ಅಂತರಂಗ ದರ್ಶನವಾದಾಗ ದುಶ್ಚಟ ದೂರ : ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಬಣ್ಣನೆ

New Project (65)
Published on

ಬೆಳ್ತಂಗಡಿ: ಜೀವನದಲ್ಲಿ ದೈಹಿಕ ಮತ್ತು ಮಾನಸಿಕ ಆರೋಗ್ಯದ ಜತೆಗೆ ತಪ್ಪು ಕುರಿತಂತೆ ಅಂತರಂಗ ದರ್ಶನವಾದಾಗ ದುಶ್ಚಟ ಬಿಡಲು ಸಾಧ್ಯ. ಮಾನಸಿಕ ಪರಿವರ್ತನೆ ಸ್ವಯಂಪ್ರೇರಣೆಯ ಪ್ರತೀಕ ಎಂದು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಹೇಳಿದರು.

ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಮೂಲಕ ರಾಜ್ಯಾದ್ಯಂತ ನಡೆಸಲ್ಪಡುವ ಮದ್ಯವರ್ಜನ ಶಿಬಿರಗಳ ಮೌಲ್ಯಮಾಪನ ಮಾಡುವ ಉದ್ದೇಶದಿಂದ ಮನೆ ಭೇಟಿ, ಮಾಸಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಈ ಯೋಜನೆಯ ಚಿಕ್ಕಮಗಳೂರು ಪ್ರಾದೇಶಿಕ ವ್ಯಾಪ್ತಿಯ 26 ನವಜೀವನ ಸಮಿತಿಗಳ 260 ಸದಸ್ಯರು, ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ತೀರ್ಥಯಾತ್ರೆ ಹಮ್ಮಿಕೊಂಡು ವೇದಿಕೆಯ ಮೂಲಕ ಹಮ್ಮಿಕೊಳ್ಳಲಾದ ಸಾಧಕ ನವಜೀವನ ಸದಸ್ಯರ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಡಾ.ಹೇಮಾವತಿ ವಿ.ಹೆಗ್ಗಡೆ ಮಾತನಾಡಿ, ವ್ಯಸನವೆಂಬ ಅಂಧಕಾರವನ್ನು ಅಧ್ಯಾತ್ಮವೆಂಬ ಬೆಳಕಿನಿಂದ ಹೋಗಲಾಡಿಸಿ ನವಜೀವನವೆಂಬ ನಿರಂತರತೆಯನ್ನು ಕಾಯ್ದುಕೊಳ್ಳುವುದು ಬಹಳ ಮುಖ್ಯ. ಎಲ್ಲ ನವಜೀವನ ಸದಸ್ಯರಿಗೆ ತಮ್ಮ ಸಾಮರ್ಥ್ಯದ ಅರಿವು ತಾಯಿ ಸ್ಥಾನದಲ್ಲಿರುವ ಶಿಬಿರಗಳು ಮತ್ತು ಸಂಬಂಧಪಟ್ಟವರು ಬೋಧಿಸಿರುತ್ತಾರೆ ಎಂದರು.

ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಕಾರ್ಯದರ್ಶಿ ವಿವೇಕ್ ವಿ.ಪಾಯಸ್, ಜನಜಾಗೃತಿ ವೇದಿಕೆಯ ಮಾಜಿ ಜಿಲ್ಲಾಧ್ಯಕ್ಷ ಅರವಿಂದ ಸೋಮಯಾಜಿ, ಸದಸ್ಯರಾದ ಬಾಲಕೃಷ್ಣ ಭಟ್, ಯೋಜನಾಧಿಕಾರಿ ಮಾಧವ ಗೌಡ, ಜೈವಂತ್ ಪಟಗಾರ, ಕಿಶೋರ್‌ಕುಮಾರ್, ಶಿಬಿರಾಧಿಕಾರಿಗಳಾದ ದಿವಾಕರ್ ಪೂಜಾರಿ ಮತ್ತು ದಿನೇಶ್ ಮರಾಠಿ, ಆಪ್ತ ಸಮಾಲೋಚಕರಾದ ಮಧು, ಆರೋಗ್ಯ ಸಹಾಯಕಿ ಸೌಮ್ಯಾ ಮತ್ತು ನವಜೀವನ ಪೋಷಕರು ಉಪಸ್ಥಿತರಿದ್ದರು. ವಿವೇಕ್ ವಿ.ಪಾಯಸ್ ಸ್ವಾಗತಿಸಿದರು. ಜನಜಾಗೃತಿ ಯೋಜನಾಧಿಕಾರಿ ಗಣೇಶ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

