ಒಂದು ಕಾಲದಲ್ಲಿ ಸ್ಟಾರ್​ ನಟ: ಈಗ ಬೀದಿ ಬಿಕಾರಿ; ಹರಿಯಾಣದ ವಿ.ಕೆ. ಗಿರಿ ವಿಡಿಯೋ ವೈರಲ್​! VK Giri Haryanvi Actor

ಹೆಂಡತಿಯಿಂದ ಮೋಸ ಹೋಗಿ ಬಿಕಾರಿಯಾದ ನಟ
ಹೆಂಡತಿಯಿಂದ ಮೋಸ ಹೋಗಿ ಬಿಕಾರಿಯಾದ ನಟ
Published on

ಪ್ರಮುಖ ಮುಖ್ಯಾಂಶಗಳು

  • ಹರಿಯಾಣ ಚಿತ್ರರಂಗದ ನಟ ವಿ.ಕೆ.ಗಿರಿ ಇಂದು ಬಿಕ್ಷುಕ
  • ಹೆಂಡತಿಯಿಂದ ಮೋಸ ಹೋಗಿ ಬಿಕಾರಿಯಾದ ನಟ
  • ವೈರಲ್​ ವಿಡಿಯೋಗೆ ಹರಿದುಬಂದ ನೆಟ್ಟಿಗರ ಸಹಾನುಭೂತಿ
ಜೋಧ್‌ಪುರ: ಕಾಲಚಕ್ರ ಉರುಳಿದಂತೆ ಮನುಷ್ಯನ ಹಣೆಬರಹ ಹೇಗೆ ಬದಲಾಗುತ್ತದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಒಂದು ಕಾಲದಲ್ಲಿ ಸಿನಿಮಾ ನಟನಾಗಿ, ನಿರ್ದೇಶಕನಾಗಿ, ಎರಡು ಕಾರ್ಖಾನೆಗಳ ಒಡೆಯನಾಗಿ ರಾಜನಂತೆ ಬದುಕಿದ್ದ ವ್ಯಕ್ತಿಯೊಬ್ಬರು ಇಂದು ಹರಿದ ಬಟ್ಟೆ ಧರಿಸಿ, ಹೊಟ್ಟೆಪಾಡಿಗಾಗಿ ಬೀದಿ ಬೀದಿಗಳಲ್ಲಿ ಭಿಕ್ಷೆ ಬೇಡುತ್ತಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಮೂಡಿಸಿದೆ.

ಯಾರು ಈ ವಿ.ಕೆ. ಗಿರಿ?

