0, 0, W, 0, W, W..! ಲಾರ್ಡ್ಸ್‌ನಲ್ಲಿ ಓಲಿ ರಾಬಿನ್ಸನ್​ ಅಬ್ಬರಿಸಿದರೆ ವೈಭವ್ ಹೆಸರು ಚರ್ಚೆಯಾಗುತ್ತಿರುವುದೇಕೆ? Vaibhav Sooryavanshi

0, 0, W, 0, W, W..! ಲಾರ್ಡ್ಸ್‌ನಲ್ಲಿ ಓಲಿ ರಾಬಿನ್ಸನ್​ ಅಬ್ಬರಿಸಿದರೆ ವೈಭವ್ ಹೆಸರು ಚರ್ಚೆಯಾಗುತ್ತಿರುವುದೇಕೆ? Vaibhav Sooryavanshi
0, 0, W, 0, W, W..! ಲಾರ್ಡ್ಸ್‌ನಲ್ಲಿ ಓಲಿ ರಾಬಿನ್ಸನ್​ ಅಬ್ಬರಿಸಿದರೆ ವೈಭವ್ ಹೆಸರು ಚರ್ಚೆಯಾಗುತ್ತಿರುವುದೇಕೆ? Vaibhav Sooryavanshi
Published on

ಪ್ರಮುಖ ಮುಖ್ಯಾಂಶಗಳು

  • ಇಂಗ್ಲೆಂಡ್ ವೇಗಿ ಓಲಿ ರಾಬಿನ್ಸನ್ ನ್ಯೂಜಿಲೆಂಡ್ ವಿರುದ್ಧ ಲಾರ್ಡ್ಸ್‌ನಲ್ಲಿ ಆರಂಭವಾದ ಟೆಸ್ಟ್ ಪಂದ್ಯದಲ್ಲಿ ಬರ್ಜರಿ ಕಂಬ್ಯಾಕ್​ ಮಾಡಿದ್ದಾರೆ
  • ತಮ್ಮ ಮೊದಲ ಓವರ್‌ನಲ್ಲೇ ಯಾವುದೇ ರನ್ ನೀಡದೆ 3 ವಿಕೆಟ್ ಕಿತ್ತು ಇಂಗ್ಲೆಂಡ್‌ಗೆ ಭರ್ಜರಿ ಆರಂಭ ತಂದುಕೊಟ್ಟರು
  • ಸೀಮಿಂಗ್‌ಗೆ ನೆರವಾಗುವ ಇಂಗ್ಲೆಂಡ್ ಪಿಚ್‌ಗಳಲ್ಲಿ ತಾನ್ಯಾಕೆ ಅತ್ಯುತ್ತಮ ಬೌಲರ್ ಎಂಬುದನ್ನು ಸಾಬೀತುಪಡಿಸಿದರು
Vaibhav Sooryavanshi : ಇಂಗ್ಲೆಂಡ್ ತಂಡದಲ್ಲಿ ತನ್ನ ವೃತ್ತಿಜೀವನವೇ ಮುಗಿದುಹೋಯಿತು ಎಂಬ ಆತಂಕದಲ್ಲಿದ್ದ ವೇಗಿ ಓಲಿ ರಾಬಿನ್ಸನ್, ಗುರುವಾರ ನ್ಯೂಜಿಲೆಂಡ್ ವಿರುದ್ಧ ಲಾರ್ಡ್ಸ್‌ನಲ್ಲಿ ಆರಂಭವಾದ ಟೆಸ್ಟ್ ಪಂದ್ಯದ ಮೊದಲ ದಿನವೇ ಭರ್ಜರಿ ಕಂಬ್ಯಾಕ್ ಮಾಡಿದ್ದಾರೆ. ಮೋಡ ಕವಿದ ವಾತಾವರಣ ಹಾಗೂ ಸೀಮಿಂಗ್‌ಗೆ ನೆರವಾಗುವ ಇಂಗ್ಲೆಂಡ್ ಪಿಚ್‌ಗಳಲ್ಲಿ ತಾನ್ಯಾಕೆ ಅತ್ಯುತ್ತಮ ಬೌಲರ್ ಎಂಬುದನ್ನು ಸಾಬೀತುಪಡಿಸಿದ ಅವರು, ತಮ್ಮ ಮೊದಲ ಓವರ್‌ನಲ್ಲೇ ಯಾವುದೇ ರನ್ ನೀಡದೆ 3 ವಿಕೆಟ್ (0,0,W,0,W,W) ಕಿತ್ತು ಇಂಗ್ಲೆಂಡ್‌ಗೆ ಭರ್ಜರಿ ಆರಂಭ ತಂದುಕೊಟ್ಟರು. 
