ಪಡಿಕ್ಕಲ್​ ಶತಕ, ಸುತಾರ್​​ ಸ್ಪಿನ್​ ಮ್ಯಾಜಿಕ್​: ಸಿಂಹಳಿಯನ್ನರ ಬೇಟೆಯಾಡಿದ 'ಯುವಪಡೆ'; ಲಂಕಾ ವಿರುದ್ಧ 165 ರನ್​ಗಳ ಭರ್ಜರಿ ಜಯ! India beats Sri Lanka

ಶ್ರೀಲಂಕಾ ವಿರುದ್ಧ ಗೆದ್ದು ಬೀಗಿದ ಭಾರತ
ಶ್ರೀಲಂಕಾ ವಿರುದ್ಧ ಗೆದ್ದು ಬೀಗಿದ ಭಾರತ
Published on

ಪ್ರಮುಖ ಮುಖ್ಯಾಂಶಗಳು

  • ಶ್ರೀಲಂಕಾ ವಿರುದ್ಧ ಗೆದ್ದು ಬೀಗಿದ ಭಾರತ
  • ಮೊದಲ ಟೆಸ್ಟ್​​ನಲ್ಲಿ 165 ರನ್​ಗಳ ಭರ್ಜರಿ ಜಯ
  • ಪಡಿಕ್ಕಲ್​ ಸೆಂಚುರಿ, ಮಾನವ್​ ಸುತಾರ್​ ಹತ್ತು ವಿಕೆಟ್​ ಸಾಧನೆ
ಕೊಲೊಂಬೊ: ಶ್ರೀಲಂಕಾ ನೆಲದಲ್ಲಿ ಶುಭಮನ್ ಗಿಲ್ ನೇತೃತ್ವದ ಟೀಮ್ ಇಂಡಿಯಾ ಶುಭಾರಂಭಮಾಡಿದ್ದು, ಗಾಲೆ ಕ್ರೀಡಾಂಗಣದಲ್ಲಿ ನಡೆದ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡವು ಶ್ರೀಲಂಕಾ ವಿರುದ್ಧ 165 ರನ್‌ಗಳ ಭರ್ಜರಿ (India beats Sri Lanka) ಹಾಗೂ ಸುಲಭ ಜಯ ಸಾಧಿಸಿದೆ.
ಈ ಗೆಲುವಿನೊಂದಿಗೆ ರೋಹಿತ್-ವಿರಾಟ್ ಅನುಪಸ್ಥಿತಿಯಲ್ಲಿ ಯುವ ಪಡೆಯನ್ನು ಮುನ್ನಡೆಸುತ್ತಿರುವ ಶುಭಮನ್​ ಗಿಲ್,ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್‌ನಲ್ಲಿ (WTC) ತನ್ನ ರೇಸ್ ಅನ್ನು ಮತ್ತಷ್ಟು ಬಲಪಡಿಸಿಕೊಂಡಿದೆ.

ಪಡಿಕ್ಕಲ್ ಶತಕ & ಮಾನವ್ ಸುತಾರ್ ಮ್ಯಾಜಿಕ್

ಪಂದ್ಯದ ಆರಂಭದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ ತಂಡಕ್ಕೆ, ಸ್ಟಾರ್ ಬ್ಯಾಟ್ಸ್‌ಮನ್ ಸಾಯಿ ಸುದರ್ಶನ್ ಅನುಪಸ್ಥಿತಿಯಲ್ಲಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕನ್ನಡಿಗ ದೇವದತ್ ಪಡಿಕ್ಕಲ್ ಅಕ್ಷರಶಃ ಜೀವ ತುಂಬಿದರು.

