ಅರ್ಧಶತಕ ಬಾರಿಸಿದ್ರೂ ಹೆಲ್ಮೆಟ್​, ಗ್ಲೌಸ್​ ಎಸೆದು ಆಕ್ರೋಶ... ಅಷ್ಟಕ್ಕೂ ಕೊಹ್ಲಿ ಕೋಪಗೊಂಡಿದ್ದೇಕೆ? ಇಲ್ಲಿದೆ ಉತ್ತರ.. Virat Kohli

ಅರ್ಧಶತಕ ಬಾರಿಸಿದ್ರೂ ಹೆಲ್ಮೆಟ್​, ಗ್ಲೌಸ್​ ಎಸೆದು ಆಕ್ರೋಶ... ಅಷ್ಟಕ್ಕೂ ಕೊಹ್ಲಿ ಕೋಪಗೊಂಡಿದ್ದೇಕೆ? ಇಲ್ಲಿದೆ ಉತ್ತರ.. Virat Kohli
ಅರ್ಧಶತಕ ಬಾರಿಸಿದ್ರೂ ಹೆಲ್ಮೆಟ್​, ಗ್ಲೌಸ್​ ಎಸೆದು ಆಕ್ರೋಶ... ಅಷ್ಟಕ್ಕೂ ಕೊಹ್ಲಿ ಕೋಪಗೊಂಡಿದ್ದೇಕೆ? ಇಲ್ಲಿದೆ ಉತ್ತರ.. Virat Kohli
Published on

ಪ್ರಮುಖ ಮುಖ್ಯಾಂಶಗಳು

  • ಅರ್ಧಶತಕದ ಬಳಿಕ ಔಟ್ ಆದ ಬೇಸರದಲ್ಲಿ ಹೆಲ್ಮೆಟ್, ಗ್ಲೌಸ್ ಎಸೆದು ಅಸಮಾಧಾನ ಹೊರಹಾಕಿದ ಕೊಹ್ಲಿ
  • ಪೆವಿಲಿಯನ್‌ಗೆ ಮರಳುವಾಗ ಕೊಹ್ಲಿ ಆಕ್ರೋಶ ವ್ಯಕ್ತಪಡಿಸಿದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್
  • ತಮ್ಮ ಇನ್ನಿಂಗ್ಸ್ ಅನ್ನು ಸೂಕ್ತವಾಗಿ ಕೊನೆಗೊಳಿಸಲು ಸಾಧ್ಯವಾಗದ ಬೇಸರ ಕೊಹ್ಲಿ ಅವರ ಮುಖದಲ್ಲಿ ಸ್ಪಷ್ಟವಾಗಿ ಗೋಚರಿಸಿತು
Virat Kohli : ನಿನ್ನೆ (ಏಪ್ರಿಲ್​ 12) ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್​ 2026ರ 20ನೇ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ( RCB) ತಂಡ ಮುಂಬೈ ಇಂಡಿಯನ್ಸ್​ ವಿರುದ್ಧ ಗೆದ್ದು ಬೀಗಿತು. ಆದರೆ, ಈ ಪಂದ್ಯದ ನಡುವೆ ದಾಖಲೆಗಳ ಸರದಾರ, ಚೇಸ್​ ಮಾಸ್ಟರ್​, ರನ್​ ಮೆಷಿನ್​ ಹಾಗೂ ಕ್ರಿಕೆಟ್​ ಲೋಕದ ಕಿಂಗ್​ ಎಂದೇ ಖ್ಯಾತಿಯಾಗಿರುವ ವಿರಾಟ್​ ಕೊಹ್ಲಿ ಕೋಪಗೊಂಡು ತಮ್ಮ ಹೆಲ್ಮೆಟ್​ ಹಾಗೂ ಗ್ಲೌಸ್​ ಎಸೆದು ವಿಚಿತ್ರವಾಗಿ ವರ್ತಿಸಿದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.