ತಮ್ಮ 3ನೇ ಎಸೆತದಲ್ಲಿ ಡೆವೊನ್ ಕಾನ್ವೆ, 5ನೇ ಎಸೆತದಲ್ಲಿ ಕೇನ್ ವಿಲಿಯಮ್ಸನ್ ಹಾಗೂ 6ನೇ ಎಸೆತದಲ್ಲಿ ರಚಿನ್ ರವೀಂದ್ರ ಅವರ ವಿಕೆಟ್ ಪಡೆದ ರಾಬಿನ್ಸನ್ ಅವರ ಈ ಮಾರಕ ಸ್ಪೆಲ್‌ನ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ಭಾರತದ ವಂಡರ್​ ಕಿಡ್​ ವೈಭವ್ ಸೂರ್ಯವಂಶಿ ಅವರಂತೂ ಇಂತಹ ಅಪಾಯಕಾರಿ ಬೌಲಿಂಗ್ ಎದುರಿಸಿ ಕ್ರೀಸ್‌ನಲ್ಲಿ ಉಳಿಯಲು ಸಾಧ್ಯವಿದೆಯೇ ಎಂದು ಕ್ರಿಕೆಟ್ ಅಭಿಮಾನಿಗಳು ಚರ್ಚಿಸಲು ಆರಂಭಿಸಿದ್ದಾರೆ.
ಜೋಫ್ರಾ ಆರ್ಚರ್ ಮತ್ತು ಬ್ರೈಡನ್ ಕಾರ್ಸೆ ಈ ಸರಣಿಯ ಮೊದಲ ಪಂದ್ಯಕ್ಕೆ ಲಭ್ಯವಿಲ್ಲದ ಕಾರಣ, ಆತಿಥೇಯ ಇಂಗ್ಲೆಂಡ್ ಕೇವಲ 140 ರನ್‌ಗಳಿಗೆ ಆಲೌಟ್ ಆದ ಸವಾಲಿನ ಪರಿಸ್ಥಿತಿಯಲ್ಲಿ ಓಲಿ ರಾಬಿನ್ಸನ್‌ಗೆ ಹೊಸ ಚೆಂಡನ್ನು ನೀಡಲಾಯಿತು. ತಮಗೆ ಸಿಕ್ಕ ಈ ಅವಕಾಶವನ್ನು ಬಳಸಿಕೊಂಡ ರಾಬಿನ್ಸನ್​ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದರು. ಮೈದಾನದಲ್ಲಿ ಮೂಡಿಬಂದ ಈ ಅದ್ಭುತ ಬೌಲಿಂಗ್ ಪ್ರದರ್ಶನದ ನಡುವೆಯೂ, ಒಂದು ವೇಳೆ ಭಾರತದ ಯುವ ಆಟಗಾರ ವೈಭವ್ ಸೂರ್ಯವಂಶಿ ಈ ಪರಿಸ್ಥಿತಿಯಲ್ಲಿದ್ದಿದ್ದರೆ ರಾಬಿನ್ಸನ್ ಅವರ ಆ ಮಾರಕ ದಾಳಿಯನ್ನು ಎದುರಿಸಿ ಕ್ರೀಸ್‌ನಲ್ಲಿ ಉಳಿಯುತ್ತಿದ್ದರೆ? ಎಂಬ ಕುತೂಹಲಕಾರಿ ಪ್ರಶ್ನೆ ಮಾತ್ರ ಕ್ರಿಕೆಟ್ ವಲಯದಲ್ಲಿ ಹಾಗೇ ಉಳಿದಿದೆ.
ಲಾರ್ಡ್ಸ್ ಮೈದಾನದ ಈ ಸವಾಲಿನ ಪಿಚ್‌ನಲ್ಲಿ ಇಂಗ್ಲೆಂಡ್ ವೇಗಿಯ ಮಾರಕ ದಾಳಿಯನ್ನು ಎದುರಿಸಲು ಕೇವಲ 15 ವರ್ಷದ ವೈಭವ್ ಸೂರ್ಯವಂಶಿಗೆ ಸಾಧ್ಯವಿರುತ್ತಿರಲಿಲ್ಲ ಎಂದು ಕೆಲವು ಅಭಿಮಾನಿಗಳು ಅಭಿಪ್ರಾಯಪಟ್ಟರೆ, ಇನ್ನು ಕೆಲವರು ವೈಭವ್ ಇನ್ನೂ ಭಾರತ ತಂಡಕ್ಕೇ ಪದಾರ್ಪಣೆ ಮಾಡಿಲ್ಲ, ಅಷ್ಟರಲ್ಲೇ ಇಂತಹ ಕಠಿಣ ಪಿಚ್‌ಗಳಲ್ಲಿ ಅವರ ಬ್ಯಾಟಿಂಗ್ ಸಾಮರ್ಥ್ಯವನ್ನು ಅಳೆಯುವುದು ಅಥವಾ ನಿರ್ಣಯಿಸುವುದು ತೀರಾ ಮುಂಚಿತವಾಗುತ್ತದೆ ಎಂದು ಯುವ ಆಟಗಾರನ ಬೆಂಬಲಕ್ಕೆ ನಿಂತಿದ್ದಾರೆ.
