ಕಳೆದ ವರ್ಷವೇ ನಡೆಯಬೇಕಿದ್ದ ವಿಶಾಲ್​ ಮದ್ವೆ ಇನ್ನೂ ನಡೆದಿಲ್ಲ ಏಕೆ? ಅಚ್ಚರಿ ಕಾರಣ ಬಿಚ್ಚಿಟ್ಟ ಧನ್ಸಿಕಾ! Actor Vishal

ನಟ ವಿಶಾಲ್​ ( Actor Vishal ) ಮತ್ತು ನಟಿ ಸಾಯಿ ಧನ್ಸಿಕಾ
ನಟ ವಿಶಾಲ್​ ( Actor Vishal ) ಮತ್ತು ನಟಿ ಸಾಯಿ ಧನ್ಸಿಕಾ
Published on

ಪ್ರಮುಖ ಮುಖ್ಯಾಂಶಗಳು

  • ಕಾಲಿವುಡ್​ನಲ್ಲಿ ಸದ್ಯ ಕೇಳಿಬರುತ್ತಿರುವುದು ಒಂದೇ ಪ್ರಶ್ನೆ
  • ನಟ ವಿಶಾಲ್​ ಮತ್ತು ನಟಿ ಸಾಯಿ ಧನ್ಸಿಕಾ ಮದುವೆ ಇನ್ನೂ ನಡೆದಿಲ್ಲ ಏಕೆ?
  • ಇಷ್ಟೊತ್ತಿಗೆ ಇವರಿಬ್ಬರು ಮದುವೆಯಾಗಿ ಅರ್ಧ ವರ್ಷವೇ ಕಳೆಯಬೇಕಿತ್ತು
  • ಮದುವೆ ಕುರಿತಾದ ಅನುಮಾನಗಳನ್ನು ನಟಿ ಸಾಯಿ ಧನ್ಸಿಕಾ ಪರಿಹರಿಸಿದ್ದಾರೆ
Actor Vishal : ಕಾಲಿವುಡ್​ನಲ್ಲಿ ಸದ್ಯ ಕೇಳಿಬರುತ್ತಿರುವುದು ಒಂದೇ ಪ್ರಶ್ನೆ ಅದೇನೆಂದರೆ, ನಟ ವಿಶಾಲ್​ ಮತ್ತು ನಟಿ ಸಾಯಿ ಧನ್ಸಿಕಾ ಇನ್ನೂ ಏಕೆ ಮದುವೆ ಆಗಿಲ್ಲ ಅನ್ನೋದು. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ, ಇಷ್ಟೊತ್ತಿಗೆ ಇವರಿಬ್ಬರು ಮದುವೆಯಾಗಿ ಅರ್ಧ ವರ್ಷವೇ ಕಳೆಯುತ್ತಿತ್ತು. ಆದರೆ, ಇನ್ನೂ ಮದುವೆಯಾಗಿಲ್ಲ. ಅಲ್ಲದೆ, ಮದುವೆ ಯಾವಾಗ ಅನ್ನೋ ಪ್ರಶ್ನೆಗೂ ಸೂಕ್ತ ಉತ್ತರ ಇಲ್ಲ. ಹೀಗಾಗಿ, ಈ ಮದುವೆ ನಡೆಯುತ್ತೋ? ಇಲ್ಲವೋ? ಅನ್ನೋ ಅನುಮಾನ ಕೂಡ ಇದೀಗ ಮೂಡಿದೆ. ಆದರೆ, ಈ ಅನುಮಾನವನ್ನು ಇದೀಗ ನಟಿ ಸಾಯಿ ಧನ್ಸಿಕಾ ಪರಿಹರಿಸಿದ್ದಾರೆ.
ವಿಶಾಲ್​ ಮತ್ತು ಧನ್ಸಿಕಾ ಕಳೆದ ವರ್ಷ ಎಂಗೇಜ್​ಮೆಂಟ್​ ಮಾಡಿಕೊಂಡರು. ಅಲ್ಲದೆ, ಆಗಸ್ಟ್​ 29ರಂದು ಮದುವೆಯಾಗುವುದಾಗಿ ಘೋಷಣೆ ಸಹ ಮಾಡಿದ್ದರು. ಆದರೆ, ಆಗಸ್ಟ್​ ತಿಂಗಳು ಕಳೆದು ಅರ್ಧ ವರ್ಷವೇ ಮುಗಿದಿದೆ. ಆದರೆ, ಅವರಿಬ್ಬರು ಮಾತ್ರ ಇನ್ನೂ ಮದುವೆಯಾಗಿಲ್ಲ. ಏಕೆ ಇನ್ನೂ ಮದುವೆ ಆಗಿಲ್ಲ ಎಂಬ ಪ್ರಶ್ನೆಗೆ ಇತ್ತೀಚೆಗೆ ಧನ್ಸಿಕಾ ಉತ್ತರ ನೀಡಿದ್ದಾರೆ.
