ವಿವಾದದ ಸುಳಿಯಲ್ಲಿ ರ‍್ಯಾಪರ್: ತಟೀರಿ ಹಾಡಿಗೆ ತೀವ್ರ ವಿರೋಧ, ಬಹಿರಂಗ ಕ್ಷಮೆ ಕೇಳಿದ ಬಾದ್​ಶಾ! Badshah

ರ‍್ಯಾಪರ್ ಬಾದ್‌ಶಾ (Badshah)
ರ‍್ಯಾಪರ್ ಬಾದ್‌ಶಾ (Badshah)
Published on

ಪ್ರಮುಖ ಮುಖ್ಯಾಂಶಗಳು

  • ರ‍್ಯಾಪರ್ ಬಾದ್‌ಶಾ ಅವರ 'ತಟೀರಿ' ಹಾಡಿನ ವಿವಾದ
  • ಶಾಲಾ ವಿದ್ಯಾರ್ಥಿನಿಯರ ತಪ್ಪು ಬಳಕೆಯ ಆರೋಪ
  • ಸಾರ್ವಜನಿಕವಾಗಿ ಕ್ಷಮೆ ಕೇಳಿದ ಬಾದ್‌ಶಾ
ಬಾಲಿವುಡ್​: ಭಾರತದ ಖ್ಯಾತ ರ‍್ಯಾಪರ್ ಬಾದ್​​ಶಾ (Badshah) ಅವರ ಇತ್ತೀಚೆಗೆ ಬಿಡುಗಡೆಯಾದ ತಟೀರಿ (Tateeree) ಎಂಬ ಹಾಡು ವಿವಾದಾತ್ಮಕ ರೂಪ ಪಡೆದುಕೊಂಡ ಹಿನ್ನಲೆಯಲ್ಲಿ ಬಾದ್​​ಶಾ ಈ ಕುರಿತು ಸಾಮೂಹಿಕವಾಗಿ ಕ್ಷಮೆಯಾಚಿಸಿದ್ದಾರೆ.
ಈ ಹಾಡಿನಲ್ಲಿ ಶಾಲಾ ವಿದ್ಯಾರ್ಥಿನಿಯರನ್ನು ಅಸಂಬದ್ಧವಾಗಿ ಬಳಸಿಕೊಳ್ಳಲಾಗಿದೆ ಹಾಗೂ ಹಾಡಿನಲ್ಲಿ ಅಶ್ಲೀಲ ಸಾಹಿತ್ಯವನ್ನು ಬಳಸಲಾಗಿದೆ ಎಂಬ ಆರೋಪದಲ್ಲಿ ಹರಿಯಾಣಾ ಪೊಲೀಸರು ಬಾದ್​ಶಾ ವಿರುದ್ಧ ಎಫ್​ಐಆರ್​ನ್ನು ಸಹ ದಾಖಲಿಸಿದ್ದರು.

ನನ್ನ ಉದ್ದೇಶ ಯಾರಿಗೂ ನೋವುಂಟು ಮಾಡುವುದಾಗಿರಲಿಲ್ಲ!

ಬಿಡುಗಡೆಯಾದ ಹಾಡಿಗೆ ಭಾರಿ ವಿರೋಧದ ಜೊತೆಗೆ ಪೊಲೀಸ್​ ದೂರು ದಾಖಲಾದ ನಂತರ ಬಾದ್​ಶಾ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಸಾಮೂಹಿಕವಾಗಿ ಕ್ಷಮೆ ಕೇಳಿದ್ದಾರೆ.
ನನ್ನ ಈ ಹಾಡಿನಿಂದ ಬಹಳ ಜನಕ್ಕೆ ಅದರಲ್ಲೂ ಹರಿಯಾಣಾದ ಜನರಿಗೆ ನೋವಾಗಿದೆ ಎಂದು ನನಗೆ ತಿಳಿದು ಬಂದಿದೆ. ಆದರೆ ಯಾರಿಗೂ ನೋವುಂಟು ಮಾಡುವ ಉದ್ದೇಶ ನನ್ನದಾಗಿರಲಿಲ್ಲ. ಆದರೂ ನನ್ನ ಅಭಿಮಾನಿಗಳಿಗೆ ಬೇಸರವಾದ ಹಿನ್ನಲೆಯಲ್ಲಿ ಈ ಹಾಡನ್ನು ಎಲ್ಲಾ ವೇದಿಕೆಗಳಿಂದ ತೆಗೆದು ಹಾಕಿದ್ದೇನೆ ಎಂದು ಬಾದ್​ಶಾ ಹೇಳಿದ್ದಾರೆ.
ನಾನೂ ಮೂಲತಃ ಹರಿಯಾಣಾದವನಾಗಿದ್ದು, ನನಗೂ ಅಲ್ಲಿಯ ಊಟ, ಆಚರಣೆ ಮತ್ತು ಸಂಪ್ರದಾಯಗಳ ಬಗ್ಗೆ ತಿಳುವಳಿಕೆಯಿದೆ. ಅಲ್ಲಿಯ ಮಹಿಳೆಯರ ಮತ್ತು ಮಕ್ಕಳ ಬಗ್ಗೆ ನನಗೆ ಅಪಾರವಾದ ಗೌರವವಿದೆ. ಅವರನ್ನು ಅವಮಾನಿಸುವುದು ನನ್ನ ಉದ್ದೇಶವಾಗಿರಲಿಲ್ಲ. ಆದರೂ ನನ್ನ ಈ ಹಾಡಿಂದ ನಿಮಗೆ ನೋವಾಗಿದ್ದರೆ ನಾನು ನಿಮ್ಮಲ್ಲಿ ಕ್ಷಮೆ ಕೇಳುತ್ತೆನೆ ಎಂದು ಅವರು ಹೇಳಿದ್ದಾರೆ.

