ವೈಭವ್​ ಹೇಳಿದ ಮಾತು ಆ ಕೇಳಿ ಮೈಕಲ್ ವಾನ್‌ಗೆ ಶಾಕ್: ಸೂರ್ಯವಂಶಿ ಆಟದ ಅಸಲಿ ಸೀಕ್ರೆಟ್ ಬಿಚ್ಚಿಟ್ಟ ಕುಕ್! Vaibhav Sooryavanshi

ವೈಭವ್​ ಹೇಳಿದ ಮಾತು ಆ ಕೇಳಿ ಮೈಕಲ್ ವಾನ್‌ಗೆ ಶಾಕ್: ಸೂರ್ಯವಂಶಿ ಆಟದ ಅಸಲಿ ಸೀಕ್ರೆಟ್ ಬಿಚ್ಚಿಟ್ಟ ಕುಕ್! Vaibhav Sooryavanshi
ವೈಭವ್​ ಹೇಳಿದ ಮಾತು ಆ ಕೇಳಿ ಮೈಕಲ್ ವಾನ್‌ಗೆ ಶಾಕ್: ಸೂರ್ಯವಂಶಿ ಆಟದ ಅಸಲಿ ಸೀಕ್ರೆಟ್ ಬಿಚ್ಚಿಟ್ಟ ಕುಕ್! Vaibhav Sooryavanshi
Published on

ಪ್ರಮುಖ ಮುಖ್ಯಾಂಶಗಳು

  • ಐಪಿಎಲ್​ ಮುಗಿದರೂ ಇನ್ನೂ ಚಾಲ್ತಿಯಲ್ಲಿರುವ ಒಂದೇ ಒಂದು ಹೆಸರೆಂದರೆ ಅದು ವೈಭವ್ ಸೂರ್ಯವಂಶಿ
  • ತನ್ನ ಸಿಡಿಲಬ್ಬರದ ಬ್ಯಾಟಿಂಗ್​ ಮೂಲಕ ಚಿಕ್ಕ ವಯಸ್ಸಿನಲ್ಲಿ ವಿಶ್ವ ಕ್ರಿಕೆಟ್​ನಲ್ಲಿ ತನ್ನದೇ ಗುರುತು ಮೂಡಿಸಿದ್ದಾರೆ
  • ಇಂಗ್ಲೆಂಡ್ ತಂಡದ ಮಾಜಿ ನಾಯಕರಾದ ಅಲಿಸ್ಟರ್ ಕುಕ್ ಮತ್ತು ಮೈಕಲ್ ವಾನ್ ವೈಭವ್​ರನ್ನು ಕೊಂಡಾಡಿದ್ದಾರೆ
Vaibhav Sooryavanshi : ಐಪಿಎಲ್​ ಮುಗಿದರೂ ಇನ್ನೂ ಚಾಲ್ತಿಯಲ್ಲಿರುವ ಒಂದೇ ಒಂದು ಹೆಸರೆಂದರೆ ಅದು ವೈಭವ್ ಸೂರ್ಯವಂಶಿ. ತನ್ನ ಸಿಡಿಲಬ್ಬರದ ಬ್ಯಾಟಿಂಗ್​ ಮೂಲಕವೇ ಕೇವಲ 15ನೇ ವಯಸ್ಸಿನಲ್ಲಿ ವಿಶ್ವ ಕ್ರಿಕೆಟ್​ನಲ್ಲಿ ತನ್ನದೇಯಾದ ಗುರುತು ಮೂಡಿಸಿದ್ದಾರೆ. ಇತ್ತೀಚೆಗೆ ಮುಕ್ತಾಯವಾದ ತಮ್ಮ ಎರಡನೇ ಐಪಿಎಲ್​ ಸೀಸನ್‌ನಲ್ಲಿ ಒಟ್ಟು 776 ರನ್ ಗಳಿಸುವ ಮೂಲಕ ಅತಿ ಹೆಚ್ಚು ರನ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದು ಅದ್ಭುತ ಸಾಧನೆ ಮಾಡಿದ್ದಾರೆ.
