ವೈಭವ್ ಸೂರ್ಯವಂಶಿಯನ್ನು ಟೀಮ್​ ಇಂಡಿಯಾಗೆ ಈ ರೀತಿ ಆಯ್ಕೆ ಮಾಡಬೇಡಿ... ಅಚ್ಚರಿ​ ಹೇಳಿಕೆ ನೀಡಿದ ಆರ್​. ಅಶ್ವಿನ್​! Vaibhav Sooryavanshi

ವೈಭವ್ ಸೂರ್ಯವಂಶಿಯನ್ನು ಟೀಮ್​ ಇಂಡಿಯಾಗೆ ಈ ರೀತಿ ಆಯ್ಕೆ ಮಾಡಬೇಡಿ... ಅಚ್ಚರಿ​ ಹೇಳಿಕೆ ನೀಡಿದ ಆರ್​. ಅಶ್ವಿನ್​! Vaibhav Sooryavanshi
ವೈಭವ್ ಸೂರ್ಯವಂಶಿಯನ್ನು ಟೀಮ್​ ಇಂಡಿಯಾಗೆ ಈ ರೀತಿ ಆಯ್ಕೆ ಮಾಡಬೇಡಿ... ಅಚ್ಚರಿ​ ಹೇಳಿಕೆ ನೀಡಿದ ಆರ್​. ಅಶ್ವಿನ್​! Vaibhav Sooryavanshi
Published on

ಪ್ರಮುಖ ಮುಖ್ಯಾಂಶಗಳು

  • ವೈಭವ್ ಸೂರ್ಯವಂಶಿ​ ವಿಚಾರದಲ್ಲಿ ಸ್ಫೋಟಕ ಹೇಳಿಕೆ ನೀಡಿದ ಮಾಜಿ ಕ್ರಿಕೆಟಿಗ ಆರ್​. ಅಶ್ವಿನ್​
  • ಐಪಿಎಲ್ ಪ್ರತಿಭೆಗಳನ್ನೊಳಗೊಂಡ 2ನೇ ದರ್ಜೆಯ ತಂಡವನ್ನು ಕಣಕ್ಕಿಳಿಸುವ ಆಲೋಚನೆಯ ಬಗ್ಗೆ ಟೀಕೆ
  • ವೈಭವ್​ರಂತಹ ಆಟಗಾರರನ್ನು ನೇರವಾಗಿ ಅಂತಾರಾಷ್ಟ್ರೀಯ ಪಂದ್ಯಗಳಿಗೆ ಕಳುಹಿಸುವುದು ಸರಿಯಲ್ಲ ಎಂದ ಅಶ್ವಿನ್​
  • ರಾಷ್ಟ್ರೀಯ ತಂಡದ ಕ್ಯಾಪ್ ಪಡೆಯುವುದು ಒಂದು ಸುಲಭದ ವಿಷಯವಾಗಬಾರದು ಎಂಬುದು ಅಶ್ವಿನ್​ ವಾದ
Vaibhav Sooryavanshi : ಪ್ರಸ್ತುತ ನಡೆಯುತ್ತಿರುವ 19ನೇ ಆವೃತ್ತಿಯ ಐಪಿಎಲ್​ನಲ್ಲಿ ತಮ್ಮ ಬಿರುಗಾಳಿ ಬ್ಯಾಟಿಂಗ್​ ಮೂಲಕವೇ ಸಖತ್​ ಸದ್ದು ಮಾಡುತ್ತಿರುವ ರಾಜಸ್ಥಾನ ರಾಯಲ್ಸ್‌ ತಂಡದ ಯುವ ಸೆನ್ಸೇಷನ್ ವೈಭವ್ ಸೂರ್ಯವಂಶಿ ಶೀಘ್ರದಲ್ಲೇ ಟೀಮ್​ ಇಂಡಿಯಾಗೆ ಪಾದರ್ಪಣೆ ಮಾಡಲಿದ್ದಾರೆ. ಐಪಿಎಲ್ ಟೂರ್ನಿ ಮುಗಿದ ಬೆನ್ನಲ್ಲೇ ಐರ್ಲೆಂಡ್ ಮತ್ತು ಜಿಂಬಾಬ್ವೆ ಟಿ20 ಸರಣಿಗಳಲ್ಲಿ ವೈಭವ್​​ ಆಡುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ವೈಭವ್​ರನ್ನು ಟೀಮ್​ ಇಂಡಿಯಾಗೆ ಆಯ್ಕೆ ಮಾಡಬೇಕೆಂಬ ಸಾಕಷ್ಟು ಆಗ್ರಹಗಳು ಕೇಳಿಬಂದ ಬಳಿಕ ಬಿಸಿಸಿಐ ಈ ನಿರ್ಧಾರ ತೆಗೆದುಕೊಂಡಿದೆ ಎಂದು ಹೇಳಲಾಗುತ್ತಿದೆ. ಇದರ ನಡುವೆ ಮಾಜಿ ಕ್ರಿಕೆಟಿಗ ಆರ್​. ಅಶ್ವಿನ್​, ವೈಭವ್​ ವಿಚಾರದಲ್ಲಿ ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ. 
