More

    ‘ಲವ್​ ಬರ್ಡ್ಸ್’ ಸಿನಿಮಾ ನಿರ್ದೇಶಕ-ನಿರ್ಮಾಪಕರ ನಡುವೆ ಗಲಾಟೆ; ಕಡ್ಡಿಪುಡಿ ಚಂದ್ರು ನೀಡಿದ ಸ್ಪಷ್ಟನೆ ಹೀಗಿದೆ…

    ಬೆಂಗಳೂರು: ನಿರ್ದೇಶಕ ಪಿ.ಸಿ. ಶೇಖರ್​ ಮತ್ತು ನಿರ್ಮಾಪಕ ಕಡ್ಡಿಪುಡಿ ಚಂದ್ರು ನಡುವೆ ವಾಗ್ವಾದ ಏರ್ಪಟ್ಟಿದ್ದು, ಪ್ರಕರಣ ಪೊಲೀಸ್​ ಠಾಣೆ ಮಟ್ಟಿಲೇರಿದೆ. ಕಡ್ಡಿಪುಡಿ ಚಂದ್ರು ಮತ್ತು ಪಿಸಿ ಶೇಖರ್​ ಅವರು ‘ಲವ್​ ಬರ್ಡ್ಸ್​’ ಸಿನಿಮಾದಲ್ಲಿ ಜೊತೆಯಾಗಿ ಕೆಲಸ ಮಾಡಿದ್ದು, ಹಣಕಾಸಿನ ವಿಚಾರದಲ್ಲಿ ಮನಸ್ತಾಪ ಉಂಟಾಗಿದೆ. ತಮಗೆ ಬರಬೇಕಾದ ಸಂಭಾವನೆಯನ್ನು ನಿರ್ಮಾಪಕರು ನೀಡಿಲ್ಲ ಎಂದು ಪಿ.ಸಿ. ಶೇಖರ್​ ಆರೋಪಿಸಿದ್ದಾರೆ. ಅಲ್ಲದೇ ಕಡ್ಡಿಪುಡಿ ಚಂದ್ರು ಅವರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಪಿ.ಸಿ. ಶೇಖರ್​ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ಇದನ್ನೂ ಓದಿ: ಚಿತ್ರರಂಗಕ್ಕೆ ಜೆಕೆ ಗುಡ್‌ಬೈ? ಅಭಿಮಾನಿಗಳ ಒತ್ತಾಯಕ್ಕೆ ಮಣಿದ ನಟ

    ಪಿಸಿ ಶೇಖರ್ ನಿರ್ದೇಶನ ಮತ್ತು ಕಡ್ಡಿ ಪುಡಿ ಚಂದ್ರು ಅವರ ನಿರ್ಮಾಣದ ‘ಲವ್​ ಬರ್ಡ್ಸ್​’ ಸಿನಿಮಾ ಇತ್ತೀಚೆಗೆ ಬಿಡುಗಡೆಯಾಗಿತ್ತು. ಈ ಸಿನಿಮಾದಲ್ಲಿ ಡಾರ್ಲಿಂಗ್​ ಕೃಷ್ಣ ಮತ್ತು ಮಿಲನಾ ನಾಗರಾಜ್​ ಜೋಡಿಯಾಗಿ ನಟಿಸಿದ್ದರು. 20 ಲಕ್ಷ ರೂಪಾಯಿಗೆ ಸಿನಿಮಾ ನಿರ್ದೇಶಕರಾಗಿ ಕೆಲಸ ಮಾಡಲು ಅಗ್ರಿಮೆಂಟ್ ಆಗಿತ್ತು. ಈ ನಡುವೆ ಎಡಿಟಿಂಗ್​ ಸಲುವಾಗಿ 5 ಲಕ್ಷ ರೂ. ಹೆಚ್ಚುವರಿ ಖರ್ಚಾಗಿತ್ತು. ಹೀಗಾಗಿ ಒಟ್ಟು 25 ಲಕ್ಷ ರೂ. ಹಣವನ್ನು ನಿರ್ದೇಶಕ ಪಿ.ಸಿ.ಶೇಖರ್ ಅವರಿಗೆ ನೀಡಬೇಕಿತ್ತು. ಆದರೆ ಕಡ್ಡಿಪುಡಿ ಚಂದ್ರು 6.5 ಲಕ್ಷ ರೂ. ಮಾತ್ರ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.

