8 ಗಂಟೆಗೆ 7 ಕೋಟಿ ತಲುಪಿಸಿ ಇಲ್ಲದಿದ್ರೆ... ಉದ್ಯಮಿಗೆ ಖ್ಯಾತ ನಟಿ, ಗೆಳೆಯ ಕಳುಹಿಸಿದ್ದ ಬೆದರಿಕೆ ಪತ್ರದಲ್ಲಿದೆ ಶಾಕಿಂಗ್​ ಸಂಗತಿ! Arvind Venkatesh Reddy

ಉದ್ಯಮಿಗೆ ಖ್ಯಾತ ನಟಿ, ಗೆಳೆಯ ಕಳುಹಿಸಿದ್ದ ಬೆದರಿಕೆ ಪತ್ರದಲ್ಲಿದೆ ಶಾಕಿಂಗ್​ ಸಂಗತಿ! Arvind Venkatesh Reddy
ಉದ್ಯಮಿಗೆ ಖ್ಯಾತ ನಟಿ, ಗೆಳೆಯ ಕಳುಹಿಸಿದ್ದ ಬೆದರಿಕೆ ಪತ್ರದಲ್ಲಿದೆ ಶಾಕಿಂಗ್​ ಸಂಗತಿ! Arvind Venkatesh Reddy
Published on

ಪ್ರಮುಖ ಮುಖ್ಯಾಂಶಗಳು

  • ಕನ್ನಡ ಚಿತ್ರರಂಗದ ಖ್ಯಾತ ನಟಿ ಹಾಗೂ ಉದ್ಯಮಿ ಅರವಿಂದ್ ವೆಂಕಟೇಶ್ ರೆಡ್ಡಿ ಪ್ರೇಮ ವೈಫಲ್ಯ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್​
  • 7 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟು ರೆಡ್ಡಿಗೆ ಕಳುಹಿಸಿದ್ದ ಬೆದರಿಕೆ ಪತ್ರದಲ್ಲಿರುವ ಮಾಹಿತಿ ಬಯಲು
  • ಸುದೀರ್ಘ ಪತ್ರದಲ್ಲಿ ಉದ್ಯಮಿ ರೆಡ್ಡಿಗೆ ಹಣದ ಬೇಡಿಕೆ ಮತ್ತು ಜೀವ ಬೆದರಿಕೆ ಹಾಕಿದ ನಟಿ ಮತ್ತು ಆಕೆಯ ಗೆಳೆಯ
ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ನಟಿ ಹಾಗೂ ಉದ್ಯಮಿ ಅರವಿಂದ್ ವೆಂಕಟೇಶ್ ರೆಡ್ಡಿ ( Arvind Venkatesh Reddy ) ನಡುವಿನ ಪ್ರೇಮ ವೈಫಲ್ಯ ಪ್ರಕರಣ ಮತ್ತೊಂದು ರೋಚಕ ತಿರುವು ಪಡೆದುಕೊಂಡಿದೆ. 7 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟು, ರೆಡ್ಡಿಗೆ ಕಳುಹಿಸಿದ್ದ ಬೆದರಿಕೆ ಪತ್ರದಲ್ಲಿರುವ ಮಾಹಿತಿ ಇದೀಗ ಬಯಲಾಗಿದೆ.
ಕನ್ನಡದ ನಟಿ ಹಾಗೂ ಎವಿಆರ್​ ಗ್ರೂಪ್​ ಮಾಲೀಕ ಅರವಿಂದ್ ವೆಂಕಟೇಶ್ ರೆಡ್ಡಿ ನಡುವಿನ ಪ್ರೇಮ ಪ್ರಕರಣ ಇತ್ತೀಚೆಗೆ ಭಾರಿ ಸುದ್ದಿಯಾಗಿತ್ತು. ನನಗೆ ಮೋಸ ಆಗಿದೆ ಮತ್ತು ಬೆದರಿಕೆ ಹಾಕ್ತಿದ್ದಾರೆ ಅಂತೆಲ್ಲಾ ದೂರು ದಾಖಲಿಸಿ ರೆಡ್ಡಿ ಕಾನೂನು ಹೋರಾಟ ಮಾಡುತ್ತಿದ್ದರೆ, ರೆಡ್ಡಿ ನನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ನಟಿ ದೂರು ದಾಖಲಿಸಿದ್ದಾರೆ. ಇದರ ನಡುವೆ ಅರವಿಂದ್​ ರೆಡ್ಡಿಗೆ ಬಂದ ಜೀವ ಬೆದರಿಕೆ ಪತ್ರದ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡ ಹೆಚ್​ಎಎಲ್​ ಠಾಣೆಯ ಪೊಲೀಸರು, ರೆಡ್ಡಿ ವಿರುದ್ಧ ಕಿರುಕುಳ ದೂರು ನೀಡಿದ್ದ ನಟಿಯ ಗೆಳೆಯ ವೈಶಾಕ್​ ಎಂಬಾತನನ್ನು ಅರೆಸ್ಟ್​ ಮಾಡಿದರು.