ವೆಸ್ಟ್ ಇಂಡೀಸ್ ( ಅಕ್ಟೋಬರ್​ 6 ರಿಂದ 17) ವಿರುದ್ಧದ ತವರಿನ ಸರಣಿ ಮತ್ತು ಏಷ್ಯನ್ ಗೇಮ್ಸ್ ( ಸೆಪ್ಟೆಂಬರ್​ 19 ರಿಂದ ಅಕ್ಟೋಬರ್​ 6) ಪಂದ್ಯಾವಳಿಗಳ ವೇಳಾಪಟ್ಟಿಯಲ್ಲಿ ಘರ್ಷಣೆಯಾಗುವ ಹಿನ್ನೆಲೆಯಲ್ಲಿ ಎರಡು ಬೇರೆ ಬೇರೆ ಟಿ20 ತಂಡಗಳನ್ನು ರಚಿಸಿ, ಕಣಕ್ಕೆ ಇಳಿಸುವ ಚರ್ಚೆಗಳು ನಡೆಯುತ್ತಿವೆ. ಆದರೆ, ಈ ಆಲೋಚನೆಯನ್ನು ರವಿಚಂದ್ರನ್ ಅಶ್ವಿನ್ ಖಂಡಿಸಿದ್ದಾರೆ. ರಾಷ್ಟ್ರೀಯ ತಂಡದ ಕ್ಯಾಪ್‌ಗಳನ್ನು (ಗೌರವವನ್ನು) ಹೀಗೆ ಸುಲಭವಾಗಿ ಅಥವಾ "ಉಚಿತವಾಗಿ ಹಂಚಲು" ಸಾಧ್ಯವಿಲ್ಲ ಎಂದು ಅಶ್ವಿನ್​ ಅವರು ಅಭಿಪ್ರಾಯಪಟ್ಟಿದ್ದಾರೆ. ಅದರ ಬದಲಿಗೆ, ಆಟಗಾರರಿಗೆ ಹೆಚ್ಚಿನ ಅನುಭವ ನೀಡಲು 'ಎ' ತಂಡಗಳ ಪ್ರವಾಸಗಳನ್ನು ಆಯೋಜಿಸುವುದು ಉತ್ತಮ ಎಂದು ತಮ್ಮ 'ಅಶ್ ಕಿ ಬಾತ್' ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ. 
