'ಲ್ಯಾಂಡ್​ ಲಾರ್ಡ್'​ ಮೆಚ್ಚಿದ ಸಿಎಂ; ದುನಿಯಾ ವಿಜಯ್​ ಚಿತ್ರಕ್ಕೆ ತೆರಿಗೆ ವಿನಾಯಿತಿ ಘೋಷಿಸಿದ ಸಿದ್ದರಾಮಯ್ಯ | Landlord

ಲ್ಯಾಂಡ್​ ಲಾರ್ಡ್​ ಚಿತ್ರಕ್ಕೆ ತೆರಿಗೆ ವಿನಾಯ್ತಿ ಘೋಷಿಸಿದ ಸಿಎಂ ಸಿದ್ದರಾಮಯ್ಯ
ಲ್ಯಾಂಡ್​ ಲಾರ್ಡ್​ ಚಿತ್ರಕ್ಕೆ ತೆರಿಗೆ ವಿನಾಯ್ತಿ ಘೋಷಿಸಿದ ಸಿಎಂ ಸಿದ್ದರಾಮಯ್ಯ
Published on

ಪ್ರಮುಖ ಮುಖ್ಯಾಂಶಗಳು

  • ದುನಿಯಾ ವಿಜಯ್ ಮತ್ತು ರಚಿತಾ ರಾಮ್​ ನಟಿಸಿರುವ ಲ್ಯಾಂಡ್​ ಲಾರ್ಡ್​ ಚಿತ್ರ
  • ಸಾಮಾಜಿಕ ಅಸಮಾನತೆ ಮತ್ತು ಜಾತಿ ಶೋಷಣೆ ವಿಷಯ ಆಧಾರಿತ ಸಿನಿಮಾ ಹಿನ್ನೆಲೆ
  • ಚಿತ್ರಕ್ಕೆ ತೆರಿಗೆ ವಿನಾಯ್ತಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ ಸಿಎಂ
ಬೆಂಗಳೂರು: ನಟ ದುನಿಯಾ ವಿಜಯ್ ಮತ್ತು ರಚಿತಾ ರಾಮ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ 'ಲ್ಯಾಂಡ್​ಲಾರ್ಡ್'​ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡುವಂತೆ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಸಾಮಾಜಿಕ ಅಸಮಾನತೆ ಮತ್ತು ಜಾತಿ ಶೋಷಣೆ ವಿಷಯಯಂತಹ ಗಂಭೀರ ವಿಷಯವನ್ನು ತಮ್ಮ ಚಿತ್ರದಲ್ಲಿ ಅಚ್ಚುಕಟ್ಟಾಗಿ ತೋರಿಸಿರುವ ಚಿತ್ರತಂಡವನ್ನು ಮೆಚ್ಚಿದ ಸಿಎಂ, ಸಿನಿಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಹಿನ್ನೆಲೆ "ಲ್ಯಾಂಡ್ ಲಾರ್ಡ್" ಸಿನಿಮಾಗೆ ತೆರಿಗೆ ವಿನಾಯ್ತಿ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಸಿಎಂ ಮಾತು...

"ಮೌಲ್ಯಯುತ ಸಂದೇಶವನ್ನು ಜನರಿಗೆ ತಲುಪಿಸಿ, ಸಾರ್ವತ್ರಿಕ ಅಭಿಪ್ರಾಯ ರೂಪಿಸಲು ಹಾಗೂ ಸಾಮಾಜಿಕ ಪರಿವರ್ತನೆಯನ್ನು ಸಾಧಿಸಲು ಸಿನಿಮಾಗಳು ಅತ್ಯಂತ ಪರಿಣಾಮಕಾರಿ ಮಾಧ್ಯಮ ಎನ್ನುವುದು ನನ್ನ ಭಾವನೆ. ಸಾಮಾಜಿಕ ಕಳಕಳಿಯ ಚಿತ್ರವನ್ನು ಮಾಡಿದಾಗ ಅಂಥವರ ಜೊತೆ ನಿಂತು ಬೆನ್ನು ತಟ್ಟಬೇಕಿರುವುದು ಕೂಡ ಸರ್ಕಾರವಾಗಿ ನಮ್ಮ ನೈತಿಕ ಹೊಣೆ. ಮುಂದಿನ ದಿನಗಳಲ್ಲಿ ಸಾಮಾಜಿಕ ವ್ಯವಸ್ಥೆಯ ಮೇಲೆ ಬೆಳಕು ಚೆಲ್ಲುವ 'ಲ್ಯಾಂಡ್ ಲಾರ್ಡ್' ರೀತಿಯ ಇನ್ನಷ್ಟು ಚಿತ್ರಗಳು ಮೂಡಿಬರಲು ನಮ್ಮ ಈ ನಿರ್ಧಾರ ಸ್ಪೂರ್ತಿಯಾಗಲಿದೆ ಎಂಬ ನಂಬಿಕೆ ನಮ್ಮದು" ಎಂದು ಸಿಎಂ ತಮ್ಮ ಟ್ವೀಟ್​ನಲ್ಲಿ ತಿಳಿಸಿದ್ದಾರೆ.

ಚಿತ್ರತಂಡ ಸಂತಸ

ವಿಭಿನ್ನ ಲುಕ್​ಗಳಲ್ಲಿ ಕಾಣಿಸಿಕೊಂಡಿರುವ ವಿಜಯ್ ಮತ್ತು ರಚಿತಾ ರಾಮ್​, ಸಿನಿಮಾ ಪೂರ ಬಡ ಕೂಲಿ ಕಾರ್ಮಿಕರ ಗೆಟಪ್​ನಲ್ಲಿ ಅಭಿನಯಿಸಿದ್ದಾರೆ. ಇದೇ ಸಿನಿಪ್ರಿಯರಿಗೆ ಚಿತ್ರದಲ್ಲಿ ಏನೋ ಒಂದು ಗಟ್ಟಿಯಾದ ವಿಷಯವಿದೆ ಎಂಬುದನ್ನು ಸೂಚಿಸಿದೆ. ಪ್ರಸ್ತುತ, ಚಿತ್ರಮಂದಿರಗಳಲ್ಲಿ ನೋಡುಗರಿಂದ ಉತ್ತಮ ಪ್ರತಿಕ್ರಿಯೆಗಳನ್ನು ಸ್ವೀಕರಿಸುತ್ತಿರುವ ಚಿತ್ರಕ್ಕೆ ಈಗ ಸರ್ಕಾರದಿಂದ ಇನ್ನಷ್ಟು ಪುಷ್ಠಿ ಸಿಕ್ಕಂತಾಗಿದೆ. ತಮ್ಮ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡಿದ ಮುಖ್ಯಮಂತ್ರಿಗಳಿಗೆ ಧನ್ಯವಾದ ತಿಳಿಸಿರುವ ದುನಿಯಾ ವಿಜಯ್ ಹಾಗೂ ಚಿತ್ರತಂಡ, ಇಂತಹ ಚಿತ್ರಗಳಿಗೆ ಇನ್ನೂ ಹೆಚ್ಚಿನ ಪ್ರೋತ್ಸಾಹ ಸಿಗಬೇಕು ಎಂಬ ಬಯಕೆಯನ್ನು ವ್ಯಕ್ತಪಡಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net