ಸೆರೆಯಾದ ಚಿರತೆ ಮೃಗಾಲಯಕ್ಕೆ ರವಾನೆ : ಕೊಳತ್ತೂರಿನಲ್ಲಿ ಬೋನಿಗೆ ಬಿದ್ದಿದ್ದ ಪ್ರಾಣಿ

New Project (59)
Published on

ಕಾಸರಗೋಡು: ಬೇಡಡ್ಕ ಪಂಚಾಯಿತಿಯ ಕೊಳತ್ತೂರಿನಲ್ಲಿ ಅರಣ್ಯ ಇಲಾಖೆ ಅಳವಡಿಸಿರುವ ಬೋನಿನೊಳಗೆ ಸೆರೆಯಾದ ಚಿರತೆಯನ್ನು ತೃಶ್ಯೂರಿನ ಮೃಗಾಲಯ ಪುತ್ತೂರು ಜೂವಾಲಾಜಿಕಲ್ ಪಾರ್ಕ್‌ಗೆ ರವಾನಿಸಲಾಗಿದೆ.

ಸೆರೆಯಾದ ಚಿರತೆ ಶರೀರದಲ್ಲಿ ಸಣ್ಣಪುಟ್ಟ ಗಾಯಗಳುಂಟಾಗಿರುವ ಹಿನ್ನೆಲೆಯಲ್ಲಿ ವೈದ್ಯರಿಂದ ಚಿಕಿತ್ಸೆ ನೀಡಿದ ನಂತರ ಮೃಗಾಲಯಕ್ಕೆ ಕೊಂಡೊಯ್ಯಲಾಗಿದೆ. ಐದು ವರ್ಷ ಪ್ರಾಯದ ಗಂಡು ಚಿರತೆ ಇದಾಗಿದೆ.

ಕೊಳತ್ತೂರಿನ ಬರೋಟಿ ಸನಿಹ ನಿಡುವೋಟ್ ಎಂಬಲ್ಲಿ ಜನಾರ್ದನನ್ ಎಂಬುವರ ರಬ್ಬರ್ ತೋಟದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಅಳವಡಿಸಿದ್ದ ಬೋನಿನೊಳಗೆ ಬುಧವಾರ ಚಿರತೆ ಸೆರೆಯಾಗಿದ್ದು, ನಂತರ ಬೋನನ್ನು ಪಳ್ಳತ್ತುಂಗಾಲ್ ಅರಣ್ಯ ಇಲಾಖೆ ಕಚೇರಿಯಲ್ಲಿರಿಸಿದ್ದರು. ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿದ ನಂತರ ಮೃಗಾಲಯಕ್ಕೆ ಸ್ಥಳಾಂತರಿಸುವ ತೀರ್ಮಾನ ಕೈಗೊಳ್ಳಲಾಗಿತ್ತು.

ಇದೇ ಪ್ರದೇಶದಲ್ಲಿ ಫೆ.23ರಂದು ಅರಣ್ಯಾಧಿಕಾರಿಗಳು ಇರಿಸಿದ್ದ ಬೋನಿನೊಳಗೆ 5 ವರ್ಷ ಪ್ರಾಯದ ಹೆಣ್ಣು ಚಿರತೆಯೊಂದು ಸೆರೆಯಾಗಿತ್ತು. ಇದನ್ನು ಬೆಳ್ಳೂರು-ಎಣ್ಮಕಜೆ ಪಂಚಾಯಿತಿ ಗಡಿಪ್ರದೇಶದ ನೆಟ್ಟಣಿಗೆ-ಬೆಳ್ಳೂರು ಪ್ರದೇಶದಲ್ಲಿ ಬಿಟ್ಟಿದ್ದು, ಇದು ಭಾರಿ ಪ್ರತಿಭಟನೆಗೆ ಕಾರಣವಾಗಿತ್ತು. ಇದೇ ರೀತಿ ಯಾವುದಾದರೂ ಕಾಡಿಗೆ ಚಿರತೆಯನ್ನು ಬಿಡುವ ಸಾಧ್ಯತೆ ಬಗ್ಗೆ ಜನತೆ ಆತಂಕಿತರಾಗಿದ್ದರು. ಸೆರೆಯಾದ ಚಿರತೆಯನ್ನು ತೃಶ್ಯೂರಿನ ಮೃಗಾಲಯಕ್ಕೆ ರವಾನಿಸುವ ಬಗ್ಗೆ ನಿರ್ಣಯ ಕೈಗೊಳ್ಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net