

ಬಂಟ್ವಾಳ: ಪುರಸಭೆಯ ಒಂದು ಸ್ಥಾನ ಹಾಗೂ 11 ಗ್ರಾ.ಪಂ.ಸ್ಥಾನಗಳ ಪೈಕಿ 10ರಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಜಯಭೇರಿ ಗಳಿಸಿದರೆ 2ರಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲುವನ್ನು ಸಾಧಿಸಿದ್ದಾರೆ.
ಬಂಟ್ವಾಳ ಪುರಸಭೆಯ ಮಂಡಾಡಿ ವಾರ್ಡ್ 2ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪುರುಷೋತ್ತಮ ಪೂಜಾರಿ ಗೆಲುವು ಸಾಧಿಸುವ ಮೂಲಕ ಈ ಸ್ಥಾನ ಕಾಂಗ್ರೆಸ್ ವಶದಲ್ಲಿಯೇ ಉಳಿಸಿಕೊಂಡಿದೆ.
ಗ್ರಾ.ಪಂ.ನಲ್ಲಿ ಕಾಂಗ್ರೆಸ್ ಬೆಂಬಲಿತರ ಕಮಾಲ್
ಸಜೀಪಮುನ್ನೂರು ಗ್ರಾಪಂ ತೆರವಾದ 3 ಸ್ಥಾನಗಳಲ್ಲಿ ಕಾಂಗ್ರೆಸ್ ಬೆಂಬಲಿತರಾದ ಇಸ್ಮಾಯಿಲ್,ಧನಂಜಯ್ ಶೆಟ್ಟಿ, ಸೆಲಿನ್ ಜಯಗಳಿಸಿದ್ದಾರೆ.ಪಂಜಿಕಲ್ಲು ಗ್ರಾ.ಪಂ.ನ 2 ಸ್ಥಾನಗಳಲ್ಲೂ ಕಾಂಗ್ರೆಸ್ ಬೆಂಬಲಿತರಾದ ರಾಜೇಶ್ ಗೌಡ, ಕೇಶವ ಪೂಜಾರಿ ಜಯಭೇರಿ ಸಾಧಿಸಿದ್ದಾರೆ.ಅಮ್ಟಾಡಿ ಗ್ರಾ.ಪಂ. 1 ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತರಾದ ಕೇಶವ ಜೋಗಿ, ಸಜೀಪಮೂಡ ಗ್ರಾ.ಪಂ.ನ 1 ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಕರೀಂ, ಚೆನ್ನೈತ್ತೋಡಿ ಗ್ರಾ.ಪಂ.ನ 1ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಜಯಂತಿ ಸತೀಶ್ ಪೂಜಾರಿ, ಬಡಗಬೆಳ್ಳೂರು ಗ್ರಾ.ಪಂ.ನ 1 ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಮೋಹನದಾಸ್ ಕೊಟ್ಟಾರಿ, ಮಂಚಿ ಗ್ರಾ.ಪಂ.ಬಿಜೆಪಿ ಬೆಂಬಲಿತ ರಾಜೇಶ್ ನೂಜಿಪ್ಪಾಡಿ ಹಾಗೂ ಪುತ್ತೂರು ಕ್ಷೇತ್ರದ ಬಿಳಿಯೂರು ಗ್ರಾ.ಪಂ.ನ ಕಾಂಗ್ರೆಸ್ ಬೆಂಬಲಿತ ನಳಿನಿ ಅವರು ಗೆಲುವು ಸಾಧಿಸಿದ್ದಾರೆ.
ಬಿಳಿಯೂರು ಗ್ರಾ.ಪಂ. ನ ಒಂದು ಸ್ಥಾನಕ್ಕೆ ಉಪಚುನಾವಣೆ ನಡೆದಿದ್ದು,ಇದರಲ್ಲಿ ಮಂಚಿ ಗ್ರಾ.ಪಂ.ನಲ್ಲಿ ಬಿಜೆಪಿ ಬೆಂಬಲಿತ ಒಂದು ಸ್ಥಾನವನ್ನು ಉಳಿಸಿಕೊಂಡಿದ್ದರೆ,ಬಡಗಬೆಳ್ಳೂರು ಗ್ರಾ.ಪಂ. ನಲ್ಲಿ ಕಾಂಗ್ರೆಸ್ ಬೆಂಬಲಿತ ತೆಕ್ಕೆಯಲ್ಲಿದ್ದ ಸ್ಥಾನ ಬಿಜೆಪಿ ಬೆಂಬಲಿತ ಅಭ್ಯರ್ಥಿಯ ಪಾಲಾಗಿದೆ. ವಿಶೇಷವೆಂದರೆ ಸಜೀಪಮುನ್ನೂರು ಗ್ರಾ.ಪಂ.ನಲ್ಲಿ ಮೂರು ಸ್ಥಾನದಲ್ಲು ಎಸ್ಡಿಪಿಐ ಬೆಂಬಲಿತ ಅಭ್ಯರ್ಥಿಗಳನ್ನು ಸೋಲಿಸಿ ಕಾಂಗ್ರೆಸ್ ಬೆಂಬಲಿತರು ಗೆಲುವು ಸಾಧಿಸಿ ಕೈ ವಶ ಮಾಡಿದ್ದಾರೆ.
ಅಮ್ಟಾಡಿ ಗ್ರಾ.ಪಂ.ನಲ್ಲಿ ಎಡಪಕ್ಷ ತೆಕ್ಕೆಯಲ್ಲಿದ್ದ ಒಂದು ಸ್ಥಾನ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಾಲಾಗಿದೆ. ಪಂಜಿಕಲ್ಲು ಗ್ರಾ.ಪಂ.ನಲ್ಲಿ ಬಿಜೆಪಿ ಬೆಂಬಲಿತರ ವಶದಲ್ಲಿದ್ದು ಎರಡೂ ಸ್ಥಾನಗಳು ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಕಾಂಗ್ರೆಸ್ ಬೆಂಬಲಿತರಿಗೆ ಒಲಿದಿದೆ.