IPL 2026: ಸೂರ್ಯವಂಶಿ ಅಬ್ಬರಕ್ಕೆ ತೆಂಡೂಲ್ಕರ್, ಕೈಫ್ ಕ್ಲೀನ್ ಬೌಲ್ಡ್: ಭಾವುಕ ಪೋಸ್ಟ್ ವೈರಲ್!

IPL 2026
IPL 2026
Published on
ಬೆಂಗಳೂರು: ಹದಿನೈದರ ಹರೆಯದ ಬಾಲಕನೊಬ್ಬ ಇಡೀ ವಿಶ್ವ ಕ್ರಿಕೆಟ್ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾನೆ. ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ (RR) ತಂಡದ ಯುವ ಆಟಗಾರ ವೈಭವ್ ಸೂರ್ಯವಂಶಿ, ಸನ್‌ರೈಸರ್ಸ್ ಹೈದರಾಬಾದ್ (SRH) ವಿರುದ್ಧ ಕೇವಲ 29 ಎಸೆತಗಳಲ್ಲಿ 97 ರನ್ ಸಿಡಿಸಿ ಇತಿಹಾಸ ನಿರ್ಮಿಸಿದ್ದಾರೆ. ಕೇವಲ ಎಂಟು ಓವರ್‌ಗಳ ಕಾಲ ಇಡೀ ಕ್ರೀಡಾಲೋಕವನ್ನು ಮಂತ್ರಮುಗ್ಧರನ್ನಾಗಿಸಿದ ಸೂರ್ಯವಂಶಿ, 5 ಬೌಂಡರಿ ಹಾಗೂ ಭರ್ಜರಿ 12 ಸಿಕ್ಸರ್‌ಗಳ ನೆರವಿನಿಂದ 334ಕ್ಕೂ ಹೆಚ್ಚು ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿ ಅಬ್ಬರಿಸಿದರು.

ದಿಗ್ಗಜರ ಶ್ಲಾಘನೆ

ವೈಭವ್ ಅವರ ಈ ವಿಶ್ವರೂಪದ ಬ್ಯಾಟಿಂಗ್ ಪ್ರದರ್ಶನಕ್ಕೆ ಭಾರತೀಯ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಮನಸೋತಿದ್ದಾರೆ. ಈ ಕುರಿತು 'X' (ಟ್ವಿಟರ್) ನಲ್ಲಿ ಪೋಸ್ಟ್ ಮಾಡಿರುವ ಸಚಿನ್, "ವೈಭವ್ ಸೂರ್ಯವಂಶಿ ಅವರ ಬ್ಯಾಟ್ ಸ್ವಿಂಗ್ ಅತ್ಯುತ್ತಮವಾಗಿದೆ. ಅದಕ್ಕಿಂತ ಹೆಚ್ಚಾಗಿ, ಅವರು ತಮ್ಮ ಮುಂಭಾಗದ ಪಾದವನ್ನು (Front Foot) ಎಷ್ಟು ಸುಂದರವಾಗಿ ತೆರವುಗೊಳಿಸುತ್ತಾರೆ ಎಂದರೆ, ಕಾಲುಗಳನ್ನು ಗುರಿಯಾಗಿಸಿಕೊಂಡು ಬರುವ ಚೆಂಡುಗಳನ್ನು ಬೌಂಡರಿ ದಾಟಿಸಲು ಅವರಿಗೆ ಸುಲಭವಾಗುತ್ತದೆ. ಈ ಮುಕ್ತ ಸ್ವಾತಂತ್ರ್ಯವೇ ಅವರು ಇಷ್ಟು ಅದ್ಭುತವಾಗಿ ಆಡಲು ಕಾರಣ. ಆ ಇನ್ನಿಂಗ್ಸ್ ನಿಜಕ್ಕೂ ಅಪ್ರತಿಮವಾಗಿತ್ತು" ಎಂದು ಕೊಂಡಾಡಿದ್ದಾರೆ.
ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಕೂಡ ಶ್ಲಾಘಿಸಿದ್ದು, "ನಾವು ಕಣ್ಣೆದುರೇ ಒಂದು ಪವಾಡವನ್ನು, ಭವಿಷ್ಯದ ಮಹಾತಾರೆಯನ್ನು ನೋಡುತ್ತಿದ್ದೇವೆ. ಕೇವಲ 15 ವರ್ಷದ ಹುಡುಗ ಯುನಿವರ್ಸಲ್ ಬಾಸ್ ಕ್ರಿಸ್ ಗೇಲ್ ದಾಖಲೆಯನ್ನು ಮುರಿದಿರುವುದು ನಂಬಲಾಗುತ್ತಿಲ್ಲ. ಕ್ರಿಕೆಟ್ ಜಗತ್ತಿಗೆ ದೊಡ್ಡ ಭವಿಷ್ಯವಿದೆ" ಎಂದು ಟ್ವೀಟ್ ಮಾಡಿದ್ದಾರೆ. ಭಾರತದ ಮಾಜಿ ಆಲ್‌ರೌಂಡರ್ ಒಬ್ಬರು ವೈಭವ್ ಅವರನ್ನು "ಬಾಸ್ ಬೇಬಿ" ಎಂದು ಕರೆದಿದ್ದು, "ಬಾಸ್ ಬೇಬಿ ವಿಶ್ವ ಬಾಸ್ ದಾಖಲೆಯನ್ನು ಮುರಿದಿದೆ" ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ಕ್ರಿಸ್ ಗೇಲ್, ಜಯಸೂರ್ಯ ದಾಖಲೆ ಉಡೀಸ್!

