ತಬಾಹಿ ಹಾಡಿನಲ್ಲಿ ನಾನು ಕಿಸ್​ ಕೂಡ ಮಾಡಿಲ್ಲ, ಅದು ಅಶ್ಲೀಲವಲ್ಲ: ಟ್ರೋಲಿಗರಿಗೆ ಯಶ್​ ತಿರುಗೇಟು! Yash

ತಬಾಹಿ ಹಾಡಿನಲ್ಲಿ ನಾನು ಕಿಸ್​ ಕೂಡ ಮಾಡಿಲ್ಲ, ಅದು ಅಶ್ಲೀಲವಲ್ಲ: ಟ್ರೋಲಿಗರಿಗೆ ಯಶ್​ ತಿರುಗೇಟು! Yash
ತಬಾಹಿ ಹಾಡಿನಲ್ಲಿ ನಾನು ಕಿಸ್​ ಕೂಡ ಮಾಡಿಲ್ಲ, ಅದು ಅಶ್ಲೀಲವಲ್ಲ: ಟ್ರೋಲಿಗರಿಗೆ ಯಶ್​ ತಿರುಗೇಟು! Yash
Published on

ಪ್ರಮುಖ ಮುಖ್ಯಾಂಶಗಳು

  • ಟಾಕ್ಸಿಕ್ ಸಿನಿಮಾದ ಇಂಟಿಮೇಟ್​ ದೃಶ್ಯಗಳ ಟೀಕೆಗಳಿಗೆ ನಟ ಯಶ್ ಖಡಕ್ ಉತ್ತರ
  • ಹಿರಿಯ ತಲೆಮಾರಿನವರು ಕಿರಿಯರ ದೃಷ್ಟಿಕೋನವನ್ನು ತಪ್ಪಾಗಿ ಗ್ರಹಿಸುತ್ತಾರೆ ಎಂದ ರಾಕಿಂಗ್ ಸ್ಟಾರ್
  • ಸಿನಿಮಾದಲ್ಲಿ ಯಾವುದೇ ತಪ್ಪು ಮಾಡಿಲ್ಲ ಮಿತಿಗಳ ಬಗ್ಗೆ ನಮಗೆ ಅರಿವಿದೆ ಎಂದ ನಟ
  • ಇಂದಿನ ಯುವಜನತೆ ಹಾಗೂ ಹೊಸ ಪೀಳಿಗೆಯ ಸಮಸ್ಯೆಗಳ ಕಥೆ ಟಾಕ್ಸಿಕ್ ಸಿನಿಮಾ
ಮುಂಬೈ/ಬೆಂಗಳೂರು: ಕನ್ನಡಿಗ ರಾಕಿಂಗ್ ಸ್ಟಾರ್ ಯಶ್ ( Yash ) ಸದ್ಯ ಸಾಲು ಸಾಲು ಬಿಗ್​ ಬಜೆಟ್ ಸಿನಿಮಾಗಳ ಮೂಲಕ ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದ್ದಾರೆ. 'ರಾಮಾಯಣ' ಚಿತ್ರದಲ್ಲಿ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಅವರ ಫಸ್ಟ್ ಲುಕ್ ಪ್ರೇಕ್ಷಕರಿಂದ ಮೆಚ್ಚುಗೆಯನ್ನು ಗಳಿಸಿದೆ. ಇದರ ನಡುವೆ, ಅವರು ನಟಿಸಿರುವ ಬಹುನಿರೀಕ್ಷಿತ 'ಟಾಕ್ಸಿಕ್' ಸಿನಿಮಾದಲ್ಲಿನ ಹಿಂಸಾತ್ಮಕ ಹಾಗೂ ಬೋಲ್ಡ್ ದೃಶ್ಯಗಳ ಕುರಿತು ಹರಿದಾಡುತ್ತಿರುವ ಟೀಕೆಗಳು ಮತ್ತು ವಿವಾದಗಳಿಗೆ ನಟ ಯಶ್ ನೇರ ಹಾಗೂ ಸ್ಪಷ್ಟವಾದ ಉತ್ತರವನ್ನು ನೀಡಿದ್ದಾರೆ.
ಇತ್ತೀಚೆಗೆ ಜನಪ್ರಿಯ ಟಿವಿ ಶೋ 'ಆಪ್ ಕಿ ಅದಾಲತ್' ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಯಶ್ ಅವರಿಗೆ, ಚಿತ್ರದಲ್ಲಿರುವ ಬೋಲ್ಡ್ ದೃಶ್ಯಗಳು, ರಕ್ತಪಾತ ಮತ್ತು ಅತಿಥಿ ಪಾತ್ರಗಳ ಬಗ್ಗೆ ಕಠಿಣ ಪ್ರಶ್ನೆಗಳನ್ನು ಎದುರಿಸಬೇಕಾಯಿತು. ವಿಶೇಷವಾಗಿ ಈ ಸಿನಿಮಾದ ದೃಶ್ಯಗಳು ಅತಿರೇಕವಾಗಿವೆ ಮತ್ತು ವಲ್ಗರ್ ಆಗಿವೆ ಎಂಬ ಟೀಕೆಗಳ ಬಗ್ಗೆಯೂ ನಿರೂಪಕರು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಯಶ್, ಹಿರಿಯ ತಲೆಮಾರಿನವರು ಕಿರಿಯ ತಲೆಮಾರಿನವರ ದೃಷ್ಟಿಕೋನವನ್ನು ಹಲವು ಬಾರಿ ತಪ್ಪಾಗಿ ಗ್ರಹಿಸುತ್ತಾರೆ ಎಂದಿದ್ದಾರೆ.