ಕಲಾವಿದರ ಸಂಘದ ಕಟ್ಟಡ ನಿರ್ಮಾಣ ನಟ ವಿಶಾಲ್​ ಅವರ ಕನಸು. ಇದು ಪೂರ್ಣಗೊಂಡ ನಂತರವೇ ಮದುವೆ ನಡೆಯಲಿದೆ. ಹಾಗಾಗಿ, ಮದುವೆಯ ದಿನಾಂಕವನ್ನು ಘೋಷಿಸಲು ಸಾಧ್ಯವಿಲ್ಲ. ಸದ್ಯ ಆ ಕಟ್ಟಡವನ್ನು ಪೂರ್ಣಗೊಳಿಸುವುದು ವಿಶಾಲ್ ಅವರ ಕನಸು. ಕಳೆದ ಐದು ವರ್ಷಗಳಿಂದ ಇದೇ ಕನಸಿನೊಂದಿಗೆ ವಿಶಾಲ್​ ಬದುಕುತ್ತಿದ್ದಾರೆ. ಯಾರಾದರೂ ಅದನ್ನು ತಡೆಯಲು ಸಾಧ್ಯವೇ? ಎಂದು ಧನ್ಸಿಕಾ ಇತ್ತೀಚೆಗೆ ಹೇಳಿದರು.
ಅಂದಹಾಗೆ, ವಿಶಾಲ್ 47 ನೇ ವಯಸ್ಸಿನಲ್ಲಿ ಎಂಗೇಜ್​ಮೆಂಟ್​ ಮಾಡಿಕೊಂಡಿದ್ದಾರೆ ಅನ್ನೋದು ಗಮನಾರ್ಹ ಸಂಗತಿ. ಸಾಯಿ ಧನ್ಸಿಕಾ ಮತ್ತು ವಿಶಾಲ್ ಬಹಳ ಸಮಯದಿಂದ ಡೇಟಿಂಗ್​ ಮಾಡುತ್ತಿದ್ದರು. ಕಳೆದ ವರ್ಷ ತಮ್ಮ ಪ್ರೇಮ ಸಂಬಂಧವನ್ನು ಅಧಿಕೃತವಾಗಿ ಘೋಷಿಸಿದರು.
ನಮ್ಮ ನಡುವೆ ಇರುವ ಹತ್ತು ವರ್ಷ ವಯಸ್ಸಿನ ವ್ಯತ್ಯಾಸ ದೊಡ್ಡ ವಿಷಯವಲ್ಲ. ನಾನು ಪ್ರಬುದ್ಧ ವ್ಯಕ್ತಿ. ನನ್ನ ಸಂಗಾತಿಯಲ್ಲಿ ನಾನು ಬಯಸುವುದು ಅದನ್ನೇ. ಅದಕ್ಕಾಗಿಯೇ ನಾನು ವಯಸ್ಸಿನ ವ್ಯತ್ಯಾಸಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುವುದಿಲ್ಲ. ಪರಸ್ಪರ ನಂಬಿಕೆ ಮತ್ತು ಪ್ರೀತಿ ಇದ್ದರೆ ಸಾಕು. ನಮ್ಮ ನಡುವೆ ಇರುವುದು ಕೂಡ ಅದೇ. ವಿಶಾಲ್ ನನ್ನ ಜೀವನದಲ್ಲಿ ಬಂದ ನಂತರ, ನನ್ನಲ್ಲಿಯೂ ಬಹಳಷ್ಟು ಬದಲಾವಣೆಯಾಗಿದೆ ಅನ್ನೋದು ಧನ್ಸಿಕಾ ಅವರ ಮಾತುಗಳು.
