ಧುರಂಧರ್ 2 ರೆಡಿಯಾಗಲು ಕಾಂಗ್ರೆಸ್ ಪಕ್ಷವೇ ಕಾರಣ: ಈ ಸಿನಿಮಾದಲ್ಲಿ ದಾವೂದ್ ಪಾತ್ರ ಅನಗತ್ಯ; ಕಮಾಲ್ ಆರ್ ಖಾನ್ ವ್ಯಂಗ್ಯ! KRK Review on Dhurandhar 2
ಈ ಸಿನಿಮಾ ನಿರ್ಮಾಣವಾಗಲು ಕಾಂಗ್ರೆಸ್ ಪಕ್ಷವೇ ಕಾರಣ: ಕೆಆರ್ಕೆ
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸುತ್ತಿರುವ ಧುರಂಧರ್ 2
ಈ ಸಿನಿಮಾ ನಿರ್ಮಾಣವಾಗಲು ಕಾಂಗ್ರೆಸ್ ಪಕ್ಷವೇ ಕಾರಣ: ಕೆಆರ್ಕೆ
ಇಂದಿರಾಗಾಂಧಿ, ಮನಮೋಹನ್ ಸಿಂಗ್ ಆಡಳಿತ ನಡೆಸದೇ ಹೋಗಿದ್ದರೆ ಈ ಸಿನಿಮಾಗೆ ಕತೆಯೇ ಇರುತ್ತಿರಲಿಲ್ಲ
ಈ ಸಿನಿಮಾದಲ್ಲಿ ದಾವೂದ್ ಇಬ್ರಾಹಿಂನ ಪಾತ್ರದ ಅಗತ್ಯ ಇರಲಿಲ್ಲ
ಮುಂಬೈ: ಬಾಕ್ಸ್ ಆಫೀಸ್ನಲ್ಲಿ ಸಾವಿರ ಕೋಟಿಯತ್ತ ಲಗ್ಗೆ ಇಡುತ್ತಿರುವ ಧುರಂಧರ್ 2 (Dhurandhar2: The Revenge) ಸಿನಿಮಾ ಒಂದು ಕಡೆ ಪ್ರೇಕ್ಷಕರ ಮನ ಗೆಲ್ಲುತ್ತಿದ್ದರೆ, ಇನ್ನೊಂದೆಡೆ ವಿವಾದಗಳ ಸುಳಿಗೂ ಸಿಲುಕಿದೆ. ಯಾವಾಗಲೂ ತನ್ನ ವಿಚಿತ್ರ ವಿಮರ್ಶೆಗಳಿಂದಲೇ ಸುದ್ದಿಯಲ್ಲಿರುವ ಬಾಲಿವುಡ್ನ ವಿವಾದಾತ್ಮಕ ವಿಮರ್ಶಕ ಕಮಲ್ ಆರ್ ಖಾನ್ (KRK Review on Dhurandhar 2), ಈಗ ಈ ಚಿತ್ರದ ವಿರುದ್ಧ ಸರಣಿ ಬಾಂಬ್ಗಳನ್ನು ಸಿಡಿಸಿದ್ದಾರೆ.
ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಧುರಂಧರ್ 2 ಬಗ್ಗೆ ಸುದೀರ್ಘ ವಿಮರ್ಶೆ ನೀಡಿರುವ ಕೆಆರ್ಕೆ, ಚಿತ್ರದ ನಿರ್ದೇಶಕ ಆದಿತ್ಯ ಧರ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ಕೆಆರ್ಕೆ ಅವರ ವಿಮರ್ಶೆಯ ಮೊದಲ ಗುರಿ ಭೂಗತ ಲೋಕದ ಡಾನ್ ದಾವುದ್ ಇಬ್ರಾಹಿಂ ಪಾತ್ರ. ಈ ಸಿನಿಮಾದಲ್ಲಿ ದಾವುದ್ ಇಬ್ರಾಹಿಂ ಪಾತ್ರದ ಅಗತ್ಯವೇ ಇರಲಿಲ್ಲ. ಆದಿತ್ಯ ಧರ್ ಅವರು ಸುಖಾಸುಮ್ಮನೆ ದಾವುದ್ ಇಬ್ರಾಹಿಂಗೆ ಪಬ್ಲಿಸಿಟಿ ನೀಡಿದ್ದಾರೆ. ಅವನ ಇಡೀ ಟ್ರ್ಯಾಕ್ ಸಮಯ ವ್ಯರ್ಥ ಮಾಡಿದಂತಿದೆ. ಇಂತಹ ಪಾತ್ರಗಳನ್ನು ವೈಭವೀಕರಿಸುವ ಅವಶ್ಯಕತೆ ಏನಿತ್ತು? ಎಂದು ಕೆಆರ್ಕೆ ಪ್ರಶ್ನಿಸಿದ್ದಾರೆ.
