ನನ್ನ ಕೊಂದ್ರೂ ಸಿನಿಮಾ ರಿಲೀಸ್ ಮಾಡ್ತೀವಿ..ಸಲ್ಮಾನ್ ಖಾನ್ ಪರವಾಗಿ ಪಾಕ್ ಉಗ್ರನಿಂದ ಬೆದರಿಕೆ? ಕಾಲಾ ಹಿರನ್ ನಿರ್ಮಾಪಕ ಅಮಿತ್ ಜಾನಿ ಆರೋಪ! Amit Jani Threaten By Pakistani terrorist

ನಿರ್ಮಾಪಕ ಅಮಿತ್ ಜಾನಿಗೆ ಪಾಕ್ ಉಗ್ರ ಶಹಜಾದ್ ಭಟ್ಟಿಯಿಂದ ಜೀವ ಬೆದರಿಕೆ
ನಿರ್ಮಾಪಕ ಅಮಿತ್ ಜಾನಿಗೆ ಪಾಕ್ ಉಗ್ರ ಶಹಜಾದ್ ಭಟ್ಟಿಯಿಂದ ಜೀವ ಬೆದರಿಕೆ
Published on

ಪ್ರಮುಖ ಮುಖ್ಯಾಂಶಗಳು

  • ಸಲ್ಮಾನ್ ಖಾನ್ ಕೃಷ್ಣಮೃಗ ಬೇಟೆ ಆಧಾರಿತ 'ಕಾಲಾ ಹಿರನ್' ಸಿನಿಮಾ ವಿವಾದ
  • ನಿರ್ಮಾಪಕ ಅಮಿತ್ ಜಾನಿಗೆ ಪಾಕ್ ಉಗ್ರ ಶಹಜಾದ್ ಭಟ್ಟಿಯಿಂದ ಜೀವ ಬೆದರಿಕೆ
  • ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ ನಟ ಸಲ್ಮಾನ್ ಖಾನ್
ಮುಂಬೈ: ಬಾಲಿವುಡ್​ ನಟ ಸಲ್ಮಾನ್​ ಖಾನ್​ 1998ರಲ್ಲಿ ನಡೆಸಿದ್ದಾರೆ ಎಂದು ಹೇಳಲಾಗುವ ಕೃಷ್ಣಮೃಗ ಬೇಟೆ ಪ್ರಕರಣವನ್ನು ಕಥಾವಸ್ತುವಾಗಿಟ್ಟುಕೊಂಡು ನಿರ್ಮಾಪಕ ಅಮಿತ್ ಜಾನಿ ಕಾಲಾ ಹಿರನ್ ಎಂಬ ಸಿನಿಮಾ ನಿರ್ಮಿಸಲು ಮುಂದಾಗಿದ್ದರು. ಆದರೆ ಈ ಸಿನಿಮಾವನ್ನು ಬಿಡುಗಡೆ ಮಾಡದಂತೆ ತಮಗೆ ಪಾಕಿಸ್ತಾನದ ಭಯೋತ್ಪಾದಕರಿಂದ ಜೀವ ಬೆದರಿಕೆ (Amit Jani Threaten By Pakistani terrorist) ಬರುತ್ತಿದೆ ಎಂದು ಅಮಿತ್ ಜಾನಿ ಆರೋಪಿಸಿದ್ದಾರೆ.
ಪಾಕ್ ಉಗ್ರ ಶಹಜಾದ್ ಭಟ್ಟಿ ತಮಗೆ ಕರೆ ಮಾಡಿ, ಸಲ್ಮಾನ್ ಖಾನ್ ಪರವಾಗಿ ಡ್ರೋನ್ ಮತ್ತು ಗ್ರೆನೇಡ್ ದಾಳಿ ನಡೆಸಿ ಕೊಲ್ಲುವುದಾಗಿ ಹೆದರಿಸುತ್ತಿದ್ದಾನೆ ಎಂದು ಅಮಿತ್ ಜಾನಿ ಹೇಳಿದ್ದಾರೆ. ಈಗಾಗಲೇ ಈ ವಿಷಯವನ್ನು ಕೇಂದ್ರ ಗೃಹ ಸಚಿವಾಲಯ, ರಾಜಸ್ಥಾನ ಪೊಲೀಸ್ ಮತ್ತು ಸಿಆರ್‌ಪಿಎಫ್ ಅಧಿಕಾರಿಗಳ ಗಮನಕ್ಕೆ ತಂದಿರುವುದಾಗಿ ಅವರು ಹೇಳಿದ್ದಾರೆ. ಅಂಡರ್‌ವರ್ಲ್ಡ್ ಡಾನ್ ದಾವೂದ್ ಇಬ್ರಾಹಿಂನ ಡಿ-ಕಂಪನಿ ಹೆಸರಿನಲ್ಲಿ ತಮಗೆ ಈ ಹಿಂದೆ ಬೆದರಿಕೆ ಬಂದಿತ್ತು ಈಗ ಪಾಕಿಸ್ತಾನದಿಂದ ಬೆದರಿಕೆ ಬಂದಿದೆ ಎಂದು ಜಾನಿ ತಿಳಿಸಿದ್ದಾರೆ.

