ಮತ್ತಲ್ಲಿದ್ರೂ, ಸಸ್ಪೆನ್ಸನಲ್ಲಿದ್ರೂ ಡ್ಯೂಟಿಯಲ್ಲೇ ಇರ್ತಾರೆ... ಮಾರ್ಕ್​ ಟ್ರೈಲರ್​ ರಿಲೀಸ್​, ಮಾಸ್​ ಪ್ರಿಯರಿಗೆ ರಸದೌತಣ! Kichcha Sudeepa

ಕಿಚ್ಚ ಸುದೀಪ್​ ಅಭಿನಯದ ಮಾರ್ಕ್​ ಸಿನಿಮಾದ ಟ್ರೈಲರ್​ ಬಿಡುಗಡೆ
ಕಿಚ್ಚ ಸುದೀಪ್​ ಅಭಿನಯದ ಮಾರ್ಕ್​ ಸಿನಿಮಾದ ಟ್ರೈಲರ್​ ಬಿಡುಗಡೆ
Published on

ಪ್ರಮುಖ ಮುಖ್ಯಾಂಶಗಳು

  • ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​ ಅಭಿನಯದ ಮಾರ್ಕ್​ ಸಿನಿಮಾದ ಟ್ರೈಲರ್​ ಬಿಡುಗಡೆ
  • ಟ್ರೈಲರ್​ ತುಂಬ ಜಬರ್ದಸ್ತ್​ ಆ್ಯಕ್ಷನ್,​ ಮಾಸ್​ ಪ್ರಿಯರಿಗೆ ಮನರಂಜನೆಯ ರಸದೌತಣ
  • ಅಭಿಮಾನಿಗಳಿಗೆ ಕ್ರಿಸ್​ಮಸ್​ ರಜೆಯ ಖುಷಿಯನ್ನು ಡಬಲ್​ ಮಾಡಲಿದೆ ಮಾರ್ಕ್​
Kichcha Sudeepa : ಸೂಪರ್​ ಹಿಟ್​ 'ಮ್ಯಾಕ್ಸ್​' ಸಿನಿಮಾದ ಬಳಿಕ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​ ಹಾಗೂ ನಿರ್ದೇಶಕ ವಿಜಯ್​ ಕಾರ್ತಿಕೇಯ ಜುಗಲ್​ಬಂಧಿಯಲ್ಲಿ ಮೂಡಿಬಂದಿರುವ ಬಹುನಿರೀಕ್ಷಿತ 'ಮಾರ್ಕ್​' ಸಿನಿಮಾದ ಟ್ರೈಲರ್​ ಇಂದು ಬಿಡುಗಡೆಯಾಗಿದೆ. ಟ್ರೈಲರ್​ ತುಂಬ ಜಬರ್ದಸ್ತ್​ ಆ್ಯಕ್ಷನ್​ ದೃಶ್ಯಗಳೇ ತುಂಬಿದ್ದು, ಮಾಸ್​ ಪ್ರಿಯರಿಗೆ ಮನರಂಜನೆಯ ರಸದೌತಣ ಸಿಗುವ ಮುನ್ಸೂಚನೆ ಸಿಕ್ಕಿದೆ. 
ಹಲವಾರು ಮಕ್ಕಳು ಕಾಣೆಯಾಗುವ​ ನಿಗೂಢ ದೃಶ್ಯದಿಂದಲೇ ಆರಂಭವಾಗುವ ಟ್ರೈಲರ್​ನಲ್ಲಿ ಸಖತ್​ ಸಸ್ಪೆನ್ಸ್​, ಪೊಲೀಸ್​ ಇನ್ವೆಸ್ಟಿಗೇಷನ್ ಹಾಗೂ ರಾಜಕಾರಣಿ ಮತ್ತು ಪೊಲೀಸರ ನಡುವಿನ ಗುದ್ದಾಟ ಗಮನ ಸೆಳೆಯುತ್ತದೆ. ಟ್ರೈಲರ್​ ನೋಡಿದರೆ ಮ್ಯಾಕ್ಸ್​ ಸಿನಿಮಾದ ಹೋಲಿಕೆ ಕಂಡುಬಂದರೂ ಮ್ಯಾಕ್ಸ್​ ಚಿತ್ರದ ಸನ್ನಿವೇಶ ಮತ್ತು ಈ ಸಿನಿಮಾದ ಸನ್ನಿವೇಶ ಕಂಪ್ಲೀಟ್​ ಚೇಂಜ್​ ಇದೆ. 
