ಕ್ಯಾಂಡಿಡೇಟ್ಸ್ ಚೆಸ್​ ಟೂರ್ನಿಯ 7ನೇ ಸುತ್ತಿನಲ್ಲಿ ಡ್ರಾ ಸಾಧಿಸಿದ ಪ್ರಜ್ಞಾನಂದ, ವಿದಿತ್​

web chess
Published on

ಟೊರಾಂಟೊ: ಭಾರತದ ಗ್ರಾಂಡ್​ ಮಾಸ್ಟರ್​ಗಳಾದ ಆರ್​. ಪ್ರಜ್ಞಾನಂದ ಮತ್ತು ವಿದಿತ್​ ಗುಜರಾತಿ ಕ್ಯಾಂಡಿಡೇಟ್ಸ್​ ಚೆಸ್​ ಟೂರ್ನಿಯ 7ನೇ ಸುತ್ತಿನಲ್ಲಿ ಡ್ರಾ ಸಾಧಿಸಿದ್ದಾರೆ. ಮತ್ತೊಂದೆಡೆ ಡಿ. ಗುಕೇಶ್​ ಸೋಲು ಅನುಭವಿಸುವುದರೊಂದಿಗೆ ಜಂಟಿ ಅಗ್ರಸ್ಥಾನದಿಂದ ಕೆಳಗಿಳಿದಿದ್ದಾರೆ.

17 ವರ್ಷದ ಡಿ. ಗುಕೇಶ್​ ಫ್ರಾನ್ಸ್​​​ನ ಫಿರೌಜಾ ಅಲಿರೆಜಾ ಎದುರು ಆಘಾತಕಾರಿ ಸೋಲು ಅನುಭವಿಸಿದರು. ಇದರಿಂದ ಅವರು ಈಗ 4 ಅಂಕಗಳೊಂದಿಗೆ 2ನೇ ಸ್ಥಾನಕ್ಕಿಳಿದಿದ್ದಾರೆ. ಅಮೆರಿಕದ ಫ್ಯಾಬಿಯಾನೊ ಕರುವಾನ ಎದುರು ಡ್ರಾ ಸಾಧಿಸಿದ 18 ವರ್ಷದ ಪ್ರಜ್ಞಾನಂದ ಕೂಡ 2ನೇ ಸ್ಥಾನದಲ್ಲಿದ್ದಾರೆ. ರಷ್ಯಾದ ಇಯಾನ್​ ನೆಪೊಮ್ನಿಯಾಚಿ 4.5 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿ ನೆಲೆಸಿದ್ದಾರೆ. ವಿದಿತ್​ ಗುಜರಾತಿ ಅಜರ್​ಬೈಜಾನ್​ನ ನಿಜತ್​ ಅಬಸೋವ್​ ಎದುರು ಡ್ರಾಕ್ಕೆ ತೃಪ್ತಿಪಟ್ಟಿದ್ದು, 3.5 ಅಂಕಗಳೊಂದಿಗೆ ಜಂಟಿ 5ನೇ ಸ್ಥಾನದಲ್ಲಿದ್ದಾರೆ.

ಮಹಿಳೆಯರ ವಿಭಾಗದಲ್ಲಿ ಆರ್​. ವೈಶಾಲಿ ಚೀನಾದ ಟಿಂಗ್​ಜೀ ಲೀ ವಿರುದ್ಧ ಸೋಲು ಕಂಡರು. ಟೂರ್ನಿಯಲ್ಲಿ ಕಂಡ 3ನೇ ಸೋಲಿನೊಂದಿಗೆ ವೈಶಾಲಿ 2.5 ಅಂಕಗಳೊಂದಿಗೆ ಜಂಟಿ 6ನೇ ಸ್ಥಾನದಲ್ಲಿದ್ದಾರೆ. ಅನುಭವಿ ಆಟಗಾರ್ತಿ ಕೊನೆರು ಹಂಪಿ ಉಕ್ರೇನ್ನ ಆನ್ನಾ ಮುಜ್​ಚುಕ್​ ವಿರುದ್ಧ ಡ್ರಾ ಸಾಧಿಸಿದರು. ಹಂಪಿ ಕೂಡ ಸದ್ಯ 2.5 ಅಂಕ ಕಲೆಹಾಕಿದ್ದು, ಚೀನಾದ ಟಾನ್​ ಜೊಂಗ್​ಯಿ 5 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಇದರಿಂದ ಇನ್ನೂ 7 ಸುತ್ತಿನ ಪಂದ್ಯಗಳು ಬಾಕಿ ಉಳಿದಿರುವ ಟೂರ್ನಿಯಲ್ಲಿ ಭಾರತದ ಇಬ್ಬರು ಆಟಗಾರ್ತಿಯರು ಅಗ್ರಸ್ಥಾನಕ್ಕೇರುವುದು ಬಹುತೇಕ ಅಸಾಧ್ಯವೆನಿಸಿದೆ. ಶುಕ್ರವಾರ ಟೂರ್ನಿಯ 2ನೇ ವಿಶ್ರಾಂತಿ ದಿನವಾಗಿದೆ. ಟೂರ್ನಿಯ ವಿಜೇತರಿಗೆ ಹಾಲಿ ವಿಶ್ವ ಚೆಸ್​ ಚಾಂಪಿಯನ್​ಗೆ ಸವಾಲೊಡ್ಡುವ ಅವಕಾಶ ಲಭಿಸಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net