

ಬೆಂಗಳೂರು: ಅವ್ಯವಹಾರ, ಅಕ್ರಮಗಳ ವಿರುದ್ಧ ಧ್ವನಿ ಎತ್ತಿದರೆ ಕೇಸ್. ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯ ಹಂಚಿಕೊಂಡರೆ ದಾವೆ, ಬಂಧನ. ಭ್ರಷ್ಟ, ದುಷ್ಟ ಕಾಂಗ್ರೆಸ್ ಸರ್ಕಾರದ ಇಂತಹ ಷಡ್ಯಂತ್ರಗಳಿಗೆ ರಾಜ್ಯ ಬಿಜೆಪಿ ಬಗ್ಗದು ಎಂದು ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಗುಡುಗಿದ್ದಾರೆ.
ಪಕ್ಷದ ರಾಜ್ಯ ಕಚೇರಿಯಲ್ಲಿ ಪಕ್ಷದ ಕಾನೂನು ಪ್ರಕೋಷ್ಠದ ರಾಜ್ಯ ಕಾರ್ಯಕಾರಿಣಿ ಸಭೆಗೆ ಭಾನುವಾರ ಚಾಲನೆ ನೀಡಿ ಮಾತನಾಡಿದ ಅವರು, ಯಾವುದೇ ಬೆದರಿಕೆ ತಂತ್ರಗಳಿಗೆ ಕಾರ್ಯಕರ್ತರ ಹೆದರದೇ ಹೋರಾಡುತ್ತಿದ್ದಾರೆ. ಹಾಗೆಯೇ ವಿರೋಧ ಪಕ್ಷವಾಗಿ ವಿರೋಧಕ್ಕಾಗಿ ವಿರೋಧ, ಕಾಟಾಚಾರದ ಹೋರಾಟವನ್ನು ಮಾಡುತ್ತಿಲ್ಲವೆಂಬ ಸಮಜಾಯಿಷಿ ನೀಡಿದ್ದಾರೆ.
ದಿನಕ್ಕೊಂದು ಹಗರಣಗಳು ಹೊರಬರುತ್ತಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಒಂದೂವರೆ ವರ್ಷದಲ್ಲಿ ಜನರ ವಿಶ್ವಾಸ ಕಳೆದುಕೊಂಡಿದೆ. ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಗರಣ, ಮುಡಾ ನಿವೇಶನಗಳ ಹಂಚಿಕೆ ಅಕ್ರಮದ ವಿರುದ್ಧ ಹೋರಾಟ, ಯಶಸ್ವೀ ಮೈಸೂರು ಚಲೋ ಪಾದಯಾತ್ರೆಯು ಸಿಎಂ ಸಿದ್ದರಾಮಯ್ಯನವರ ಸಮಾಜವಾದಿ ಮುಖವಾಡ ಕಳಚಿ ಬಿದ್ದಿದೆ ಎಂದು ಟೀಕಿಸಿದ್ದಾರೆ.
ವಾಲ್ಮೀಕಿ ನಿಗಮದಲ್ಲಿ ಯಾವುದೇ ಹಗರಣವಾಗಿಲ್ಲ ಎಂದಿದ್ದ ಸಿಎಂ ಸಿದ್ದರಾಮಯ್ಯ, ಸಚಿವರಾಗಿದ್ದ ನಾಗೇಂದ್ರ ರಾಜೀನಾಮೆ ಪಡೆದರು. 187 ಕೋಟಿ ರೂ.ಗಳಲ್ಲ, 87 ಕೋಟಿ ರೂ ಎಂದು ಒಪ್ಪಿಕೊಂಡರು. ಮುಡಾ ಅಕ್ರಮದ ಬಗ್ಗೆ ಸದನದಲ್ಲಿ ಚರ್ಚೆಗೆ ಅವಕಾಶ ನೀಡದೆ ಪಲಾಯನ ಮಾಡಿದರು. ನಂತರ ಸುದೀರ್ಘ ಮಾಧ್ಯಮ ಗೋಷ್ಠಿಯಲ್ಲಿ ತಾವೇ ಪ್ರಶ್ನೆಗಳನ್ನು ಕೇಳಿಕೊಂಡು ತಾವೇ ಉತ್ತರ ನೀಡಿ, ನಿಷ್ಕಳಂಕ ಎಂದು ಸಾರಲು ಪ್ರಯತ್ನಿಸಿದರು.
ಸಿಎಂ ವಿರುದ್ಧ ತನಿಖೆಗೆ ರಾಜ್ಯಪಾಲರು ಅನುಮತಿ ನೀಡಿದ ಕಾರಣಕ್ಕೆ ರಾಜಭವನದ ವಿರುದ್ಧವೂ ದೂರುತ್ತಿದ್ದಾರೆ. ಈ ಪ್ರಕರಣದ ಬಗ್ಗೆ ಹೈಕೋರ್ಟ್ ನಲ್ಲಿ ವಾದ, ಪ್ರತಿವಾದ ನಡೆದು ತಾರ್ಕಿಕ ಅಂತ್ಯಕ್ಕೆ ತಲುಪಿದೆ. ಆದರೆ ರಾಜ್ಯದಲ್ಲಿ ಕಳೆದ ಎರಡು ತಿಂಗಳಿಂದ ಆಡಳಿತವೇ ಕುಸಿದು ಬಿದ್ದಿದೆ ಎಂದು ಟೀಕಿಸಿದ್ದಾರೆ.
