯಾಳ್!

ಕೆಲವು ದಿನಗಳ ಹಿಂದೆ ಯಶ್ ದಯಾಳ್ ಅವರು ಕಂಟೆಂಟ್​ ಕ್ರಿಯೆಟರ್​ (Content Creator) ಶ್ವೇತಾ ಪುಂಡಿರ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಫೆಬ್ರವರಿ 4 ರಂದು ನೋಯ್ಡಾದಲ್ಲಿ ನಡೆದ ಈ ಮದುವೆ ಸಮಾರಂಭವು ಗುಪ್ತವಾಗಿ ನಡೆದಿತ್ತು.
ಕುಟುಂಬದ ಆಪ್ತರು ಮತ್ತು ಕೆಲವೇ ಸಂಬಂಧಿಕರ ಸಮ್ಮುಖದಲ್ಲಿ ನಡೆದ ಈ ಮದುವೆಯಲ್ಲಿ ಕ್ರಿಕೆಟ್ ವಲಯದ ಯಾವುದೇ ದೊಡ್ಡ ತಾರೆಯರು ಕಾಣಿಸಿಕೊಳ್ಳಲಿಲ್ಲ ಎಂಬುದು ಗಮನಾರ್ಹ. ಶ್ವೇತಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಹಂಚಿಕೊಳ್ಳುವವರೆಗೂ ಈ ವಿಷಯ ಹೊರಜಗತ್ತಿಗೆ ಅಷ್ಟಾಗಿ ತಿಳಿದಿರಲಿಲ್ಲ.

ಕಾನೂನು ಸಂಕಷ್ಟಗಳ ಸರಮಾಲೆ

ಮದುವೆಯ ಸಂಭ್ರಮದ ಬೆನ್ನಲ್ಲೇ ಯಶ್ ದಯಾಳ್ ಅವರು ಗಂಭೀರ ಕಾನೂನು ವಿವಾದಗಳನ್ನು ಎದುರಿಸುತ್ತಿದ್ದಾರೆ. ಅವರ ಮೇಲೆ ಲೈಂಗಿಕ ಶೋಷಣೆ ಮತ್ತು ಅಪ್ರಾಪ್ತ ವಯಸ್ಕಳ ಮೇಲೆ ದೌರ್ಜನ್ಯ ಎಸಗಿದ ಆರೋಪ ಕೇಳಿಬಂದಿದೆ.
ಜೈಪುರದ ಯುವ ಕ್ರಿಕೆಟ್ ಆಟಗಾರ್ತಿಯೊಬ್ಬರು, ತನ್ನ ವೃತ್ತಿಜೀವನವನ್ನು ರೂಪಿಸುವುದಾಗಿ ನಂಬಿಸಿ 17 ವರ್ಷದವಳಿದ್ದಾಗ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ದೂರು ನೀಡಿದ್ದಾರೆ.
ಈ ಘಟನೆ ನಡೆದ ಸುಮಾರು ಎರಡು ವರ್ಷಗಳ ನಂತರ ಎಫ್‌ಐಆರ್ ದಾಖಲಾಗಿದೆ. ಆರಂಭದಲ್ಲಿ ಕೆಳ ನ್ಯಾಯಾಲಯವು ದಯಾಳ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಆದರೆ, ಹೈಕೋರ್ಟ್ ಮೊರೆ ಹೋದ ನಂತರ ಅವರಿಗೆ ನಿರೀಕ್ಷಣಾ ಜಾಮೀನು ಸಿಕ್ಕಿದ್ದು, ಸದ್ಯಕ್ಕೆ ಬಂಧನದಿಂದ ಬಚಾವಾಗಿದ್ದಾರೆ. ದೂರುದಾರರನ್ನು ಅವರು ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಇತರ ತಂಡದ ಸದಸ್ಯರ ಸಮ್ಮುಖದಲ್ಲಿ ಮಾತ್ರ ಭೇಟಿಯಾಗುತ್ತಿದ್ದರು ಎಂದು ದಯಾಳ್ ಪರ ವಕೀಲರು ವಾದಿಸಿದ್ದಾರೆ.

ಕ್ರಿಕೆಟ್ ಬದುಕಿನ ಏರಿಳಿತಗಳು

ಒಂದೆಡೆ ವೈಯಕ್ತಿಕ ಜೀವನದ ಕಾನೂನು ಸಮರ ನಡೆಯುತ್ತಿದ್ದರೆ, ಇನ್ನೊಂದೆಡೆ ಕ್ರಿಕೆಟ್ ವೃತ್ತಿಜೀವನದಲ್ಲಿ ಯಶ್ ದಯಾಳ್ ಆರ್.ಸಿ.ಬಿ (RCB) ತಂಡದ ಪ್ರಮುಖ ಅಸ್ತ್ರವಾಗಿದ್ದಾರೆ. 2023 ರಲ್ಲಿ ರಿಂಕು ಸಿಂಗ್ ಅವರಿಂದ ಐದು ಸಿಕ್ಸರ್‌ಗಳನ್ನು ಹೊಡೆಸಿಕೊಂಡಾಗ ದಯಾಳ್ ಅವರ ವೃತ್ತಿಜೀವನ ಅಂತ್ಯವಾಯಿತು ಎಂದೇ ಭಾವಿಸಲಾಗಿತ್ತು. ಆದರೆ, ಆ ಬಳಿಕ ಆರ್.ಸಿ.ಬಿ ಸೇರಿ ಅದ್ಭುತವಾಗಿ ಪುಟಿದೆದ್ದ ಅವರು, ಕಳೆದ ಬಾರಿ ಐಪಿಎಲ್ ಪ್ರಶಸ್ತಿ ಗೆದ್ದ ತಂಡದ ಭಾಗವಾಗಿದ್ದರು. 2026 ರ ಐಪಿಎಲ್ ಸೀಸನ್‌ನಲ್ಲೂ ಅವರು ಆರ್.ಸಿ.ಬಿ ಪರ ಆಡಲು ಸಜ್ಜಾಗಿದ್ದಾರೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net