ಟ್ರೈಲರ್​ ಗಮನಿಸಿದರೆ ಮಾರ್ಕ್​ ಸಿನಿಮಾದಲ್ಲೂ ಸುದೀಪ್​ ಅವರು ಅಮಾನತ್ತಿನಲ್ಲಿರುವ ಪೊಲೀಸ್​ ಅಧಿಕಾರಿಯಾಗಿ ನಟಿಸಿರುವ ಸುಳಿವು ಸಿಕ್ಕಿದೆ. ಮಕ್ಕಳು ಕಾಣೆಯಾಗುವುದಕ್ಕೂ ಖಳನಾಯಕ ಸಿಎಂ ಆಗುವುದಕ್ಕೂ ಏನು ಲಿಂಕ್ ಎಂಬ ಪ್ರಶ್ನೆ ಮೂಡುತ್ತದೆ. ಅಲ್ಲದೆ, ಮಕ್ಕಳು ನಾಪ​ತ್ತೆ ಪ್ರಕರಣದ ತನಿಖೆ ನಡೆಸುವಾಗ ಎದುರಾಗುವ ಅಡೆತಟ್ಟಿಗಳನ್ನು ಮೆಟ್ಟಿ ನಿಂತು ದುಷ್ಟರನ್ನು ಸಂಹಾರ ಮಾಡುವ ಅಜಯ್​ ಮಾರ್ಕಡೇಯನಾಗಿ ಸುದೀಪ್​ ನಟಿಸಿದ್ದಾರೆ ಅನ್ನೋದು ಟ್ರೈಲರ್​ ನೋಡಿದರೆ ಗೊತ್ತಾಗುತ್ತಿದೆ. 
ಮ್ಯಾಕ್ಸ್​ ಸಿನಿಮಾದಲ್ಲಿ ಇದ್ದಂತೆ ಇಲ್ಲಿಯೂ ಸುದೀಪ್​ ಅವರ ಜೊತೆ ಒಂದು ತಂಡವಿದೆ. ಮ್ಯಾಕ್ಸ್​ ಸಿನಿಮಾವು ಒಂದೇ ಒಂದು ಪೊಲೀಸ್​ ಠಾಣೆಯಲ್ಲಿ ಒಂದೇ ರಾತ್ರಿಯಲ್ಲಿ ನಡೆಯುವ ಕತೆಯಾಗಿದ್ದು, ಮಾರ್ಕ್​ ಸಿನಿಮಾ ಕೊಂಚ ವಿಭಿನ್ನವಾಗಿದೆ ಎಂಬುದು ಟ್ರೈಲರ್​ ಮುನ್ಸೂಚನೆ ನೀಡಿದೆ. ಮ್ಯಾಕ್ಸ್​ಗಿಂತಲೂ ಭರ್ಜರಿ ಆ್ಯಕ್ಷನ್​ ಸೀನ್​ಗಳಿರುವ ಸುಳಿವು ಕೂಡ ಇದೆ. ಐಟಂ ಸಾಂಗ್​, ಸುದೀಪ್​ ಅವರ ಖಡಕ್​ ಡೈಲಾಗ್​ ಮತ್ತು ಆ್ಯಕ್ಷನ್​ ಜತೆಗೆ ಸುದೀಪ್​ ಡಾನ್ಸ್​ ಅಭಿಮಾನಿಗಳಿಗೆ ಕ್ರಿಸ್​ಮಸ್​ ರಜೆಯ ಖುಷಿಯನ್ನು ಡಬಲ್​ ಮಾಡಲಿದೆ.
ಇನ್ನು ಮಾರ್ಕ್​ ಸಿನಿಮಾದಲ್ಲಿ ಬಹುತಾರಾಗಣವೇ ಇದೆ. ನಟ ಕಿಚ್ಚ ಸುದೀಪ್​ ಜತೆ ಕಾಲಿವುಡ್ ನಟ ವಿಕ್ರಾಂತ್​, ಮಲಯಾಳಂ ಸ್ಟಾರ್​ ನಟ ಶೈನ್ ಟಾಮ್ ಚಾಕೊ ಹಾಗೂ ಖ್ಯಾತ ಹಾಸ್ಯ ನಟ ಯೋಗಿ ಬಾಬು ಸೇರಿದಂತೆ ಅನೇಕ ಕಲಾವಿದರ ಸಮಾಗಮವೇ ಇದೆ. ಮಾರ್ಕ್ ಸಿನಿಮಾಗೆ ಶೇಖರ್ ಚಂದ್ರ ಅವರು ಛಾಯಾಗ್ರಹಣ ಮಾಡಿದ್ದು, ಅಜನೀಶ್ ಬಿ. ಲೋಕನಾಥ್ ಅವರು ಸಂಗೀತ ನೀಡಿದ್ದಾರೆ. ‘ಸತ್ಯಜ್ಯೋತಿ ಫಿಲ್ಮ್ಸ್’ ಹಾಗೂ ‘ಕಿಚ್ಚ ಕ್ರಿಯೇಷನ್ಸ್’ ಬ್ಯಾನರ್​ಗಳು ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸಿದ್ದು, ಡಿಸೆಂಬರ್​ 25ರ ಕ್ರಿಸ್​ಮಸ್​ಗೆ ಬಿಡುಗಡೆಯಾಗಲಿದೆ.
ಮಾರ್ಕ್​ ಸಿನಿಮಾದ ಟ್ರೈಲರ್​ ನೋಡಿ ನಿಮಗೆ ಏನು ಅನಿಸಿತು ಎಂಬುದನ್ನು ಕಾಮೆಂಟ್​ ಮೂಲಕ ನಮಗೆ ತಿಳಿಸಿ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net