ನನ್ನನ್ನು ಕೊಂದರೂ ಸಿನಿಮಾ ರಿಲೀಸ್ ಆಗುತ್ತೆ!

ಈ ಬಗ್ಗೆ ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ನಿರ್ಮಾಪಕ ಅಮಿತ್ ಜಾನಿ, ನಾನು ಇಂತಹ ಬೆದರಿಕೆಗಳಿಗೆ ಹೆದರುವವನಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ. ಪಾಕಿಸ್ತಾನದ ಭಯೋತ್ಪಾದಕ ಶಹಜಾದ್ ಭಟ್ಟಿಯಿಂದ ನನಗೆ ತಡರಾತ್ರಿ ಕರೆಗಳು ಮತ್ತು ಮೆಸೇಜ್‌ಗಳು ಬರುತ್ತಿವೆ. ಸಲ್ಮಾನ್ ಖಾನ್ ಪರವಾಗಿ ನನ್ನನ್ನು ಕೊಲ್ಲುವುದಾಗಿ ಆತ ಹೇಳುತ್ತಿದ್ದಾನೆ.
ಒಂದು ವೇಳೆ ನನ್ನನ್ನು ಕೊಂದರೂ ಕೂಡ ನನ್ನ ಟೀಮ್ ಕಾಲಾ ಹಿರನ್ ಸಿನಿಮಾವನ್ನು ರಿಲೀಸ್ ಮಾಡೇ ಮಾಡುತ್ತದೆ. ಬಿಷ್ಣೋಯ್ ಸಮುದಾಯದ ಹೋರಾಟ ಮತ್ತು ಅವರ ತ್ಯಾಗದ ಕಥೆಯನ್ನು ಜಗತ್ತು ನೋಡಲೇಬೇಕು ಎಂದು ನಿರ್ಮಾಪಕ ಸವಾಲು ಹಾಕಿದ್ದಾರೆ.
ಸಲ್ಮಾನ್ ಖಾನ್ ಎರಡು ಕಡೆಗಳಿಂದ ಹೋರಾಟ ಮುಂದುವರೆಸಿದ್ದಾರೆ. ಒಂದು ಕಡೆ ಕೋರ್ಟ್‌ನಲ್ಲಿ ಬ್ಲ್ಯಾಕ್‌ಬಕ್ ಕೇಸ್ ವಿಚಾರಣೆ ನಡೆಯುತ್ತಿದೆ ಹೀಗಾಗಿ ಸಿನಿಮಾ ಬಿಡುಗಡೆ ಆಗ ಬಾರದು ಎನ್ನುತ್ತಾರೆ. ಇನ್ನೊಂದೆಡೆ ತಮ್ಮ ಪ್ರಭಾವ ಮತ್ತು ಡಿ-ಕಂಪನಿ ಮೂಲಕ ಬೆದರಿಕೆ ಹಾಕಿಸುತ್ತಿದ್ದಾರೆ. ಈಗ ನನ್ನನ್ನು ಹೆದರಿಸಲು ಪಾಕ್ ಉಗ್ರನನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಅಮಿತ್​ ಜಾನಿ ಆರೋಪಿಸಿದ್ದಾರೆ.

ಕೋರ್ಟ್ ಮೆಟ್ಟಿಲೇರಿದ ಸಲ್ಮಾನ್!