ಈ ಸಿನಿಮಾ ನಿರ್ಮಾಣವಾಗಲು ಕಾಂಗ್ರೆಸ್ ಪಕ್ಷವೇ ಕಾರಣ
ಧುರಂಧರ್ ಸಿನಿಮಾ ಬಗ್ಗೆ ಮಾತನಾಡುತ್ತಾ ಕೆಆರ್ಕೆ ಈ ಚಿತ್ರ ತೆರೆಕಾಣಲು ಮತ್ತು ಇಷ್ಟು ಖ್ಯಾತಿಗಳಿಸುತ್ತಿರಲು ಕಾಂಗ್ರೆಸ್ ಪಕ್ಷವೇ ಕಾರಣವಾಗಿದೆ ಎಂದು ಹೇಳಿದ್ದಾರೆ ಮತ್ತು ಈ ಕುರಿತು ಕೆಲ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.
ಭಾರತದ ಗುಪ್ತಚರ ಸಂಸ್ಥೆ ರಾ ಸ್ಥಾಪನೆಯಾಗಿದ್ದು 1968 ರಲ್ಲಿ. ಭಾರತದ ಗುಪ್ತಚರ ಜಮಾಲ್ ಜಮಾಲಿ ಪಾಕಿಸ್ತಾನಕ್ಕೆ ಹೋಗಿದ್ದು 1981 ರಲ್ಲಿ ಆವಾಗ ಇಂದಿರಾ ಗಾಂಧಿ ಪ್ರಧಾನಿಯಾಗಿದ್ದರು. ರಣವೀರ್ ಸಿಂಗ್ ಪಾತ್ರ ಪಾಕಿಸ್ತಾಕ್ಕೆ ಹೋಗುವುದು 2004 ರಲ್ಲಿ ಆಗ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದರು. ಈ ಸಿನಿಮಾದ ವಿಲನ್ ಮೇಜರ್ ಇಲ್ಯಾಸ್ ಕಾಶ್ಮೀರಿ 2011 ರಲ್ಲಿ ಅಂದರೆ ಮನಮೋಹನ್ ಸಿಂಗ್ ಅವರ ಆಡಳಿತ ಇದ್ದಾಗಲೇ ಕೊಲ್ಲಲಾಗಿದೆ.
ಹೀಗಾಗಿ ಈ ಸಿನಿಮಾ ತಯಾಗಾರಲು ಕಾಂಗ್ರೆಸ್ ಪಕ್ಷದ ಕೊಡುಗೆ ಪ್ರಮುಖವಾಗಿದೆ ಎಂದು ಕಮಲ್ ಆರ್ ಖಾನ್ ತಮ್ಮ ವಿಮರ್ಶೆಯಲ್ಲಿ ಹೇಳಿದ್ದಾರೆ ಮತ್ತು ಈ ಕುರಿತು ಟ್ವಿಟ್ ಸಹ ಮಾಡಿದ್ದಾರೆ.
4 ಗಂಟೆಯ ಸಿನಿಮಾ; 15 ನಿಮಿಷಗಳ ಫೈಟ್!
ಸಿನಿಮಾದ ಉದ್ದ ಮತ್ತು ಆಕ್ಷನ್ ಸೀಕ್ವೆನ್ಸ್ಗಳ ಬಗ್ಗೆಯೂ ಕೆಆರ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಸಿನಿಮಾ ಬರೋಬ್ಬರಿ 4 ಗಂಟೆಗಳ ಕಾಲ ಇದೆ. ಆರಂಭದಲ್ಲೇ ರಣವೀರ್ ಸಿಂಗ್ ಶತ್ರುಗಳನ್ನು ಸದೆಬಡಿಯುವ ಸೀನ್ ಸುಮಾರು 15 ನಿಮಿಷಗಳ ಕಾಲ ನಡೆಯುತ್ತದೆ.