ವೈರಲ್ ವಿಡಿಯೋದಲ್ಲಿರುವ ಈ ವ್ಯಕ್ತಿಯ ಹೆಸರು ವಿ.ಕೆ. ಗಿರಿ (VK Giri Haryanvi Actor). ರಾಜಸ್ಥಾನದ ಜೋಧ್‌ಪುರ ಜಿಲ್ಲೆಯ ಬಿಲಾಡಾ ಮೂಲದವರಾದ ಇವರು, ತಾವು ಹರ್ಯಾಣವಿ ಚಿತ್ರರಂಗದ ಮಂಥನ್ ಸಿನಿಮಾದ ನಾಯಕ ನಟ ಮತ್ತು ನಿರ್ದೇಶಕ ಎಂದು ಪರಿಚಯಿಸಿಕೊಂಡಿದ್ದಾರೆ. ಕೇವಲ ಸಿನಿಮಾ ಮಾತ್ರವಲ್ಲದೆ, ಇವರು ಎರಡು ಕಾರ್ಖಾನೆಗಳನ್ನು ಯಶಸ್ವಿಯಾಗಿ ನಡೆಸುತ್ತಿದ್ದರು. ಐಷಾರಾಮಿ ಕಾರುಗಳು, ಬೇಕಾದಷ್ಟು ಆಸ್ತಿ-ಅಂತಸ್ತು ಇವರ ಬಳಿ ಇತ್ತು. ಆದರೆ ಇಂದು ಕಿತ್ತು ತಿನ್ನುವ ಬಡತನದಲ್ಲಿ ಸಿಲುಕಿದ್ದಾರೆ.
ಅವಳಿಂದ ನನ್ನ ಬದುಕು ಹಾಳಾಯಿತು!
ವಿಡಿಯೋದಲ್ಲಿ ತಮ್ಮ ದುರಂತದ ಕಥೆ ಬಿಚ್ಚಿಟ್ಟಿರುವ ಗಿರಿ, ನಾನು ಒಳ್ಳೆಯ ಜೀವನವನ್ನು ನಡೆಸುತ್ತಿದೆ. ಸಿನಿಮಾದಲ್ಲಿ ಹೆಸರು ಮಾಡಿದ್ದೆ, ವ್ಯವಹಾರದಲ್ಲಿ ಲಾಭ ಗಳಿಸಿದ್ದೆ. ಆದರೆ ನನ್ನ ಹೆಂಡತಿ ನನಗೆ ನಂಬಿಕೆ ದ್ರೋಹ ಮಾಡಿದಳು. ನನ್ನಲ್ಲಿದ್ದ ಎಲ್ಲಾ ಸಂಪತ್ತನ್ನು ಕಸಿದುಕೊಂಡು ನನ್ನನ್ನು ಬೀದಿಗೆ ತಳ್ಳಿದಳು ಎಂದು ಕಣ್ಣೀರು ಹಾಕಿದ್ದಾರೆ.

ಬಿಕಾರಿಯಾದರೂ ಮಗನ ಓದಿಗೆ ಇಲ್ಲ ಅಡ್ಡಿ

ತಮ್ಮ ಬದುಕು ಸ್ಮಶಾನದಂತಾಗಿದ್ದರೂ, ಗಿರಿ ಅವರಿಗೆ ಮಗನ ಮೇಲೆ ಅಪಾರ ಪ್ರೀತಿ ಇದೆ. ನನ್ನ ಮಗ ಜೋಧ್‌ಪುರದಲ್ಲಿ ಓದುತ್ತಿದ್ದಾನೆ. ನಾನು ಎಷ್ಟೇ ಕಷ್ಟದಲ್ಲಿದ್ದರೂ, ಭಿಕ್ಷೆ ಬೇಡಿಯಾದರೂ ಅವನ ಶಿಕ್ಷಣಕ್ಕೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುತ್ತಿದ್ದೇನೆ ಎಂದು ಹೇಳುವಾಗ ಅವರ ಧ್ವನಿಯಲ್ಲಿ ತಂದೆಯೊಬ್ಬನ ಅಸಹಾಯಕತೆ ಮತ್ತು ಮಮತೆ ಎದ್ದು ಕಾಣುತ್ತಿತ್ತು.

ಸಾಮಾಜಿಕ ಜಾಲತಾಣಗಳಲ್ಲಿ ಮರುಕದ ಮಹಾಪೂರ

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಆಘಾತ ವ್ಯಕ್ತಪಡಿಸಿದ್ದಾರೆ. ನಂಬಿದವರಿಂದಲೇ ಇಂತಹ ಸ್ಥಿತಿ ಬಂದಿರುವುದು ನಿಜಕ್ಕೂ ನೋವಿನ ಸಂಗತಿ ಎಂದು ಒಬ್ಬರು ಕಮೆಂಟ್ ಮಾಡಿದ್ದರೆ, ಇವರ ಮಾನಸಿಕ ಸ್ಥಿತಿ ಕೂಡ ಸರಿಯಿಲ್ಲದಂತೆ ಕಾಣುತ್ತಿದೆ, ಸರ್ಕಾರ ಅಥವಾ ಸಂಘ-ಸಂಸ್ಥೆಗಳು ಇವರಿಗೆ ತಕ್ಷಣ ನೆರವಾಗಬೇಕು, ಎಂದು ಇನ್ನು ಕೆಲವರು ಒತ್ತಾಯಿಸಿದ್ದಾರೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net