ಬಾಲಿವುಡ್​ ಸಿನಿಮಾಗಳು... ಹಿಂದಿ ಚಿತ್ರರಂಗದ ಬಗ್ಗೆ ಶಾಕಿಂಗ್​ ಹೇಳಿಕೆ ನೀಡಿದ ನಟ ಪ್ರಕಾಶ್​ ರಾಜ್​! Prakash Raj

ಬಹುಭಾಷಾ ನಟ ಪ್ರಕಾಶ್​ ರಾಜ್​
ಬಹುಭಾಷಾ ನಟ ಪ್ರಕಾಶ್​ ರಾಜ್​
Published on

ಪ್ರಮುಖ ಮುಖ್ಯಾಂಶಗಳು

  • ಬಾಲಿವುಡ್​ ಬಗ್ಗೆ ಬಹುಭಾಷ ನಟ ಪ್ರಕಾಶ್​ ರಾಜ್​ ಸಂಚಲನಾತ್ಮಕ ಹೇಳಿಕೆ
  • ಕೇರಳ ಸಾಹಿತ್ಯ ಉತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವೇಳೆ ನೀಡಿದ್ದ ಹೇಳಿಕೆ
  • ಬಾಲಿವುಡ್ ಚಿತ್ರಗಳು ಮೇಡಮ್ ಟುಸ್ಸಾಡ್ಸ್ ಮ್ಯೂಸಿಯಂನಲ್ಲಿರುವ ಗೊಂಬೆಗಳಂತೆ ಎಂದ ಪ್ರಕಾಶ್​ ರಾಜ್
ಮುಂಬೈ: ಬಾಲಿವುಡ್ ಚಿತ್ರಗಳು ಮೇಡಮ್ ಟುಸ್ಸಾಡ್ಸ್ ಮ್ಯೂಸಿಯಂನಲ್ಲಿರುವ ಗೊಂಬೆಗಳಂತೆ, ಅವುಗಳಲ್ಲಿ ಜೀವವಿಲ್ಲ ಎನ್ನುವ ಮೂಲಕ ಬಹುಭಾಷ ನಟ ಪ್ರಕಾಶ್​ ರಾಜ್​ (Prakash Raj) ಅವರು ಸಂಚಲನಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ.
ಇತ್ತೀಚೆಗೆ ಕೇರಳದಲ್ಲಿ ನಡೆದ 'ಕೇರಳ ಸಾಹಿತ್ಯ ಉತ್ಸವ' ಕಾರ್ಯಕ್ರಮದಲ್ಲಿ ಪ್ರಕಾಶ್​ ರಾಜ್​ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಪ್ರಕಾಶ್​ ರಾಜ್​, ಬಾಲಿವುಡ್ ಬಗ್ಗೆ ಕೆಲವು ಖಾರವಾದ ಹೇಳಿಕೆಗಳನ್ನು ನೀಡಿದರು.
ಬಾಲಿವುಡ್ ಚಿತ್ರಗಳು ನೋಡಲು ಅದ್ಭುತ ಮತ್ತು ವರ್ಣಮಯವಾಗಿವೆ. ಆದರೆ, ಒಳಗೆ ಎಲ್ಲವೂ ಟೊಳ್ಳಾಗಿದೆ. ನೀವು ಹಿಂದಿ ಚಿತ್ರಗಳನ್ನು ನೋಡಿದಾಗ, ನಿಮಗೆ ಮೇಡಮ್ ಟುಸ್ಸಾಡ್ಸ್ ಮ್ಯೂಸಿಯಂನಲ್ಲಿರುವ ಪ್ಲಾಸ್ಟಿಕ್ ಪ್ರತಿಮೆಗಳಂತೆ ಭಾಸವಾಗುತ್ತದೆ. ಅವು ಸುಂದರವಾಗಿ ಕಾಣುತ್ತಿದ್ದರೂ, ಅವುಗಳಲ್ಲಿ ಯಾವುದೇ ಜೀವವಿಲ್ಲ. ಬಾಲಿವುಡ್ ಚಿತ್ರಗಳು ಐಷಾರಾಮಿ ನೋಟ, ಪ್ರಚಾರಗಳು, ಹಣದಂತಹ ವಿಷಯಗಳ ಸುತ್ತ ಮಾತ್ರ ಸುತ್ತುತ್ತದೆ ಎಂದು ಪ್ರಕಾಶ್​ ರಾಜ್​ ಹೇಳಿದರು.
ತಮಿಳು ಮತ್ತು ಮಲಯಾಳಂ ನಿರ್ದೇಶಕರು ಮಣ್ಣಿನ ಕಥೆಗಳನ್ನು, ಸಮಾಜದ ಕೆಳವರ್ಗದವರ ಸಮಸ್ಯೆಗಳನ್ನು ಮತ್ತು ದಲಿತರ ನೋವುಗಳನ್ನು ಬೆಳ್ಳಿ ಪರದೆಯ ಮೇಲೆ ಬಹಳ ಸ್ವಾಭಾವಿಕವಾಗಿ ಪ್ರಸ್ತುತಪಡಿಸುತ್ತಿದ್ದಾರೆ. ನಾವು ಹೇಳುವ ಕಥೆಗಳಲ್ಲಿ ನಮ್ಮ ಬೇರುಗಳು ಗೋಚರಿಸಬೇಕು. ಇಲ್ಲಿನ ಜನರು ಜೈ ಭೀಮ್ ಮತ್ತು ಮಾಮನನ್ ನಂತಹ ಚಲನಚಿತ್ರಗಳನ್ನು ಮಾಡುತ್ತಿದ್ದಾರೆ. ಬಾಲಿವುಡ್ ಸಿನಿಮಾ ರಂಗ ಕೇವಲ ಕಮರ್ಷಿಯಲ್​ ಅಂಶಗಳಿಗೆ ಮಾತ್ರ ಸೀಮಿತವಾಗಿದೆ. ಅದಕ್ಕಾಗಿಯೇ ಹಿಂದಿ ಚಲನಚಿತ್ರಗಳು ಸಾಮಾನ್ಯ ಪ್ರೇಕ್ಷಕರಿಂದ ದೂರವಾಗಿವೆ ಎಂದು ಪ್ರಕಾಶ್​ ರಾಜ್​ ಅವರು ಸಂಚಲನಾತ್ಮಕ ಹೇಳಿಕೆಗಳನ್ನು ನೀಡಿದರು.
ಸದ್ಯ ಪ್ರಕಾಶ್ ರಾಜ್ ನೀಡಿದ ಹೇಳಿಕೆಗಳು ಹಿಂದಿ ಮಾಧ್ಯಮಗಳಲ್ಲಿ ಸಖತ್​ ಚರ್ಚೆಯಾಗುತ್ತಿವೆ. ಇದಕ್ಕೆ ಬಾಲಿವುಡ್ ಯಾವ ರೀತಿಯ ಪ್ರತಿಕ್ರಿಯೆ ನೀಡುತ್ತದೆ ಎಂದು ಕಾದು ನೋಡಬೇಕಾಗಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net