ಟೀಕೆಗಳ ಬಗ್ಗೆ ಮಾತನಾಡಿದ ಯಶ್, ಅಶ್ಲೀಲತೆ ತಪ್ಪು ಎಂಬುದನ್ನು ನಾವು ಒಪ್ಪಿಕೊಳ್ಳುತ್ತೇವೆ, ಆದರೆ ನೀವು ಸೂಕ್ಷ್ಮವಾಗಿ ಗಮನಿಸಿದರೆ ಅಲ್ಲಿ ನಾನು ಯಾವುದೇ ತಪ್ಪು ಮಾಡಿಲ್ಲ ಎಂಬುದು ಗೊತ್ತಾಗುತ್ತದೆ. ಪ್ರತಿಯೊಂದಕ್ಕೂ ಒಂದು ಮಿತಿಯಿದೆ, ನಮಗೂ ಅದರ ಅರಿವಿದೆ. ಯಾವುದೇ ದೃಶ್ಯಗಳನ್ನು ತೆರೆಯ ಮೇಲೆ ಸುಂದರವಾಗಿ ಚಿತ್ರೀಕರಿಸಬೇಕಾಗುತ್ತದೆ. ಯಾವುದು ಪ್ರೇಕ್ಷಕರನ್ನು ಆಕರ್ಷಿಸುತ್ತದೆಯೋ ಆ ದೃಶ್ಯಗಳು ಸಿನಿಮಾದಲ್ಲಿ ಪರಿಣಾಮಕಾರಿಯಾಗಿ ಮೂಡಿಬರುತ್ತವೆ. ಇದು ಸೃಷ್ಟಿಕರ್ತರ ಧ್ವನಿಯಾಗಿದೆ ಎಂದು ಯಶ್​ ಸಮರ್ಥಿಸಿಕೊಂಡಿದ್ದಾರೆ.
ಮುಂದುವರಿದು ಮಾತನಾಡಿರುವ ಅವರು, "ಈ ಚಿತ್ರವನ್ನು ನಿರ್ದಿಷ್ಟ ಉದ್ದೇಶಕ್ಕಾಗಿ ನಿರ್ಮಿಸಲಾಗಿದೆ. ಸಿನಿಮಾ ನೋಡಿದ ಬಳಿಕ ಪ್ರೇಕ್ಷಕರಿಗೆ ಅದರ ಹಿಂದಿನ ಅಸಲಿ ಕಾರಣ ಅರ್ಥವಾಗುತ್ತದೆ. 'ಟಾಕ್ಸಿಕ್' ಇದು ಇಂದಿನ ಯುವಜನತೆಗಾಗಿ (Gen Z) ನಿರ್ಮಿಸಲಾದ ಚಿತ್ರ. ಇಂದಿನ ಮಕ್ಕಳು ಎದುರಿಸುತ್ತಿರುವ ಸಂವಹನ ಸಮಸ್ಯೆಗಳು ಮತ್ತು ಹಿರಿಯರಿಂದ ಅವರು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಈ ಸಿನಿಮಾ ಮಾತನಾಡುತ್ತದೆ. ಪ್ರಶ್ನೆ ಮಾಡುವ ಇಂದಿನ ಪೀಳಿಗೆಯ ಕಥೆ ಇದು, ಇದರಲ್ಲಿ ತಪ್ಪೇನಿದೆ? ಎಂದು ಪ್ರಶ್ನಿಸಿದ್ದಾರೆ.
ಈ ಬಹುನಿರೀಕ್ಷಿತ ಸಿನಿಮಾದ ತಾರಾಗಣದ ಬಗ್ಗೆ ಹೇಳುವುದಾದರೆ, 'ಟಾಕ್ಸಿಕ್' ಚಿತ್ರದಲ್ಲಿ ಕಿಯಾರಾ ಅಡ್ವಾಣಿ 'ನಾದಿಯಾ' ಎಂಬ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇವರೊಂದಿಗೆ ನಯನತಾರಾ, ಹುಮಾ ಖುರೇಷಿ, ತಾರಾ ಸುತಾರಿಯಾ ಮತ್ತು ರುಕ್ಮಿಣಿ ವಸಂತ್ ಸೇರಿದಂತೆ ಪ್ರಮುಖ ನಟಿಯರ ದೊಡ್ಡದಾದ 'ಗರ್ಲ್ ಗ್ಯಾಂಗ್' ಈ ಸಿನಿಮಾದಲ್ಲಿದೆ. ಭಾರಿ ನಿರೀಕ್ಷೆಯನ್ನು ಹುಟ್ಟುಹಾಕಿರುವ ಈ ಸಿನಿಮಾವು ಆಗಸ್ಟ್ 26ರಂದು ವಿಶ್ವಾದ್ಯಂತ ಬಿಡುಗಡೆಯಾಗಲು ಸಜ್ಜಾಗಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net