ನಿನ್ನೆಯ ಪಂದ್ಯದಲ್ಲಿ ಕೊಹ್ಲಿ ಅವರು ಅರ್ಧಶತಕ ಬಾರಿಸಿ ತಮ್ಮ ತಂಡಕ್ಕೆ ನೆರವಾದರು. ಕೇವಲ 38 ಎಸೆತಗಳಲ್ಲಿ 50 ರನ್ (5 ಬೌಂಡರಿ, 1 ಸಿಕ್ಸರ್) ಗಳಿಸಿದರು. ತಮ್ಮ ಸ್ಥಿರ ಬ್ಯಾಟಿಂಗ್ ಮೂಲಕ 37 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಕಿಂಗ್, ಮುಂದಿನ ಚೆಂಡನ್ನು ದೊಡ್ಡ ಹೊಡೆತವನ್ನಾಗಿ ಪರಿವರ್ತಿಸಲು ಪ್ರಯತ್ನಿಸಿದರು. ಹಾರ್ದಿಕ್ ಪಾಂಡ್ಯ ಎಸೆದ ಫುಲ್ ಟಾಸ್ ಚೆಂಡನ್ನು ಹೊಡೆಯಲು ಪ್ರಯತ್ನಿಸುವಾಗ, ಕೊಹ್ಲಿಯ ಬ್ಯಾಟ್ ಅವರ ಕೈಯಲ್ಲಿ ತಿರುಗಿತು. ಇದರಿಂದ ಟೈಮಿಂಗ್​ ಮಿಸ್​ ಆಯಿತು. ಇದರ ಪರಿಣಾಮವಾಗಿ, ಚೆಂಡು ನೇರವಾಗಿ ಲಾಂಗ್-ಆನ್‌ನಲ್ಲಿದ್ದ ಸೂರ್ಯಕುಮಾರ್ ಯಾದವ್ ಅವರ ಕೈಗೆ ಹೋಯಿತು.
ಉತ್ತಮ ಫಾರ್ಮ್‌ನಲ್ಲಿದ್ದ ಕೊಹ್ಲಿ, ದೊಡ್ಡ ಸ್ಕೋರ್‌ ಮಾಡುವ ಗುರಿಯೊಂದಿಗೆ ಆಡುವಾಗ ಅನಿರೀಕ್ಷಿತವಾಗಿ ಔಟ್​ ಆಗಿದ್ದನ್ನು ಅರಗಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅಲ್ಲದೆ, ತಮ್ಮ ತಂಡವು ಕೂಡ ಬೃಹತ್​ ಕಲೆಹಾಕುವ ಹಾದಿಯಲ್ಲಿ ಸಾಗುತ್ತಿತ್ತು. ಆರಂಭದಲ್ಲಿ ಬಿರುಸಿನ ಆಟವಾಡಿದ ಕೊಹ್ಲಿ ನಂತರದಲ್ಲಿ ಸಾಕಷ್ಟು ಬಾಲ್​ಗಳನ್ನು ತೆಗೆದುಕೊಂಡರು. ಹೇಗಾದರೂ ಮಾಡಿ ಗೇರ್​ ಬದಲಿಸಿ, ಸ್ಫೋಟಕ ಇನ್ನಿಂಗ್ಸ್​ ಆಡಬೇಕು ಅನ್ನುವಷ್ಟರಲ್ಲಿ ಔಟ್​ ಆಗಿದ್ದು ಕೊಹ್ಲಿಗೆ ತುಂಬಾ ಬೇಸರ ಮೂಡಿಸಿತು. ನನ್ನಿಂದ ಸ್ಫೋಟಕ ಆಟವಾಡಲು ಸಾಧ್ಯವಾಗಲಿಲ್ಲವಲ್ಲ ನಿರಾಸೆ ಮೂಡಿತು. ಹೀಗಾಗಿ, ಪೆವಿಲಿಯನ್ ಕಡೆಗೆ ನಡೆಯುತ್ತಿದ್ದಾಗ, ಕೊಹ್ಲಿ ತಮ್ಮ ಕೈಗವಸುಗಳನ್ನು ಹಾಗೂ ಹೆಲ್ಮೆಟ್ ಅನ್ನು ನೆಲದ ಮೇಲೆ ಎಸೆದರು ಅಸಮಾಧಾನ ಹೊರಹಾಕಿದರು. ಫಿನಿಷರ್ ಪಾತ್ರದಲ್ಲಿ ತಮ್ಮ ಇನ್ನಿಂಗ್ಸ್ ಅನ್ನು ಸೂಕ್ತವಾಗಿ ಕೊನೆಗೊಳಿಸಲು ಸಾಧ್ಯವಾಗದ ಬೇಸರ ಕೊಹ್ಲಿ ಅವರ ಮುಖದಲ್ಲಿ ಸ್ಪಷ್ಟವಾಗಿ ಗೋಚರಿಸಿತು.