7 ಕೋಟಿ ರೂ.ಗೆ ಬೇಡಿಕೆ

ಗಳೆಯ ವೈಶಾಖ್​​ ಸಹಾಯ ಪಡೆದು, ಅರವಿಂದ್​​ ರೆಡ್ಡಿ ಅವರಿಂದ 7 ಕೋಟಿ ಹಣ ಲಪಟಾಯಿಸಲು ಖ್ಯಾತ ನಟಿ ಪತ್ರದ ಮೂಲಕ ಬೆದರಿಕೆ ಹಾಕಿದ್ದರು. ಅಲ್ಲದೇ ಇಬ್ಬರೂ ಪ್ರೀ ಪ್ಲ್ಯಾನ್​ ಮಾಡಿ ಅರವಿಂದ್​​ ರೆಡ್ಡಿಯವರು ಹೆಸರು ಹಾಳು ಮಾಡಿ, ದುಡ್ಡು ದೋಚಲು ತಂತ್ರ ರೂಪಿಸಿದ್ದರು. ಇದಕ್ಕಾಗಿ ಗ್ಯಾರೇಜ್​ನಲ್ಲಿ ಕೆಲಸ ಮಾಡ್ತಿದ್ದ ಬಾಲಕನೊಬ್ಬನನ್ನು ಬಳಕೆ ಮಾಡಿಕೊಂಡಿದ್ದಾರೆ. ಬನಶಂಕರಿ ಬಳಿರುವ ಬ್ಲೂ ಡಾರ್ಟ್ ಕೊರಿಯರ್ ಮೂಲಕ ಪತ್ರ ಕಳಿಸಲಾಗಿತ್ತು. ಪೊಲೀಸರ ದಿಕ್ಕು ತಪ್ಪಿಸೋಕಂತಾನೇ ಬೇರೆ ಕಡೆಯಿಂದ ಕೊರಿಯರ್ ಮಾಡಲಾಗಿತ್ತು, ತನಿಖೆಗಿಳಿದ ಪೊಲೀಸರಿಂದ ಮೊದಲು ಗ್ಯಾರೇಜ್ ಬಾಲಕ ವಶಕ್ಕೆ ಪಡೆದಿದ್ದು, ಯಾರು ಲೆಟರ್​ ಕೊಟ್ಟಿದ್ದು ಅಂತ ವಿಚಾರಿಸಿದ್ದಾರೆ. ಆಗ ಬಾಲಕ ಬಾಸ್ ಹೇಳಿದ್ರು ಕೊರಿಯರ್ ಮಾಡಿದೆ ಎಂದಿದ್ದ. ಬಳಿಕ ಬಾಸ್ ಯಾರು ಎಂದು ಪತ್ತೆ ಮಾಡಿದ ಪೊಲೀಸರು, ನಟಿ ಗೆಳೆಯನಾದ ವೈಶಾಕನೇ ಪತ್ರ ಕಳಿಸಿರೋದು ಅನ್ನೋದನ್ನು ಖಚಿತಪಡಿಸಿಕೊಂಡು ಅರೆಸ್ಟ್​ ಮಾಡಿದ್ದಾರೆ.

