ಬಿಪಾಶಾ ಬಸು ಬಳಸುತ್ತಿದ್ದ ಪ್ರೋಟೀನ್ ಪೌಡರ್‌ನಲ್ಲಿ ಹುಳುಗಳ ಆರೋಪ! ಇನ್​ಸ್ಟಾಗ್ರಾಮ್​​ನಲ್ಲಿ ವಿಡಿಯೋ ಹಂಚಿಕೊಂಡ ನಟಿ! Bipasha Basu

ನಟಿ ಬಿಪಾಶಾ ಬಸು ಹಾಗೂ ಪ್ರೋಟೀನ್ ಪೌಡರ್ ವಿಡಿಯೋ
ನಟಿ ಬಿಪಾಶಾ ಬಸು ಹಾಗೂ ಪ್ರೋಟೀನ್ ಪೌಡರ್ ವಿಡಿಯೋ
Published on
ಮುಂಬೈ: ಕಳೆದ ಕೆಲವು ತಿಂಗಳಿನಿಂದ ಮಹಾರಾಷ್ಟ್ರ ಸೇರಿದಂತೆ ದೇಶದ ಇತರ ರಾಜ್ಯಗಳಲ್ಲಿ ಜನರು ಸೇವಿಸುವ ಆಹಾರ ಪದಾರ್ಥಗಳಲ್ಲಿ ನಡೆಯುತ್ತಿದ್ದ ಕಲಬೆರಿಕೆಗೆ ಬ್ರೇಕ್​ ಹಾಕಲು ಸರ್ಕಾರಗಳು ಮುಂದಾಗಿವೆ.
ಈದೀಗ, ಬಾಲಿವುಡ್‌ನ ಖ್ಯಾತ ನಟಿ ಬಿಪಾಶಾ ಬಸು (Bipasha Basu) ತಾವು ಬಳಸುವ ಪ್ರೋಟೀನ್ ಪೌಡರ್ ಒಂದರ ಗುಣಮಟ್ಟದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ನೇರವಾಗಿ ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತಕ್ಕೆ (FDA) ದೂರು ನೀಡಿರುವುದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಗುರುವಾರ (ಸೆ.10) ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ವಿಡಿಯೋ ಹಂಚಿಕೊಂಡಿರುವ ಬಿಪಾಶಾ, ಜನಪ್ರಿಯ ಫಿಟ್‌ನೆಸ್ ಬ್ರ್ಯಾಂಡ್ ಆಗಿರುವ 'ಐಸೊಪ್ಯೂರ್' (Isopure) ವೇ ಪ್ರೋಟೀನ್ ಉತ್ಪನ್ನದ ಒಳಗೆ ಸಣ್ಣಪುಟ್ಟ ಹುಳುಗಳಂತಹ ವಸ್ತುಗಳು ಪತ್ತೆಯಾಗಿವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಹೊಸದಾಗಿ ಸೀಲ್ ತೆಗೆದ ಡಬ್ಬದ ಒಳಗೆ ಈ ರೀತಿ ಕಲ್ಮಶವಿರುವುದು ತಮಗೆ ಆಘಾತ ತಂದಿದೆ ಎಂದು ಅವರು ಹೇಳಿಕೊಂಡಿದ್ದಾರೆ.

ವಿಡಿಯೋದಲ್ಲಿ ಬಿಪಾಶಾ ಹೇಳಿದ್ದೇನು?