ಈ ಚುಟುಕು ಸರಣಿಯಲ್ಲಿ ಇದುವರೆಗೆ ಒಟ್ಟು 65 ಸಿಕ್ಸರ್‌ಗಳನ್ನು ಬಾರಿಸಿರುವ ವೈಭವ್, ಟಿ20 ಟೂರ್ನಿಯೊಂದರಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ್ದ ವೆಸ್ಟ್ ಇಂಡೀಸ್‌ನ ಕ್ರಿಸ್ ಗೇಲ್ ಅವರ ದಾಖಲೆಯನ್ನು ಧೂಳೀಪಟ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಐಪಿಎಲ್ ಇನ್ನಿಂಗ್ಸ್ ಒಂದರಲ್ಲಿ 10ಕ್ಕೂ ಹೆಚ್ಚು ಸಿಕ್ಸರ್ ಬಾರಿಸಿದ ಗೇಲ್ ಅವರ ದಾಖಲೆಯನ್ನು (4 ಬಾರಿ) ಸೂರ್ಯವಂಶಿ ಸರಿಗಟ್ಟಿದ್ದಾರೆ. ಈ ಋತುವಿನಲ್ಲೇ ಅವರು ಮೂರು ಬಾರಿ ಈ ಸಾಧನೆ ಮಾಡಿದ್ದಾರೆ.
ಜಯಸೂರ್ಯ ದಾಖಲೆಯೂ ಪತನ: 2008ರ ಐಪಿಎಲ್‌ನಲ್ಲಿ ಮುಲ್ಲನ್‌ಪುರದಲ್ಲಿ ನಡೆದ ಪಂದ್ಯದಲ್ಲಿ ಶ್ರೀಲಂಕಾದ ಸನತ್ ಜಯಸೂರ್ಯ ಪವರ್‌ಪ್ಲೇನಲ್ಲಿ 7 ಸಿಕ್ಸರ್ ಬಾರಿಸಿದ್ದರು. ವೈಭವ್ ಈ ಪಂದ್ಯದಲ್ಲಿ ಬರೋಬ್ಬರಿ 8 ಸಿಕ್ಸರ್ ಸಿಡಿಸುವ ಮೂಲಕ 18 ವರ್ಷಗಳ ಹಳೆಯ ದಾಖಲೆಯನ್ನು ಇತಿಹಾಸದ ಪುಟಗಳಿಗೆ ಸೇರಿಸಿದ್ದಾರೆ.

ಪವರ್‌ಪ್ಲೇನಲ್ಲಿ ವಾರ್ನರ್ ಹಿಂದಿಕ್ಕಿದ ಸೂರ್ಯವಂಶಿ

ಪ್ರಸಕ್ತ ಐಪಿಎಲ್ ಋತುವಿನ ಪವರ್‌ಪ್ಲೇನಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯೂ ಈಗ ವೈಭವ್ ಹೆಸರಲ್ಲಿದೆ. ಅವರು ಪವರ್‌ಪ್ಲೇ ಓವರ್‌ಗಳಲ್ಲಿ ಒಟ್ಟು 490 ರನ್ ಗಳಿಸುವ ಮೂಲಕ, 2016ರಲ್ಲಿ ಎಸ್‌ಆರ್‌ಹೆಚ್ ಪರ 467 ರನ್ ಗಳಿಸಿದ್ದ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಅವರ ದಾಖಲೆಯನ್ನು ಮೀರಿಸಿದ್ದಾರೆ. ಪವರ್‌ಪ್ಲೇನಲ್ಲಿ ಇದು ಅವರ 5ನೇ ಅರ್ಧಶತಕವಾಗಿದ್ದು, ವಾರ್ನರ್ (6 ಅರ್ಧಶತಕ) ಮಾತ್ರ ಇವರಿಗಿಂತ ಮುಂದಿದ್ದಾರೆ.