ರವಿಚಂದ್ರನ್ ಅಶ್ವಿನ್ ಅವರು ತಮ್ಮ 'ಅಶ್ ಕಿ ಬಾತ್' ಕಾರ್ಯಕ್ರಮದಲ್ಲಿ ಕೇವಲ ಐಪಿಎಲ್ ಪ್ರತಿಭೆಗಳನ್ನೊಳಗೊಂಡ ಎರಡನೇ ದರ್ಜೆಯ ತಂಡವನ್ನು ಕಣಕ್ಕಿಳಿಸುವ ಆಲೋಚನೆಯನ್ನು ಕಟುವಾಗಿ ಟೀಕಿಸಿದ್ದಾರೆ. ವೈಭವ್ ಸೂರ್ಯವಂಶಿ, ಪ್ರಿಯಾಂಶ್ ಆರ್ಯ ಅವರಂತಹ ಉದಯೋನ್ಮುಖ ಆಟಗಾರರನ್ನು ನೇರವಾಗಿ ಅಂತಾರಾಷ್ಟ್ರೀಯ ಪಂದ್ಯಗಳಿಗೆ ಕಳುಹಿಸುವುದು "ಟೀಮ್ ಇಂಡಿಯಾ ಕ್ಯಾಪ್" ಅಥವಾ ಗೌರವದ ಮೌಲ್ಯವನ್ನು ಕುಗ್ಗಿಸುತ್ತದೆ ಎಂದು ಅಶ್ವಿನ್​ ಅಭಿಪ್ರಾಯಪಟ್ಟಿದ್ದಾರೆ. 

ಅಶ್ವಿನ್​ ವಾದವೇನು?

ಪ್ರತಿಯೊಬ್ಬ ಕ್ರಿಕೆಟಿಗನೂ ಅಭಿಮಾನಿಗಳ ಸಮ್ಮುಖದಲ್ಲಿ ಹೆಮ್ಮೆಯಿಂದ ದೇಶವನ್ನು ಪ್ರತಿನಿಧಿಸುವ ಕನಸು ಕಾಣುತ್ತಾನೆ ಆದರೆ, ಇತ್ತೀಚಿನ ದಿನಗಳಲ್ಲಿ ಯಾರು? ಎಲ್ಲಿ? ಪದಾರ್ಪಣೆ ಮಾಡುತ್ತಿದ್ದಾರೆ ಎಂಬುದು ಜನರಿಗೇ ತಿಳಿಯದಂತಾಗಿದೆ ಎಂದು ಅಶ್ವಿನ್ ಬೇಸರ ವ್ಯಕ್ತಪಡಿಸಿದ್ದಾರೆ. ಒಟ್ಟಾರೆಯಾಗಿ, ರಾಷ್ಟ್ರೀಯ ತಂಡದ ಕ್ಯಾಪ್ ಪಡೆಯುವುದು ಒಂದು ಸುಲಭದ ವಿಷಯವಾಗಬಾರದು ಮತ್ತು ಅದರ ಪಾವಿತ್ರ್ಯತೆಯನ್ನು ಉಳಿಸಿಕೊಳ್ಳಬೇಕು ಎಂಬುದು ಅಶ್ವಿನ್ ಅವರ ವಾದವಾಗಿದೆ.
ಭಾರತ ತಂಡಕ್ಕೆ ಆಯ್ಕೆಯಾಗುವ ಆಟಗಾರರಿಗೆ ಸಿಗುವ ಆ ರಾಷ್ಟ್ರೀಯ ಕ್ಯಾಪ್ ಅತ್ಯಂತ ಮೌಲ್ಯಯುತವಾದುದು ಮತ್ತು ಅದನ್ನು ಸುಲಭವಾಗಿ ಎಲ್ಲರಿಗೂ ನೀಡಬಾರದು. ಯುವ ಆಟಗಾರರಿಗೆ ಅಂತಾರಾಷ್ಟ್ರೀಯ ಮಟ್ಟದ ಅನುಭವ ನೀಡಲು 'ಭಾರತ ಎ' ತಂಡದ ಪ್ರವಾಸಗಳನ್ನು ಆಯೋಜಿಸಿ ಅವುಗಳನ್ನು ದೂರದರ್ಶನದಲ್ಲಿ ಪ್ರಸಾರ ಮಾಡಬೇಕೇ ಹೊರತು, ರಾಷ್ಟ್ರೀಯ ತಂಡದ ಸ್ಥಾನವನ್ನು ಅಗ್ಗವಾಗಿಸಬಾರದು ಎಂಬುದು ಅಶ್ವಿನ್​ ಅವರ ಆಶಯವಾಗಿದೆ. 
ಇನ್ನು ಐಪಿಎಲ್ ಮುಗಿದ ನಂತರ ಭಾರತ ತಂಡವು 2027ರ ವಿಶ್ವಕಪ್ ಮೇಲೆ ಹೆಚ್ಚು ಗಮನಹರಿಸಲಿದೆ. ಇದರ ನಡುವೆ ಟೀಮ್​ ಇಂಡಿಯಾ ಸಾಕಷ್ಟು ಟಿ20 ಪಂದ್ಯಗಳನ್ನು ಸಹ ಆಡಲಿದೆ. ಈ ಅಂತಾರಾಷ್ಟ್ರೀಯ ವೇಳಾಪಟ್ಟಿಯು ಜೂನ್ 6 ರಿಂದ 20 ರವರೆಗೆ ಅಫ್ಘಾನಿಸ್ತಾನ ವಿರುದ್ಧ ನಡೆಯಲಿರುವ ಏಕೈಕ ಟೆಸ್ಟ್ ಮತ್ತು ಮೂರು ಏಕದಿನ ಪಂದ್ಯಗಳ ಸರಣಿಯೊಂದಿಗೆ ಪುನರಾರಂಭಗೊಳ್ಳಲಿದೆ.
ಭಾರತ ಕ್ರಿಕೆಟ್ ತಂಡದ ಮುಂಬರುವ ವೇಳಾಪಟ್ಟಿಯ ಪ್ರಕಾರ, ಜೂನ್ 26 ರಿಂದ 28 ರವರೆಗೆ ಐರ್ಲೆಂಡ್ ವಿರುದ್ಧ ಎರಡು ಟಿ20 ಪಂದ್ಯಗಳನ್ನು ಆಡಲಿದೆ. ನಂತರ, ಜುಲೈ 1 ರಿಂದ 11 ರವರೆಗೆ ಇಂಗ್ಲೆಂಡ್ ವಿರುದ್ಧ ಐದು ಟಿ20 ಮತ್ತು ಮೂರು ಏಕದಿನ ಪಂದ್ಯಗಳ ಸರಣಿ ನಡೆಯಲಿದೆ. ಜುಲೈ 23 ರಿಂದ 26 ರವರೆಗೆ ಜಿಂಬಾಬ್ವೆ ಪ್ರವಾಸ ಕೈಗೊಳ್ಳಲಿರುವ ಭಾರತ ತಂಡ ಅಲ್ಲಿ ಮೂರು ಟಿ20 ಪಂದ್ಯಗಳನ್ನು ಆಡಲಿದೆ. ತದನಂತರ, ವೆಸ್ಟ್ ಇಂಡೀಸ್ ವಿರುದ್ಧ ತವರಿನಲ್ಲಿ ಮೂರು ಏಕದಿನ ಪಂದ್ಯಗಳನ್ನಾಡಿ, ಅಕ್ಟೋಬರ್ 6 ರಿಂದ 17 ರವರೆಗೆ ಐದು ಟಿ20 ಪಂದ್ಯಗಳ ಸರಣಿಯಲ್ಲಿ ಭಾಗವಹಿಸಲಿದೆ. ಅಂತಿಮವಾಗಿ, ಡಿಸೆಂಬರ್ 13 ರಿಂದ 27 ರವರೆಗೆ ಶ್ರೀಲಂಕಾ ವಿರುದ್ಧ ತವರಿನಲ್ಲಿ ತಲಾ ಮೂರು ಏಕದಿನ ಮತ್ತು ಟಿ20 ಪಂದ್ಯಗಳನ್ನು ಆಡುವ ಮೂಲಕ ಭಾರತ ತಂಡವು ಈ ವರ್ಷದ ಆಟವನ್ನು ಮುಕ್ತಾಯಗೊಳಿಸಲಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net