ರಾಜಸ್ಥಾನ ರಾಯಲ್ಸ್ (RR) ತಂಡದ ಪರ ಆಡಿದ ವೈಭವ್​, ಪ್ಲೇ-ಆಫ್ ಪಂದ್ಯಗಳಲ್ಲಿ ಸತತವಾಗಿ ಎರಡು ಬಾರಿ 90 ಪ್ಲಸ್ ರನ್ ಬಾರಿಸಿದಾಗಿನಿಂದಲೂ, ಅವರಿಗೆ ಭಾರತ ತಂಡದಲ್ಲಿ ಸ್ಥಾನ ನೀಡಬೇಕು ಎಂಬ ಆಗ್ರಹಗಳು ಕ್ರಿಕೆಟ್ ವಲಯದಲ್ಲಿ ಬಲವಾಗಿ ಕೇಳಿಬರುತ್ತಿವೆ. ಟೂರ್ನಿಯುದ್ದಕ್ಕೂ ಭರ್ಜರಿ ಬ್ಯಾಟಿಂಗ್ ನಡೆಸಿದ ಈ ಹದಿಹರೆಯದ ಆಟಗಾರ ಆರೆಂಜ್ ಕ್ಯಾಪ್ ಮುಡಿಗೇರಿಸಿಕೊಂಡಿದ್ದಲ್ಲದೆ, 'ಮೋಸ್ಟ್ ವ್ಯಾಲ್ಯೂಬಲ್ ಪ್ಲೇಯರ್' (MVP) ಹಾಗೂ 'ಎಮರ್ಜಿಂಗ್ ಪ್ಲೇಯರ್ ಆಫ್ ದಿ ಸೀಸನ್' ಪ್ರಶಸ್ತಿಗಳನ್ನೂ ಮುಡಿಗೇರಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಇಡೀ ಟೂರ್ನಿಯಲ್ಲಿ 237.31 ರ ಭರ್ಜರಿ ಸ್ಟ್ರೈಕ್ ರೇಟ್ ಕಾಯ್ದುಕೊಳ್ಳುವ ಮೂಲಕ 'ಸೂಪರ್ ಸ್ಟ್ರೈಕರ್' ಪ್ರಶಸ್ತಿ ಹಾಗೂ ದಾಖಲೆಯ 72 ಸಿಕ್ಸರ್‌ಗಳನ್ನು ಸಿಡಿಸಿ 'ಸೂಪರ್ ಸಿಕ್ಸಸ್' ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಇಂಗ್ಲೆಂಡ್ ತಂಡದ ಮಾಜಿ ನಾಯಕ ಅಲಿಸ್ಟರ್ ಕುಕ್ ಅವರು ವಂಡರ್​ ಕಿಡ್​ ವೈಭವ್ ಸೂರ್ಯವಂಶಿ ಅವರ ಬ್ಯಾಟಿಂಗ್ ಶೈಲಿಗೆ ಸಂಪೂರ್ಣ ಫಿದಾ ಆಗಿದ್ದಾರೆ. ವೈಭವ್ ಬ್ಯಾಟಿಂಗ್‌ನಲ್ಲಿ ನನಗೆ ಪ್ರಮುಖವಾಗಿ ಕಂಡ ಅಂಶವೆಂದರೆ, ಅವರು ಮುಂಚಿತವಾಗಿಯೇ ಯಾವುದೇ ನಿರ್ಧಾರ ಮಾಡಿ ಶಾಟ್ ಬಾರಿಸುವುದಿಲ್ಲ. ವಿಶ್ವದ ಅತ್ಯುತ್ತಮ ಹಿಟ್ಟರ್‌ಗಳೂ ಸಹ ಸಿಕ್ಸರ್ ಬಾರಿಸಲು ತಮಗೆ ಅನುಕೂಲಕರವಾದ ಒಂದು ಅಥವಾ ಎರಡು ನಿರ್ದಿಷ್ಟ ಜಾಗಗಳಿಗೆ ಚೆಂಡು ಬರುವುದನ್ನೇ ಕಾಯುತ್ತಾರೆ. ಆದರೆ ವೈಭವ್ ಹಾಗಲ್ಲ, ನೀವು ಗಂಟೆಗೆ 99 ಮೈಲಿ ವೇಗದಲ್ಲಿ ಬೌಲಿಂಗ್ ಮಾಡಿದರೂ, ಅವರು ಕೇವಲ ಆ ಕ್ಷಣದ ಪ್ರತಿಕ್ರಿಯೆಯಾಗಿ ಅತ್ಯಂತ ಸಲೀಸಾಗಿ ಚೆಂಡನ್ನು ಸಿಕ್ಸರ್‌ಗೆ ಅಟ್ಟುತ್ತಾರೆ. ಅವರ ಈ ಸ್ವಚ್ಛ ಹಾಗೂ ವಿಭಿನ್ನ ಬ್ಯಾಟಿಂಗ್ ಶೈಲಿಯೇ ಅವರನ್ನು ಎಲ್ಲರಿಗಿಂತ ಭಿನ್ನವಾಗಿಸಿದೆ ಎಂದು ಕುಕ್ ಪಾಡ್‌ಕಾಸ್ಟ್‌ ಒಂದರಲ್ಲಿ ಕೊಂಡಾಡಿದ್ದಾರೆ.
ಇಂಗ್ಲೆಂಡ್‌ನ ಮತ್ತೊಬ್ಬ ಮಾಜಿ ನಾಯಕ ಮೈಕಲ್ ವಾನ್ ಕೂಡ ವೈಭವ್ ಸೂರ್ಯವಂಶಿ ಅವರ ಮುಗ್ಧತೆ ಮತ್ತು ಆಟದ ವೈಖರಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಮುಂಬೈನಲ್ಲಿ ನಡೆದ ಒಂದು ಸ್ವಾರಸ್ಯಕರ ಘಟನೆಯನ್ನು ನೆನಪಿಸಿಕೊಂಡ ಅವರು, ಕಳೆದ ವಾರ ಮುಂಬೈನಲ್ಲಿ ರಾಜಸ್ಥಾನ ಮತ್ತು ಮುಂಬೈ ನಡುವೆ ಪ್ಲೇ-ಆಫ್‌ಗೆ ಹೋಗಲು ಮಹತ್ವದ ಪಂದ್ಯವಿತ್ತು. ನಾನು ಅಲ್ಲಿನ ಹೋಟೆಲ್ ಪೂಲ್ ಬಳಿ ಇದ್ದಾಗ ಯಶಸ್ವಿ ಜೈಸ್ವಾಲ್ ಬಂದು ಮಾತನಾಡಿಸಿದರು. ಅವರ ಜೊತೆಯಲ್ಲೇ ಈ ಯುವ ಆಟಗಾರ ವೈಭವ್ ಕೂಡ ಬಂದರು. ನಾನು ಅವರ ಬಳಿ, ನಿಮ್ಮನ್ನು ಭೇಟಿಯಾಗಿದ್ದು ಸಂತೋಷ ತಂದಿದೆ, ನಿಮ್ಮ ಆಟದ ಶೈಲಿ ಎಂದರೆ ನನಗೆ ಅಪಾರ ಗೌರವ. ಅಂದಹಾಗೆ ನೀವು ಪಂದ್ಯಗಳಿಗೆ ಹೇಗೆ ಸಿದ್ಧರಾಗುತ್ತೀರಿ? ಎಂದು ಕೇಳಿದೆ. ಅದಕ್ಕೆ ಆ ಹುಡುಗ ತೀರಾ ಮುಗ್ಧವಾಗಿ 'ಕಾರ್ಟೂನ್ ನೋಡುವ ಮೂಲಕ' ಎಂದು ಉತ್ತರಿಸಿದ ಎಂದು ವಾನ್ ನೆನಪಿಸಿಕೊಂಡಿದ್ದಾರೆ.
ಈ ಉತ್ತರದಿಂದ ಆಶ್ಚರ್ಯಚಕಿತರಾದ ವಾನ್, ಹಾಗಾದರೆ ನೀವು ಕಠಿಣ ತರಬೇತಿ ಮಾಡುವುದಿಲ್ಲವೇ? ಎಂದು ಕೇಳಿದಾಗ ವೈಭವ್, ಇಲ್ಲ ಎಂದಿದ್ದರಂತೆ. ಮುಂದುವರಿದು, ನೀವು ದಿನನಿತ್ಯ ಏನು ಆಹಾರ ಸೇವಿಸುತ್ತೀರಿ? ಎಂದು ಕೇಳಿದ್ದಕ್ಕೆ, ಸಿಕ್ಕಿದ್ದನ್ನೆಲ್ಲ ತಿನ್ನುತ್ತೇನೆ ಎಂದು ಉತ್ತರಿಸಿದ್ದಾರೆ. ಇದನ್ನು ಕೇಳಿ ಅಚ್ಚರಿಪಟ್ಟ ಮೈಕಲ್ ವಾನ್, ಇವರೇ ಇಂದಿನ ಆಧುನಿಕ ಯುಗದ ಆಟಗಾರ! ಆರಾಮವಾಗಿ ಕಾರ್ಟೂನ್ ನೋಡಿ, ಇಷ್ಟ ಬಂದಿದ್ದನ್ನು ತಿಂದು, ಮೈದಾನಕ್ಕಿಳಿದು ಚೆಂಡನ್ನು ಸಿಕ್ಸರ್‌ಗೆ ಅಟ್ಟುತ್ತಾರೆ ಎಂದು ವೈಭವ್ ಅವರ ಬಿಂದಾಸ್ ಶೈಲಿಯನ್ನು ಹೊಗಳಿದ್ದಾರೆ.
ಐಪಿಎಲ್‌ನಲ್ಲಿ ಅಬ್ಬರಿಸಿದ ಬಳಿಕ ಈ 15 ವರ್ಷದ ರನ್ ಮಷಿನ್ ಮುಂದಿನ ದಿನಗಳಲ್ಲಿ ಶ್ರೀಲಂಕಾದಲ್ಲಿ ನಡೆಯಲಿರುವ ಭಾರತ ಎ ತಂಡದ ತ್ರಿಕೋನ ಸರಣಿಯಲ್ಲಿ ಕಣಕ್ಕಿಳಿಯಲಿದ್ದಾರೆ. ಇಷ್ಟೇ ಅಲ್ಲದೆ, ಅವರ ಇತ್ತೀಚಿನ ಅಪ್ರತಿಮ ಫಾರ್ಮ್ ಅನ್ನು ಗಮನದಲ್ಲಿಟ್ಟುಕೊಂಡು, ಶೀಘ್ರದಲ್ಲೇ ಮುಂಬರುವ ಭಾರತ ತಂಡದ ಐರ್ಲೆಂಡ್ ಪ್ರವಾಸಕ್ಕೂ ಅವರು ಆಯ್ಕೆಯಾಗುವ ಸಾಧ್ಯತೆಗಳು ದಟ್ಟವಾಗಿವೆ ಎಂದು ವರದಿಯಾಗಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net