

ಬಂಟ್ವಾಳ: ರಸ್ತೆ ದಾಟುವ ವೇಳೆ ಬೈಕ್ ಡಿಕ್ಕಿಯಾಗಿ ಗಾಯಗೊಂಡಿದ್ದ ಕಾರು ಚಾಲಕರೋರ್ವರು ಅಪಘಾತ ನಡೆದು ಹದಿನೆಂಟು ದಿನಗಳ ಬಳಿಕ ಆರೋಗ್ಯ ಸಮಸ್ಯೆಯಿಂದ ನಿಧನರಾದ ಘಟನೆ ಮಂಗಳವಾರ ತುಂಬೆಯಲ್ಲಿ ನಡೆದಿದೆ. ಬಂಟ್ವಾಳ ತಾಲೂಕಿನ ಕಳ್ಳಿಗೆ ಗ್ರಾಮದ ಕಂಜತ್ತೂರು ನಿವಾಸಿ ಕಾರು ಚಾಲಕ ಬೋಜ ಮೂಲ್ಯ(62) ನಿಧನ ಹೊಂದಿದವರು. ಅ.11ರಂದು ರಾತ್ರಿ 7ರ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಕಾರು ನಿಲ್ಲಿಸಿ ರಸ್ತೆ ದಾಟುವ ವೇಳೆ ಬೈಕ್ ಡಿಕ್ಕಿಯಾಗಿತ್ತು. ಇದರಿಂದ ಕಾಲಿಗೆ ಗಾಯವಾಗಿದ್ದು, ಅವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ನಡೆದು 7 ದಿನಗಳ ನಂತರ ಆಸ್ಪತ್ರೆಯಿಂದ ಮನೆಗೆ ತೆರಳಿದ್ದರು. ಮನೆಯಲ್ಲಿ ಉಸಿರಾಟದ ತೊಂದರೆ ಕಂಡು ಬಂದಿದ್ದು ತುಂಬೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಬೆಳಗ್ಗೆ ನಿಧನ ಹೊಂದಿದರು. 42 ವರ್ಷಗಳಿಂದ ಕಾರು ಚಾಲಕರಾಗಿದ್ದರು.