

ಗುರುಪುರ: ಮೂಳೂರು-ಅಡ್ಡೂರು ಜೋಡುಕರೆ ಕಂಬಳ ಸಮಿತಿ ವತಿಯಿಂದ ಗುರುಪುರ ಮಾಣಿಬೆಟ್ಟುಗುತ್ತುವಿನಲ್ಲಿ ಏಪ್ರಿಲ್ 12ರಂದು ನಡೆಯಲಿರುವ ‘ಗುರುಪುರ ಕಂಬಳ’ದ ಆಮಂತ್ರಣ ಪತ್ರಿಕೆಯನ್ನು ಬುಧವಾರ ಬಿಡುಗಡೆ ಮಾಡಲಾಯಿತು.
ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಬೆಳಪು ಮಾತನಾಡಿ, 2024-25ನೇ ಸಾಲಿನ ಕಂಬಳದಲ್ಲಿ ಕೊನೆಯ ಕಂಬಳ ಗುರುಪುರದಲ್ಲಿ ನಡೆಯಲಿದೆ. ಕಳೆದ ವರ್ಷ ಗುರುಪುರ ಕಂಬಳ ಅದ್ದೂರಿಯಾಗಿ ನಡೆದಿತ್ತು. ರಾಜ್ಯ ಪ್ರವಾಸೋದ್ಯಮ ಇಲಾಖೆ ಮೂಲಕ ಪ್ರತಿ ಕಂಬಳಕ್ಕೆ 5 ಲಕ್ಷ ರೂ. ಅನುದಾನದ ಭರವಸೆ ಸಿಕ್ಕಿದೆ. ಕಂಬಳಕ್ಕೆ ಉತ್ತೇಜನ ನೀಡುವಂತೆ ಕೋರಿ ಪ್ರಹ್ಲಾದ್ ಜೋಶಿ ಮೂಲಕ ಕೇಂದ್ರಕ್ಕೆ ಮನವಿ ನೀಡಲಾಗಿದೆ. ಎಲ್ಲ ಕಂಬಳಗಳನ್ನು ಆಕರ್ಷಣೀಯ, ವ್ಯವಸ್ಥಿತವಾಗಿ ನಡೆಯಬೇಕೆಂಬ ಸಂಕಲ್ಪ ಸಮಿತಿಯದ್ದಾಗಿದೆ ಎಂದರು.
ಜಿಲ್ಲಾ ಕಂಬಳ ಸಮಿತಿ ಕಾರ್ಯಾಧ್ಯಕ್ಷ ಗುಣಪಾಲ ಕಡಂಬ ಮಾತನಾಡಿ, ಕಂಬಳ ಕ್ಷೇತ್ರದ ಯಶಸ್ವಿ, ಕಂಬಳ ಕ್ಷೇತ್ರಕ್ಕೆ ಕೀರ್ತಿ ತಂದ ಪದವು ಕಾನಡ್ಕದ ‘ದೂಜ’ ಕೋಣದ ಸಂಸ್ಮರಣೆಯಾಗಿ ಅಂಚೆ ಚೀಟಿಯನ್ನು ಗುರುಪುರ ಕಂಬಳದಲ್ಲಿ ಬಿಡುಗಡೆ ಮಾಡಲಾಗುವುದು ಎಂದರು.
ಮೂಳೂರು ಅಡ್ಡೂರು ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ ಇನಾಯತ್ ಅಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಗುರುಪುರ ಕಂಬಳ ಮಾದರಿ ಕಂಬಳವಾಗಬೇಕೆಂಬ ಉದ್ದೇಶದಿಂದ ಕಳೆದ ವರ್ಷದಂತೆ ಈ ವರ್ಷ ಗುರುಪುರ ಕಂಬಳದಲ್ಲಿ ಕೆಲವು ವಿಶಿಷ್ಟತೆಗಳಿವೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ವಿಧಾನಸಭಾ ಸಭಾಧ್ಯಕ್ಷ ಯು.ಟಿ.ಖಾದರ್, ಅನೇಕ ಗಣ್ಯರು ಕಂಬಳದಲ್ಲಿ ಪಾಲ್ಗೊಳ್ಳುವರು. ಕಂಬಳಕ್ಕೆ ಎಲ್ಲರ ಸಹಕಾರ ಸಿಕ್ಕಿದೆ ಎಂದರು.
ಕಂಬಳ ಸಮಿತಿ ಗೌರವಾಧ್ಯಕ್ಷ ಪದ್ಮನಾಭ ಕೋಟ್ಯಾನ್, ಜಿಲ್ಲಾ ಕಂಬಳ ಸಮಿತಿ ಪ್ರಧಾನ ಕಾರ್ಯದರ್ಶಿ ಲೋಕೇಶ್ ಶೆಟ್ಟಿ ಮುಚ್ಚೂರು, ಕಾರ್ಯಾಧ್ಯಕ್ಷ ಜಗದೀಶ್ ಶೆಟ್ಟಿ ಮಾಣಿಬೆಟ್ಟುಗುತ್ತು, ಪ್ರಧಾನ ಕಾರ್ಯದರ್ಶಿ ಯಶವಂತ ಶೆಟ್ಟಿ ಬೆಳ್ಳೂರುಗುತ್ತು, ಪ್ರಧಾನ ಸಂಚಾಲಕರಾದ ಗಿರೀಶ್ ಆಳ್ವ, ವಿನಯಕುಮಾರ್ ಶೆಟ್ಟಿ ಮಾಣಿಬೆಟ್ಟುಗುತ್ತು, ಪದ್ಮನಾಭ ಶೆಟ್ಟಿ ದೋಣಿಂಜೆೆಗುತ್ತು, ಕೋಶಾಧಿಕಾರಿ ಹರೀಶ್ ಭಂಡಾರಿ, ಮೆಲ್ವಿನ್ ಡಿಸೋಜ ನೀರುಮಾರ್ಗ, ಮೆಲ್ವಿನ್ ಸಲ್ಡಾನ ಗುರುಪುರ, ನೀರುಮಾರ್ಗ ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀಧರ್, ಉಮೇಶ್ ರೈ ಮೇಗಿನಮನೆ, ಗಣೇಶ್ ಪೂಜಾರಿ ಗಂಜಿಮಠ, ಪ್ರಮೋದ್ ಕುಮಾರ್ ರೈ ದೋಣಿಂಜೆಗುತ್ತು, ಎ.ಕೆ.ಆಶ್ರಫ್, ಜಯಂತಿ ವಾಮಂಜೂರು, ವಿಜಯಲಕ್ಷ್ಮೀ ಪೊನ್ನೆಲ, ವಿಜಯಾ ಸುವರ್ಣ ಕಂದಾವರ, ತನಿಯಪ್ಪ ಪೂಜಾರಿ ಗುರುಪುರ ಮತ್ತಿತರರು ಇದ್ದರು. ಪತ್ರಕರ್ತ ನವನೀತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.