

ಕೊಚ್ಚಿ: ಮಲಯಾಳಂ ಚಿತ್ರರಂಗವನ್ನೇ ಅಲ್ಲಾಡಿಸಿರುವ ಹೇಮಾ ಸಮಿತಿ ವರದಿ ಬಹಿರಂಗಗೊಂಡ ಬಳಿಕ ಒಂದಿಲ್ಲೊಂದು ಆರೋಪಗಳು ಹಹೊರಬರುತ್ತಿವೆ. ಮಲಯಾಳಂ ಸಿನಿಮಾರಂಗದ ನಟಿಯರು ಅನುಭವಿಸುತ್ತಿರುವ ಲೈಂಗಿಕ ಕಿರುಕುಳ ಹಗರಣ ದೇಶಾದ್ಯಂತ ಸದ್ದು ಮಾಡುತ್ತಿದ್ದು, ತಾವು ಅನುಭವಿಸಿದ ದೌರ್ಜನ್ಯದ ಕುರಿತು ನಟಿಯರು ಮೌನ ಮುರಿಯುತ್ತಿದ್ದಾರೆ. ಹೇಮಾ ಸಮಿತಿ ವರದಿ ಸಲ್ಲಿಸಿದ ಬೆನ್ನಲ್ಲೇ ಬೇರೆ ಚಿತ್ರರಂಗಗಳ ನಟ-ನಟಿಯರು ಪರಿಸ್ಥಿತಿಗಳ ಬಗ್ಗೆಯೂ ವರದಿ ಸಲ್ಲಿಸುವಂತೆ ಆಗ್ರಹಿಸುತ್ತಿದ್ದಾರೆ.
ಹೇಮಾ ಸಮಿತಿ ವರದಿ ಸಲ್ಲಿಸಿದ ಬಳಿಕ ನಟ ಜಯಸೂರ್ಯ ವಿರುದ್ಧ ಸಾಲು ಸಾಲು ಆರೋಪಗಳು ಕೇಳಿ ಬಂದಿದ್ದವು. ಈ ಸಂಬಂಧ ಎರಡು ಲೈಂಗಿಕ ದೌರ್ಜನ್ಯ ಪ್ರಕರಣಗಳು ಕೂಡ ದಾಖಲಾಗಿದ್ದವು. ಈ ಕುರಿತು ಪ್ರತಿಕ್ರಿಯಿಸಿರುವ ನಟ ಜಯಸೂರ್ಯ ತಮ್ಮ ಮೇಲೆ ಮಾಡಲಾಗಿರುವ ಆರೋಪಗಳನ್ನು ತಳ್ಳಿ ಹಾಕಿದ್ದು, ಇದು ಸತ್ಯಕ್ಕೆ ದೂರವಾದುದ್ದು ಎಂದು ಕಿಡಿಕಾರಿದ್ದಾರೆ.
ತಮ್ಮ ಮೇಲೆ ಮಾಡಲಾಗಿರುವ ಆರೋಪಗಳ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಣೆಯನ್ನು ಪೋಸ್ಟ್ ಮಾಡಿರುವ ನಟ, ಇಂದು ನನ್ನ ಜನ್ಮದಿನದಂದು ನನಗೆ ಶುಭ ಕೋರಿದ ನಿಮ್ಮೆಲ್ಲರಿಗೂ, ನಿಮ್ಮ ಬೆಂಬಲವನ್ನು ನೀಡುತ್ತಿರುವ ಮತ್ತು ನನ್ನೊಂದಿಗೆ ನಿಂತಿರುವ ಎಲ್ಲರಿಗೂ ಧನ್ಯವಾದಗಳು. ಲೈಂಗಿಕ ಕಿರುಕುಳದ ಆಧಾರದ ಮೇಲೆ ನನ್ನ ವಿರುದ್ಧ ಎರಡು ಸುಳ್ಳು ಆರೋಪಗಳನ್ನು ಮಾಡಲಾಗಿದೆ. ಇದು ಸಹಜವಾಗಿಯೇ, ನಾನು, ನನ್ನ ಕುಟುಂಬ ಮತ್ತು ನನಗೆ ತುಂಬಾ ನೋವುಂಟು ಮಾಡಿದೆ. ಹೀಗಾಗಿ ನಾನು ಕಾನೂನಿನ ಮೂಲಕ ಆರೋಪ ಮಾಡಿದವರಿಗೆ ಉತ್ತರ ಕೊಡಲು ಬಯಸುತ್ತೇನೆ.
ಆತ್ಮಸಾಕ್ಷಿಯ ಕೊರತೆಯಿರುವ ಯಾರಿಗಾದರೂ ಸುಳ್ಳು ಆರೋಪಗಳನ್ನು ಮಾಡುವುದು ಸುಲಭ, ಸುಳ್ಳು ಆರೋಪ ಎದುರಿಸುವುದು ಕಿರುಕುಳದಂತೆಯೇ ನೋವುಂಟುಮಾಡುತ್ತದೆಂದು ಕೆಲವರು ಅರಿತುಕೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ. ಸುಳ್ಳು ಯಾವಾಗಲೂ ಸತ್ಯಕ್ಕಿಂತ ವೇಗವಾಗಿ ಹರಡುತ್ತದೆ. ಆದರೆ, ಅಂತ್ಯದಲ್ಲಿ ಸತ್ಯ ಗೆಲ್ಲುತ್ತದೆ ಎಂಬುದು ಆರೋಪ ಮಾಡಿದವರಿಗೆ ತಿಳಿದಿರುವುದಿಲ್ಲ. ನನ್ನ 46ನೇ ಹುಟ್ಟುಹಬ್ಬ ಅತ್ಯಂತ ನೋವಿನಿಂದ ಕೂಡಿದೆ ಎಂದು ನಟ ಹೊರಡಿಸಿರುವ ಪ್ರಕಟಣೆಯಲ್ಲಿ ಉಲ್ಲೇಖಿಸಿದ್ದಾರೆ.