    ಆರೋಪ ತಳ್ಳಿ ಹಾಕಿದ ಕಡ್ಡಿ ಪುಡಿ ಚಂದ್ರು

    ಲವ್ ಬರ್ಡ್ಸ್ ಸಿನಿಮಾ ತಂಡದ ಜಟಾಪಟಿಗೆ ಕಡ್ಡಿ ಪುಡಿ ಚಂದ್ರು ಸ್ಪಷ್ಟನೆ ನೀಡಿದ್ದು, ಸದ್ಯ ಎದುರಾಗಿರುವ ಸಮಸ್ಯೆಯನ್ನು ಕಾನೂನು ಮೂಲಕ ಬಗೆ ಹರಿಸಿಕೊಳ್ಳುತ್ತೇವೆ. ಈಗಾಗಲೇ ಫಿಲಂ ಚೇಂಬರ್ ಹಾಗು ನಿರ್ಮಾಪಕರ ಸಂಘದಲ್ಲಿ ಮಾತುಕಥೆ ನಡೆಯುತ್ತಿದ್ದು, ಈ ಬಗ್ಗೆ ಸೋಮವಾರ ಮಾತನಾಡುತ್ತೇನೆ ಎಂದು ಹೇಳಿದ್ದಾರೆ. ತನ್ನ ಮೇಲೆ ಬಂದಿರುವ ಆರೋಪ ಪ್ರಕರಣದ ಬಗ್ಗೆ ವಿಡಿಯೋ ಮೂಲಕ ಸ್ಪಷ್ಟನೆ ನೀಡಿರುವ ಕಡ್ಡಿ ಪುಡಿ ಚಂದ್ರು ಆರೋಪ ತಳ್ಳಿ ಹಾಕಿದ್ದಾರೆ.

    ಇದನ್ನೂ ಓದಿ: ಪರಭಾಷೆಗೂ ಹೋಗುವೆ: ಧಾರಾವಾಹಿಗೆ ಜೈ, ಸಿನಿಮಾಗಳಿಗೆ ಸೈ ಎಂದ ಮೇಘಾ ಶೆಟ್ಟಿ

    ಏನಿದು ಪ್ರಕರಣ?

    ತನಗೆ ಬರಬೇಕಿದ್ದ ಉಳಿದ ಹಣ ಕೇಳಿದರೆ ಕಡ್ಡಿಪುಡಿ ಚಂದ್ರು ಅವಾಚ್ಯವಾಗಿ ನಿಂದಿಸಿ, ಬೆದರಿಕೆ ಹಾಕಿದ್ದಾರೆ. ನಂತರ ಸಿನಿಮಾ ಸೆನ್ಸಾರ್ ಮತ್ತು ಇತರೆ ವ್ಯವಹಾರ ನಡೆಸುವಾಗ ನಿರ್ದೇಶಕರ ಗಮನಕ್ಕೆ ಬಂದಿಲ್ಲ. ಪಿ.ಸಿ. ಶೇಖರ್ ಅವರಿಂದ ಕ್ಲಿಯರೆನ್ಸ್ ಪಡೆದಿರುವುದಾಗಿ ಕಡ್ಡಿಪುಡಿ ಚಂದ್ರು ನಕಲಿ ಸಹಿ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

    ನಕಲಿ ಸಹಿ ಮಾಡಿ ನನಗೆ ಕೊಡಬೇಕಿದ್ದ 18.5 ಲಕ್ಷ ರೂ. ಹಣ ಕೊಟ್ಟಿಲ್ಲ. ಅಲ್ಲದೆ ನನ್ನ ಬಗ್ಗೆಯೇ ಕೆಟ್ಟದಾಗಿ ಸಿನಿಮಾ ರಂಗದಲ್ಲಿ ಮಾತನಾಡಿದ್ದಾರೆ. ಹಲವಾರು ನಿರ್ಮಾಪಕರ ಬಳಿ ಸಿನಿಮಾದಲ್ಲಿ ಅವಕಾಶ ನೀಡದಂತೆ ಬೆದರಿಸಿದ್ದಾರೆ ಎಂದು ಪಿ.ಸಿ. ಶೇಖರ್​ ಅವರು ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts