ಸಾಮಾನ್ಯವಾಗಿ ಮೈದಾನದಲ್ಲಿ ಎದುರಾಳಿ ತಂಡಗಳ ಪರ ಆಡುವಾಗಲೂ ತುಂಬಾ ಸ್ನೇಹಪರ ಮತ್ತು ಪ್ರೀತಿಯಿಂದ ವರ್ತಿಸುವ ಈ ಇಬ್ಬರೂ ಸಹೋದರರು, ಏಪ್ರಿಲ್ 12ರಂದು ಪಂದ್ಯದ ಸಮಯದಲ್ಲಿ ಅಂತರ ಕಾಯ್ದುಕೊಂಡರು. ಪರಸ್ಪರ ಮಾತನಾಡಿದ ಒಂದು ದೃಶ್ಯವೂ ಲಭ್ಯವಾಗಲಿಲ್ಲ. ಹೀಗಾಗಿ ಸಾಕಷ್ಟು ಅನುಮಾನಗಳು ಸೃಷ್ಟಿಯಾಯಿತು. ಅಂದು, ಇನ್ನಿಂಗ್ಸ್ನ 15ನೇ ಓವರ್ನಲ್ಲಿ ಜಾಕೋಬ್ ಡಫಿ ಬೌಲಿಂಗ್ನಲ್ಲಿ ಹಾರ್ದಿಕ್ ಶಾಟ್ ಆಡಿದರು. ಈ ವೇಳೆ ಚೆಂಡು ಗಾಳಿಯಲ್ಲಿ ಹಾರಿ ರೊಮಾರಿಯೊ ಶೆಫರ್ಡ್ ಕೈಸೇರಿತು. ನಿರ್ಣಾಯಕ ಹಂತದಲ್ಲಿ ಹಾರ್ದಿಕ್ ವಿಕೆಟ್ ಬೀಳುತ್ತಿದ್ದಂತೆ ಕೃನಾಲ್ ಪಾಂಡ್ಯ ಅವರು ಶೆಫರ್ಡ್ ಕಡೆಗೆ ಓಡಿ ಬಂದು ಸಂತೋಷದಿಂದ ಜಿಗಿದು ಸಂಭ್ರಮಿಸಿದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯಿತು. ವಾಸ್ತವವಾಗಿ ಹಾರ್ದಿಕ್ ವಿಕೆಟ್ ಬಿದ್ದಾಗ ಕೃನಾಲ್ ಸಂಭ್ರಮಿಸುವುದಿಲ್ಲ. ಬದಲಾಗಿ, ಹಾರ್ದಿಕ್ ಔಟ್ ಆದಾಗ ಅವರ ಬಳಿಗೆ ಓಡಿ ಬಂದು ಸಾಂತ್ವನ ಹೇಳುವಂತಹ ಅನೇಕ ಘಟನೆಗಳು ಈ ಹಿಂದೆ ನಡೆದಿವೆ. ಆದರೆ, ಅಂದು ಕೃನಾಲ್ ಸಂಭ್ರಮಾಚರಣೆ ಮಾಡಿದರು. ಹೀಗಾಗಿ, ಅಣ್ಣ-ತಮ್ಮನ ನಡುವೆ ಎಲ್ಲವೂ ಸರಿಯಿಲ್ಲ ಎಂಬ ವದಂತಿ ಹರಿದಾಡಿತು. ತಮ್ಮ ಪತ್ನಿ ನತಾಶಾ ಸ್ಟಾಂಕೋವಿಕ್ ಅವರಿಂದ ಬೇರ್ಪಟ್ಟ ನಂತರ, ಹಾರ್ದಿಕ್ ಮಹಿಕಾ ಶರ್ಮಾ ಜೊತೆ ಸಂಬಂಧ ಬೆಳೆಸಿದ್ದಾರೆ. ಈ ಸಂಬಂಧದ ಬಗ್ಗೆ ಕೃನಾಲ್ಗೆ ಅಸಮಾಧಾನ ಇದೆ. ಹೀಗಾಗಿ ಇಬ್ಬರೂ ಬೇರ್ಪಟ್ಟಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿದ್ದು, ಇದೀಗ ಕೃನಾಲ್ ಆ ವದಂತಿಗಳಿಗೆ ಬ್ರೇಕ್ ಹಾಕಿದ್ದಾರೆ.