ಹಂಚಿಕೊಂಡಿರುವ ವಿಡಿಯೋ ಕ್ಲಿಪ್‌ನಲ್ಲಿ ಪ್ರೋಟೀನ್ ಕಂಟೈನರ್‌ನ ಒಳಗಿನ ಭಾಗವನ್ನು ಹತ್ತಿರದಿಂದ ತೋರಿಸಿರುವ ಬಿಪಾಶಾ, ಈ ಐಸೊಪ್ಯೂರ್ ಉತ್ಪನ್ನವು ಹುಳುಗಳಿಂದ ತುಂಬಿದೆ. ನಾನು ಈಗಷ್ಟೇ ಓಪನ್ ಮಾಡಿದ ಹೊಸ ಡಬ್ಬದಲ್ಲಿ ಇವು ಕಾಣಿಸಿಕೊಂಡಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಇಂತಹ ದುಬಾರಿ ಪದಾರ್ಥಗಳನ್ನು ಬಳಸುವವರಿಗೆ ಇದು ದೊಡ್ಡ ದ್ರೋಹ ಎಂಬಂತೆ ಅವರು ಆಕ್ರೋಶ ಹೊರಹಾಕಿದ್ದಾರೆ.
ಈ ವಿಡಿಯೋದ ಜೊತೆಗೆ ಮಹಾರಾಷ್ಟ್ರ ಎಫ್‌ಡಿಎ ಆಯುಕ್ತರಾದ ಐಎಎಸ್ ಅಧಿಕಾರಿ ತುಕಾರಾಮ ಮುಂಢೆ ಅವರನ್ನು ಟ್ಯಾಗ್ ಮಾಡಿರುವ ನಟಿ, "@tukaram_ias ನೀವೇ ನಮ್ಮ ಏಕೈಕ ಭರವಸೆ; ನಿಮ್ಮಂತಹ ಅಧಿಕಾರಿಗಳಿದ್ದರಷ್ಟೇ ನಾವು ಮಾರುಕಟ್ಟೆಯಿಂದ ಖರೀದಿಸುವ ವಸ್ತುಗಳಲ್ಲಿ ಇಂತಹ ಮೋಸ ಅಥವಾ ಕಲುಷಿತ ಪದಾರ್ಥಗಳು ಸಿಗುವುದನ್ನು ತಡೆಯಲು ಸಾಧ್ಯ ಎಂದು ಬರೆದುಕೊಂಡಿದ್ದಾರೆ.

ಇನ್ನೂ ದೋಷ ಪತ್ತೆಯಾಗಿಲ್ಲ!

'ಐಸೊಪ್ಯೂರ್' ಬ್ರ್ಯಾಂಡ್‌ ಕಡಿಮೆ ಕಾರ್ಬ್ ಹಾಗೂ ಶೂನ್ಯ ಕಾರ್ಬ್ ಅಂಶವಿರುವ ಪ್ರೋಟೀನ್ ಐಸೊಲೇಟ್ ಉತ್ಪನ್ನಗಳಿಗೆ ಜಾಗತಿಕವಾಗಿ ಹೆಸರುವಾಸಿಯಾಗಿದೆ. ಇಂತಹ ಪ್ರಮುಖ ಬ್ರ್ಯಾಂಡ್‌ನಲ್ಲೇ ಹುಳುಗಳು ಪತ್ತೆಯಾಗಿವೆ ಎಂಬ ನಟಿಯ ಆರೋಪವು ಫಿಟ್‌ನೆಸ್ ಪ್ರಿಯರಲ್ಲಿ ಮತ್ತು ಗ್ರಾಹಕರಲ್ಲಿ ದೊಡ್ಡ ಮಟ್ಟದ ಆತಂಕ ಮೂಡಿಸಿದೆ.
ಆದಾಗ್ಯೂ, ಬಿಪಾಶಾ ಬಸು ಮಾಡಿರುವ ಈ ಆರೋಪ ಸದ್ಯಕ್ಕೆ ಒಂದು ಕಡೆಯ ವಾದವಾಗಿದ್ದು, ವಿಡಿಯೋದಲ್ಲಿ ಕಾಣಿಸುತ್ತಿರುವ ಆ ವಸ್ತುಗಳು ನಿಜವಾಗಿಯೂ ಹುಳುಗಳೇ ಅಥವಾ ಉತ್ಪನ್ನದಲ್ಲಿ ಬೇರೇನಾದರೂ ತಾಂತ್ರಿಕ ದೋಷವಿತ್ತೇ ಎಂಬ ಬಗ್ಗೆ ಯಾವುದೇ ಅಧಿಕೃತ ಮತ್ತು ಸ್ವತಂತ್ರ ದೃಢೀಕರಣ ಇನ್ನೂ ಲಭ್ಯವಾಗಿಲ್ಲ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net