ಪಂದ್ಯದ ವಿಚಾರಕ್ಕೆ ಬಂದರೆ, ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಆರ್‌ಸಿಬಿ ಬ್ಯಾಟ್ಸ್‌ಮನ್‌ಗಳು ಮುಂಬೈ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದರು. ಫಿಲ್ ಸಾಲ್ಟ್ ಅವರು ಕೇವಲ 36 ಎಸೆತಗಳಲ್ಲಿ 78 ರನ್ ಗಳಿಸುವ ಮೂಲಕ ವಿಧ್ವಂಸಕ ಬ್ಯಾಟಿಂಗ್ ಮಾಡಿ, ಮುಂಬೈ ಬೌಲರ್‌ಗಳಿಗೆ ಬೆವರಿಳಿಸಿದರು. ಸಾಲ್ಟ್ ಔಟಾದ ನಂತರ ಬಂದ ನಾಯಕ ರಜತ್​ ಪಾಟೀದಾರ್ ಕೂಡ ಬ್ಯಾಟಿಂಗ್​ನಲ್ಲಿ ಇನ್ನಷ್ಟು ವಿನಾಶವನ್ನು ಸೃಷ್ಟಿಸಿದರು. ಅವರು ಕೇವಲ 20 ಎಸೆತಗಳಲ್ಲಿ 5 ಸಿಕ್ಸರ್​ ಮತ್ತು ನಾಲ್ಕು ಬೌಂಡರಿಗಳ ನೆರವಿನಿಂದ 53 ರನ್ ಗಳಿಸಿದರು ಮತ್ತು ಜೆಟ್ ವೇಗದಲ್ಲಿ ಸ್ಕೋರ್‌ಬೋರ್ಡ್‌ಗೆ ಬೆಂಕಿ ಹಚ್ಚಿದರು. ಕೊನೆಯಲ್ಲಿ ಬಂದ ಟಿಮ್ ಡೇವಿಡ್ ಕೇವಲ 16 ಎಸೆತಗಳಲ್ಲಿ 34 ರನ್ ಗಳಿಸಿದರು. ಈ ಮೂಲಕ ಆರ್‌ಸಿಬಿ ನಿಗದಿತ ಓವರ್‌ಗಳಲ್ಲಿ 240 ರನ್‌ಗಳ ಬೃಹತ್ ಸ್ಕೋರ್ ಸಾಧಿಸಲು ಸಹಾಯ ಮಾಡಿದರು.
ಇದಾದ ನಂತರ ಬ್ಯಾಟಿಂಗ್‌ಗೆ ಇಳಿದ ಮುಂಬೈ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 222 ರನ್‌ಗಳನ್ನು ಮಾತ್ರ ಗಳಿಸಲು ಸಾಧ್ಯವಾಯಿತು. ಇದರೊಂದಿಗೆ, ಅವರು ರಾಯಲ್ ಚಾಲೆಂಜರ್ಸ್ ವಿರುದ್ಧ 18 ರನ್‌ಗಳ ಅಂತರದಿಂದ ಸೋಲುಂಡಿತು, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net