

ನವದೆಹಲಿ: ವಂದೇ ಭಾರತ್ ರೈಲು ನಿರಂತರವಾಗಿ ಒಂದಿಲ್ಲೊಂದು ಕಾರಣದಿಂದಾಗಿ ಸುದ್ದಿಯಲ್ಲಿದೆ. ಒಮ್ಮೆ ಎಮ್ಮೆಗಳಿಗೆ ಢಿಕ್ಕಿಯಾಗಿ ಸುದ್ದಿಯಾದರೆ ಇನ್ನೊಮ್ಮೆ ಕಸದ ರಾಶಿಯಿಂದಾಗಿ ಸುದ್ದಿಯಾಗುತ್ತದೆ. ಇದೀಗ ವಂದೇ ಭಾರತ್ ರೈಲಿನಲ್ಲಿ ಧೂಳು ತಾಗಿದ ಕಾರ್ನ್ಫ್ಲೇಕ್ಸ್ನ ಬಗ್ಗೆ ಪ್ರಯಾಣಿಕರೊಬ್ಬರು ಟ್ವಿಟರ್ ಮೂಲಕ ದೂರು ನೀಡಿದ್ದಾರೆ.
ವಿರೇಶ್ ನರ್ಕರ್ ಎನ್ನುವ ಉದ್ಯಮಿಯೊಬ್ಬರು ಶಿರಡಿಗೆ ಪ್ರಯಾಣಿಸುತ್ತಿದ್ದರು. ಈ ಸಂದರ್ಭ ಅವರು ಕಾರ್ನ್ಫ್ಲೇಕ್ಸ್ ಆರ್ಡರ್ ಮಾಡಿದ್ದಾರೆ. ಕಾರ್ನ್ಫ್ಲೇಕ್ಸ್ ಮೆಲ್ಲುತ್ತಿರುವಾಗ ಸ್ವಚ್ಛತಾ ಕರ್ಮಿಗಳು ಬಂದು ಕಸ ತೆಗೆಯುತ್ತಿದ್ದರು. ಈ ಸಂದರ್ಭ ಹಾರಿದ ಧೂಳು ಇವರ ಕಾರ್ನ್ಫ್ಲೇಕ್ಸ್ ಪಾತ್ರೆಗೆ ಬಂದು ಬಿದ್ದಿದೆ. ಹೀಗಾಗಿ ಅಸಮಾಧಾನಗೊಂಡ ಉದ್ಯಮಿ ಟ್ವಿಟರ್ ಮೂಲಕ ತಮ್ಮ ದೂರನ್ನು ದಾಖಲಿಸಿದರು.
ಈ ಬಗ್ಗೆ ರೈಲ್ವೇ ಇಲಾಖೆಯ ಟ್ವಿಟರ್ ಹ್ಯಾಂಡಲ್ ಉತ್ತರಿಸಿದ್ದು ದೂರನ್ನು ದಾಖಲಿಸಿಕೊಂಡಿರುವ ಬಗ್ಗೆ ಟ್ವೀಟ್ ಮಾಡಿದೆ. ಉದ್ಯಮಿ ವೀರೇಶ್, ತಮ್ಮ ದೂರನ ಜತೆಗೆ ಎರಡು ಸಲಹೆಗಳನ್ನೂ ನೀಡಿದ್ದಾರೆ. ಎಕ್ಸಿಕ್ಯೂಟಿವ್ ಕ್ಲಾಸ್ನ ಬೋಗಿ ರೈಲಿನ ಮಧ್ಯದಲ್ಲಿದ್ದು ಇದರಿಂದಾಗಿ ಇತರೆ ಬೋಗಿಗಳ ಜನರು ಇಲ್ಲಿಂದಲೇ ಸಂಚರಿಸುತ್ತಾರೆ. ಹೀಗಾಗಿ ಎಕ್ಸಿಕ್ಯೂಟಿವ್ ಕ್ಲಾಸ್ಅನ್ನು ಬೇರೆಡೆಗೆ ಸ್ಥಳಾಂತರಿಸಲು ಸಲಹೆ ನೀಡಿದ್ದಾರೆ.
ಇದರೊಂದಿಗೆ ತಮ್ಮ ಕಾರ್ನ್ಫ್ಲೇಕ್ಸ್ ಸಮಸ್ಯೆಯ ಬಗ್ಗೆಯೂ ಹೇಳಿಕೊಂಡಿದ್ದು ಕಸ ತೆಗೆಯಲು ಪೊರಕೆಯ ಬದಲು ವ್ಯಾಕ್ಯೂಮ್ ಕ್ಲೀನರ್ಗಳನ್ನು ಬಳಸಲು ಸಲಹೆ ನೀಡಿದ್ದಾರೆ. ಇಲ್ಲವಾದಲ್ಲಿ ಧೂಳು ಹಾರಿ ಆಹಾರದ ಮೇಲೆ ಕೂರುತ್ತದೆ. ಇದರಿಂದಾಗಿ ಪ್ರಯಾಣಿಕರಿಗೆ ಉತ್ತಮ ಅನುಭವ ಸಿಗುವುದಿಲ್ಲ ಎಂದಿದ್ದಾರೆ. (ಏಜೆನ್ಸೀಸ್)