ಮಹಿಳಾ ಆಯೋಗದ ಸಮನ್ಸ್

ಈ ಪ್ರಕರಣದಲ್ಲಿ ಹರಿಯಾಣ ರಾಜ್ಯ ಮಹಿಳಾ ಆಯೋಗ ಕೂಡ ನೇರವಾಗಿ ಮಧ್ಯಪ್ರವೇಶಿಸಿದೆ. ಆಯೋಗದ ಅಧ್ಯಕ್ಷೆ ರೇಣು ಭಾಟಿಯಾ ಅವರು ಬಾದ್‌ಶಾಗೆ ಸಮನ್ಸ್ ಜಾರಿ ಮಾಡಿದ್ದು, ಮಾರ್ಚ್ 13 ರಂದು ವಿಚಾರಣೆಗೆ ಹಾಜರಾಗಿ, ಇಂತಹ ಸಾಹಿತ್ಯ ಮತ್ತು ದೃಶ್ಯಗಳನ್ನು ಬಳಸಲು ಕಾರಣವೇನು ಎಂದು ಉತ್ತರಿಸುವಂತೆ ತಾಕೀತು ಮಾಡಿದ್ದಾರೆ.

ತಟೀರಿ ಹಾಡಿನ ಬಗ್ಗೆ

ತಟೀರಿ (Tateeree) ಎಂಬುದು ಜನಪ್ರಿಯ ರ‍್ಯಾಪರ್ ಮತ್ತು ಗಾಯಕ ಬಾದ್‌ಶಾ ಅವರು ಮಾರ್ಚ್ 1, 2026 ರಂದು ಬಿಡುಗಡೆ ಮಾಡಿದ ಹರಿಯಾಣ್ವಿ ಭಾಷೆಯ ಹಿಪ್-ಹಾಪ್ ಹಾಡಾಗಿದೆ. ಈ ಹಾಡು ಬಿಡುಗಡೆಯಾದ ಕೆಲವೇ ದಿನಗಳಲ್ಲಿ ತೀವ್ರ ವಿವಾದಕ್ಕೆ ಕಾರಣವಾಯಿತು. ಹಾಡಿನ ದೃಶ್ಯಗಳಲ್ಲಿ ಶಾಲಾ ಸಮವಸ್ತ್ರ ಧರಿಸಿದ ಅಪ್ರಾಪ್ತ ಬಾಲಕಿಯರು ಶಾಲೆಗೆ ಹೋಗುವ ಬದಲು ಬೇರೆ ಕಡೆ ಗಮನ ಹರಿಸುವುದು ಮತ್ತು ಆಕ್ಷೇಪಾರ್ಹ ಸನ್ನೆಗಳನ್ನು ಮಾಡುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಯಿತು. ಅಲ್ಲದೆ, ಹಾಡಿನ ಸಾಹಿತ್ಯವು ಮಹಿಳೆಯರನ್ನು ಮತ್ತು ಅಪ್ರಾಪ್ತರನ್ನು ಅವಹೇಳನ ಮಾಡುವಂತಿದೆ ಎಂಬ ಆರೋಪಗಳು ಕೇಳಿಬಂದವು,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net