ಇನ್ನು ಕ್ಲೈಮ್ಯಾಕ್ಸ್ನಲ್ಲಂತೂ ಮೇಜರ್ ಇಕ್ಬಾಲ್ನನ್ನು ಕೊಲ್ಲುವ ದೃಶ್ಯ 30 ನಿಮಿಷಗಳ ಕಾಲ ಸಾಗುತ್ತದೆ. ಇಷ್ಟೊಂದು ಉದ್ದದ ಆಕ್ಷನ್ ಸೀನ್ ಯಾರಿಗೆ ಬೇಕು? ಈ ಸಿನಿಮಾವನ್ನು 2.5 ಗಂಟೆಗೆ ಕತ್ತರಿಸಿದ್ದರೆ ಅದ್ಭುತವಾಗಿರುತ್ತಿತ್ತು ಎಂದು ಅವರು ಅಭಿಪ್ರಾಯ ತಿಳಿಸಿದ್ದಾರೆ.
ಬಾಲಿವುಡ್ನ ಈ ದ್ವಂದ್ವ ನೀತಿ ಏಕೆ?
ಚಿತ್ರದಲ್ಲಿ ಬಳಸಿರುವ ಅತಿಯಾದ ಕೆಟ್ಟ ಪದಗಳ (Abusive Language) ಬಗ್ಗೆಯೂ ಕೆಆರ್ಕೆ ಆಕ್ರೋಶ ಹೊರಹಾಕಿದ್ದಾರೆ. ಪ್ರತಿ ಮೂರು-ನಾಲ್ಕು ಡೈಲಾಗ್ಗಳಿಗೊಮ್ಮೆ ಕೆಟ್ಟ ಪದಗಳನ್ನು ಬಳಸಲಾಗಿದೆ. ಆಶ್ಚರ್ಯವೆಂದರೆ ಪ್ರೇಕ್ಷಕರು ಅದಕ್ಕೆ ಶಿಳ್ಳೆ ಹೊಡೆಯುತ್ತಿದ್ದಾರೆ, ಇದೇ ಪ್ರೇಕ್ಷಕರು ಬಾದ್ಶಾ ಅಥವಾ ನೋರಾ ಫತೇಹಿ ಅವರ ಹಾಡುಗಳಲ್ಲಿ ಸ್ವಲ್ಪ ತುಂಟತನವಿದ್ದರೂ ಆಕ್ಷೇಪ ವ್ಯಕ್ತಪಡಿಸುತ್ತಾರೆ. ಆದರೆ ಈ ಸಿನಿಮಾದಲ್ಲಿ ಅದಕ್ಕಿಂತಲೂ ಕಟುವಾದ ಪದಗಳಿದ್ದರೂ ಯಾರೂ ಮಾತನಾಡುತ್ತಿಲ್ಲ ಏಕೆ? ಎಂದು ಅವರು ಪ್ರಶ್ನಿಸಿದ್ದಾರೆ.
ಧುರಂಧರ್ 2 ಇದು ಧುರಂಧರ್ ಸಿನಿಮಾದ ಎರಡನೇ ಭಾಗವಾಗಿದೆ. ಈ ಸಿನಿಮಾವು ಕರಾಚಿಯ ಲಿಯಾರಿಗೆ ತೆರಳಿರುವ ಭಾರತದ ಗುಪ್ತಚರನ ಕುರಿತು ನಿರ್ಮಿಸಲಾಗಿರುವ ಒಂದು ಕಾಲ್ಪನಿಕ ಕಥೆಯಾಗಿದೆ. ಅದರೆ ಈ ಸಿನಿಮಾದಲ್ಲಿ ಹಲವು ನೈಜ ಘಟನೆಗಳ ಸನ್ನಿವೇಶಗಳನ್ನು ಸೇರಿಸಿಕೊಂಡಿರುವ ಕಾರಣ ಜನರ ಮೆಚ್ಚುಗೆಗೆ ಪಾತ್ರವಾಗಿದೆ.
ಈ ಸಿನಿಮಾದಲ್ಲಿ ರಣವೀರ್ ಸಿಂಗ್, ರಾಕೇಶ್ ಬೇಡಿ, ಆರ್.ಮಾಧವನ್, ಅರ್ಜುನ್ ರಾಂಪಾಲ್, ಡ್ಯಾನಿಶ್ ಇಕ್ಬಾಲ್, ಸಾರಾ ಅರ್ಜುನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉರಿ: ದಿ ಸರ್ಜಿಕಲ್ ಸ್ಟ್ರೈಕ್ ಸಿನಿಮಾದ ನಿರ್ದೇಶಕ ಆದಿತ್ಯ ಧರ್ ಈ ಸಿನಿಮಾದ ನಿರ್ದೇಶಕರಾಗಿದ್ದಾರೆ,(ಏಜನ್ಸೀಸ್).