ಎಡಗೈ ಬ್ಯಾಟರ್ ಪಡಿಕ್ಕಲ್ ತಮ್ಮ ಚೊಚ್ಚಲ ಟೆಸ್ಟ್ ಶತಕವನ್ನು ಸಿಡಿಸಿ ಬರೋಬ್ಬರಿ 167 ರನ್‌ಗಳನ್ನು ಕಲೆಹಾಕಿದರು. ಕೆ.ಎಲ್. ರಾಹುಲ್ ಮತ್ತು ಧ್ರುವ್ ಜುರೆಲ್ ಅವರ ಅಮೂಲ್ಯ ಬೆಂಬಲದೊಂದಿಗೆ ಭಾರತ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ ಬೃಹತ್ 462 ರನ್‌ಗಳ ಬದ್ರವಾದ ಮೊತ್ತವನ್ನು ಕಲೆಹಾಕಿತು.


ಇನ್ನು ಬೌಲಿಂಗ್ ವಿಭಾಗದಲ್ಲಿ ಯುವ ಸ್ಪಿನ್ನರ್ ಮಾನವ್ ಸುತಾರ್ ತಮ್ಮ ಮಾರಕ ದಾಳಿಯಿಂದ ಲಂಕಾ ಬ್ಯಾಟಿಂಗ್ ಬೆನ್ನೆಲುಬನ್ನೇ ಮುರಿದರು. ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 9 ರನ್ ನೀಡಿ ಪ್ರಮುಖ 6 ವಿಕೆಟ್‌ಗಳನ್ನು ಕಬಳಿಸಿದ ಸುತಾರ್, ಒಟ್ಟು ಪಂದ್ಯದಲ್ಲಿ 10 ವಿಕೆಟ್‌ಗಳನ್ನು ಪಡೆದು ಲಂಕಾ ಪಡೆಗೆ ಸಿಂಹಸ್ವಪ್ನರಾದರು.
ಕೊನೆಯ ದಿನದಾಟದಲ್ಲಿ ಗೆಲುವಿಗಾಗಿ 372 ರನ್‌ಗಳ ಗುರಿ ಬೆನ್ನಟ್ಟಿದ್ದ ಶ್ರೀಲಂಕಾ ತಂಡವು, ಭಾರತೀಯ ಬೌಲರ್‌ಗಳ ಮಾರಕ ದಾಳಿಗೆ ಸಿಲುಕಿ 206 ರನ್‌ಗಳಿಗೆ ಆಲೌಟ್ ಆಯಿತು.

ಸಮಸ್ಯೆಗಳಿಗೆ ಸಿಕ್ಕ ಶಾಶ್ವತ ಪರಿಹಾರ!


ಈ ಪಂದ್ಯದ ಫಲಿತಾಂಶವು ಟೀಮ್ ಇಂಡಿಯಾದ ಹಲವು ಚಿಂತೆಗಳನ್ನು ದೂರ ಮಾಡಿದೆ. ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರ ಉತ್ತರಾಧಿಕಾರಿಯಾಗಿ ಮಾನವ್ ಸುತಾರ್ ರೂಪದಲ್ಲಿ ಭಾರತಕ್ಕೆ ಪರಿಪೂರ್ಣ ಸ್ಪಿನ್ ಅಸ್ತ್ರ ಸಿಕ್ಕಂತಾಗಿದೆ.
ಹಾಗೆಯೇ 3ನೇ ಕ್ರಮಾಂಕದಲ್ಲಿ ದೇವದತ್ ಪಡಿಕ್ಕಲ್ ಅದ್ಭುತ ಪ್ರದರ್ಶನ ಮುಂದಿನ ದಿನಗಳಲ್ಲಿ ತಂಡಕ್ಕೆ ದೊಡ್ಡ ಪ್ಲಸ್ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ. ಒಟ್ಟಾರೆಯಾಗಿ, ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಸರ್ವತೋಮುಖ ಪ್ರದರ್ಶನ ನೀಡಿದ ಟೀಂ ಇಂಡಿಯಾ ಸರಣಿಯಲ್ಲಿ 1-0 ಮುನ್ನಡೆಯನ್ನು ಸಾಧಿಸಿದೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net