'ಹಿಟ್​ ಮ್ಯಾನ್' ನಿವೃತ್ತಿ ವದಂತಿ: ರೋಹಿತ್ ಮತ್ತು ವಿರಾಟ್‌ನನ್ನು ಹೀಗೆ ನಡೆಸಿಕೊಳ್ಳೋದು ನಾಚಿಕೆಗೇಡು; BCCI ವಿರುದ್ಧ ಬಾಲಿವುಡ್ ನಟಿ ಅಮೀಶಾ ಪಟೇಲ್ ಭಾರಿ ಆಕ್ರೋಶ! Ameesha Patel on Rohit Sharma Retirement

ಹಿಟ್‌ಮ್ಯಾನ್ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಯನ್ನು ನಡೆಸಿಕೊಳ್ಳುತ್ತಿರುವ ರೀತಿಗೆ ನಟಿ ಅಮೀಶಾ ಪಟೇಲ್ ಬೇಸರ
ಹಿಟ್‌ಮ್ಯಾನ್ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಯನ್ನು ನಡೆಸಿಕೊಳ್ಳುತ್ತಿರುವ ರೀತಿಗೆ ನಟಿ ಅಮೀಶಾ ಪಟೇಲ್ ಬೇಸರ
Published on

ಪ್ರಮುಖ ಮುಖ್ಯಾಂಶಗಳು

  • ಟೀಮ್ ಇಂಡಿಯಾ ಬ್ಯಾಟರ್​ ರೋಹಿತ್ ಶರ್ಮಾ ನಿವೃತ್ತಿ ವದಂತಿ
  • ಬಿಸಿಸಿಐ ವಿರುದ್ಧ ಬಾಲಿವುಡ್ ನಟಿ ಅಮೀಶಾ ಪಟೇಲ್ ತೀವ್ರ ಆಕ್ರೋಶ
  • ಹಿಟ್‌ಮ್ಯಾನ್ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಯನ್ನು ನಡೆಸಿಕೊಳ್ಳುತ್ತಿರುವ ರೀತಿಗೆ ನಟಿ ಅಮೀಶಾ ಪಟೇಲ್ ಬೇಸರ
ಮುಂಬೈ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ವಲಯದಲ್ಲಿ ಹಾಗೂ ಸೋಷಿಯಲ್ ಮೀಡಿಯಾದಲ್ಲಿ ಸದ್ಯ ಟೀಮ್ ಇಂಡಿಯಾ ಸ್ಟಾರ್​ ಆಟಗಾರ ರೋಹಿತ್ ಶರ್ಮಾ ಅವರ ಅಂತಾರಾಷ್ಟ್ರೀಯ ಕ್ರಿಕೆಟ್ ಭವಿಷ್ಯದ ಕುರಿತು ಕೆಲ ವದಂತಿಗಳು ಭಾರಿ ಬಿರುಗಾಳಿಯನ್ನು ಎಬ್ಬಿಸುತ್ತಿವೆ.
ಮುಂಬರುವ 2027ರ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಹಿಟ್​ಮ್ಯಾನ್​ ರೋಹಿತ್ ಶರ್ಮಾ ಕಾಣಿಸಿಕೊಳ್ಳುವುದಿಲ್ಲ, ಪ್ರಸ್ತುತ ನಡೆಯುತ್ತಿರುವ ಇಂಗ್ಲೆಂಡ್​ ವಿರುದ್ಧದ ಸರಣಿಯೇ ಅವರ ಅಂತಿಮ ಏಕದಿನ ಪಂದ್ಯವಾಗಲಿದೆ ಎಂದು ಹೇಳಲಾಗುತ್ತಿದೆ.
ಆದರೆ ಈ ಕುರಿತು ರೋಹಿತ್ ಶರ್ಮಾ ಆಗಲೀ ಅಥವಾ ಬಿಸಿಸಿಐ ಮ್ಯಾನೇಜ್‌ಮೆಂಟ್ ಆಗಲಿ ಯಾವುದೇ ಅಧಿಕೃತ ಮಾಹಿತಿಯನ್ನು ನೀಡಿಲ್ಲವಾದರೂ, ಹಿರಿಯ ಆಟಗಾರನನ್ನು ಸೈಡ್‌ಲೈನ್ ಮಾಡಲಾಗುತ್ತಿದೆ ಎಂಬ ಚರ್ಚೆಗಳು ತೀವ್ರಗೊಂಡಿವೆ.
ಈ ನಡುವೆ ಬಾಲಿವುಡ್‌ನ ಖ್ಯಾತ ನಟಿ ಅಮೀಶಾ ಪಟೇಲ್ (Ameesha Patel on Rohit Sharma Retirement) ಈ ಚರ್ಚೆಗೆ ಧುಮುಕಿದ್ದು, ಬಿಸಿಸಿಐ ಹಾಗೂ ಕ್ರಿಕೆಟ್ ಮ್ಯಾನೇಜ್‌ಮೆಂಟ್ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ.