ಮತ್ತೊಂದೆಡೆ, ತಮ್ಮ ಮೊದಲ ಓವರ್‌ನಲ್ಲೇ ನ್ಯೂಜಿಲೆಂಡ್ ತಂಡಕ್ಕೆ ಶಾಕ್ ನೀಡಿದ ಇಂಗ್ಲೆಂಡ್ ವೇಗಿ ಓಲಿ ರಾಬಿನ್ಸನ್, ಪಂದ್ಯದ ಆರಂಭದಲ್ಲಿ ತಾವೂ ತೀವ್ರ ಆತಂಕಕ್ಕೆ ಒಳಗಾಗಿದ್ದಾಗಿ ಒಪ್ಪಿಕೊಂಡಿದ್ದಾರೆ. ಮೊದಲ ಓವರ್ ಬೌಲಿಂಗ್ ಮಾಡುವಾಗ ಅತಿಯಾದ ಭಯದಿಂದಾಗಿ ನನ್ನ ಕಾಲುಗಳೇ ನನಗೆ ತಿಳಿಯುತ್ತಿರಲಿಲ್ಲ. ಆದರೆ, ಮೊದಲ ವಿಕೆಟ್ ಉರುಳುತ್ತಿದ್ದಂತೆ ನನ್ನಲ್ಲಾದ ಭಾವನಾತ್ಮಕ ಬದಲಾವಣೆ ನಂಬಲಾಗದಂತಿತ್ತು ಎಂದು ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ ರಾಬಿನ್ಸನ್ ಹೇಳಿದ್ದಾರೆ. ಅಲ್ಲದೆ ಮೈದಾನದಲ್ಲಿದ್ದ ಪ್ರೇಕ್ಷಕರ ಗದ್ದಲ ಜೋರಾಗಿದ್ದರಿಂದ ತಾವು ಕೇವಲ ಬೌಲಿಂಗ್ ಮೇಲೆ ಗಮನ ಹರಿಸಲು ಪ್ರಯತ್ನಿಸುತ್ತಿದ್ದಾಗಿ ಅವರು ತಿಳಿಸಿದ್ದಾರೆ
ಇದೇ ವೇಳೆ ತಮ್ಮ ಕ್ರಿಕೆಟ್ ವೃತ್ತಿಜೀವನದ ಬದಲಾವಣೆಯ ಕುರಿತು ಮಾತನಾಡಿದ ಅವರು, ನಾನು ಮತ್ತೊಮ್ಮೆ ಇಂಗ್ಲೆಂಡ್ ಪರ ಆಡುತ್ತೇನೆ ಎಂಬ ಭರವಸೆಯನ್ನೇ ಕಳೆದುಕೊಂಡಿದ್ದೆ. ಆದರೆ, ಕೋಚ್ ಬ್ರೆಂಡನ್ ಮೆಕಲಮ್ ಅವರಿಂದ ಬಂದ ಒಂದು ಸಂದೇಶ ನನ್ನ ಆಲೋಚನಾ ಶೈಲಿಯನ್ನೇ ಬದಲಾಯಿಸಿತು. ತಂಡಕ್ಕೆ ಮರಳಲು ಕಠಿಣ ಶ್ರಮವಹಿಸಿದ್ದೇನೆ ಮತ್ತು ಇಂದಿನ ಪ್ರದರ್ಶನಕ್ಕಾಗಿ ನನ್ನ ಫಿಟ್‌ನೆಸ್ ಅನ್ನು ಅತ್ಯುತ್ತಮವಾಗಿಸಿಕೊಂಡಿದ್ದೇನೆ ಎಂದಿದ್ದಾರೆ. 
ಮೊದಲ ದಿನದಾಟದ ಅಂತ್ಯಕ್ಕೆ 6 ಓವರ್‌ಗಳಲ್ಲಿ 3 ಮೇಡನ್ ಸಹಿತ ಕೇವಲ 10 ರನ್ ನೀಡಿ 4 ವಿಕೆಟ್ ಪಡೆದ ರಾಬಿನ್ಸನ್ ಸಾಧನೆಯಿಂದಾಗಿ, ನ್ಯೂಜಿಲೆಂಡ್ 61 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡು ತತ್ತರಿಸಿದ್ದು, ಇಂಗ್ಲೆಂಡ್ ಪಂದ್ಯದ ಮೇಲೆ ಹಿಡಿತ ಸಾಧಿಸಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net