ಇದೀಗ ಪತ್ರದಲ್ಲಿರುವ ಸಂಗತಿ ಬಯಲು

ಖ್ಯಾತ ನಟಿ, ತನ್ನ ಗೆಳೆಯನ ಜತೆ ಸೇರಿ ಅರವಿಂದ ರೆಡ್ಡಿಗೆ ಕಳುಹಿಸಿರುವ ಬೆದರಿಕೆ ಪತ್ರದ ಮಾತ್ರ ಇದೀಗ ಬಯಲಾಗಿದೆ. ಆ ಪತ್ರದಲ್ಲಿ ಏನಿದೆ ಅನ್ನೋದನ್ನು ನೋಡುವುದಾದರೆ, ನಿಮ್ಮ ಮೇಲಧಿಕಾರಿಗಳು ಮತ್ತು ಸಿಂಡಿಕೇಟ್ ಸದಸ್ಯರು ನಿಮ್ಮ ಮೇಲೆ ತುಂಬಾ ನಿರಾಶೆಗೊಂಡಿದ್ದಾರೆ. ವ್ಯವಹಾರವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಮತ್ತು ನಿಮ್ಮನ್ನು ಉನ್ನತ ಸ್ಥಾನಕ್ಕೇರಿಸಲು ಎಲ್ಲಾ ಸಿದ್ಧತೆಗಳು ನಡೆದಿದ್ದವು ಆದರೆ, ಇತ್ತೀಚಿನ ಬೆಳವಣಿಗೆಗಳು ಅದಕ್ಕೆ ಅಡ್ಡಿಯಾಗಿವೆ. ಕ್ಷುಲ್ಲಕ ವಿಷಯಗಳಲ್ಲಿ ನಿಮ್ಮ ಅಹಂಕಾರದ ವರ್ತನೆ ನಿಮ್ಮ ಬೆಳವಣಿಗೆಗೆ ಮಾರಕವಾಗಿದೆ. ದೊಡ್ಡ ಗುರಿಯನ್ನು ಗಮನದಲ್ಲಿಟ್ಟುಕೊಂಡು, ಇಂತಹ ಸಣ್ಣಪುಟ್ಟ ವಿಷಯಗಳನ್ನು ಬಿಟ್ಟುಬಿಡಬೇಕು ಎಂದು ಬರೆಯಲಾಗಿದೆ.

ಹಾಳು ಮಾಡಿಕೊಳ್ಳಬೇಡಿ

ನಿಮ್ಮ ಮೇಲಿನ ನಂಬಿಕೆಯಿಂದ ಕೆಲವರು ಸಿಂಡಿಕೇಟ್ ಸದಸ್ಯರನ್ನು ಒಪ್ಪಿಸಿ ನಿಮಗೆ ಈ ಒಂದು ಕೊನೆಯ ಅವಕಾಶವನ್ನು ಕೊಡಿಸಿದ್ದಾರೆ. ಈ ಅವಕಾಶವನ್ನು ಬಳಸಿಕೊಂಡು ನಿಮ್ಮ ವರ್ತನೆಯನ್ನು ತಿದ್ದಿಕೊಳ್ಳಬೇಕಿದೆ. ಓಬ್ಬ ಮಹಿಳೆಯ ವಿಷಯಕ್ಕಾಗಿ ನಿಮ್ಮ ವೃತ್ತಿಜೀವನವನ್ನು ಹಾಳು ಮಾಡಿಕೊಳ್ಳಬೇಡಿ. ಪರಸ್ಪರರ ಜೀವನದಲ್ಲಿ ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ ಎಂಬ ಒಪ್ಪಂದಕ್ಕೆ ಸಹಿ ಹಾಕಿ, ಈ ಸಮಸ್ಯೆಯನ್ನು ಆದಷ್ಟು ಬೇಗ ಮುಗಿಸಿಕೊಳ್ಳಿ. ನಿಮ್ಮಲ್ಲಿ ದೊಡ್ಡ ಮಟ್ಟದ ವ್ಯವಹಾರವನ್ನು ವಿಸ್ತರಿಸುವ ಅದ್ಭುತ ಸಾಮರ್ಥ್ಯವಿದೆ ಎಂದು ಸಿಂಡಿಕೇಟ್ ನಂಬಿತ್ತು. ಆದರೆ, ನಿಮ್ಮ ಅಹಂಕಾರದಿಂದಾಗಿ ಆ ಯೋಜನೆಗಳೆಲ್ಲ ಈಗ ಹಿಂದೆ ಬಿದ್ದಿವೆ ಎಂದು ಉಲ್ಲೇಖಿಸಲಾಗಿದೆ.