ಹಿರಿಯ ಆಟಗಾರರನ್ನು ಕಸದಂತೆ ನಡೆಸಿಕೊಳ್ಳಲಾಗುತ್ತಿದೆ!

ರೋಹಿತ್ ಶರ್ಮಾ ಅವರ ನಿವೃತ್ತಿ ಹಾಗೂ ಭವಿಷ್ಯದ ವದಂತಿಗಳ ಕುರಿತು ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿರುವ ನಟಿ ಅಮೀಶಾ ಪಟೇಲ್, ಟೀಮ್ ಇಂಡಿಯಾದ ಹಿರಿಯ ಆಟಗಾರರನ್ನು ನಡೆಸಿಕೊಳ್ಳುತ್ತಿರುವ ರೀತಿಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ನನ್ನ ಟ್ವೀಟ್ ಬಾಲಿವುಡ್ ಬಗ್ಗೆ ಖಂಡಿತ ಅಲ್ಲ. ನಾನು ಬಹಳ ದಿನಗಳಿಂದ ಭಾರತೀಯ ಕ್ರಿಕೆಟ್‌ನಲ್ಲಿ ಏನಾಗುತ್ತಿದೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ಇಂದು ನನಗೆ ಅಂತಿಮವಾಗಿ ಈ ಬಗ್ಗೆ ಮಾತನಾಡಲೇಬೇಕು ಎನಿಸಿತು. ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರಂತಹ ದೇಶದ ಹಿರಿಯ ಆಟಗಾರರನ್ನು ಈ ಕ್ರಿಕೆಟ್ ಯುಗದಲ್ಲಿ, ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ಈ ನಿರ್ದಯಿ ಕ್ರಿಕೆಟ್ ಯುಗದಲ್ಲಿ ನಡೆಸಿಕೊಳ್ಳುತ್ತಿರುವ ರೀತಿ ನಿಜಕ್ಕೂ ಆಘಾತಕಾರಿ. ಇದು ಅತ್ಯಂತ ನಾಚಿಕೆಗೇಡಿನ ಸಂಗತಿ ಎಂದು ಅಮೀಶಾ ಪಟೇಲ್ ಬರೆದುಕೊಂಡಿದ್ದಾರೆ.
ಅಮೀಶಾ ಅವರ ಈ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಕ್ಷಣಾರ್ಧದಲ್ಲಿ ವೈರಲ್ ಆಗಿದ್ದು, ಸಾವಿರಾರು ಕ್ರಿಕೆಟ್ ಅಭಿಮಾನಿಗಳು ಇದನ್ನು ಬೆಂಬಲಿಸಿದ್ದಾರೆ. ವರ್ಷಗಳಿಂದ ಭಾರತೀಯ ಕ್ರಿಕೆಟ್‌ ಅನ್ನು ಜಾಗತಿಕ ಮಟ್ಟದಲ್ಲಿ ಎತ್ತಿಹಿಡಿದ ಸಾಧಕರಿಗೆ ಸೂಕ್ತ ಗೌರವ ಸಿಗಬೇಕು ಎಂದು ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ.

ಕೊಹ್ಲಿ-ಗಂಭೀರ್ ನಡುವೆ ಮತ್ತೆ ಬಿರುಕು?

ಒಂದೆಡೆ ರೋಹಿತ್ ಶರ್ಮಾ ಅವರ ನಿವೃತ್ತಿಯ ಊಹಾಪೋಹಗಳು ದಟ್ಟವಾಗಿದ್ದರೆ, ಮತ್ತೊಂದೆಡೆ ಇಂಗ್ಲೆಂಡ್ ಪ್ರವಾಸದ ನಡುವೆ ಟೀಮ್ ಇಂಡಿಯಾ ಡ್ರೆಸ್ಸಿಂಗ್ ರೂಮ್‌ನಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಸುದ್ದಿಗಳು ಹೊರಬರುತ್ತಿವೆ.
ಹೆಡ್​ ಕೋಚ್ ಗೌತಮ್ ಗಂಭೀರ್ ಹಾಗೂ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ನಡುವೆ ಮತ್ತೆ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ ಎಂದು ವರದಿಗಳು ಹೇಳುತ್ತಿವೆ. ಇಂಗ್ಲೆಂಡ್ ಪ್ರವಾಸದುದ್ದಕ್ಕೂ ಇವರಿಬ್ಬರೂ ಪರಸ್ಪರ ಮಾತನಾಡಿಲ್ಲ ಎಂಬ ಆಘಾತಕಾರಿ ಅಂಶಗಳನ್ನು ಕೆಲವು ಮಾಧ್ಯಮಗಳು ವರದಿ ಮಾಡಿವೆ.
ಆದರೆ, ಈ ಹಿಂದಿನಂತೆ ಕೊಹ್ಲಿ ಅಥವಾ ಗಂಭೀರ್ ಇಬ್ಬರೂ ಈ ವರದಿಗಳ ಬಗ್ಗೆ ಸಾರ್ವಜನಿಕವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅತ್ತ ಬಿಸಿಸಿಐ ಕೂಡ ರೋಹಿತ್ ಶರ್ಮಾ ಅವರ ಭವಿಷ್ಯದ ಕುರಿತಾಗಲಿ ಅಥವಾ ಕೋಚ್-ಆಟಗಾರನ ನಡುವಿನ ಬಿರುಕಿನ ವರದಿಗಳ ಕುರಿತಾಗಲಿ ಸಂಪೂರ್ಣ ಮೌನ ವಹಿಸಿದೆ.
ಅಧಿಕೃತ ಘೋಷಣೆ ಹೊರಬೀಳುವವರೆಗೂ ಇವೆಲ್ಲವೂ ಕೇವಲ ವದಂತಿಗಳೇ ಆದರೂ, ಸದ್ಯಕ್ಕಂತೂ ಈ ಸುದ್ದಿಗಳು ಕ್ರಿಕೆಟ್ ಜಗತ್ತಿನಲ್ಲಿ ಸಂಚಲನ ಸೃಷ್ಟಿಸಿರುವುದಂತೂ ಸುಳ್ಳಲ್ಲ. ಟೀಮ್ ಇಂಡಿಯಾದ ಈ ಆಂತರಿಕ ಬೆಳವಣಿಗೆಗಳು ಮುಂದಿನ ದಿನಗಳಲ್ಲಿ ಯಾವ ತಿರುವು ಪಡೆದುಕೊಳ್ಳಲಿವೆ ಎಂಬುದನ್ನು ಕಾಲವೇ ಉತ್ತರಿಸಬೇಕಿದೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net