20 ಸಾವಿರ ಕೋಟಿ ರೂಪಾಯಿಯ ಮತ್ಸ್ಯ ಸಂಪದ ಯೋಜನೆಗೆ ಕೇಂದ್ರ ಕ್ಯಾಬಿನೆಟ್ ಅಂಕಿತ

fishries 20 MAY 20
Published on

ನವದೆಹಲಿ: ಮೀನುಗಾರಿಕಾ ಕ್ಷೇತ್ರದ ಅಭಿವೃದ್ಧಿಗಾಗಿ ಸುಸ್ಥಿರ ಮತ್ತು ಹೊಣೆಗಾರಿಕೆಯ ಅಭಿವೃದ್ಧಿಯನ್ನು ರೂಪಿಸುವ ಮೂಲಕ ನೀಲಿ ಕ್ರಾಂತಿ ನಡೆಸುವುದಕ್ಕೆ ಪೂರಕವಾಗಿ 20 ಸಾವ ಇರ ಕೋಟಿ ರೂಪಾಯಿ ಹೂಡಿಕೆಯ ಯೋಜನೆ ಒಂದಕ್ಕೆ ಕೇಂದ್ರ ಸಚಿವ ಸಂಪುಟ ಬುಧವಾರ ಅಂಕಿತ ಹಾಕಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮುಂದಿನ ಐದು ವರ್ಷದ ಅವಧಿಯಲ್ಲಿ ಹಂತ ಹಂತವಾಗಿ ಜಾರಿಗೊಳ್ಳಲಿರುವ ಯೋಜನೆಯ ಪ್ರಸ್ತಾವನೆ ಪರಿಶೀಲನೆಗೆ ಒಳಗಾಗಿ ಒಪ್ಪಿಗೆ ಪಡೆದುಕೊಂಡಿದೆ.

ಈ ಯೋಜನೆಗೆ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ (ಪಿಎಂಎಂಎಸ್​ವೈ) ಎಂದು ಹೆಸರಿಡಲಾಗಿದ್ದು, ಮೀನುಗಾರಿಕಾ ಕ್ಷೇತ್ರದ ಅಭಿವೃದ್ಧಿಗಾಗಿ ಒಟ್ಟಾರೆ 20,050 ಕೋಟಿ ರೂಪಾಯಿ ಹೂಡಿಕೆ ಇದರ ಉದ್ದೇಶ. ಇದರಲ್ಲಿ ಕೇಂದ್ರದ ಪಾಲು 9,407 ಕೋಟಿ ರೂಪಾಯಿ ಆದರೆ, ರಾಜ್ಯದ ಪಾಲು 4,880 ಕೋಟಿ ರೂಪಾಯಿ ಮತ್ತು ಫಲಾನುಭವಿಗಳ ಪಾಲು 5,763 ಕೋಟಿ ರೂಪಾಯಿ ಆಗಿರಲಿದೆ.

ಈ ಸಲದ ಬಜೆಟ್​ನಲ್ಲಿ ಕೇಂದ್ರದ ಈ ಯೋಜನೆಯನ್ನು ಘೋಷಿಸಲಾಗಿತ್ತು. 2020-21ರಿಂದ 2024-25ರ ಐದು ಹಣಕಾಸು ವರ್ಷದಲ್ಲಿ ಈ ಯೋಜನೆ ಅನುಷ್ಠಾನಗೊಳ್ಳಲಿದೆ. ಮೀನುಗಾರಿಕಾ ಕ್ಷೇತ್ರದ 15 ಲಕ್ಷ ಜನರಿಗೆ ನೇರ ಉದ್ಯೋಗಾವಕಾಶ ಸೃಷ್ಟಿಸುವುದು ಇದರ ಉದ್ದೇಶ. 2024ರ ವೇಳೆಗೆ ಈ ಕ್ಷೇತ್ರದ ಮೀನುಗಾರರು ಮತ್ತು ಕಾರ್ಮಿಕರ ಆದಾಯವನ್ನು ದುಪ್ಪಟ್ಟುಗೊಳಿಸುವ ಮೂಲಕ ಅವರ ಸಮಸ್ಯೆಗಳಿಗೆ ಪರಿಹಾರ ಹೇಳುವ ಪ್ರಯತ್ನವೂ ಇದರ ಮೂಲಕ ನಡೆಯಲಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಮೀನುಗಾರಿಕಾ ಕ್ಷೇತ್ರದಲ್ಲಿ ಅಗತ್ಯ ಮೂಲಸೌಕರ್ಯ ಒದಗಿಸುವುದು ವಿಶೇಷವಾಗಿ ಆಧುನೀಕರಣ, ಮಾರಾಟ ವ್ಯವಸ್ಥೆ ಇತ್ಯಾದಿಗಳ ಸಬಲೀಕರಣ ಇತ್ಯಾದಿಗಳ ಕಡೆಗೂ ಈ ಯೋಜನೆ ಗಮನಹರಿಸಲಿದೆ. ಈ ಯೋಜನೆಯನ್ನು ಸರ್ಕಾರ ಮೂಲ ಯೋಜನೆ ಎಂದು ಪರಿಗಣಿಸಿದ್ದು, ಇದರ ಅಧೀನ ಸೆಂಟ್ರಲ್ ಸ್ಕೀಮ್ ಮತ್ತು ಸೆಂಟ್ರಲೀ ಸ್ಪಾನ್ಸರ್ಡ್​ ಸ್ಕೀಮ್ ಎಂಬ ಎರಡು ಪ್ರತ್ಯೇಕ ಯೋಜನೆಗಳ ಮೂಲಕ ಅನುಷ್ಠಾನಗೊಳಿಸಲು ಮುಂದಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net