ಕಾಂಗ್ರೆಸ್ ಸರ್ಕಾರದ ಹಗರಣ, ವೈಫಲ್ಯಗಳ ವಿರುದ್ಧ ಹೋರಾಟದಲ್ಲಿ ಎಲ್ಲ ಮೋರ್ಚಾಗಳು, ಪ್ರಕೋಷ್ಠಗಳು, ಕಾರ್ಯಕರ್ತರು ಕೈಜೋಡಿಸಿ ಛಲ ಮೆರೆದಿವೆ. ರಾಜಕೀಯ ಕ್ಷೇತ್ರದಲ್ಲಿ ಸುಧಾರಣೆ ತರಲು ಎಲ್ಲರ ಶ್ರಮ ಅಗತ್ಯವಿದೆ. ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಆಶಯದಂತೆ ಮಹಿಳೆಯರು ಸೇರಿ ಪ್ರಾಮಾಣಿಕ ಯುವಜನರನ್ನು ರಾಜಕೀಯ ರಂಗಕ್ಕೆ ಕರೆತರಲು ಪ್ರಯತ್ನಿಸಬೇಕು ಎಂದರು.
ಜನರಿಗೆ ಸೇವೆ ಸಲ್ಲಿಸಲು ರಾಜಕೀಯ ಕ್ಷೇತ್ರ ವಿಪುಲ ಅವಕಾಶಗಳನ್ನು ನೀಡುತ್ತದೆ. ಮುಂಬರುವ ಜನಗಣತಿ, ಕ್ಷೇತ್ರ ಮರು ವಿಂಗಡಣೆ ಮತ್ತಿತರ ಕಾರ್ಯಚಟುವಟಿಕೆಗಳಲ್ಲಿ ಕ್ರಿಯಾಶೀಲವಾಗಿ ತೊಡಗಿಕೊಳ್ಳಬೇಕು. ಕೇಂದ್ರ ಸರ್ಕಾರ ಏನೇ ಹೊಸ ಕಾರ್ಯಕ್ರಮ, ಕಾಯ್ದೆ ಜಾರಿಗೊಳಿಸಿದರೂ ಕಾಂಗ್ರೆಸ್ ಅಪಪ್ರಚಾರ ಮಾಡುತ್ತದೆ. ಇದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ಮೆಟ್ಟಿ ನಿಲ್ಲಬೇಕು ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರ ರೈತರ ಆದಾಯ ದ್ವಿಗುಣಗೊಳಿಸಲು ಹೊಸ ಕಾಯ್ದೆ ಜಾರಿಗೆ ಪ್ರಯತ್ನಿಸಿತ್ತು. ಆದರೆ ರೈತರನ್ನು ಎತ್ತಿ ಕಟ್ಟಿದ ಕಾಂಗ್ರೆಸ್ ಅಪಪ್ರಚಾರ ಮಾಡಿತು. ಹೊಸದಾಗಿ ಜಾರಿಗೊಳಿಸಿದ ಭಾರತೀಯ ಅಪರಾಧ ಸಂಹಿತೆ ಮತ್ತಿತರ ಕಾಯ್ದೆಗಳ ಬಗ್ಗೆ ಅರಿವು ಮೂಡಿಸಬೇಕು. ವಖಾಫ್ ಕಾಯ್ದೆ ತಿದ್ದುಪಡಿ ಬಗ್ಗೆ ಜಂಟಿ ಪರಿಶೀಲನಾ ಸಮಿತಿಗೆ ತಜ್ಞರಿಂದ ಸಲಹೆ, ಸೂಚನೆಗಳನ್ನು ರವಾನಿಸಬೇಕು.
ಪಕ್ಷದ ಸದಸ್ಯತ್ವ ನೋಂದಣಿ ಆಂದೋಲನಕ್ಕೆ ಪ್ರಧಾನಿ ಮೋದಿ ಸೆ.2ಕ್ಕೆ ಚಾಲನೆ ನೀಡಲಿದ್ದಾರೆ. ರಾಜ್ಯದಲ್ಲಿ ಸೆ.4ಕ್ಕೆ ಚಾಲನೆ ನೀಡಲಾಗವುದು. ಕಳೆದ ಬಾರಿ 1.04 ಕೋಟಿ ಸದಸ್ಯತ್ವ ನೋಂದಣಿಯಾಗಿತ್ತು. ಈ ಬಾರಿ ಅದಕ್ಕೂ ಮೀರಿದ ಸದಸ್ಯತ್ವ ನೋಂದಣಿಗೆ ಎಲ್ಲರೂ ಸಹಕರಿಸಬೇಕು ಎಂದು ಬಿ.ವೈ.ವಿಜಯೇಂದ್ರ ಮನವಿ ಮಾಡಿದ್ದಾರೆ.