ಈ ವರ್ಷ 7175 ಮಂದಿ ವ್ಯಸನಮುಕ್ತಿ

ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಕಾರ್ಯದರ್ಶಿ ವಿವೇಕ್ ವಿ.ಪಾಯಸ್ ಮಾತನಾಡಿ, ವೇದಿಕೆಯ ಮೂಲಕ 117 ಮದ್ಯವರ್ಜನ ಶಿಬಿರ ಆಯೋಜಿಸಿ 7175 ಮಂದಿಗೆ ವ್ಯಸನಮುಕ್ತರಾಗಲು ಚಿಕಿತ್ಸೆ ನೀಡಲಾಗಿದೆ. 2.5 ಲಕ್ಷ ವಿದ್ಯಾರ್ಥಿಗಳಿಗೆ 2613 ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸಲಾಗಿದೆ. 132 ಗಾಂಧಿಸ್ಮತಿ ಕಾರ್ಯಕ್ರಮ ಮೂಲಕ ಜನಜಾಗೃತಿ ಮೂಡಿಸಲಾಗಿದೆ. 205 ನವಜೀವನ ಸದಸ್ಯರಿಗೆ ಸ್ವಉದ್ಯೋಗ ತರಬೇತಿ, ಜನಜಾಗೃತಿ ಪದಾಧಿಕಾರಿಗಳಿಗೆ ಕ್ರಿಟಿಕಲ್ ಇಲ್‌ನೆಸ್ ಫಂಡ್, 6 ಸಾವಿರಕ್ಕೂ ಮಿಕ್ಕಿದ ನವಜೀವನ ಸದಸ್ಯರ ಮನೆಭೇಟಿ ಮಾಡಲಾಗಿದ್ದು, ಶಿಬಿರದಲ್ಲಿ ಭಾಗವಹಿಸಿದ ಶಿಬಿರಾರ್ಥಿಗಳಲ್ಲಿ ಶೇ.86 ಪರಿವರ್ತನೆ ಮಾಡುವಲ್ಲಿ ವೇದಿಕೆ ಯಶಸ್ವಿಯಾಗಿದೆ ಎಂದರು.

ಮದ್ಯವರ್ಜನ ಶಿಬಿರಗಳಲ್ಲಿ ಆತ್ಮಸಾಕ್ಷಿಗೆ ಸರಿಯಾಗಿ ಬದುಕು ನಡೆಸಲು ಮಾರ್ಗದರ್ಶನ ನೀಡುವುದಲ್ಲದೆ ಸಾಧನೆ ಮಾಡಲು ಬೇಕಾದ ಮಾರ್ಗದರ್ಶನದೊಂದಿಗೆ ಮುಂದಿನ ದಿನಗಳಲ್ಲಿ ಈ ವ್ಯಸನದ ವಿರುದ್ಧ ಹೋರಾಡಲು ಬೇಕಾದ ಎಲ್ಲ ವಿಚಾರ ತಿಳಿಸಿ ಎಚ್ಚರಿಸುತ್ತಾರೆ. ಇದರ ಪ್ರತಿಫಲವಾಗಿ ಶಾಶ್ವತ ವ್ಯಸನಮುಕ್ತರಾಗಿ ಜವಾಬ್ದಾರಿಯಿಂದ ಬಾಳು ನಡೆಸಬಹುದು. ಡಾ.ಡಿ.ವೀರೇಂದ್ರ ಹೆಗ್ಗಡೆ, ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net