ತುರ್ತುಪರಿಸ್ಥಿತಿಯ ಕರಾಳ ದಿನಗಳನ್ನ ಮರೆಯೋಕಾಗಲ್ಲ: ಪ್ರಧಾನಿ ಮೋದಿ

narendramodi
Published on

ನವದೆಹಲಿ : ಇಂದಿರಾ ಗಾಂಧಿ ಸರ್ಕಾರವು 1975 ರ ಜೂನ್​ 25 ಕ್ಕೆ ಭಾರತದಲ್ಲಿ 21 ತಿಂಗಳ ಅವಧಿಯ ತುರ್ತು ಪರಿಸ್ಥಿತಿ ವಿಧಿಸಿದ ಕುರಿತಾಗಿ ಇಂದು ಟ್ವೀಟ್​ ಮಾಡಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು, "ಇದು ಕಾಂಗ್ರೆಸ್​ ನಮ್ಮ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಹೊಸಕಿಹಾಕಿದ ರೀತಿ" ಎಂದಿದ್ದಾರೆ.

"ತುರ್ತು ಪರಿಸ್ಥಿತಿಯ ಕರಾಳ ದಿನಗಳನ್ನು ಯಾವಾಗಲೂ ಮರೆಯಲಾಗುವುದಿಲ್ಲ. 1975 ರಿಂದ 1977 ರವರೆಗಿನ ಅವಧಿಯು ಹಲವು ಸಂಸ್ಥೆಗಳ ವ್ಯವಸ್ಥಿತ ವಿನಾಶವನ್ನು ಕಂಡಿತು. ಭಾರತದ ಪ್ರಜಾಪ್ರಭುತ್ವದ ಚೇತನವನ್ನು ಬಲಪಡಿಸಲು ಮತ್ತು ನಮ್ಮ ಸಂವಿಧಾನದಲ್ಲಿ ಹೇಳಿರುವ ಮೌಲ್ಯಗಳಿಗೆ ತಕ್ಕಂತೆ ಬದುಕಲು ಸಾಧ್ಯವಾದದ್ದನ್ನೆಲ್ಲ ಮಾಡುತ್ತೇವೆ ಎಂದು ಪ್ರತಿಜ್ಞೆ ಮಾಡೋಣ ಬನ್ನಿ" ಎಂದು ಮೋದಿ ತಮ್ಮ ವೈಯಕ್ತಿಕ ಟ್ವಿಟರ್​ ಖಾತೆಯಲ್ಲಿ ಬರೆದಿದ್ದಾರೆ.

ಜೊತೆಗೆ, "ಇದು ಕಾಂಗ್ರೆಸ್​ ನಮ್ಮ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಹೊಸಕಿಹಾಕಿದ ರೀತಿ. ತುರ್ತು ಪರಿಸ್ಥಿತಿಯನ್ನು ವಿರೋಧಿಸಿ ಭಾರತೀಯ ಪ್ರಜಾಪ್ರಭುತ್ವವನ್ನು ರಕ್ಷಿಸಿದ ಎಲ್ಲಾ ಮಹಾತ್ಮರನ್ನು ನಾವು ಸ್ಮರಿಸುತ್ತೇವೆ" ಎಂದಿರುವ ಮೋದಿ, ಆ ಅವಧಿಯಲ್ಲಿ ಸರ್ಕಾರಿ ನಿಷೇಧಕ್ಕೊಳಗಾಗಿದ್ದ ವಿಚಾರಗಳ ಬಗ್ಗೆ ಬಿಜೆಪಿ ನಿರ್ಮಿಸಿರುವ ಇನ್ಸ್​​ಟಾಗ್ರಾಂ ಪೋಸ್ಟ್​ನ ಲಿಂಕ್​ಅನ್ನು ಶೇರ್ ಮಾಡಿದ್ದಾರೆ.

ಮಹಾತ್ಮ ಗಾಂಧಿ ಮತ್ತು ರವೀಂದ್ರನಾಥ ಠಾಗೂರರ ಸ್ವತಂತ್ರ ವಿಚಾರಗಳು, ಕಿಶೋರ್​ ಕುಮಾರ್​ರ ಗೀತೆಗಳು, ಚಂದ್ರಶೇಖರ ಆಜಾದ್ ಮತ್ತು ಭಗತ್​ ಸಿಂಗ್​ರ ಮೇಲಿನ ಚಲನಚಿತ್ರಗಳು ಮತ್ತು ಪ್ರತಿಭಟನೆಗಳು ತುರ್ತುಪರಿಸ್ಥಿತಿಯಲ್ಲಿ ನಿಷೇಧಗೊಂಡಿದ್ದವು ಎಂದು ಬಿಜೆಪಿ ಪಟ್ಟಿ ಮಾಡಿದೆ. ಭಾರತಕ್ಕೆ ಇಂಥ ಸ್ಥಿತಿಯನ್ನು ಹೇರಿದವರಿಗೆ(ಕಾಂಗ್ರೆಸ್​) ಮತ್ತೆ ಹಾಗೆ ಮಾಡುವ ಅಧಿಕಾರ ಸಿಗದಂತೆ ಮಾಡೋಣವೆಂದು ಜೊತೆಯಾಗಿ ಪ್ರತಿಜ್ಞೆ ಮಾಡೋಣ ಎಂದು ಕರೆ ನೀಡಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net