ಅಂದಹಾಗೆ, ನಟ ವಿಶಾಲ್ 2004ರಲ್ಲಿ ಬಿಡುಗಡೆಯಾದ “ಸೆಲ್ಲಮೆ” ಚಿತ್ರದ ಮೂಲಕ ತಮಿಳು ಚಿತ್ರರಂಗದಲ್ಲಿ ನಾಯಕನಾಗಿ ಪಾದಾರ್ಪಣೆ ಮಾಡಿದರು. ಈ ಚಿತ್ರ ವಿಶಾಲ್ ಅವರ ಚಲನಚಿತ್ರ ವೃತ್ತಿಜೀವನದಲ್ಲಿ ಒಂದು ಮೈಲಿಗಲ್ಲು ಚಿತ್ರವಾಯಿತು. ಇದರ ನಂತರ ಲಿಂಗುಸ್ವಾಮಿ ನಿರ್ದೇಶನದ ಸಂಡಕೋಳಿ ಚಿತ್ರ ಬಿಡುಗಡೆಯಾಯಿತು. ಇದು ಅವರ ವೃತ್ತಿಜೀವನದ ಅತಿ ದೊಡ್ಡ ಹಿಟ್ ಆಯಿತು. ಈ ಎರಡು ಚಿತ್ರಗಳ ಯಶಸ್ಸಿನ ನಂತರ ವಿಶಾಲ್ ಅವರು ತಿಮಿರು, ತಾಮಿರಬರಣಿ, ತೀರದ ವಿಲೈಯತ್ತು ಪಿಳ್ಳೈ, ಅವನ್ ಇವನ್, ಪಾಂಡಿಯ ನಾಡು, ಪೂಜಾ, ಮರುದು ಮತ್ತು ತುಪ್ಪರಿವಾಲನ್ ಮುಂತಾದ ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ. ನಟನಿಂದ ನಿರ್ಮಾಪಕನಾಗಿ ಬದಲಾದ ವಿಶಾಲ್, ಇದೀಗ ತುಪ್ಪರಿವಾಲನ್ 2 ಮೂಲಕ ನಿರ್ದೇಶಕರಾಗಿ ಬಡ್ತಿ ಪಡೆದಿದ್ದಾರೆ.
ಇನ್ನು ಸಾಯಿ ಧನ್ಸಿಕಾ ಅವರು ತಮಿಳುನಾಡಿನ ತಂಜಾವೂರಿನ ಹುಡುಗಿ. 2006 ರಲ್ಲಿ 'ಮನತೋಡು ಮಜೈಕಾಲಂ' ಎಂಬ ತಮಿಳು ಚಿತ್ರದ ಮೂಲಕ ನಟಿಯಾದರು. ಆರಂಭದಲ್ಲಿ ಮರೀನಾ ಎಂಬ ಹೆಸರಿನೊಂದಿಗೆ ಪ್ರೇಕ್ಷಕರಿಗೆ ಪರಿಚಯವಾದರು. ಬಳಿಕ 2009 ರಲ್ಲಿ, ತನುಷಿಕಾ ಎಂಬ ಹೆಸರಿನಲ್ಲಿ 'ಕೆಂಪಾ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸಿದರು. ನಂತರ, ಅವರು ಸಾಯಿ ಧನ್ಸಿಕಾ ಹೆಸರಿನಲ್ಲಿ ಸಿನಿಮಾ ಮಾಡುವುದನ್ನು ಮುಂದುವರೆಸಿದರು. 'ಕಬಾಲಿ' ಚಿತ್ರದಲ್ಲಿ ರಜನಿಕಾಂತ್ ಅವರ ಮಗಳಾಗಿ ನಟಿಸುವ ಮೂಲಕ ಜನಮನ್ನಣೆ ಗಳಿಸಿದರು. ವಿಶಾಲ್ ಮತ್ತು ಧನ್ಸಿಕಾ ಇಲ್ಲಿಯವರೆಗೆ ಒಂದೇ ಒಂದು ಚಿತ್ರದಲ್ಲಿ ಒಟ್ಟಿಗೆ ನಟಿಸಿಲ್ಲ. ಆದರೆ, ಧನ್ಸಿಕಾ ಅವರು ವಿಶಾಲ್ ಅವರನ್ನು 15 ವರ್ಷಗಳಿಂದ ತಿಳಿದಿದ್ದಾರೆ ಎಂದು ಅವರೇ ಹೇಳಿಕೊಂಡಿದ್ದಾರೆ. ಕಳೆದ ಕೆಲವು ವರ್ಷಗಳಿಂದ ನಾವು ಸ್ನೇಹಿತರಾಗಿದ್ದೇವೆ ಮತ್ತು ಕೆಲವು ವರ್ಷಗಳ ಹಿಂದೆ ನಮ್ಮ ನಡುವೆ ಪ್ರೀತಿ ಅರಳಿದೆ ಎಂದು ಈ ಹಿಂದೆ ಹೇಳಿದ್ದರು. ಕಳೆದ ವರ್ಷ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಶೀಘ್ರದಲ್ಲೇ ತಮ್ಮ ಮದುವೆ ದಿನಾಂಕವನ್ನು ಘೋಷಣೆ ಮಾಡಲಿದ್ದಾರೆ ಎಂಬ ಸುದ್ದಿ ಇದೆ, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net