ಇತ್ತ ತಮ್ಮ ಇಮೇಜ್‌ಗೆ ಧಕ್ಕೆ ತರುತ್ತಿದ್ದಾರೆ ಎಂದು ನಟ ಸಲ್ಮಾನ್ ಖಾನ್ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಸಲ್ಮಾನ್ ಖಾನ್ ಸಲ್ಲಿಸಿದ ಅರ್ಜಿಯನ್ನು ಆಲಿಸಿದ ಕೋರ್ಟ್, ನಿರ್ಮಾಪಕ ಅಮಿತ್ ಜಾನಿಗೆ ನೋಟಿಸ್ ಜಾರಿ ಮಾಡಿದ್ದು, ಮುಂದಿನ ವಿಚಾರಣೆಯನ್ನು ಜೂನ್ 19ಕ್ಕೆ ನಿಗದಿಪಡಿಸಿದೆ.
ಸಲ್ಮಾನ್ ಖಾನ್ ಪರ ವಾದ ಮಂಡಿಸಿದ ವಕೀಲ ನಿಜಾಮ್ ಪಾಷಾ, ಈ ಸಿನಿಮಾದ ಪೋಸ್ಟರ್‌ನಲ್ಲಿ ಸಲ್ಮಾನ್ ಖಾನ್ ಅವರನ್ನೇ ಹೋಲುವ ಪಾತ್ರವನ್ನು ಬಳಸಲಾಗಿದೆ. ಅವರ ಕೇಶವಿನ್ಯಾಸ, ಸ್ಟೈಲಿಂಗ್ ಹಾಗೂ ಅವರು ಕೈಗೆ ಹಾಕುವ ವಿಶಿಷ್ಟ ಬ್ರಾಸ್ಲೈಟ್​ನ್ನು ಟೀಸರ್‌ನಲ್ಲಿ ತೋರಿಸಲಾಗಿದೆ. ಸಿನಿಮಾದಲ್ಲಿ ಈ ಪಾತ್ರಕ್ಕೆ ಆಯಾನ್ ಖಾನ್ ಎಂದು ಹೆಸರಿಡಲಾಗಿದೆ.
ಕೃಷ್ಣಮೃಗ ಕೇಸ್‌ಗೆ ಸಂಬಂಧಿಸಿದ 4 ಎಫ್‌ಐಆರ್‌ಗಳಲ್ಲಿ ಈಗಾಗಲೇ 3ರಲ್ಲಿ ಸಲ್ಮಾನ್ ಖುಲಾಸೆಯಾಗಿದ್ದಾರೆ. ಆದರೂ ಅವರ ಹೆಸರನ್ನು ಬಳಸಿ ಸಿನಿಮಾ ಮಾಡುತ್ತಿರುವುದು ಅವರ ವೈಯಕ್ತಿಕ ಹಕ್ಕುಗಳ ಉಲ್ಲಂಘನೆ ಎಂದು ಕೋರ್ಟ್‌ ಮುಂದೆ ವಾದಿಸಿದ್ದಾರೆ.

ಏನಿದು ಕಾಲಾ ಹಿರನ್?

ಭರತ್ ಎಸ್. ಶ್ರಿನೇಟ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರವು ಜಾನಿ ಫೈರ್‌ಫಾಕ್ಸ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಸಿದ್ಧವಾಗುತ್ತಿದೆ. 1998ರಲ್ಲಿ ಜೋಧ್‌ಪುರದಲ್ಲಿ ಸಿನಿಮಾ ಶೂಟಿಂಗ್ ವೇಳೆ ನಡೆದ ಸಲ್ಮಾನ್ ಖಾನ್ ಅವರ ಕೃಷ್ಣಮೃಗ ಬೇಟೆ ಪ್ರಕರಣ ಮತ್ತು ಅದರ ಸುತ್ತಲಿನ ಬಿಷ್ಣೋಯ್ ಸಮುದಾಯದ ಹೋರಾಟದ ನೈಜ ಕಥೆಯನ್ನು ಈ ಸಿನಿಮಾ ಒಳಗೊಂಡಿದೆ ಎನ್ನಲಾಗಿದೆ. ಸದ್ಯ ಕೋರ್ಟ್ ನೋಟಿಸ್ ಹಾಗೂ ಉಗ್ರರ ಬೆದರಿಕೆ ನಡುವೆ ಈ ಸಿನಿಮಾ ಬಾಲಿವುಡ್‌ನಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net