ಪ್ಲೇಆಫ್ಸ್‌ನಲ್ಲಿ ದಾಖಲೆಗಳ ಮಳೆ

ವೇಗದ ಅರ್ಧಶತಕ: ಕೇವಲ 16 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ವೈಭವ್, ಐಪಿಎಲ್ ನಾಕೌಟ್/ಪ್ಲೇಆಫ್ ಪಂದ್ಯಗಳಲ್ಲಿ ಸುರೇಶ್ ರೈನಾ (2014ರಲ್ಲಿ PBKS ವಿರುದ್ಧ 16 ಎಸೆತ) ಅವರೊಂದಿಗೆ ಜಂಟಿ ವೇಗದ ಅರ್ಧಶತಕದ ದಾಖಲೆ ಹಂಚಿಕೊಂಡಿದ್ದಾರೆ.
ಅತಿ ಹೆಚ್ಚು ಸಿಕ್ಸರ್: ಪ್ಲೇಆಫ್ ಪಂದ್ಯವೊಂದರಲ್ಲಿ 12 ಸಿಕ್ಸರ್ ಬಾರಿಸುವ ಮೂಲಕ 2023ರಲ್ಲಿ ಶುಭಮನ್ ಗಿಲ್ (10 ಸಿಕ್ಸರ್) ಬಾರಿಸಿದ್ದ ದಾಖಲೆಯನ್ನು ಮುರಿದಿದ್ದಾರೆ. ಇದು ಐಪಿಎಲ್ ಇನ್ನಿಂಗ್ಸ್ ಒಂದರಲ್ಲಿ ಭಾರತೀಯ ಬ್ಯಾಟ್ಸ್‌ಮನ್ ಒಬ್ಬರು ಬಾರಿಸಿದ ಗರಿಷ್ಠ ಸಿಕ್ಸರ್ ಆಗಿದೆ.
ಆರ್‌ಆರ್ ಪರ ದ್ವಿತೀಯ ಗರಿಷ್ಠ: ಪ್ಲೇಆಫ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಜೋಸ್ ಬಟ್ಲರ್ (106*) ನಂತರ ವೈಭವ್ ಗಳಿಸಿದ 97 ರನ್ ಎರಡನೇ ಅತ್ಯಧಿಕ ಸ್ಕೋರ್ ಆಗಿದೆ.

ಯಶಸ್ವಿ ಜೈಸ್ವಾಲ್ ದಾಖಲೆ ಬ್ರೇಕ್

ಈ ಪ್ರಸಕ್ತ ಋತುವಿನಲ್ಲಿ ವೈಭವ್ ಸೂರ್ಯವಂಶಿ 15 ಇನ್ನಿಂಗ್ಸ್‌ಗಳಿಂದ 45.33 ರ ಸರಾಸರಿಯಲ್ಲಿ ಹಾಗೂ 242.85ರ ಅತ್ಯದ್ಭುತ ಸ್ಟ್ರೈಕ್ ರೇಟ್‌ನಲ್ಲಿ ಒಟ್ಟು 680 ರನ್ ಕೊಳ್ಳೆಹೊಡೆದಿದ್ದಾರೆ. ಇದರಲ್ಲಿ 1 ಶತಕ (ಅತ್ಯುತ್ತಮ 103) ಹಾಗೂ 4 ಅರ್ಧಶತಕಗಳು ಸೇರಿವೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ 'ಅನ್‌ಕ್ಯಾಪ್ಡ್' (ಭಾರತ ತಂಡಕ್ಕೆ ಪದಾರ್ಪಣೆ ಮಾಡದ) ಆಟಗಾರನೊಬ್ಬ ಗಳಿಸಿದ ಅತಿ ಹೆಚ್ಚು ರನ್ ಎಂಬ ಯಶಸ್ವಿ ಜೈಸ್ವಾಲ್ (2023ರಲ್ಲಿ 625 ರನ್) ಅವರ ದಾಖಲೆಯನ್ನು ಇವರು ಮುರಿದಿದ್ದಾರೆ. ಜೊತೆಗೆ 600 ಪ್ಲಸ್ ರನ್ ಗಳಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ಕೀರ್ತಿಗೂ ಪಾತ್ರರಾಗಿದ್ದಾರೆ.
ಪಂದ್ಯದ ಸಂಕ್ಷಿಪ್ತ ಸ್ಕೋರ್: ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ (RR) ತಂಡ ವೈಭವ್ ಸೂರ್ಯವಂಶಿ (97 ರನ್, 29 ಎಸೆತ) ಮತ್ತು ಧ್ರುವ್ ಜುರೆಲ್ (50 ರನ್, 21 ಎಸೆತ) ಅವರ ಸ್ಫೋಟಕ ಆಟದ ನೆರವಿನಿಂದ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 242 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಹೈದರಾಬಾದ್ ಪರ ಪ್ರಫುಲ್ ಹಿಂಗೆ 54 ರನ್ ನೀಡಿ 3 ವಿಕೆಟ್ ಪಡೆದರು,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net