

ಕಾಸರಗೋಡು: ಹೊಸಂಗಡಿ ಸನಿಹದ ಮುರತ್ತಣೆ ಜಂಕ್ಷನ್‌ನಲ್ಲಿ ಎರಡು ಕಾರುಗಳು ಮುಖಾಮುಖಿ ಡಿಕ್ಕಿಯಾಗಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಇತರ ಮೂವರು ಗಾಯಗೊಂಡಿದ್ದಾರೆ.
ಮೀಂಜ ಪಂಚಾಯಿತಿ ತಲೆಕ್ಕಳ ಸನಿಹದ ಕುದ್ರೆಪ್ಪಾಡಿ ನಿವಾಸಿ, ಕೃಷಿಕ ಅಬ್ದುಲ್ ಮುಸ್ಲಿಯಾರ್(65) ಮೃತಪಟ್ಟಿದ್ದು, ಅವರ ಪತ್ನಿ ಆಮಿನಾ, ಕಾರು ಚಲಾಯಿಸುತ್ತಿದ್ದ ಪುತ್ರಿ ಸಾಬಿರಾ, ದಂಪತಿಯ ಸೊಸೆ ಸುಮಯ್ಯ ಗಾಯಗೊಂಡಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಅಬ್ದುಲ್ ಮುಸ್ಲಿಯಾರ್ ಕುಟುಂಬ ಸೋಮವಾರ ರಾತ್ರಿ ಮಂಜೇಶ್ವರ ಪಾವೂರಿನ ಸಂಬಂಧಿಕರ ಮನೆಯಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡು ವಾಪಸಾಗುತ್ತಿದ್ದಾಗ ಮುರತ್ತಣೆ ಜಂಕ್ಷನ್‌ನಲ್ಲಿ ಅಪಘಾತ ಸಂಭವಿಸಿದೆ. ಗಾಯಾಳುಗಳನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ, ಅಬ್ದುಲ್ ಮುಸ್ಲಿಯಾರ್ ಜೀವ ಉಳಿಸಲು ಸಾಧ್ಯವಾಗಿಲ್ಲ. ಅಪಘಾತದಿಂದ ಎರಡೂ ಕಾರುಗಳಿಗೆ ಹಾನಿಯುಂಟಾಗಿದೆ. ಮಂಜೇಶ್ವರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.