ಜಗಳಕ್ಕೆ ಇಳಿಯಬೇಡಿ

ಆ ವ್ಯಕ್ತಿ ( ವೈಶಾಕ್​ ) ಕೇವಲ ಒಂದು ವರ್ಕ್‌ಶಾಪ್ ನಡೆಸುತ್ತಿದ್ದಾನೆ ಎಂದು ತಿಳಿಯಬೇಡಿ. ಅವರ ಕುಟುಂಬದ ನಿಜವಾದ ವ್ಯವಹಾರ ಮತ್ತು ಶಕ್ತಿ ನಿಮಗೆ ಊಹಿಸಲೂ ಅಸಾಧ್ಯವಾದುದು. ಅವರು ಮತ್ತು ಅವರ ಕುಟುಂಬದವರು ಯಾಕೆ ಸೋಶಿಯಲ್ ಮೀಡಿಯಾದಲ್ಲಿ ಇಲ್ಲ ಮತ್ತು ಯಾಕೆ ಸದಾ ಲೋ ಪ್ರೊಫೈಲ್ ಕಾಯ್ದುಕೊಳ್ಳುತ್ತಾರೆ ಎನ್ನುವುದಕ್ಕೆ ದೊಡ್ಡ ಕಾರಣವಿದೆ. ಅವರು ಕೇವಲ ಸಾಮಾನ್ಯರಲ್ಲ, ಇಡೀ ಏಷ್ಯಾದಲ್ಲೇ ಅತಿದೊಡ್ಡ ಶಸ್ತ್ರಾಸ್ತ್ರ ಗುತ್ತಿಗೆದಾರರಲ್ಲಿ ಒಬ್ಬರು. ಅವರ ವ್ಯಾಪ್ತಿ ಮತ್ತು ಪ್ರಭಾವ ನಿಮ್ಮ ಕಲ್ಪನೆಗೂ ಮೀರಿದ್ದು. ಅವರು ಸುಮ್ಮನಿದ್ದಾರೆ ಎಂದರೆ ಅದರ ಅರ್ಥ ಅವರಿಗೆ ಶಕ್ತಿಯಿಲ್ಲ ಎಂದಲ್ಲ. ಅವರ ತಾಳ್ಮೆಯನ್ನು ಪರೀಕ್ಷಿಸಬೇಡಿ. ನಿಮ್ಮ ಈ "ಕ್ಷುಲ್ಲಕ ನಡವಳಿಕೆಗಳನ್ನು" ನಿಲ್ಲಿಸಲು ಅವರು ನಿರ್ಧರಿಸಿದರೆ, ಅದರ ಪರಿಣಾಮ ನಿಮಗೆ ತೀವ್ರವಾಗಿ ತಟ್ಟಲಿದೆ. ನಿಮ್ಮ ತಿಳುವಳಿಕೆಗೆ ನಿಲುಕದ ವಿಷಯಗಳಲ್ಲಿ ಕೈ ಹಾಕಬೇಡಿ ಮತ್ತು ಅವರೊಂದಿಗೆ ಜಗಳಕ್ಕೆ ಇಳಿಯಬೇಡಿ ಎಂದು ಎಚ್ಚರಿಸಲಾಗಿದೆ.

7 ಕೋಟಿ ರೂಪಾಯಿ ನಗದು ಕಳುಹಿಸಿ

ನೀವು ಆ ವ್ಯಕ್ತಿಯಲ್ಲಿ ಕ್ಷಮೆ ಕೇಳುವುದಷ್ಟೇ ಅಲ್ಲದೆ, ಪ್ರಾಯಶ್ಚಿತ್ತವಾಗಿ ಅಥವಾ ಪ್ರಕರಣವನ್ನು ತಣ್ಣಗಾಗಿಸಲು ಕನಿಷ್ಠ 6 ರಿಂದ 7 ಕೋಟಿ ರೂಪಾಯಿ ನಗದು ಹಣವನ್ನು ಕಳುಹಿಸಬೇಕು. ಹಣವನ್ನು ನಿಮ್ಮ ಚಾಲಕನ ಮೂಲಕ ಬೆಳಗ್ಗೆ 7.30 ರಿಂದ 8 ಗಂಟೆಯೊಳಗೆ ಆ ವ್ಯಕ್ತಿಯ ವರ್ಕ್‌ಶಾಪ್‌ಗೆ ತಲುಪಿಸಬೇಕು. ನಿಮ್ಮ ತಿಳುವಳಿಕೆಗೆ ಮೀರಿದ ವಿಷಯಗಳಲ್ಲಿ ತಲೆಹಾಕಬೇಡಿ. ಹಣವನ್ನು ಕಳುಹಿಸದಿದ್ದರೆ ಅಥವಾ ಈ ವಿಚಾರವನ್ನು ಇಲ್ಲಿಗೆ ಮುಗಿಸದಿದ್ದರೆ ಮುಂದೆ ಎದುರಾಗಬಹುದಾದ ಪರಿಣಾಮಗಳು ಭೀಕರವಾಗಿರುತ್ತವೆ ಎಂದು ಎಚ್ಚರಿಸಲಾಗಿದೆ.

ಈಗ ನಿರ್ಧಾರ ನಿಮ್ಮದು

ಈ 6 ರಿಂದ 7 ಕೋಟಿ ರೂಪಾಯಿ ನೀಡುವುದನ್ನು ಅಥವಾ ಕ್ಷಮೆ ಕೇಳುವುದನ್ನು ಸೋಲು ಎಂದು ಭಾವಿಸಬೇಡಿ. ನಿಮ್ಮ ಅಹಂಕಾರವನ್ನು ಬಿಟ್ಟುಕೊಟ್ಟರೆ, ಭವಿಷ್ಯದಲ್ಲಿ ನಿಮ್ಮ ವ್ಯವಹಾರ ಮತ್ತು ಸಂಪಾದನೆ ಊಹಿಸಲೂ ಸಾಧ್ಯವಾಗದಷ್ಟು ಹೆಚ್ಚಾಗುತ್ತದೆ. ನೀವು ಕೇವಲ ರಾಜ್ಯ ರಾಜಕಾರಣಿಗಳ ಮಟ್ಟದಲ್ಲೇ ಉಳಿಯಬೇಡಿ. ಸಿಂಡಿಕೇಟ್ ಮತ್ತು ಆ ವ್ಯಕ್ತಿಯ ಜೊತೆ ಒಳ್ಳೆಯ ಸಂಬಂಧ ಇಟ್ಟುಕೊಂಡರೆ, ನಿಮ್ಮ ವ್ಯವಹಾರ ಲಂಕಾವನ್ನು ದಾಟಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆಯುತ್ತದೆ. ಈ ಪ್ರಕ್ರಿಯೆಯನ್ನು ನಂಬಿ, ನಾನು ಹೇಳಿದಂತೆ ಮಾಡಿ, ಕೇವಲ 2 ತಿಂಗಳಲ್ಲೇ ನಿಮ್ಮ ಜೀವನದಲ್ಲಿ ದೊಡ್ಡ ಬದಲಾವಣೆ ಕಾಣುತ್ತೀರಿ. ಒಂದು ವೇಳೆ ಈ ಸಲಹೆಯನ್ನು ಕೇಳದಿದ್ದರೆ, ನೀವು ಸಣ್ಣ ಮಟ್ಟದ ವ್ಯವಹಾರದಲ್ಲೇ ಉಳಿಯುತ್ತೀರಿ ಅಥವಾ ಸಂಪೂರ್ಣವಾಗಿ ನಾಶವಾಗುತ್ತೀರಿ. ಇದು ನಿಮಗೆ ಬರುತ್ತಿರುವ ಕೊನೆಯ ಪತ್ರ. ಇದನ್ನು ಓದಿದ ಕೂಡಲೇ ನಾಶಪಡಿಸಿ. ಮುಂದಿನ ಬೆಳವಣಿಗೆಗಳು ನಿಮ್ಮ ಪರವಾಗಿ ಇರಬೇಕೋ ಅಥವಾ ನಿಮ್ಮ ವಿರುದ್ಧವಾಗಬೇಕೋ ಎಂಬುದು ಕೇವಲ ನಿಮ್ಮ ನಿರ್ಧಾರದ ಮೇಲೆ ಅವಲಂಬಿತವಾಗಿದೆ ಎಂದು ಬೆದರಿಕೆ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net